ಅಂಬೇಡ್ಕರ್ ಹೆಸರಿಗೆ 20,00,00,000 ರುಪಾಯಿಯ ಮಸಿ ಬಳಿದ ಸಿದ್ದು ಸರಕಾರ!

ಈ ದೇಶ ಕಂಡ ಮಹಾನ್ ದಲಿತ ನಾಯಕರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಮೂರು ದಿನಗಳ ಒಂದು ಅದ್ದೂರಿ ಕಾರ್ಯಕ್ರಮ ಆಯೋಜನೆಯಾಗಿದೆ. ಅದರ ಹೆಸರು: ಡಾ. ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಸಮ್ಮೇಳನ. ಬೆಂಗಳೂರಿನ ಜಿಕೆವಿಕೆಯಲ್ಲಿ ಜುಲೈ 21ರಂದು ಪ್ರಾರಂಭಗೊಂಡು ಜುಲೈ 23ರವರೆಗೆ ಈ ಸಮ್ಮೇಳನ ನಡೆಯಲಿದೆಯಂತೆ. ಆದರೆ ಈ ಸಮ್ಮೇಳನದ ಮೊದಲ ದಿನವೇ ನಡೆದ ಅಚಾತುರ್ಯಗಳನ್ನು ನೋಡಿ:

(1) ಈ ಕಾರ್ಯಕ್ರಮಕ್ಕೆ ಬರುತ್ತೀರಾ? ಬರುತ್ತೀರಾದರೆ ಹೀಗೆ ಬನ್ನಿ ಎಂದು ಕಾರ್ಯಕ್ರಮ ನಡೆಯುವ ಸ್ಥಳದ ಮ್ಯಾಪನ್ನು ಕೊಡುವ ಸಲುವಾಗಿಯೇ ಕರ್ನಾಟಕ ಸರಕಾರ ಕನ್ನಡ ಮತ್ತು ಇಂಗ್ಲೀಷಿನ ಎಲ್ಲಾ ದಿನಪತ್ರಿಕೆಗಳಲ್ಲೂ ಭರ್ತಿ ಒಂದು ಪುಟದ ಜಾಹೀರಾತು ಹಾಕಿತ್ತು. ಅದೂ ಅಲ್ಲದೆ ಬರೋಬ್ಬರಿ ಮೂರು ಸಾವಿರ ಜನರಿಗೆ ಕಾರ್ಯಕ್ರಮಕ್ಕಾಗಿ ಪಾಸ್ ಕೂಡ ಕೊಡಲಾಗಿತ್ತು. ಆದರೆ, ಅಲ್ಲಿ ಹಾಕಿದ್ದು ಮಾತ್ರ ಸಾವಿರವೂ ಅಲ್ಲ, ಕೇವಲ 850 ಕುರ್ಚಿಗಳನ್ನು!! ಇಷ್ಟೊಂದು ಉದಾಸೀನದಿಂದ ಮಾಡುವುದಾದರೆ ಕಾರ್ಯಕ್ರಮ ಯಾಕೆ ಮಾಡಬೇಕಿತ್ತು ಸ್ವಾಮಿ? ದೂರದೂರದಿಂದ ಬಂದಿದ್ದ ಅದೆಷ್ಟೋ ಸಾವಿರ ಮಂದಿ ಕಾರ್ಯಕ್ರಮದ ಸಭಾಂಗಣದ ಅಲ್ಲಿ ಇಲ್ಲಿ ಸಿಕ್ಕಸಿಕ್ಕಲ್ಲಿ ಕೂತು, ನಿಂತು ಕಾರ್ಯಕ್ರಮ ನೋಡಿದರು. ಸಭಾಂಗಣದ ಮುಂಭಾಗದಲ್ಲಿಯೇ ಅನೇಕ ದಲಿತ ನಾಯಕರು ನೆಲದ ಹಾಸಿನ ಮೇಲೆ ಕೂತು ಕಾರ್ಯಕ್ರಮ ನೋಡಬೇಕಾಯಿತು. ಇಷ್ಟು ಕಷ್ಟದಲ್ಲಿ ಈ ಸರಕಾರ ಯಾವ ಪುರುಷಾರ್ಥಕ್ಕೆ ಕಾರ್ಯಕ್ರಮ ಮಾಡಬೇಕಿತ್ತು? ದೂರದ ಊರುಗಳಿಂದ ಆಹ್ವಾನಿಸಿ ದಲಿತ ಮುಖಂಡರಿಗೆ, ಕಾರ್ಯಕರ್ತರಿಗೆ ಅವಮಾನ ಮಾಡಬೇಕಿತ್ತೇಕೆ? ಸೀಟಿನ ವ್ಯವಸ್ಥೆ ಇಲ್ಲದೆ ಅನೇಕ ಮಂದಿ ಇಡೀ ದಿನ ಪರದಾಡುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು.

