ಸಭ್ಯರಾಗಲು ಉರ್ದು ಕಲಿಯಿರಿ ಎನ್ನುವವರ ರಾಜ್ಯದಲ್ಲಿ ಆಲೂರರು ಅಳಿಸಿಹೋಗುವುದು ಅಚ್ಚರಿಯೇನೂ ಅಲ್ಲ!

ಮುಂಬೈ, ಪುಣೆಗಳಲ್ಲಿ ವಿಶ್ವವಿದ್ಯಾಲಯದ ಪದವಿ ಪಡೆದುಕೊಂಡು ಊರಿಗೆ ಮರಳಿರುವ ಇಪ್ಪತ್ತೈದರ ತರುಣ, ವಿಹಾರಾರ್ಥ ಹಂಪೆಗೆ ಬಂದುನಿಂತಿದ್ದಾನೆ. ಮೇ ತಿಂಗಳ ಉರಿಬಿಸಿಲಲ್ಲಿ, ಅದೆಷ್ಟು ದೂರಕ್ಕೆ ದೃಷ್ಟಿ ಚಾಚಿದರೂ ಮುಗಿಯದಂತೆ ಸಪಾಟಾಗಿ ಮಲಗಿ ಇತಿಹಾಸದ ಕತೆ ಹೇಳುತ್ತಿರುವ ಬಂಡೆಗಲ್ಲುಗಳು. ಪಾಳುಬಿದ್ದ ಪ್ರಾಂಗಣ, ರುಂಡ ಕಡಿದ ದೀಪದ ಮಲ್ಲಿ, ಒಡೆದುನಿಂತ ಗೋಪುರ, ನಿರ್ಜನ ಗಜಶಾಲೆ. ಒಂದಾನೊಂದು ಕಾಲದಲ್ಲಿ ಮುತ್ತು ರತ್ನ ಹವಳ ವೈಡೂರ್ಯಗಳನ್ನು ಬಳ್ಳದಲ್ಲಿ ಸುರಿದು ಮಾರಿ ಇಂದು ಬರಿದಾಗಿರುವ ಒಂಟಿ ವ್ಯಾಪಾರೀಕಟ್ಟೆಗಳು. ಹುಡುಗನ ಕಣ್ಣಂಚಲ್ಲಿ ನೀರ ಹನಿಯೊಂದು ತನಗರಿವಿಲ್ಲದೆಯೇ ಹೊರಳಿ ಕಪೋಲದ ಮೇಲಿಳಿಯಿತು. “ನಮ್ಮ ವಿಜಯನಗರವು ಅಲ್ಲಿ ಪ್ರತ್ಯಕ್ಷವಾಗಿಯೂ ವಿಸ್ತಾರವಾಗಿಯೂ ನನ್ನ ಕಣ್ಣ ಮುಂದಿತ್ತು. ಆ ದರ್ಶನವು ನನ್ನ ಮನಃಪಟಲದಲ್ಲಿ ವಿದ್ಯುತ್ತಿನ ಸಂಚಾರವನ್ನು ಮೂಡಿಸಿತು. ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಆಕೃತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡಹತ್ತಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿಧವಾದ ತರಂಗಗಳಿಗೆ ಇಂಬುಗೊಟ್ಟಿತು. ಹೃದಯಸಮುದ್ರವು ಉಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು” – ಎಂದು ಆತ ಮುಂದೆ ಬರೆದುಕೊಂಡ. ಹಾಳು ಹಂಪೆಯಲ್ಲಿ ನಿಂತು ನೋಡಿದ ಆ ದೃಶ್ಯ ಅವನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತುಬಿಟ್ಟಿದ್ದೇ ಕಾರಣವಾಗಿ ಆತ ತನ್ನ ಜೀವನವನ್ನೆಲ್ಲ ಕರ್ನಾಟಕದ ಸೇವೆಗಾಗಿ ಮುಡಿಪಾಗಿಡುವಂತಾಯಿತು. ಇಪ್ಪತ್ತರ ಎಳವೆಯಲ್ಲಿ ಮೂಡಿದ ಆ ಕ್ರಾಂತಿಯ ಕಿಚ್ಚು ಬದುಕಿನುದ್ದಕ್ಕೂ ಆತನ ಚಿಂತನೆ, ಕೆಲಸಗಳನ್ನು ಪ್ರಭಾವಿಸಿತು. ಹಾಗೆ ತಾರುಣ್ಯದಲ್ಲೇ ತನ್ನ ತನು ಮನ ಧನ ಎಲ್ಲವನ್ನೂ ನಾಡುನುಡಿಯ ಸೇವೆಗಾಗಿ ಮುಡಿಪಾಗಿರಿಸಿದ ಹಿರಿಯ ಚೇತನವೇ ಆಲೂರು ವೆಂಕಟರಾಯರು.

