ಮತ್ತೊಮ್ಮೆ ಬೂಕರ್ ಹೊಸ್ತಿಲಲ್ಲಿ ಅರುಂಧತಿ; ಅಡಳಿತಕ್ಕೆ ತೊಡರುಗಾಲಾಗಲು ಮುಹೂರ್ತ

ಸಂತೋಷ್ ತಮ್ಮಯ್ಯ

2008ರಲ್ಲಿ ಆಂಗ್ಲ ಪತ್ರಿಕೆಯೊಂದಕ್ಕೆ ಅರುಂಧತಿ ರಾಯ್ ಸಂದರ್ಶನ ನೀಡುತ್ತಿದ್ದಳು. ಆಕೆ ಅದರಲ್ಲಿ ಯಾವ ಮುಚ್ಚುಮರೆಯೂ ಇಲ್ಲದೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಲೇಬೇಕೆಂದು ನೇರಾ ನೇರಾ ಹೇಳಿದ್ದಳು. ಮರುದಿನ ಆ ಪತ್ರಿಕೆಯಲ್ಲಿ “ಬೂಕರ್ ಪ್ರಶಸ್ತಿ ವಿಜೇತೆ ಕಾಶ್ಮೀರದ ಮುಕ್ತಿಗೆ ಬೆಂಬಲ’’ ಎಂದು ಪ್ರಕಟಿಸಿತ್ತು. ಬೂಕರ್ ಎಂಬ ಪ್ರತಿಷ್ಠಿತ ಪ್ರಶಸ್ತಿ ಆಕೆಯ ಹುರುಳಿಲ್ಲದ ವಾದಕ್ಕೂ ಒಂದು ಮೌಲ್ಯವನ್ನು ಪುಕ್ಕಟೆಯಾಗಿ ಒದಗಿಸಿಕೊಟ್ಟಿತ್ತು. ವಿದೇಶದಲ್ಲೂ ಆ ಸುದ್ಧಿ ಸಾಕಷ್ಟು ಪ್ರಚಾರವಾಗಿ ಆಕೆ ಕೆಲವೇ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಬಹಿರಂಗ ಸಮಾವೇಶವೊಂದನ್ನೂ ಕೂಡಾ ನಡೆಸಿದಳು! ಮಹಾರಾಜಾ ಹರಿಸಿಂಗನನ್ನು ಟೀಕಿಸಿ, ಅಮರನಾಥ ಯಾತ್ರೆಯಿಂದ ಕಾಶ್ಮೀರದ ಮುಸಲ್ಮಾನರಿಗೆ ತೊಂದರೆಯಾಗುತ್ತಿದೆ. ಪರಿಸರ ನಾಶವಾಗುತ್ತಿದೆ ಎಂದು ಘೋಷಿಸಿದಳು. ಅದೂ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರವಾಯಿತು.

ಈ ಸಮಾವೇಶಕ್ಕೆ ಆಕೆ ಧೈರ್ಯ ಮಾಡಿದ ಒಂದು ಕಾರಣವಿತ್ತು.

2002ರಲ್ಲಿ ಇದೇ ಅರುಂಧತಿ ರಾಯ್ ಮೇಧಾ ಪಾಟ್ಕರ್ ಜೊತೆ ಸೇರಿ ನರ್ಮದಾ ಬಚಾವೋ ಎಂದು ಕಂಠ ಶೋಷಣೆ ಮಾಡಿದ್ದಳು. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ವಿರುದ್ಧ ಟೀಕೆ ಮಾಡಲು ವಿಷಯಗಳೆಲ್ಲವೂ ಮುಗಿದಿದ್ದಾಗ ದೇಶದ ಬುದ್ಧಿಜೀವಿಗಳು ಮೋದಿಯವರ ಅಬಿವೃದ್ಧಿ ಯೋಜನೆಗಳನ್ನೂ ವಿರೋಧಿಸಲುತೊಡಗಿದ್ದರು. ಜನರಿಗೆ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಲು ಇವರು ಉಪವಾಸ ಸತ್ಯಾಗ್ರಹವನ್ನಾರಂಭಿಸಿದ್ದರು! ಸುಳ್ಳುಗಳನ್ನೇ ತುಂಬಿಸಿದ ಡಾಕ್ಯುಮೆಂಟರಿಗಳನ್ನು ಮಾಡಿ ವಿದೇಶಗಳಲ್ಲಿ ಪ್ರಸಾರ ಮಾಡಿಸಿದರು. ಬೂಕರ್ ವಿಜೇತೆಯ ಹೋರಾಟವನ್ನು ವಿದೇಶಿ ಪರಿಸರವಾದಿಗಳು ನಂಬಿದರು.