(2) ಇನ್ನು ಕಾರ್ಯಕ್ರಮದ ಸ್ವಾಗತ ಭಾಷಣವೋ, ಅದೇ ದೊಡ್ಡ ಅಧ್ವಾನ!! ಯಾರದ್ದೋ ಹೆಸರು ಹೇಳೋದು, ಇನ್ಯಾರಿಗೋ ಹೂಗುಚ್ಛ ಕೊಡೋದು, ಸಭೆಯ ಮುಂಭಾಗದಲ್ಲಿ ಕೂತಿದ್ದ ನೂರಾರು ಮಂದಿ ಜೋರಾಗಿ ಚಪ್ಪಾಳೆ ತಟ್ಟಿ ಅವರಿಗಲ್ರೀ ಇವರಿಗ್ರೀ ಎಂದು ಕೂಗುತ್ತಿದ್ದ ದೃಶ್ಯ ಕಂಡುಬಂತು. ವೇದಿಕೆ ಮೇಲೆ ಕೂತಿದ್ದ ವ್ಯಕ್ತಿಗಳ ಪರಿಚಯ ಕೂಡ ಅಲ್ಲಿ ಹೂಗುಚ್ಛ ಕೊಟ್ಟು ಸ್ವಾಗತಿಸುವ ನಾಯಕರಿಗೆ ಇರಲಿಲ್ಲ ಎಂದರೆ ಇವರು ಕಾರ್ಯಕ್ರಮಕ್ಕೆ ಅದೆಷ್ಟು ಶ್ರದ್ಧೆಯಿಂದ ತಯಾರಿ ನಡೆಸಿದ್ದಾರೆ ಎಂಬುದು ತಿಳಿಯುತ್ತದೆ.

(3) ಕಾರ್ಯಕ್ರಮಕ್ಕೆ ನಿರೂಪಕಿಯ ಕೆಲಸ ಮಾಡಲು ಇವರು ಕರೆತಂದದ್ದು ದೂರದ ನಂದಿತಾ ದಾಸ್ ಅವರನ್ನು. ಯಾಕೆ ಸ್ವಾಮಿ, ನಿಮಗೆ ಕನ್ನಡದಲ್ಲಿ ಶುದ್ಧವಾಗಿ ನಿರೂಪಣೆ ಮಾಡಬಲ್ಲ ಒಬ್ಬರೂ ಸಿಗಲಿಲ್ಲವೇ? ನಮ್ಮ ಕನ್ನಡ ಚಿತ್ರ ನಿರ್ದೇಶಕರು ಐಟಮ್ ಸಾಂಗ್‍ಗೆ ಕುಣಿಯಲು ಬೇಕೆಂದು ಪರಭಾಷಾ ನಟಿಯರನ್ನು ಕರೆತಂದ ಹಾಗೆ ನೀವು ಕೂಡ ಹೊರ ರಾಜ್ಯದ ಯುವತಿಯರಿಗೇಕೆ ಮಣೆ ಹಾಕುತ್ತೀರಿ? ನಂದಿತಾ ದಾಸ್ ಅವರಿಗೆ ಕನ್ನಡದ ಯಾವ ಹೆಸರುಗಳನ್ನು ಹೇಳಲಿಕ್ಕೂ ನಾಲಗೆ ಸರಿಯಾಗಿ ಹೊರಳುತ್ತಿರಲಿಲ್ಲ. ಅವರು ಕನ್ನಡದ ಹೆಸರುಗಳ ಹ್ರಸ್ವ-ದೀರ್ಘಗಳನ್ನೆಲ್ಲ ಕೆತ್ತಿ ಕೆತ್ತಿ ವಿರೂಪಗೊಳಿಸಿ ಹೇಳುತ್ತಿದ್ದದ್ದನ್ನು ಸಮಾರಂಭದಲ್ಲಿ ಭಾಗವಹಿಸಿದ್ದ ಜನ ನಕ್ಕೂ ನಕ್ಕೂ ಎಂಜಾಯ್ ಮಾಡುತ್ತಿದ್ದರು. ನಂದಿತಾ ದಾಸ್ ಅಷ್ಟಕ್ಕೇ ಸುಮ್ಮನಾಗದೆ, ನಾನು ಸರಿಯಾಗಿಯೇ ಹೇಳ್ತಿದ್ದೇನೆ, ಆದರೆ ಆಯೋಜಕರೇ ಹೆಸರುಗಳನ್ನು ತಪ್ಪುತಪ್ಪಾಗಿ ಬರೆದುಕೊಟ್ಟಿದ್ದಾರೆ ಎಂದು ಹೇಳಿ ತಮ್ಮ ಹೆಗಲ ಮೇಲಿದ್ದ ಗೂಬೆಯನ್ನು ಆಯೋಜಕರ ಹೆಗಲ ಮೇಲೆ ಜಾರಿಸಿದರು. ಪರಭಾಷಾ ನಟಿಯನ್ನು ಕರೆಸಿ ನಿರೂಪಣೆಯ ಕೆಲಸ ಕೊಟ್ಟ ಆ ಪುಣ್ಯಾತ್ಮ ಯಾರಿದ್ದರೂ ಅವರಿಗೆ ಇಲ್ಲಿಂದಲೇ ಒಂದು ದೊಡ್ಡ ನಮಸ್ಕಾರ!

(4) ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಬೇಕಾಗಿತ್ತು. ಆದರೆ ಅಲ್ಲಿ ಬೆಂಕಿಪೊಟ್ಟಣವೇ ಇರಲಿಲ್ಲ! ದೀಪ ಹಚ್ಚಲು ಬೆಂಕಿ ಪೊಟ್ಟಣಕ್ಕಾಗಿ ಸಚಿವ ಆಂಜನೇಯ ಸಮೇತ ಎಲ್ಲರೂ ಅಲ್ಲಿ ಇಲ್ಲಿ ಹುಡುಕಬೇಕಾಯಿತು. ಇದು ಮತ್ತೂ ಒಂದಷ್ಟು ಹೊತ್ತು ಸಭೆಯಲ್ಲಿ ಕೂತಿದ್ದವರಿಗೆ ಪುಕ್ಕಟೆ ಮನರಂಜನೆ ಒದಗಿಸಿತು.