ಆಲೂರರು ಹುಟ್ಟಿದ್ದು 1880ರ ಜುಲೈ 12ರಂದು ಸಂಪ್ರದಾಯನಿಷ್ಠ ಮಾಧ್ವ ಮನೆತನದಲ್ಲಿ. ಈಗಿನ ವಿಜಯಪುರದಲ್ಲಿ. ಆದರೆ ಅವರ ವಂಶಜರು ವಿಜಯಪುರ ಬಿಟ್ಟು ಧಾರವಾಡದ ಆಲೂರಿಗೆ ಬಂದು ನೆಲೆಸಿದ್ದರಿಂದ ವೆಂಕಟರಾಯರ ಹೆಸರಿನಲ್ಲಿ ಆಲೂರು ನಿಂತಿತು. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಾಲಕ ವೆಂಕಟ ಮುಖಮಾಡಿದ್ದು ಆ ಕಾಲಕ್ಕೆ ಹೆಸರಾಗಿದ್ದ ಪುಣೆಯ ಫಗ್ರ್ಯುಸನ್ ಕಾಲೇಜಿನತ್ತ. ಅಲ್ಲಿ 1903ರಲ್ಲಿ ಬಿ.ಎ. ಪದವಿ ಪಡೆದ ವೆಂಕಟ, ಅಲ್ಲಿಂದ ಮುಂಬಯಿಗೆ ತೆರಳಿ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಬಿ. ಪದವಿಯನ್ನು ಸಂಪಾದಿಸಿದ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಹಾಗೆ ಪ್ರಾಥಮಿಕ, ಪ್ರೌಢ ಶಿಕ್ಷಣದ ಹಂತಗಳನ್ನು ದಾಟಿ ಕಾಲೇಜು, ಯೂನಿವರ್ಸಿಟಿಗಳ ಮೆಟ್ಟಿಲು ಹತ್ತಿದವರು ಇದ್ದದ್ದೇ ಊರಿಗೆ ಬೆರಳೆಣಿಕೆಯಷ್ಟು ಮಂದಿ. ಅಂಥಾದ್ದರಲ್ಲಿ ಮುಂಬೈಯಲ್ಲಿ ಕಾನೂನು ಶಿಕ್ಷಣ ಮುಗಿಸಿಬಂದ ತರುಣನಿಗೆ ನೌಕರಿಗೊಂದು ಬರವೇ? ಮುಂಬೈಯಲ್ಲಿ ನಿಂತಿದ್ದರೂ ಮರಳಿ ಹುಟ್ಟೂರಿಗೆ ಬಂದಿದ್ದರೂ ವಕೀಲನಾಗಿ ಕೆಲಸ ಮಾಡುತ್ತ ಸಾವಿರಾರು ರುಪಾಯಿಗಳನ್ನು ಅನಾಯಾಸವಾಗಿ ಗಿಟ್ಟಿಸುವ ಅರ್ಹತೆಯೂ ತಾಕತ್ತೂ ಇದ್ದೇ ಇತ್ತು. ಆದರೆ, ಅದೇ ಸಮಯದಲ್ಲಿ ಆತನ ಮನಸ್ಸಿನಲ್ಲಿ ಬಿರುಗಾಳಿ ಎಬ್ಬಿಸಿ ಬದುಕೆಂಬ ಹಡಗಿನ ಹಾಯಿಯನ್ನು ತಿರುಗಿಸಿಬಿಟ್ಟದ್ದು ಹಂಪೆಯಲ್ಲಿ ಕಂಡ ಭಗ್ನಾವಶೇಷಗಳು. “ಜ್ಞಾನೋದಯವೆಂಬುದು ಥಟ್ಟನೇ ಆಗಿಬಿಡಬೇಕು” ಎಂಬುದು “ಕ್ಲಿಪ್ ಜಾಯಿಂಟ್” ಕತೆಯಲ್ಲಿ ಬರುವ ಸಾಲು. ವೆಂಕಟರಾಯರಿಗೆ ಆದ ಜ್ಞಾನೋದಯದ್ದೂ ಅಂಥಾದ್ದೇ ಕತೆ. ಆ ಕ್ಷಣದಲ್ಲಿ ಅವರನ್ನು ಒಂದು ಅಂತಃಭೋದೆ ಅದ್ಯಾವ ಪರಿಯಲ್ಲಿ ಆವರಿಸಿಕೊಂಡಿತೆಂದರೆ ತಾನು ಅದುವರೆಗೆ ಕಲಿತ ಶಿಕ್ಷಣ, ಪಡೆದ ಪದವಿ, ಹಿಡಿಯಬಹುದಾಗಿದ್ದ ಉದ್ಯೋಗ, ಗಳಿಸಬಹುದಾಗಿದ್ದ ಸಂಪತ್ತು ಎಲ್ಲವೂ ನಗಣ್ಯವೆನ್ನಿಸಿ ಕನ್ನಡ ಮತ್ತು ಕರ್ನಾಟಕದ ಏಳಿಗೆಗಾಗಿ ದುಡಿಯುವುದೊಂದೇ ಬದುಕಿನ ಧ್ಯೇಯ, ಉದ್ದೇಶ ಎಂಬುದು ನಿಚ್ಚಳವಾಯಿತು. ಮರಳಿ ಧಾರವಾಡಕ್ಕೆ ಬಂದವರೇ ನೇರವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಹೋದರು. ಅಲ್ಲಿ ಕರ್ನಾಟಕವನ್ನೂ ಕನ್ನಡವನ್ನೂ ಭೂತಗನ್ನಡಿಯಿಟ್ಟು ಹುಡುಕಬೇಕಾದ ಪರಿಸ್ಥಿತಿಯಿತ್ತು ಆಗ. ಎಲ್ಲೆಲ್ಲೂ ಮರಾಠಿಗಳದ್ದೇ ಪ್ರಾಬಲ್ಯ. ಇಡೀ ಕರ್ನಾಟಕವೇ ಅತ್ತ ಮದ್ರಾಸ್ ಪ್ರೆಸಿಡೆನ್ಸಿ, ಇತ್ತ ಮುಂಬಯಿ ಪ್ರೆಸಿಡೆನ್ಸಿ ಎನ್ನುತ್ತ ಎರಡು ವಿಭಾಗಗಳಲ್ಲಿ ಭಾಗವಾಗಿ ಹೋಗಿ ಕನ್ನಡಕ್ಕೆ ನೆಲೆ, ಬೆಲೆ ಎರಡೂ ಇಲ್ಲದ ಪರಿಸ್ಥಿತಿಯಿದ್ದ ಕಾಲ. ವಿದ್ಯಾವರ್ಧಕ ಸಂಘದ ದುಃಸ್ಥಿತಿ ಕಂಡ ವೆಂಕಟರಾಯರು ತನ್ನ ಯೌವನದ ಕಾಲದಲ್ಲೇ ಅದರ ಜವಾಬ್ದಾರಿಯನ್ನು ತನ್ನ ಹೆಗಲೇರಿಸಿಕೊಂಡರು. 1906ರಲ್ಲಿ ವಾಗ್ಭೂಷಣ ಎಂಬ ಕನ್ನಡ ಪತ್ರಿಕೆಯನ್ನು ಧಾರವಾಡದಿಂದ ಹೊರಡಿಸುವ ಸಮಯದಲ್ಲಿ ಅವರಿಗಿನ್ನೂ ಜಸ್ಟ್ 26!