1998ರಲ್ಲಿ ಭಾರತ ಸರ್ಕಾರ ಪೋಕ್ರಾನಿನಲ್ಲಿ ಅಣುಬಾಂಬ್ ಪರೀಕ್ಷೆ ನಡೆಸಿದಾಗ ಜಗತ್ತಿನ ಎಲ್ಲ ದೇಶಗಳೂ ಭಾರತದ ವಿರುದ್ಧ ನಿಂತಿದ್ದವು. ಹಲವು ದೇಶಗಳು ಆರ್ಥಿಕ ದಿಗ್ಭಂಧನ ಹೇರಿದ್ದವು. ದೇಶದ ಪಾಲಿಗೆ ಅವು ಅತ್ಯಂತ ಸವಾಲಿನ ದಿನಗಳು. ಅಂಥ ಸ್ಥಿತಿಯಲ್ಲಿ ಅರುಂಧತಿ ರಾಯ್ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿ ವಿದೇಶಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ತನ್ನ ದೇಶದ ಮೇಲೆ ಮತ್ತಷ್ಟು ಕಲ್ಲುಗಳನ್ನು ಹಾಕಲು ಸಹಾಯ ಮಾಡಿದಳು. ಆಗಷ್ಟೆ ಆಕೆಗೆ ಬೂಕರ್ ಒಲಿದು ಇಡೀ ಜಗತ್ತಿನ ಪತ್ರಿಕೆಗಳು, ಸಾಹಿತ್ಯ ಲೋಕ ಅರುಂಧತಿ ಎಂದರೆ ಭಾರತದ ಸಾಂಸ್ಕೃತಿಕ ರಾಯಭಾರಿ ಎಂಬ ಭ್ರಮೆಯನ್ನು ತಳೆದಿದ್ದವು. ಅದೇ ವರ್ಷ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳು ಹಲವು ಜಲವಿದ್ಯುತ್ ಯೋಜನೆಗಳನ್ನು ಹಮ್ಮಿಕೊಂಡಿದ್ದವು. ಅರುಂಧತಿ ರಾಯ್ ಆ ಯೋಜನೆಗಳನ್ನೂ ಇನ್ನಿಲ್ಲದಂತೆ ವಿರೋಧಿಸಿದಳು. ವಿಚಿತ್ರವೆಂದರೆ ಈ ಎಲ್ಲ ರಾಜ್ಯಗಳಲ್ಲಿ ಭಾಜಪ ಸರ್ಕಾರವಿತ್ತು. ಭಾಜಪ ಸರ್ಕಾರದ ಎಲ್ಲ ಯೋಜನೆಗಳಿಗೆ ಅರುಂಧತಿ ರಾಯ್ ತೊಡರುಗಾಲು ಹಾಕುತ್ತಿದ್ದಳು. ಆಕೆಯ ಮಾತಿಗಿದ್ದ ಏಕೈಕ ಬಲವೆಂದರೆ ಆಕೆ ಬೂಕರ್ ಪ್ರಶಸ್ತಿ ವಿಜೇತೆಯೆಂಬುದು ಮಾತ್ರ.

ಸತ್ಯದ ವಿರುದ್ಧ ಅರಚುವ ಅರುಂಧತಿಯ ಚಾಳಿ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಸಂದರ್ಭ ಸಿಕ್ಕಾಗಲೆಲ್ಲ ಆಕೆ ಎಲ್ಲಿದ್ದರೂ ಅವೆಲ್ಲಾ ಪರಿಸ್ಥಿತಿಯನ್ನು ಉಪಯೋಗಿಸಿಕೊಳ್ಳುತ್ತಾಳೆ. 2006ರಲ್ಲಿ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿ ಅಂತಾರಾಷ್ಟ್ರೀಯ ಎಲ್‍ಜಿಬಿಟಿ ಸಿನೆಮಾ ಉತ್ಸವ ನಡೆದಾಗ ಅಮೆರಿಕಾದಲ್ಲೂ ಆಕೆ ತನ್ನ ಹುಚ್ಚಾಟ ಪ್ರದರ್ಶಿಸಿದ್ದಳು. ಉತ್ಸವದಲ್ಲಿ ಇಸ್ರೇಲಿ ಪ್ರಾಯೋಜಕತ್ವ, ಇಸ್ರೇಲಿನ ಕುರುಹುಗಳಾವುವೂ ಇರಬಾರದೆಂದು ಕೆಲವು ಬುದ್ಧಿಜೀವಿಗಳು ಮತ್ತು ಪತ್ರಕರ್ತರೊಡಗೂಡಿ ಪ್ರತಿಭಟನೆ ನಡೆಸಿದಳು. ಇಸ್ರೇಲ್ ಒಂದು ಭಯೋತ್ಪಾದಕ ರಾಷ್ಟ್ರ, ಆಕ್ರಮಣಕಾರಿ ಮನೋಭಾವದ ವಿರುದ್ಧ ಜಗತ್ತು ಒಟ್ಟಾಗಬೇಕೆಂದು ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದಳು. ಅಲ್ಲೂ ಆಕೆಗೆ ಬಿಟ್ಟಿ ಪ್ರಚಾರ ಸಿಕ್ಕಿತು. ಕಾರಣ ಆಕೆ ಬೂಕರ್ ವಿಜೇತೆ.

ಸೆಪ್ಟಂಬರ್ 11ರ ಅವಳಿ ಕಟ್ಟಡಗಳ ದಾಳಿಯ ಹೊತ್ತಲ್ಲಿ ನಿಗೂಢವಾಗಿ ಮರೆಯಾಗಿದ್ದ ಅರುಂಧತಿ ಕೆಲ ದಿನಗಳು ಎಲ್ಲೂ ಪ್ರತ್ಯಕ್ಷವಾಗಿರಲಿಲ್ಲ. ಆದರೆ ಯಾವಾಗ ಅಮೆರಿಕಾ ಅಫ್ಘಾನಿಸ್ಥಾನದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯ ಆರಂಭಿಸಿತ್ತೋ ಆಗ ಅರುಂಧತಿ ತನ್ನ ಲೇಖನಿಗೆ ಕೆಲಸ ಕೊಟ್ಟಿದ್ದಳು. ಅಮೆರಿಕಾ ಮುಗ್ದ ಜನರನ್ನು ಕೊಲ್ಲುತ್ತಿದೆ. ಅದೊಂದು ಭಯೋತ್ಪಾದನಾ ದೇಶ ಎಂದು ಅಮೆರಿಕಾದ ಅಧ್ಯಕ್ಷನನ್ನು ಕಟುವಾಗಿ ಟೀಕಿಸಿದಳು. ಜಾಗತಿಕ ಬುದ್ಧಿಜೀವಿಗಳ ಲೋಕದಲ್ಲಿ ಅರುಂಧತಿ ನಕ್ಷತ್ರವಾಗಿಹೋದಳು. ಅದಕ್ಕೆ ಆಕೆಗಿದ್ದ ಒಂದೇ ಒಂದು ಅರ್ಹತೆಯೆಂದರೆ ಬೂಕರ್ ವಿಜೇತೆ ಎಂಬುದು ಮಾತ್ರ.

2008ರ ಮುಂಬೈ ದಾಳಿಗೆ ದೇಶಕ್ಕೆ ದೇಶವೇ ಆಘಾತಗೊಂಡಿದ್ದಾಗ ಅರುಂಧತಿ ರಾಯ್‍ಗೆ ಬೇರೊಂದು ಅರಿವು ಹುಟ್ಟಿತು. ಎಲ್ಲೆಲ್ಲೂ ಪಾಕ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಾಗ ಪಾಕಿಸ್ಥಾನಿ ಉಗ್ರರನ್ನು ಬೆಂಬಲಿಸಲೂ ಈ ಹೆಣ್ಣು ಹೇಸಲಿಲ್ಲ. ಭಾರತ ಪಾಕಿಸ್ಥಾನಕ್ಕೆ ಸವಲತ್ತುಗಳನ್ನು ನೀಡದ ಪರಿಣಾಮ ಅಲ್ಲಿನ ಜನರು ಬಡವರಾಗಿದ್ದಾರೆ, ಬಡತನದ ಕಾರಣದಿಂದ ಅಲ್ಲಿನ ಜನ ಭಯೋತ್ಪಾದಕರಾಗುತ್ತಿದ್ದಾರೆ ಎಂದು ವಾದ ಮಂಡಿಸಿದಳು. ಆದರೆ ದಾಳಿಯಲ್ಲಿ ಮಡಿದ, ಗಾಯಗೊಂಡ ಅಮಾಯಕರು ಆಕೆಗೆ ನೆನಪಾಗಲಿಲ್ಲ. ಹೀಗೆ ಓತಪ್ರೋತ ಹೇಳಿಕೆ ನೀಡಲು ಆಕೆಯಲ್ಲಿದ್ದ ಒಂದೇ ಒಂದು ಕಾರಣ ಬೂಕರ್.