(5) ಇವೆಲ್ಲ ಆಗಿ ಮಾರ್ಟಿನ್ ಲೂಥರ್ ಕಿಂಗ್ – ||| ಅವರು ಮಾತಾಡಲು ಪ್ರಾರಂಭಿಸಿದರು. ತನ್ನ ಭಾಷಣದುದ್ದಕ್ಕೂ ಅವರು ಹೇಳಿದ್ದು ತಮ್ಮ ಸ್ವಂತ ಮಾತೋ ಅಥವಾ ಸಿದ್ದರಾಮಯ್ಯನವರ ಸರಕಾರದವರು ಬರೆದುಕೊಟ್ಟ ಭಾಷಣವೋ ಎಂಬುದು ಸ್ಪಷ್ಟವಾಗಲಿಲ್ಲ. ಯಾಕೆಂದರೆ ಈ ದೇಶದಲ್ಲಿ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ವಾಸ ಇರುವವರಂತೆ ಅವರು ನಿರರ್ಗಳವಾಗಿ ಕಾಂಗ್ರೆಸ್ ಕಾರ್ಯಕರ್ತನ ಹಾಗೆ ಮಾತಾಡಿದರು. ಮೋದಿಯನ್ನು ಒಂದಷ್ಟು ಬಯ್ದರು. ಮೋದಿ ಭಾರತದಲ್ಲಿ ಜನರ ಮಧ್ಯೆ ದ್ವೇಷಭಾವನೆಯನ್ನು ಹೆಚ್ಚು ಮಾಡುತ್ತಿದ್ದಾರೆ ಎಂದರು. ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಡೆಯುತ್ತಿವೆ, ಇದನ್ನು ತಡೆಯಲೇಬೇಕು ಎಂದು ಜೋರು ಮಾಡಿದರು. ಗೋರಕ್ಷಕರು ಮುಸ್ಲಿಂ ಮತ್ತು ದಲಿತರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ಮಾತನ್ನೂ ಸೇರಿಸಿದರು. ಒಟ್ಟಾರೆ ಹೇಳುವುದಾದರೆ ಮುಂದಿನ ಅಸೆಂಬ್ಲಿ ಚುನಾವಣೆಗೆ ಟಿಕೆಟ್ ಪಡೆಯುವಷ್ಟರ ಮಟ್ಟಿಗೆ ಅವರು ಕಾಂಗ್ರೆಸ್ ಧಿರಿಸು ಹಾಕಿಕೊಂಡು ಭಾಷಣ ಕುಟ್ಟಿದರು. ಎಷ್ಟೊಂದು ಹಾಸ್ಯಾಸ್ಪದವಾಗಿ ಮಾತಾಡಿದರು ಎಂದರೆ ತಾನು ಅಸ್ಪೃಶ್ಯನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದೂ ಹೇಳಿದರು! ಅವರ ಭಾಷಣ ಮುಗಿದದ್ದಕ್ಕೆ ಖುಷಿಯಾಗಿ ಜನ ಚಪ್ಪಾಳೆ ತಟ್ಟಿದರು.