ಆಲೂರು ವೆಂಕಟರಾಯರು ಜೀವನೋಪಾಯಕ್ಕಾಗಿ ಮಾಡುತ್ತಿದ್ದ ವಕೀಲಿ ವೃತ್ತಿಯನ್ನು ತೊರೆದು ಮೂವತ್ತನೇ ವಯಸ್ಸಿನಲ್ಲಿ ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದಲ್ಲೂ ಕರ್ನಾಟಕದ ಶ್ರೇಯೋಭಿವೃದ್ಧಿಯ ಕೆಲಸಗಳಲ್ಲೂ ತನ್ನನ್ನು ತೊಡಗಿಸಿಕೊಂಡರು. 1922ರಲ್ಲಿ ಜಯಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ಬೆಟಗೇರಿ ಕೃಷ್ಣಶರ್ಮ, ದ.ರಾ. ಬೇಂದ್ರೆಯವರಂಥ ಘಟಾನುಘಟಿಗಳು ಈ ಪತ್ರಿಕೆಯಲ್ಲಿ ಸಹಸಂಪಾದಕರೂ ಸಂಪಾದಕರೂ ಆಗಿ ದುಡಿದರೆಂದರೆ ಆಲೂರರ ಕರ್ತೃತ್ವಶಕ್ತಿ ಎಂಥದ್ದು ಅರ್ಥವಾಗುತ್ತದೆ. ಕನ್ನಡಿಗ ಮತ್ತು ಕರ್ಮವೀರ ಪತ್ರಿಕೆಗಳಲ್ಲೂ ಆಲೂರರು ಕೆಲವು ವರ್ಷಗಳ ಕಾಲ ಸಂಪಾದಕರಾಗಿ ದುಡಿದು ಅವಕ್ಕೆ ಖಚಿತತೆ, ನಿರ್ದುಷ್ಟತೆಗಳನ್ನು ತುಂಬಿದರು. 1915ರಲ್ಲಿ ಬೆಂಗಳೂರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಲು ಹೆಗಲೆಣೆಯಾಗಿ ನಿಂತ ಕೆಲವೇ ಮಂದಿ ಕನ್ನಡಿಗರಲ್ಲಿ ಆಲೂರರದ್ದು ಪ್ರಮುಖ ಪಾತ್ರ. ಧಾರವಾಡವನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡ ಆಲೂರರು ಸ್ವಾತಂತ್ರ್ಯಾನಂತರ ಕೆಲಸ ಮಾಡಿದ್ದು ಕರ್ನಾಟಕದ ಏಕೀಕರಣಕ್ಕಾಗಿ. ಕರ್ನಾಟಕ ಇತಿಹಾಸ ಮಂಡಲ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘಸಂಸ್ಥೆಗಳ ಮೂಲಕ ಕನ್ನಡಕ್ಕೂ ತನ್ನದೇ ಆದ ಅಸ್ಮಿತೆ – ಐಡೆಂಟಿಟಿ ಇದೆ; ಅದು ತನ್ನತನವನ್ನು ಮದ್ರಾಸು-ಮುಂಬಯಿ ಪ್ರೆಸಿಡೆನ್ಸಿಗಳ ನೆರಳಿನಲ್ಲಿ ಕಳೆದುಕೊಳ್ಳಬೇಕಿಲ್ಲ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ನಿರೂಪಿಸಿದವರು ಆಲೂರರು. ಉತ್ತರ ಕರ್ನಾಟಕದ ಭಾಗದ ಜನರೆಲ್ಲ ಉನ್ನತ ಶಿಕ್ಷಣಕ್ಕಾಗಿ ಮುಂಬೈ ಇಲ್ಲವೇ ಬಡೋದೆಗೆ ಹೋಗಬೇಕಿದ್ದ ಸಂದರ್ಭದಲ್ಲಿ ಕರ್ನಾಟಕದ ಹೆಸರಲ್ಲಿ ನಮ್ಮಲ್ಲೇ ಒಂದು ವಿಶ್ವವಿದ್ಯಾಲಯ ಬೇಕು ಎಂದು ಹೋರಾಡಿ ಅದಕ್ಕೆ ಪಾಯ ಹಾಕಿಸಿದ ಶ್ರೇಯಸ್ಸು ಸಲ್ಲಬೇಕಾದದ್ದು ಆಲೂರರಿಗೆ. ಅವರ ಜಯಕರ್ನಾಟಕದ ಒಂದೊಂದು ಸಂಪಾದಕೀಯದಲ್ಲೂ ಜಿನುಗುವುದು ಕನ್ನಡತನ, ಕನ್ನಡಪ್ರೇಮ, ಕರ್ನಾಟಕದ ಮೇಲೆ ಅನನ್ಯ ಭಕ್ತಿ-ಗೌರವ. ಭಾರತದೊಳಗೆ ಕರ್ನಾಟಕವಿದೆ ಎಂಬ ಸಾಂಪ್ರದಾಯಿಕ ಕಲ್ಪನೆಯನ್ನು ಹೊಡೆದುಹಾಕುವಂತೆ, ಕರ್ನಾಟಕದೊಳಗೇ ಭಾರತದ ಆತ್ಮದ ಒಂದು ಪಾಲು ಅಡಗಿದೆ; ಕರ್ನಾಟಕವಿಲ್ಲದೆ ಭಾರತ ಭೌಗೋಳಿಕವಾಗಿಯೂ ಸಾಂಸ್ಕೃತಿಕವಾಗಿಯೂ ಅಪೂರ್ಣ ಎಂದವರು ಆಲೂರು ವೆಂಕಟರಾಯರು.

ಅವರ ವ್ಯಕ್ತಿತ್ವದ ಸತ್ವದ ಪರಿಚಯವಾಗಬೇಕಾದರೆ ತಾರುಣ್ಯದ ದಿನಗಳನ್ನು ಮತ್ತಷ್ಟು ಆಳವಾಗಿ ನೋಡಬೇಕು. ತನ್ನ ಜೀವನದ ಕತೆ ಬರೆಯುವಾಗಲೂ ಅವರು ಹಂಪೆಯಲ್ಲಿ ನಿಂತಾಗ ಹುಟ್ಟಿದ ಅಂತರ್ಬೋಧೆಯ ಕುರಿತು ವಿಸ್ತಾರವಾಗಿಯೇ ಬರೆದುಕೊಂಡಿದ್ದಾರೆ. ಸೇಬು ಹಣ್ಣು ಮರದಿಂದ ತೊಟ್ಟು ಕಳಚಿ ಬೀಳುವುದನ್ನು ಎಷ್ಟು ಜನ ನೋಡಿಲ್ಲ? ಆದರೆ ನ್ಯೂಟನ್ನಿಗೆ ಮಾತ್ರ ಆ ಘಟನೆಯನ್ನು ಕಾಣುತ್ತಲೇ ಮಿದುಳಿನಲ್ಲೊಂದು ಸಂಚಲನ, ಹೃದಯದಲ್ಲೊಂದು ಸಾಕ್ಷಾತ್ಕಾರವಾಯಿತು. ಬಹುಶಃ ಅಂಥಾದ್ದೇ ಮಿಂಚಿನ ಸೆಳಕು ಆಲೂರರಿಗೂ ಹಂಪೆಯಲ್ಲಿ ನಿಂತಾಗ ಹುಟ್ಟಿರಬೇಕು! ಸಾವಿರ ವರ್ಷಗಳ ಹಿಂದೆ ಈ ನಾಡಿನಲ್ಲಿ ಗೋದಾವರಿಯಿಂದ ಕಾವೇರಿಯವರೆಗೆ ಮೆರೆದ ಸಾಮ್ರಾಜ್ಯ, ಈಗ ಹೀಗಾಗಿ ಹೋಗಿದೆಯಲ್ಲ! ವಿದ್ಯಾರಣ್ಯರು ನಿರ್ದೇಶಿಸಿದ ರಾಜವಂಶದ ಕತೆ ಕೊನೆಗೆ ಹೀಗಾಯಿತಲ್ಲ! ಎಂಬ ವಿಷಾದ ಅವರ ಮನಸ್ಸನ್ನು ಆ ಕ್ಷಣದಲ್ಲಿ ಗಾಢವಾಗಿ ತುಂಬಿರಬೇಕು. ಮಧ್ವಾಚಾರ್ಯರನ್ನೂ ವಿದ್ಯಾರಣ್ಯರನ್ನೂ ಭಕ್ತಿ-ಗೌರವಗಳಿಂದ ಕಾಣುತ್ತಿದ್ದ ಆಲೂರರಿಗೆ ಆ ಸಮಯದಲ್ಲಿ ಹಂಪಿಯಲ್ಲಿ ನಿಂತಾಗ ಅನಿಸಿದ್ದು – ಈ ರಾಜ್ಯವನ್ನು ಮತ್ತೊಮ್ಮೆ ಸಂಪೂರ್ಣವಾಗಿ ಎತ್ತಿಕಟ್ಟಬೇಕು; ಮುರಿದುಬಿದ್ದ ಇದರ ಆತ್ಮವಿಶ್ವಾಸವನ್ನು ಮತ್ತೊಮ್ಮೆ ಚಿಗುರಿಸಬೇಕು; ಈ ನಾಡಿಗೆ ಧಾರ್ಮಿಕ-ಆಧ್ಯಾತ್ಮಿಕ ಆಯಾಮಗಳನ್ನು ಜೋಡಿಸಿ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕು. ಅವನ್ನೆಲ್ಲ ತನ್ನನ್ನು ನಿಮಿತ್ತವಾಗಿರಿಸಿಕೊಂಡು ಮಾಡಿಸುವುದಕ್ಕಾಗಿಯೇ ವಿದ್ಯಾರಣ್ಯರೇ ತನ್ನನ್ನು ಇಲ್ಲಿಗೆ ಕರೆಸಿದರು, ಇವನ್ನೆಲ್ಲ ಕಾಣಿಸಿದರು, ತನ್ನಲ್ಲಿ ಕೆಚ್ಚೆದೆ ಮೂಡಿಸಿದರು ಎಂದು ಆಲೂರರು ನಂಬಿದರು. ಹಂಪಿಗೆ ಭೇಟಿ ಕೊಟ್ಟ ಮೂರು ತಿಂಗಳಲ್ಲೇ ಅತ್ತ ಬಂಗಾಳದಲ್ಲಿ ವಂಗಬಂಗ ಚಳವಳಿ ಪ್ರಾರಂಭಾದದ್ದೂ ಆಲೂರರ ಕನಸನ್ನು ಗಟ್ಟಿಗೊಳಿಸಲು ಕಾರಣವಾಯಿತು. ವಂಗಬಂಗ ಚಳವಳಿ ಬಂಗಾಳದಲ್ಲಿ ಭುಗಿಲೇಳುತ್ತಿದ್ದಂತೆಯೇ ಮಹಾರಾಷ್ಟ್ರದಲ್ಲೂ ತಿಲಕರ ನೇತೃತ್ವದಲ್ಲಿ “ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು” ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯ ಚಳವಳಿಯ ಕಿಡಿ ಹಾರಿತು. ತಿಲಕರನ್ನೂ ಅರವಿಂದರನ್ನೂ ಆಳವಾಗಿ ಓದಿದ್ದ, ಗಾಢವಾಗಿ ಮೆಚ್ಚಿದ್ದ ಆಲೂರರಿಗೆ ಕರ್ನಾಟಕದಲ್ಲೂ ಅಂಥದ್ದೊಂದು ಆಂದೋಲನವನ್ನು ಮುಂದುವರಿಸುವ ಸ್ಫೂರ್ತಿ ಹುಟ್ಟಿತು. ಸ್ವಾತಂತ್ರ್ಯ ಹೋರಾಟದ ಕೆಲಸವೇ ಹೆಚ್ಚಿನ ಸಮಯವನ್ನು ನುಂಗಹತ್ತಿದಾಗ ಹಿಂದೆ ಮುಂದೆ ಯೋಚಿಸದೆ ಅವರು ವಕೀಲಿ ವೃತ್ತಿಗೆ ತಿಲಾಂಜಲಿ ಇತ್ತರು. ಆದರೆ ಅವರು ಆ ಕಾಲದ ಉಳಿದೆಲ್ಲ ಸ್ವಾತಂತ್ರ್ಯ ಹೋರಾಟಗಾರರಂತೆ ಚಳವಳಿಗಳಲ್ಲೇ ಕಳೆದುಹೋಗಲಿಲ್ಲ ಎಂಬುದು ವಿಶೇಷ. ಹಂಪಿಯ ದುರವಸ್ಥೆ ಕಂಡ ಮೇಲೆ ಅವರು ಅಣ್ಣಿಗೇರಿ, ಲಕ್ಕುಂಡಿ, ಲಕ್ಷ್ಮೇಶ್ವರ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಬನವಾಸಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಾಳಖೇಡ, ಬಂಕಾಪುರ, ನಾಗಾವಿ, ಗೋವೆ, ಸೇಡಂ, ಕಾರ್ಕಳ ಎನ್ನುತ್ತ ಸತತ ಹನ್ನೆರಡು ವರ್ಷಗಳ ಕಾಲ ಕರ್ನಾಟಕದ ಉದ್ದಕ್ಕೂ ಪ್ರವಾಸ ಮಾಡಿ, ಅಲ್ಲಿನ ಗತೇತಿಹಾಸದ ಕುರುಹುಗಳನ್ನು ಪತ್ತೆಹಚ್ಚಿ, ಕಲೆಹಾಕಿ ಪುಸ್ತಕ ಬರೆದರು. ಅದುವೇ “ಕರ್ನಾಟಕ ಗತವೈಭವ” ಎಂಬ ಮಹಾಗ್ರಂಥ. ಪುಸ್ತಕ ಬರೆದು ಸುಮ್ಮನಾಗಲಿಲ್ಲ. ಆ ಅಷ್ಟೂ ಸ್ಥಳಗಳಲ್ಲಿ ತನಗೆ ಕಂಡ ಐತಿಹಾಸಿಕ ಕುರುಹುಗಳನ್ನೆಲ್ಲಾ ಒಟ್ಟುಹಾಕಿದರು. ಕೆಲವನ್ನು ಊರವರಿಂದ ಸಂಗ್ರಹಿಸಿದರು. ದಾನಿಗಳಿಂದ ಪಡೆದರು. ಕೆಲವೆಡೆ ದುಡ್ಡೂ ತೆತ್ತರು. ಹೀಗೆ ಸಂಗ್ರಹಿಸುತ್ತಾ ಹೋದ ವಸ್ತುಗಳನ್ನು ಕೊನೆಕೊನೆಗೆ ಇಡುವುದಕ್ಕೂ ಜಾಗವಿಲ್ಲದ ಸಂದರ್ಭ ಬಂದಾಗ ಅವೆಲ್ಲವನ್ನೂ ನಿಷ್ಕಾಮದಿಂದ ಆರ್ಕಿಯಾಲಜಿ ವಿಭಾಗಕ್ಕೆ ದಾನ ಮಾಡಿಬಿಟ್ಟರು!