ಭಾರತ ಮತ್ತು ಶ್ರೀಲಂಕಾ ನಡುವಿನ ಗೊಂದಲ, ತಮಿಳು ಸಮಸ್ಯೆಗಳ ಸೂಕ್ಷ್ಮವನ್ನು ಅರಿಯದೇ ಕೈ ಹಾಕಿದವಳೂ ಕೂಡಾ ಇದೇ ಅರುಂಧತಿ ರಾಯ್. ಇತ್ತ ಸರ್ಕಾರಗಳು ತಮಿಳು ಸಮಸ್ಯೆಯನ್ನು ನಾಜೂಕಾಗಿ ನಿಭಾಯಿಸಲು ಯತ್ನಿಸುತ್ತಿದ್ದರೆ ಅತ್ತ ಅರುಂಧತಿ ತಮಿಳು ವಲಸಿಗರ ಡೇರೆಗಳಲ್ಲಿ ಕುಳಿತು ಅವರನ್ನು ಮತ್ತಷ್ಟು ಕೆರಳಿಸುತ್ತಿದ್ದಳು. ಅಲ್ಲದೆ ತಮಿಳು ವಲಸಿಗರಿಗೆ ಕಾನೂನು ನ್ಯಾಯ ಒದಗಿಸುವ ಭರವಸೆ ಇಲ್ಲ, ಎಲ್‍ಟಿಟಿಇ ಅವರ ಏಕೈಕ ಆಶಾಕಿರಣ ಎಂದಳು. ಪೊಲೀಸರು ಸತ್ತಾಗ, ಸೈನಿಕರು ಸತ್ತಾಗ, ಭಯೋತ್ಪಾದನೆಯಿಂದ ಅಮಾಯಕರು ಸತ್ತಾಗ ಕಣ್ಣೀರಿಡದ ಅರುಂಧತಿ ಭಯೋತ್ಪಾದನೆಗೆ ನ್ಯಾಯ ಒದಗಿಸುವ ಮೂಲಕ ಎಲ್‍ಟಿಟಿಇಯಂಥಾ ಭಯಾನಕ ಹಿಂಸಾಮಾರ್ಗಿಗಳನ್ನು ಬೆಂಬಲಿಸಿದ್ದಳು. ನಕ್ಸಲರು ಮಕ್ಕಳನ್ನು ಕೊಂದಾಗ, ಪೊಲೀಸರನ್ನು ಕೊಂದಾಗ ಸದ್ದುಮಾಡದ ಅರುಂಧತಿ ಗಂಟಲು ನಕ್ಸಲರ ಎನ್ಕೌಂಟರ್ ನಡೆದಾಗಲೆಲ್ಲ ಅರಚತೊಡಗುತ್ತದೆ. ಅಲ್ಲದೆ ನಿಷೇಧಿತ ನಕ್ಸಲ್ ಗುಂಪುಗಳನ್ನು ಸಂಪರ್ಕಿಸಿ ಲೇಖನ ಬರೆಯುವ ಅರುಂಧತಿ ಅವರ ಬದುಕನ್ನು ಕರುಣಾಜನಕವಾಗಿ ಕಟ್ಟಿಕೊಡುತ್ತಾಳೆ. ಅದು ವಿಶ್ವದ ಹಲವು ಭಾಷೆಗಳಲ್ಲಿ ಅನುವಾದಗೊಂಡು ಸೆಮಿನಾರುಗಳು ನಡೆಯುತ್ತವೆ. ಆಕೆಗೆ ಇವೆಲ್ಲ ಸಾಧ್ಯವಾಗುವುದು ಬೂಕರ್ ವಿಜೇತೆ ಎಂಬ ಒಂದೇ ಒಂದು ಕಾರಣದಿಂದ.

ಹೀಗೆ ದೇಶಕ್ಕೆ, ವಿಶ್ವಕ್ಕೆ, ಸೃಷ್ಟಿಗೆ ಸರಿ ಎನಿಸುವುದೆಲ್ಲವೂ ಅರುಂಧತಿಗೆ ವಿರೋಧವಾಗಿ ಕಾಣುತ್ತದೆ. ಆದರೆ ಆಕೆಗೆ ಸರಿ ಎಂದು ಕಾಣುವುದೆಲ್ಲವೂ ಸೃಷ್ಟಿವಿರೋಧಿಯೂ ಸಮಾಜಘಾತುಕವೂ ಆಗಿರುತ್ತದೆ.

ಅರುಂಧತಿಯ ಇಂಥ ಹುಚ್ಚಾಟಗಳಿಂದ ಆಕೆ ಸಾಧಿಸಿದ್ದೇನು ಎಂದು ನೋಡಿದರೆ ಆಕೆಯ ಹೋರಾಟ, ವಿಚಿತ್ರ ವರ್ತನೆಗಳ ಮೂಲ ಕಂಡುಬರುತ್ತದೆ. ಆಕೆಯನ್ನು ವಿವಿಧ ದೇಶಗಳ ವಿಶ್ವವಿದ್ಯಾಲಯಗಳು ಕರೆದು ಪ್ರಶಸ್ತಿಯನ್ನು ಕೊಟ್ಟಿವೆ. ಸಿಡ್ನಿ ಶಾಂತಿ ಪ್ರಶಸ್ತಿ ಎಂಬುದೂ ಸಿಕ್ಕಿವೆ. ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಆಕೆಯ ಉಪನ್ಯಾಸ ಏರ್ಪಾಡಾಗುತ್ತದೆ. ಆ ಮೂಲಕ ವಿಶ್ವದ ಎಲ್ಲ ಸಾಮಾಜಿಕ, ಆರ್ಥಿಕ, ಸೈನಿಕ ಸಂಗತಿಗಳ ಬಗ್ಗೆ ಮಾತಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾಳೆ. ಅಭಿವೃದ್ಧಿ ಯೋಜನೆಗಳ ಹೊತ್ತಲ್ಲಿ ಆಡಳಿತಕ್ಕೆ ಅರುಂಧತಿ ಒಮ್ಮೆ ಹಾದುಹೋಗುತ್ತಾಳೆ. ವಿದೇಶಿ ಹೋರಾಟದ ಬೆಂಬಲ ಆಕೆಯನ್ನು ಶಕ್ತಿಶಾಲಿಯನ್ನಾಗಿ ಮಾಡಿವೆ. ಅದಕ್ಕೆಲ್ಲ ಮೂಲ ಕಾರಣ ಆಕೆ ಬೂಕರ್ ವಿಜೇತೆ ಎಂಬುದು ಮಾತ್ರ.

ಎರಡು ದಶಕಗಳ ಹಿಂದೆ ತನ್ನ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಕೃತಿಗೆ ಮ್ಯಾನ್ ಬೂಕರ್ ಪಡೆದಿದ್ದ ಅರುಂಧತಿ ಅದೊಂದರಿಂದಲೇ ಅಸ್ತ್ವಿತ್ವವನ್ನು ಕಾಪಾಡಿಕೊಂಡು ಬಂದವಳು. ಆದರೆ ದುರದೃಷ್ಟವೆಂಬಂತೆ ಆಕೆಯ ಮತ್ತೊಂದು ಕೃತಿ ದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್ ಬೂಕರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅಕ್ಟೋಬರ್ 17ರಂದು ಪ್ರಶಸ್ತಿ ವಿಜೇತರ ಘೋಷಣೆಯಾಗಲಿದ್ದು ಪ್ರಶಸ್ತಿ 50000 ಯೂರೋವನ್ನು ಒಳಗೊಂಡಿದೆ. ದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್ ಅನ್ನು ನ್ಯೂಯಾರ್ಕ್ ಮೂಲದ ಅಲ್ರೆಡ್ ಎ ನೋಫ್ ಪ್ರಕಾಶನ ಜೂನ್ 6ರಂದು ಪ್ರಕಟಿಸಿತ್ತು. ಕೃತಿಯ ವಸ್ತು ಹಳೆಯ ದೆಹಲಿ ಮತ್ತು ಕಾಶ್ಮೀರ, ಗೋಧ್ರಾ ಗಲಭೆಗಳ ವಸ್ತುವನ್ನು ಒಳಗೊಂಡಿದೆ ಎನ್ನಲಾಗಿದೆ. ಎಂದಿನಂತೆ ಹಿಂದೂ ಸಂಘಟನೆ ಮತ್ತು ನರೇಂದ್ರ ಮೋದಿಯವನ್ನು ಟೀಕಿಸುವ ಚಾಳಿಯನ್ನು ಅರುಂಧತಿ ರಾಯ್ ಸೃಜನಶೀಲ ಕೃತಿಯಲ್ಲೂ ಮುಂದುವರೆಸಿದ್ದಾಳೆ.