ಇವಿಷ್ಟು ಸಭೆಯಲ್ಲಿ ನಡೆದ ಅಭಾಸಗಳಾದರೆ ಇನ್ನೂ ಕೆಲವೊಂದು ವೈಚಾರಿಕ ಪ್ರಶ್ನೆಗಳನ್ನು ನಾವು ಸಾರ್ವಜನಿಕರು ಈ ಸರಕಾರಕ್ಕೆ ಕೇಳಲಿಕ್ಕಿದೆ.

ಮೊದಲನೆಯದಾಗಿ, ನೀವು – ಅಂದರೆ ಸಿದ್ದರಾಮಯ್ಯನವರ ಸರಕಾರ, ಈ ಕಾರ್ಯಕ್ರಮವನ್ನು ಆಯೋಜಿಸಿದ ಉದ್ದೇಶ ಏನು? ನಿಮಗೆ ನಿಜವಾಗಿಯೂ ಡಾ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶ ಇತ್ತೇ? ಅಥವಾ ಅಂಬೇಡ್ಕರ್ ಅವರ ಹೆಸರಿನಲ್ಲಿ ನಿಮ್ಮ ಒಂದಿಷ್ಟು ನಾಲಗೆತೀಟೆ ತೀರಿಸಿಕೊಳ್ಳುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಿದಿರಾ? ಕಾರ್ಯಕ್ರಮದ ಮೊದಲ ಇಡೀ ದಿನ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ತೆಗಳುವುದು ಬಿಟ್ಟರೆ ಬೇರೇನಾದರೂ ಸಾಧನೆ ಆಯಿತೇ ನೀವೇ ಹೇಳಿ! ಮೋದಿಯನ್ನು ಬಯ್ದರೆ ತಾನೇತಾನಾಗಿ ದಲಿತರ ಉದ್ಧಾರ ಆಗುತ್ತದೆಯೇ ಸಿದ್ದರಾಮಯ್ಯನವರೇ? ನೀವು ದಲಿತರಿಗಾಗಿ ಏನು ಮಾಡಿದ್ದೀರಿ ಅದನ್ನು ಹೇಳಿಕೊಳ್ಳುವುದನ್ನು ಬಿಟ್ಟು ಕೇಂದ್ರ ಸರಕಾರವನ್ನು ಟೀಕಿಸಲು ಸರಕಾರೀ ಕಾರ್ಯಕ್ರಮವನ್ನು ಯಾಕೆ ಬಳಸಿಕೊಳ್ಳುತ್ತೀರಿ? ಎಲ್ಲಾ ದಲಿತರೂ ಕಾಂಗ್ರೆಸ್‍ನ ಅಡಿಯಾಳುಗಳು ಎಂಬ ನಿಮ್ಮ ಧೋರಣೆಯಿಂದ ನೀವು ಹೊರಬರುವುದು ಒಳ್ಳೆಯದು. ಅಲ್ಲಿ ಸಮ್ಮೇಳನದಲ್ಲಿ ಸೇರಿದ್ದ ಬಹಳಷ್ಟು ಜನ ಅದೊಂದು ಸರಕಾರದ ಕಾರ್ಯಕ್ರಮ ಎಂಬ ಕಾರಣಕ್ಕೆ ಬಂದವರೇ ಹೊರತು ಕಾಂಗ್ರೆಸ್ ಕಾರ್ಯಕರ್ತರಾಗಿ ಭಾಗವಹಿಸಿದ್ದಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.