ನಿಮಗೆ ಅಚ್ಚರಿಯಾಗಬಹುದು.. ಆಲೂರರು ಅತ್ಯಂತ ಪ್ರಾಕ್ಟಿಕಲ್ ಮನುಷ್ಯ. ಕೇವಲ ಭಾವನಾತ್ಮಕ ಬರವಣಿಗೆ ಮತ್ತು ಭಾಷಣಗಳಿಂದ ಕರ್ನಾಟಕವನ್ನು ಸದೃಢಗೊಳಿಸುವುದು ಸಾಧ್ಯವಿಲ್ಲ. ಕರ್ನಾಟಕ ಭಾರತದ ತೆಕ್ಕೆಯಲ್ಲಿದ್ದೂ ಆತ್ಮಗೌರವದಿಂದ ತಲೆಯೆತ್ತಿ ನಿಲ್ಲಬೇಕಾದರೆ ಆರ್ಥಿಕ ಶಕ್ತಿಯಾಗಿಯೂ ಗುರುತಿಸಿಕೊಳ್ಳಬೇಕು ಎಂಬುದನ್ನು ಆ ಕಾಲದಲ್ಲೇ ಮನಗಂಡಿದ್ದ ದೂರದರ್ಶಿ ವೆಂಕಟರಾಯರು ಹುಟ್ಟುಹಾಕಿದ ಸಂಸ್ಥೆಗಳೇನು ಒಂದೇ ಎರಡೇ? 1908ರಲ್ಲಿ, ತನ್ನ ಇಪ್ಪತ್ತೆಂಟರ ಎಳವೆಯಲ್ಲೇ ಆಲೂರರು ವೃತ್ತಿಕೌಶಲ ತರಬೇತಿ ಶಾಲೆಯನ್ನು ತೆರೆದ ಸಾಹಸಿ! ಕರ್ನಾಟಕ ಅಭುವೃದ್ಧಿಯಾಗಬೇಕಾದರೆ ಮೊದಲು ಜನರಲ್ಲಿ ವೃತ್ತಿಕೌಶಲ ಮೂಡಬೇಕು ಎಂಬ ಉದ್ದೇಶದಿಂದ ಬಟ್ಟೆ ಹೊಲಿಯುವುದು, ಡ್ರಾಯಿಂಗ್, ಪೇಂಟಿಂಗ್, ಪ್ರಿಂಟಿಂಗ್ ಕೆಲಸಗಳನ್ನು ಕಲಿಸಿದರು. ಶುರುವಾದ ಒಂದೇ ವರ್ಷದಲ್ಲಿ ಬ್ರಿಟಿಷರ ಒತ್ತಡದಿಂದಾಗಿ ಈ ಶಾಲೆಯನ್ನು ಮುಚ್ಚಬೇಕಾಯಿತು ಎಂದರೆ ಆ ಕಾಲದಲ್ಲಿ ಆಲೂರರು ಬ್ರಿಟಿಷರಿಗೆ ಅದೆಷ್ಟು ದೊಡ್ಡ ಸವಾಲಾಗಿ ನಿಂತಿದ್ದಿರಬೇಕು ಯೋಚಿಸುವಂತಾಗುತ್ತದೆ! ಬ್ರಿಟಿಷರ ಬೆದರಿಕೆಗೆ ಒಂದಿನಿತೂ ಜಗ್ಗದ, ಕೂದಲು ಕೊಂಕದ ಗಟ್ಟಿಪಿಂಡ ಅದು. ಬೆಂಕಿಪೆಟ್ಟಿಗೆ ಕಾರ್ಖಾನೆ, ಗಾರ್ಮೆಂಟ್ ಫ್ಯಾಕ್ಟರಿ, ಪೆನ್ಸಿಲ್ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಹಂಚಿನ ಕಾರ್ಖಾನೆ, ಹತ್ತಿಯ ಮಿಲ್ಲು – ಹೀಗೆ ಒಂದಾದ ಮೇಲೊಂದು ಫ್ಯಾಕ್ಟರಿ ತೆರೆಯುತ್ತ ನೂರಾರು ಜನರಿಗೆ ಉದ್ಯೋಗ ಕಲ್ಪಿಸುತ್ತ ಕರ್ನಾಟಕವನ್ನು ಆರ್ಥಿಕ-ಔದ್ಯಮಿಕ ಶಕ್ತಿಯಾಗಿ ಬೆಳೆಸುತ್ತ ಸಾಗಿದ ಈ ಏಕಾಂಗಿವೀರನ ಕತೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಫೂರ್ತಿಯ ಚಿಲುಮೆಯಾಗಬೇಕಿತ್ತು. ಸಾಮಾಜಿಕ ಹೋರಾಟಗಳು ಹಾಗೂ ಕಾರ್ಖಾನೆಗಳ ಸ್ಥಾಪನೆ ಎನ್ನುತ್ತ ಕಳೆದುಹೋಗದೆ ಆಲೂರರು ಸಾಹಿತ್ಯದಲ್ಲೂ ತಮ್ಮ ಛಾಪು ಮೂಡಿಸಿದರು. ವಿದ್ಯಾರಣ್ಯರ ಚರಿತ್ರೆಯನ್ನು ಕನ್ನಡದಲ್ಲಿ, ಗ್ರಂಥರೂಪದಲ್ಲಿ ಕೊಟ್ಟರು. ತಿಲಕರ ಗೀತಾರಹಸ್ಯವನ್ನು ಕನ್ನಡಕ್ಕೆ ತಂದರು. ಕನ್ನಡದ ಶಾಲೆ ತೆರೆಯುವ ಸಾಹಸವನ್ನೂ ಮಾಡಿದ ಆಲೂರರು, ಕರ್ನಾಟಕದಲ್ಲಿ ಕನ್ನಡಿಗರಿಗೆ ಕೊಡುವ ಶಾಲಾಶಿಕ್ಷಣದ ಸ್ವರೂಪ ಹೇಗಿರಬೇಕು ಎಂಬುದನ್ನು ಆಳವಾಗಿ ಚಿಂತಿಸುವ “ಶಿಕ್ಷಣ ಮೀಮಾಂಸೆ” ಎಂಬ ಪುಸ್ತಕವನ್ನೂ ಬರೆದರು. ಕರ್ನಾಟಕ ವೀರರತ್ನಗಳು, ಕರ್ನಾಟಕ ಗತವೈಭವ, ರಾಷ್ಟ್ರೀಯತೆಯ ಮೀಮಾಂಸೆ, ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು – ಹೀಗೆ ಅವರ ಬಹಳಷ್ಟು ಬರಹಗಳಲ್ಲಿ ಘನೀಕೃತವಾದ ಚಿಂತನೆಯೆಲ್ಲವೂ ಕರ್ನಾಟಕ, ಭಾರತಗಳನ್ನು ಕುರಿತಾದದ್ದೇ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಇನ್ನೂ ಶಿಶುಹೆಜ್ಜೆಗಳನ್ನಿಡುತ್ತ ಆಗಾಗ ಮುಗ್ಗರಿಸಿಬೀಳುತ್ತ ನಡೆ ಕಲಿಯುತ್ತಿದ್ದ ಕರ್ನಾಟಕಕ್ಕೆ ಅತ್ಯಂತ ಸ್ಪಷ್ಟವಾದ ಭವಿಷ್ಯತ್ತಿನ ದಾರಿಯನ್ನು ಕೊರೆದು ತೋರಿಸಿದವರಲ್ಲಿ ವಿಶ್ವೇಶ್ವರಯ್ಯನವರಷ್ಟೇ ದೊಡ್ಡ ಸಾಧನೆ ಮಾಡಿದವರು ಆಲೂರರು ಕೂಡ. ಬೇಂದ್ರೆಯವರು ಹೇಳಿದ ಮಾತು – ಬಹುಮುಖವಾಗಿಯೂ ಏಕನಿಷ್ಠೆಯಿಂದಲೂ ಅನನ್ಯ ಬುದ್ಧಿಯಿಂದಲೂ ಸತತ ಅನುಸಂಧಾನದಿಂದಲೂ ಕರ್ನಾಟಕದ ಸಲುವಾಗಿ ವಿಚಾರ ಮಾಡುವವರು ಮತ್ತು ತದನುಸಾರ ಆಚರಿಸಲು ಪ್ರಯತ್ನಿಸುವವರು ಹಿರಿಯರಾದ ಕನ್ನಡಿಗರಲ್ಲಿ ಸದ್ಯಕ್ಕೆ ಇವರೊಬ್ಬರೇ!

ಇಂಥ ಆಲೂರು ವೆಂಕಟರಾಯರ ನೆನಪನ್ನು ನಾವು ಪ್ರತಿ ವರ್ಷ ತಪ್ಪದೆ ಮಾಡಬೇಕಾಗಿತ್ತು. ಕರ್ನಾಟಕ ಸರಕಾರ ಈ ಕನ್ನಡದ ಹೋರಾಟಗಾರನ ನೆನಪಲ್ಲಿ ಒಂದು ಪ್ರಶಸ್ತಿಯನ್ನಾದರೂ ಸ್ಥಾಪಿಸಬೇಕಾಗಿತ್ತು. ಆಲೂರರ ಹೆಸರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಂದಿಕೊಂಡಂತೆ ಒಂದು ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಬೇಕಿತ್ತು. ಇಪ್ಪತ್ತನೇ ಶತಮಾನದ ಆರಂಭಕಾಲದಲ್ಲೇ ಪ್ರಕಾಶಕರ ಸಮ್ಮೇಳನಗಳನ್ನು ಆಯೋಜಿಸಿ ಕನ್ನಡದಲ್ಲಿ ಪುಸ್ತಕ ಪ್ರಕಟಣೆಯ ಆಂದೋಲನ ಹುಟ್ಟುಹಾಕಿದ್ದ ಆಲೂರರ ಹೆಸರಲ್ಲಿ ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿ ಗ್ರಂಥಾಲಯಗಳನ್ನು ತೆರೆಯಬೇಕಾಗಿತ್ತು. ಆಲೂರರ ಬಗೆಗಿನ ಪಾಠವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಮಕ್ಕಳಿಗೆ ಓದಿಸಬೇಕಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಲೂರರ ಸಾಕ್ಷ್ಯಚಿತ್ರ ತಯಾರಿಸಬೇಕಾಗಿತ್ತು. ಆಲೂರರ ಹುಟ್ಟುದಿನವಾದ ಜುಲೈ12ನ್ನು ಕರ್ನಾಟಕ ಏಕೀಕರಣ ಹೋರಾಟಗಾರರ ದಿನವಾಗಿಯೋ ಕನ್ನಡ ಐಕ್ಯ ದಿನವಾಗಿಯೋ ಅರ್ಥಪೂರ್ಣವಾಗಿ ಆಚರಿಸಬೇಕಾಗಿತ್ತು. ಈ ಎಲ್ಲ “ಇತ್ತು”ಗಳನ್ನು ಮಾಡಬಹುದಾಗಿದ್ದ ರಾಜ್ಯ ಸರಕಾರ ಈಗ ಮಾಡಲು ಹೊರಟಿರುವುದು ಏನು ಗೊತ್ತೇ? ಬಿಬಿಎಂಪಿ ಮೂಲಕ ಬೆಂಗಳೂರಲ್ಲಿರುವ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರ ರಸ್ತೆಯ ಹೆಸರನ್ನು ಟಿಪ್ಪು ಸುಲ್ತಾನ್ ಎಂಬ ಮನೆಹಾಳ ದುರುಳನ ಹೆಸರಿಗೆ ಬದಲಾಯಿಸಲು ಒತ್ತಡ ತರುತ್ತಿರುವುದು! ಆ ಮೂಲಕ ಕನ್ನಡ ಹೋರಾಟಗಾರರೊಬ್ಬರ ನೆನಪನ್ನು ಶಾಶ್ವತವಾಗಿ ಕನ್ನಡಿಗರ ಮನಸ್ಸಿನಿಂದ ಅಳಿಸಿಹಾಕಲು ಪ್ರಯತ್ನ ಮಾಡುತ್ತಿರುವುದು!

ಟಿಪ್ಪು ಸುಲ್ತಾನ್ ಅದೆಂಥ ದುಷ್ಟನಾಗಿದ್ದ, ಎಷ್ಟು ಲಕ್ಷ ಜನರನ್ನು ಕಡಿದುಕೊಂದ, ಮೈಸೂರು ಅರಸರನ್ನು ಅದೆಂಥ ಚಿತ್ರಹಿಂಸೆ ಕೊಟ್ಟು ಕೂಡಿಹಾಕಿದ್ದ, ಮೇಲುಕೋಟೆಯ ಅಯ್ಯಂಗಾರರನ್ನು ದೀಪಾವಳಿ ಹಬ್ಬದ ದಿನ ಯಾವ ಪರಿಯಲ್ಲಿ ಭೀಕರ ರಕ್ತಪಾತದ ಮೂಲಕ ಪರಿಹರಿಸಿದ, ಮಂಗಳೂರಿನ ಕ್ರೈಸ್ತರನ್ನು ಹೇಗೆ ನೂರಾರು ಕಿಲೋಮೀಟರ್ ನಡೆಸಿ ಶ್ರೀರಂಗಪಟ್ಟಣದಲ್ಲಿ ಕೂಡಿಹಾಕಿ ಚಿತ್ರಹಿಂಸೆ ಕೊಟ್ಟು ಕೊಂದ, ಹೇಗೆ ಕೊಡಗು ಮತ್ತು ಕೇರಳದ ಹಿಂದೂಗಳನ್ನು ಹಿಂಸಾರೂಪದಲ್ಲಿ ಮತಾಂತರ ಮಾಡಿದ ಎಂಬ ಎಲ್ಲ ವಿವರಗಳೂ ಜಗಜ್ಜಾಹೀರಾದ ಮೇಲೂ ಸರಕಾರ ಇನ್ನೂ ಇನ್ನೂ ಆ ದುರುಳನ ಭಜನೆ ಮಾಡುತ್ತಿದೆ ಎಂದರೆ ಏನು ಹೇಳಬೇಕು? ಈಗಾಗಲೇ ಆಲೂರು ವೆಂಕಟರಾಯರ ಹೆಸರಿನ ರಸ್ತೆಗೆ ಟಿಪ್ಪುವಿನಂಥ ಮತಾಂಧ ರಾಕ್ಷಸನ ಹೆಸರಿಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲವೆಂಬ ಒತ್ತಾಯವನ್ನು ಹೋದ ವರ್ಷವೇ ಮಾಡಿಯಾಗಿದೆ. ಆದರೆ ಅದೇ ಅರ್ಜಿ ಮತ್ತೆ ಮತ್ತೆ ಬಿಬಿಎಂಪಿ ಎದುರು ಬರುತ್ತಿದೆ; ಮತ್ತೆ ಮತ್ತೆ ಅದರ ಕುರಿತು ಕನ್ನಡಿಗರು ದನಿ ಎತ್ತಬೇಕಾಗಿದೆ, ವಿರೋಧಿಸಬೇಕಾಗಿದೆ ಎಂದರೆ ಏನು ಹೇಳಬೇಕು? ನಾವೇನು ಪ್ರಜಾಪ್ರಭುತ್ವವಿರುವ ಭಾರತದೊಳಗಿದ್ದೇವೋ ಇಲ್ಲಾ ಐಸಿಸ್‍ನ ಸಿರಿಯಾದಲ್ಲಿದ್ದೇವೋ? ಆಲೂರರ ವ್ಯಕ್ತಿತ್ವದ ಪರಿಚಯ ಇಲ್ಲದೇ ಹೋದರೆ ಬಿಬಿಎಂಪಿ ಅಧಿಕಾರಿಗಳು ಕನಿಷ್ಠ ಯಾರಾದರೂ ವಿದ್ವಾಂಸರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಿತ್ತಲ್ಲ? ಆಲೂರರು ಮಾಡಿದ ಕೆಲಸದ ನೂರನೇ ಒಂದಂಶವನ್ನಾದರೂ ಟಿಪ್ಪು ಕನ್ನಡಕ್ಕಾಗಿ ಮಾಡಿದ್ದಾನೆಯೇ? ಟಿಪ್ಪುವಿನ ಆಡಳಿತದ ಪ್ರಭಾವ ಮತ್ತು ಪರಿಣಾಮವನ್ನು ಇಂದಿಗೂ ನಾವು ಅನುಭವಿಸುತ್ತಿದ್ದೇವೆ. ಕಂದಾಯ ಇಲಾಖೆಯಲ್ಲಿ ನೂರಕ್ಕೂ ಹೆಚ್ಚು ಅರೇಬಿಕ್, ಪರ್ಶಿಯನ್ ಪದಗಳು ನೆಲೆನಿಲ್ಲುವುದಕ್ಕೆ ಕಾರಣನಾದವನೇ ಟಿಪ್ಪು. ಅವನ ಆಡಳಿತದ ವೈಖರಿಯಿಂದಾಗಿ ರಾಜ್ಯದಲ್ಲಿ ನೂರಾರು ದೇವಸ್ಥಾನಗಳು ಒಂದೋ ನಾಶವಾದವು ಇಲ್ಲವೇ ಶ್ರೀರಂಗಪಟ್ಟಣದಲ್ಲಾದಂತೆ ಮಸೀದಿಗಳಿಗೆ ಅಡಿಪಾಯವಾದವು. ಯಾವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯನ್ನು ಕಂಡು ಮರುಗಿ ತನ್ನ ಜೀವನವನ್ನೇ ಕನ್ನಡಕ್ಕಾಗಿ ಮುಡಿಪಾಗಿಡುವ ಸಂಕಲ್ಪವನ್ನು ಆಲೂರರು ಮಾಡಿದರೋ ಅಂಥ ವಿಜಯನಗರದ ಅರಸರಿಗೇ ತಿರುಗಿಬಿದ್ದವನು ಟಿಪ್ಪು. ಅವನನ್ನು ಕನ್ನಡಪ್ರೇಮಿ ಎಂದು ಯಾವ ಕೋನದಿಂದ ಹೇಳುತ್ತೀರಿ ಸ್ವಾಮಿ? ನಿಮಗೆ ಅವನ ಹೆಸರನ್ನು ರಸ್ತೆಗಿಡಲೇಬೇಕು ಎಂಬ ತೆವಲು ಇದ್ದರೆ ಶಿವಾಜಿನಗರವೋ ಇಲ್ಯಾಸ್ ನಗರವೋ ಯಾವುದಾದರೊಂದು ಭಾಗದ ಗಲ್ಲಿಗಿಟ್ಟು ಪುಣ್ಯ ಕಟ್ಟಿಕೊಳ್ಳಿ. ಆದರೆ ಅದಕ್ಕಾಗಿ ಆಲೂರರ ಹೆಸರು ಹೊತ್ತ ರಸ್ತೆಯನ್ನೇ ಏಕೆ ಆಯ್ಕೆ ಮಾಡಿಕೊಳ್ಳುತ್ತೀರಿ? ನಿಮ್ಮ ಮತಬೇಟೆಯ ತೆವಲುಗಳಿಗೆ ಕನ್ನಡದ ಹೋರಾಟಗಾರರೊಬ್ಬರ ಹೆಸರನ್ನೇಕೆ ಅಳಿಸಹೋಗುತ್ತೀರಿ?