ಒಂದು ಬೂಕರಿನಿಂದ ಸದಾ ಆಡಳಿತಕ್ಕೆ ತೊಡರುಗಾಲಾದ ಲೇಖಕಿಯೊಬ್ಬಳಿಗೆ ಎರಡನೆ ಬಾರಿ ಆ ಪಟ್ಟಿಯೊಳಗೆ ಕಾಣಿಸಿಕೊಂಡಾಗ ಹಲವು ಸಂಶಯಗಳು ಕಾಣದೇ ಇರದು. ಏಕೆಂದರೆ ಅರುಂಧತಿ ರಾಯನ್ನು ಯಾವುದೋ ಕಾಣದ ಕೈ ಭಾರತ ವಿರೋಧಿ ಕೃತ್ಯಗಳಿಗೆ ಬಳಸಿಕೊಂಡಿರುವುದು ಈ ಮೊದಲಿನ ಎಲ್ಲ ಪ್ರಕರಣಗಳಲ್ಲಿ ಕಾಣುತ್ತದೆ. ಈಗ ಬುದ್ಧಿಜೀವಿಗಳಿಗೆ, ಕಮ್ಯುನಿಸ್ಟರಿಗೆ ಭಾರತವನ್ನು ತೆಗಳಲು ಸಮರ್ಥ ಕಾರಣಗಳೂ, ಭಾರತ ವಿರೋಧಿ ಅಭಿಯಾನಕ್ಕೆ ತಕ್ಕ ವ್ಯಕ್ತಿಗಳಾರೂ ಕಾಣಿಸುತ್ತಿಲ್ಲ. ಭಾರತವನ್ನು ಭಾರತದೊಳಗಿನ ವ್ಯಕ್ತಿಗಳೇ ಟೀಕಿಸುವ ಮತ್ತು ಅದನ್ನು ಪಾಶ್ಚಾತ್ಯ ಜಗತ್ತಿನಲ್ಲಿ ಮಂಡಿಸುವ ಅಭ್ಯರ್ಥಿಗಾಗಿ ಕಾಣದ ಕೈಗಳು ಇದೀಗ ಅರುಂಧತಿ ರಾಯನ್ನು ಆಯ್ಕೆ ಮಾಡಿಕೊಂಡಿದೆ. ತನ್ನ ಎಂದಿನ ವಿವಾದಾತ್ಮಕ ಶೈಲಿಯಿಂದ ಆಕೆಗೆ ಮತ್ತೊಮ್ಮೆ ಬೂಕರ್ ಒಲಿದರೂ ಒಲಿಯಬಹುದು. ಒಲಿಯದಿದ್ದರೂ ಅಂತಿಮ ಪಟ್ಟಿಗಂತೂ ಆಕೆಯ ಹೆಸರು ಓಡಬಹುದು. ಮುಂದಿನ ಹೋರಾಟ, ಮೋದಿ ವಿರೋಧ ಮತ್ತು ಅಭಿವೃದ್ಧಿಗಳಿಗೆ ಅಡ್ಡಗಾಲು ಹಾಕುವ ಮಹಾ ಕಾರ್ಯಕ್ರಮವೊಂದಿದೆ ಎಂಬುದು ನಿಶ್ಚಿತ.

Comments

comments