ಎರಡನೆಯದಾಗಿ, ಈ ಕಾರ್ಯಕ್ರಮಕ್ಕೆ ನೀವು ಕರೆಸಿದ್ದು ಮಾರ್ಟಿನ್ ಲೂಥರ್ ಕಿಂಗ್ ಎಂಬ ಅಮೆರಿಕನ್ ವ್ಯಕ್ತಿಯನ್ನು. ಒಪ್ಪೋಣ, ಅವರ ತಂದೆ ಮಹಾನ್ ಹೋರಾಟಗಾರ. ಹಾಗಾಗಿ ಅಂಥ ಹೋರಾಟಗಾರರನ್ನು ಗೌರವಿಸುವ ಕಾರಣಕ್ಕಾಗಿ ಅವರ ಮಗನಾದ ಇವರನ್ನು ಕರೆಸಿದಿರಿ ಎಂದೇ ಹೇಳೋಣ. ಆದರೆ ಆ ವ್ಯಕ್ತಿ ಇಲ್ಲಿ ಬಂದು ನಿಂತು ಮಾತಾಡಿದ್ದು ಏನು ಸ್ವಾಮಿ? ಭಾರತದಲ್ಲಿ ಹಿಂದೂ ಮೂಲಭೂತವಾದಿತನ ಹೆಚ್ಚಾಗುತ್ತಿದೆ ಎಂದು ನೇರವಾದ ಆರೋಪ ಮಾಡಿದರು. ಹಾಗೆ ಹೇಳಲು ಅವರು ಭಾರತವನ್ನು ಎಷ್ಟು ಆಳವಾಗಿ ನೋಡಿದ್ದಾರೆ? ಎಷ್ಟು ಆಳವಾಗಿ ಅರ್ಥ ಮಾಡಿಕೊಂಡಿದ್ದಾರೆ? ಇನ್ನು ಅವರು ಹೇಳುತ್ತಾರೆ – ಭಾರತದಲ್ಲಿ ವರ್ಣಭೇದ ನೀತಿ ಇದೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚು. ಭಾರತದಲ್ಲಿ 60%ಕ್ಕೂ ಹೆಚ್ಚು ಮಂದಿ ಬಡತನದಲ್ಲಿದ್ದಾರೆ – ಎಂದು. ಈ ವ್ಯಕ್ತಿ ನಿಜವಾಗಿಯೂ ಬೆಂಗಳೂರಿಗೆ ಬಂದದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ಬಗ್ಗೆ ಮಾತಾಡಲಿಕ್ಕೋ ಅಥವಾ ನಮ್ಮೆಲ್ಲರ ಪ್ರೀತಿಯ ದೇಶವನ್ನು ಜರೆಯಲಿಕ್ಕೋ? ನಮ್ಮ ದೇಶದ ಯಾವುದಾದರೂ ವ್ಯಕ್ತಿ ಹೊರದೇಶಕ್ಕೆ ಹೋಗಿ ಆ ದೇಶವನ್ನು ನಿಂದಿಸತೊಡಗಿದರೆ ಪರಿಣಾಮ ಏನಾಗುತ್ತದೆ ಎಂಬುದು ಸಿದ್ದರಾಮಯ್ಯನವರೇ, ನಿಮಗೆ ಗೊತ್ತಿದೆಯೇ? ಹಾಗೆ ಮಾತಾಡಿದವರನ್ನು ಆ ದೇಶದವರು ಹೊರಗಿನವನು ಎಂದೂ ನೋಡದೆ ಕಾನೂನು ಕೈಗೆತ್ತಿಕೊಂಡು ಜೈಲಿಗೆ ಕಳಿಸುತ್ತಾರೆ. ಕನಿಷ್ಠ ಒಂದು ಸಿವಿಲ್ ದೂರು ಆದರೂ ದಾಖಲಿಸುತ್ತಾರೆ. ಹಾಗಿರುವಾಗ ಈ ವ್ಯಕ್ತಿ ಇಲ್ಲಿ ಬಂದು ನಿಂತು ಭಾರತವನ್ನು ಹಳಿಯುತ್ತಿದ್ದಾಗ ನೀವೆಲ್ಲ ವೇದಿಕೆ ಮೇಲೆ ಕೂತುಕೊಂಡೇ ಹಲ್ಲು ಕಿಸಿಯುತ್ತಿದ್ದಿರಲ್ಲಾ ನಿಮಗೆ ನಾಚಿಕೆ, ಮಾನ, ಮರ್ಯಾದೆ ಇಲ್ವೇನ್ರೀ?