ಕರ್ನಾಟಕದಲ್ಲಿ ಇಂದು ಆರು ಸಾವಿರದಷ್ಟು ಉರ್ದು ಶಾಲೆಗಳಿವೆ. ಇಲ್ಲಿ ಕಲಿಯುವ ಯಾವ ವಿದ್ಯಾರ್ಥಿಯೂ ತಪ್ಪಿಲ್ಲದಂತೆ ಕನ್ನಡ ಓದುವುದಾಗಲೀ ಬರೆಯುವುದಾಗಲೀ ಆಡುವುದಾಗಲೀ ಮಾಡಲಾರ. ಅಷ್ಟರಮಟ್ಟಿಗೆ ಕನ್ನಡಕ್ಕೆ ಇದೊಂದು ನೇರ ಹೊಡೆತ. ಅಕ್ಕಪಕ್ಕದ ಕೇರಳ, ತಮಿಳುನಾಡುಗಳಲ್ಲಿ ಮುಸ್ಲಿಮರು ಆಯಾ ರಾಜ್ಯದ ಭಾಷೆಯನ್ನು ಸುಲಲಿತವಾಗಿ ಮಾತಾಡಬಲ್ಲರಾದರೆ ನಮ್ಮಲ್ಲಿ ಮಾತ್ರ ಮುಸ್ಲಿಮರು ಕನ್ನಡದಿಂದ ವಂಚಿತರಾಗಿ ಉರ್ದುವನ್ನೋ ಅರೇಬಿಕ್ ಅನ್ನೋ ಆಶ್ರಯಿಸುವಂತಾಗಿದೆ. ರೋಗಿ ಬಯಸಿದ್ದೂ ವೈದ್ಯ ಕೊಟ್ಟದ್ದೂ ಒಂದೇ ಎನ್ನುವ ಹಾಗೆ ಸಚಿವ ಖಾದರ್, ಮೊದಲನೇ ಕ್ಲಾಸಿನಿಂದಲೇ ಅರೇಬಿಕ್ ಅನ್ನು ಮಕ್ಕಳಿಗೆ ಕಲಿಸುವ ಮಾತಾಡುತ್ತಾರೆ! ಪೊಲೀಸರು ರಾಜ್ಯದ ಜನತೆಯ ಜೊತೆ ವ್ಯವಹರಿಸುವಾಗ ಕನ್ನಡ ಮಾತ್ರವಲ್ಲ, ಉರ್ದುವನ್ನೂ ಬಳಸಬೇಕು ಎಂದು ನಮ್ಮ ಘನ ಮುಖ್ಯಮಂತ್ರಿಗಳು ಸಲಹೆ ಕೊಡುತ್ತಾರೆ ಎಂದರೆ ಏನು ಹೇಳಬೇಕು! ಪೊಲೀಸರು ಸಭ್ಯತೆ ಕಲಿಯಬೇಕಾದರೆ ಉರ್ದು ಮಾತಾಡುವುದನ್ನು ಕಲಿಯಬೇಕಂತೆ! ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಏನಾದರೂ ಇದೆಯೇ? ಇಂಥ ಮನಸ್ಥಿತಿಯುಳ್ಳ ಮುಖ್ಯಮಂತ್ರಿಯಿಂದ ಏನನ್ನು ತಾನೇ ನಿರೀಕ್ಷಿಸಿಯೇವು? ಇನ್ನು, ಆಲೂರು ವೆಂಕಟರಾರರ ರಸ್ತೆ ಹೆಸರನ್ನು ಬದಲಿಸಲು ಹೊರಟ ಬಿಬಿಎಂಪಿಯ ನಿರ್ಧಾರವನ್ನು ಕನ್ನಡ ಹೋರಾಟಗಾರರು ಖಂಡಿಸಿದ್ದಾರೆಯೇ? ಇಲ್ಲ! ಯಾಕೆಂದರೆ ಈ ವಿಷಯದಲ್ಲಿ ಮೂಗು ತೂರಿಸಲು ಹೋದರೆ ಬಿಬಿಎಂಪಿಯನ್ನು, ತನ್ಮೂಲಕ ಕರ್ನಾಟಕದ ಸದ್ಯದ ಜಾತ್ಯತೀತ ಸರಕಾರವನ್ನು, ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಎದುರು ಹಾಕಿಕೊಂಡಂತಾಗುತ್ತದೆ. ಅದು ಇವರಿಗೆ ಬೇಕಾಗಿಲ್ಲ. ಇವರ ಹೋರಾಟಗಳೇನಿದ್ದರೂ ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ, ಸಂಸ್ಕೃತ, ಆರೆಸ್ಸೆಸ್, ಹಿಂದೀ, ಪುರೋಹಿತಶಾಹಿ, ಮನುವಾದಿ ಇತ್ಯಾದಿಗಳ ವಿರುದ್ಧ ಮಾತ್ರ! ಮೆಟ್ರೋಗಳಲ್ಲಿ ಹಿಂದೀ ಬೋರ್ಡುಗಳಿಗೆ ಮಸಿ ಮೆತ್ತುವ ಕಾಯಕದಲ್ಲಿ ಬ್ಯುಸಿಯಾಗಿರುವ ಹೋರಾಟಗಾರರಿಗೆ ಕನ್ನಡ ಮತ್ತು ಕರ್ನಾಟಕಕ್ಕಾಗಿ ಜೀವ ತೇಯ್ದ ಹಿರಿಯ ಚೇತನದ ಹೆಸರನ್ನು ರಸ್ತೆಯಲ್ಲಿ ಉಳಿಸಿಕೊಳ್ಳಬೇಕು ಎಂದು ಇನ್ನೂ ಅನ್ನಿಸಿಲ್ಲ ಎಂಬುದು ನಮ್ಮೆಲ್ಲ ಸೋಕಾಲ್ಡ್ ಓರಾಟಗಳ ನಿರರ್ಥಕತೆಗೆ ಕನ್ನಡಿ ಹಿಡಿದಂತಿದೆ.

Comments

comments