ಮುಖ್ಯಮಂತ್ರಿಗಳು ಈ ಅಂತರರಾಷ್ಟ್ರೀಯ ಸಮ್ಮೇಳನದ ಬಗ್ಗೆ ಮಾತಾಡುತ್ತ “ಸಮಾಜವನ್ನು ಒಡೆಯುವ ಶಕ್ತಿಗಳು ಭಾರತ ಎಂಬ ಪರಿಕಲ್ಪನೆಗೇ ಧಕ್ಕೆ ತಂದಿರುವ ಈ ಸಂದರ್ಭದಲ್ಲಿ ಆಯೋಜಿಸಲಾಗುತ್ತಿರುವ ಈ ಸಮ್ಮೇಳನ ಸಾಮಾಜಿಕ ನ್ಯಾಯದ ಅನ್ವೇಷಣೆಗಾಗಿ ಎಲ್ಲಾ ಪ್ರಗತಿಪರ ಶಕ್ತಿಗಳನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ” ಎಂದು ಹೇಳಿದ್ದಾರೆ. ಅಂದರೆ ಈ ಕಾರ್ಯಕ್ರಮ ಮಾಡಿರುವುದು ಅಂಬೇಡ್ಕರ್ ಅವರ ಸ್ಮರಣೆಗಾಗಿ ಅಲ್ಲ, ಅವರ ಹೆಸರಿನಲ್ಲಿ ಚುನಾವಣೆ ಸಿದ್ಧತೆ ನಡೆಸಲು ಎಂಬುದು ಅತ್ಯಂತ ಸ್ಪಷ್ಟವಾಗುತ್ತದೆ. ಸಿದ್ದರಾಮಯ್ಯನವರು ಸಮಾಜವನ್ನು ಒಡೆಯುವ ಶಕ್ತಿಗಳು ಎಂದು ಹೇಳುತ್ತಿರುವುದು ಯಾರನ್ನು? ಇತ್ತೀಚೆಗಷ್ಟೇ ಮಂಗಳೂರು-ಬಂಟ್ವಾಳದಲ್ಲಿ ದೊಡ್ಡ ಮಟ್ಟದ ಕೋಮುಗಲಭೆ ನಡೆಯಿತು. ಅಲ್ಲಿ ಸಮಾಜವನ್ನು ಒಡೆಯಲು ಪ್ರಯತ್ನಿಸಿದ ಶಕ್ತಿಗಳು ಯಾವುದು? ಸಿದ್ದರಾಮಯ್ಯನವರಿಗೆ ಗೊತ್ತಿಲ್ಲದ್ದೇನಲ್ಲ. ಆದರೆ ಎಲ್ಲ ಅನಿಷ್ಟಗಳನ್ನೂ ತಂದು ಬಿಜೆಪಿ, ಆರೆಸ್ಸೆಸ್ ಸಂಘಟನೆಗಳ ತಲೆಗೇ ಕಟ್ಟಿದರೆ ಅವರಿಗೊಂದು ಸಮಾಧಾನ. ಮೂರು ದಿನಗಳ ಭರ್ಜರಿ ಸಮ್ಮೇಳನದ ಹೆಸರಲ್ಲಿ ಸರಕಾರದ ಕಡೆಯಿಂದ ಒಂದಷ್ಟು ಖಜಾನೆ ದುಡ್ಡು ಕರಗಿಸಿ ಆ ಮೂಲಕ ಕಾಂಗ್ರೆಸ್‍ನ ಚುನಾವಣಾ ಸಿದ್ಧತೆ ಮಾಡಿಕೊಳ್ಳುವುದು ಸಿದ್ದರಾಮಯ್ಯನವರ ಆಲೋಚನೆ ಎಂಬುದನ್ನು ಚಿಕ್ಕ ಮಕ್ಕಳೂ ಹೇಳಿಯಾರು. ಇವರಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ರಾಜಕೀಯ ಬೇಳೆಗಳನ್ನು ಬೇಯಿಸಿಕೊಳ್ಳುವುದಕ್ಕಾಗಿ ಮಾತ್ರ ಬೇಕಾಗಿದೆ.

ಇಂದಿನ ದಿನಮಾನದಲ್ಲಿ ಏನನ್ನೇ ಆದರೂ ಅಂಬೇಡ್ಕರ್ ಹೆಸರಿನಲ್ಲಿ ಮಾರಾಟ ಮಾಡಿಕೊಂಡು ಬದುಕುವುದು ನೀವು ರಾಜಕಾರಣಿಗಳಿಗೆ ಒಂದು ಫ್ಯಾಶನ್.. ಫ್ಯಾಶನ್ ಮಾತ್ರವಲ್ಲ, ಚಟ ಆಗಿದೆ. ನಿಮಗೆ ಒಟ್ಟಾರೆಯಾಗಿ ಬಾಯಿ ತುರಿಸುತ್ತಿತ್ತು. ಪ್ರಧಾನಿ ಮೋದಿಗೆ, ಕೇಂದ್ರ ಸರಕಾರಕ್ಕೆ ವಾಚಾಮಗೋಚರ ಬಯ್ಯಬೇಕಾಗಿತ್ತು. ಅದಕ್ಕಾಗಿ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡಿರಿ. ಇಲ್ಲವಾದರೆ ಅಂಬೇಡ್ಕರ್ ಅವರ ಜನ್ಮದಿನವಲ್ಲದ ದಿನದಂದು ಅವರ ಹೆಸರಿನಲ್ಲಿ ಸಮ್ಮೇಳನ ಮಾಡಿ ಇದನ್ನೆಲ್ಲ ಮಾಡಿ ಮಜಾ ನೋಡುವುದು ನಿಮಗೆ ಯಾಕೆ ಬೇಕಿತ್ತು? ಭಾರತಕ್ಕೆ ಸಂವಿಧಾನ ಕೊಟ್ಟವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವ ನೀವೇ ಅದೇ ಅಂಬೇಡ್ಕರ್ ಪ್ರೀತಿಸಿದ ದೇಶವನ್ನು ಬಾಯಿಗೆ ಬಂದ ಹಾಗೆ ಬಯ್ಯಲು ವಿದೇಶೀಯನೊಬ್ಬನಿಗೆ ವೇದಿಕೆಯಲ್ಲಿ ಅವಕಾಶ ಕೊಟ್ಟಿರಲ್ಲ, ನಿಮನ್ನು ಓಟು ಹಾಕಿ ಗೆಲ್ಲಿಸಿದ ನಾವು ನಮ್ಮ ಹಣೆ ಚಚ್ಚಿಕೊಳ್ಳಬೇಕು. ಎಲ್ಲಕ್ಕಿಂತ ದೊಡ್ಡ ತಮಾಷೆ ಎಂದರೆ ಈ ಮೂರು ದಿನದ ಕಾರ್ಯಕ್ರಮಕ್ಕಾಗಿ ಸಿದ್ದರಾಮಯ್ಯನವರ ಸರಕಾರ ವ್ಯಯಿಸುತ್ತಿರುವ ದುಡ್ಡು 20 ಕೋಟಿ ರುಪಾಯಿ!! ಈ ದುಡ್ಡಲ್ಲಿ ಕನಿಷ್ಠ ಒಬ್ಬೊಬ್ಬರಿಗೆ 10,000 ರುಪಾಯಿಯ ಹಾಗೆ ಸ್ಕಾಲರ್‍ಶಿಪ್ ಕೊಟ್ಟಿದ್ದರೂ ಬರೋಬ್ಬರಿ 20,000 ಜನ ಫಲಾನುಭವಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದಿತ್ತು. ಬೇಡ ಸಾರ್, ಇದೇ ದುಡ್ಡಲ್ಲಿ ಒಂದೊಳ್ಳೆಯ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿ ಬಡಬಗ್ಗರಿಗೆ ಉಚಿತ ಅಥವಾ ಕಡಿಮೆ ಖರ್ಚಿನ ವೈದ್ಯಕೀಯ ನೆರವು ನೀಡಬಹುದಿತ್ತಲ್ಲ? ಅಥವಾ ಒಂದು ಇಂಜಿನಿಯರಿಂಗ್ ಕಾಲೇಜ್ ಕಟ್ಟಿಸಿ ದಲಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಮಾಡಬಹುದಿತ್ತಲ್ಲ? ರಾಜ್ಯದಲ್ಲಿ ಕಡಿಮೆ ಎಂದರೂ 20 ಹೊಸ ಹಾಸ್ಟೆಲ್‍ಗಳನ್ನು ದಲಿತರಿಗಾಗಿ ಸ್ಥಾಪಿಸಬಹುದಿತ್ತಲ್ಲ? ಅಂಬೇಡ್ಕರ್ ಅವರು ಸದಾ ಅಧ್ಯಯನಶೀಲರಾಗಿದ್ದರು, ಪುಸ್ತಕಗಳನ್ನು ಊಟನಿದ್ದೆ ಬಿಟ್ಟು ಓದುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಕಾರ್ಯಕ್ರಮಕ್ಕೆ ಸುರಿಯುವ ದುಡ್ಡಲ್ಲಿ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಸುಸಜ್ಜಿತ ಗ್ರಂಥಾಲಯಗಳನ್ನು ಸ್ಥಾಪಿಸಬಹುದಾಗಿತ್ತು. ಮಾಡುವ ಮನಸ್ಸಿದ್ದರೆ ಅವೆಲ್ಲ ಮಾಡಬಹುದಿತ್ತು. ಆದರೆ ಸಿದ್ದರಾಮಯ್ಯನವರಿಗೆ ಬೇಕಾದದ್ದು ಧಾಂಧೂಂ ನಾಲ್ಕು ದಿನದ ಸುಂಟರಗಾಳಿ ಅಷ್ಟೆ. ಅಂಬೇಡ್ಕರ್ ಹೆಸರಲ್ಲಿ ದುಡ್ಡು ಖರ್ಚು ಮಾಡಿ ಒಂದಷ್ಟು ಜೇಬಿಗೂ ಇಳಿಸಿಕೊಂಡು ಮಜಾ ಮಾಡಬೇಕಿತ್ತಷ್ಟೆ ಇವರಿಗೆಲ್ಲ. ಇಂಥವರೆಲ್ಲ ದಲಿತ ನಾಯಕರು ಎಂದು ಹೇಳಿಕೊಂಡು ಮೆರೆಯುವುದನ್ನು ನೋಡಿದಾಗ ಅಸಹ್ಯವಾಗೋದಿಲ್ಲವಾ ನೀವೇ ಹೇಳಿ.

Cover Pic: ProKerala.com

Comments

comments