ಮಳೆಗಾಲದಲ್ಲಿ ಮೈದುಂಬಿ ಹರಿವ ರಾಜಕಾಲುವೆಯಲ್ಲಿ ಈ ಜಡಭರತರನ್ನು ಮುಳುಗಿಸಿದರೆ ಹೇಗೆ?

ಅರ್ಥವಾಗುತ್ತಿಲ್ಲ. ಇಷ್ಟೊಂದು ಸರಳ ಸಂಗತಿ ನಮ್ಮನ್ನಾಳುವ ದೊರೆಗಳಿಗೆ ಯಾಕೆ ತಿಳಿಯುತ್ತಿಲ್ಲವೋ ಅರ್ಥವಾಗುತ್ತಿಲ್ಲ.

ಕಳೆದ ಐದು-ಆರು ವರ್ಷಗಳ ಜುಲೈ-ಆಗಸ್ಟ್ ತಿಂಗಳ ಪತ್ರಿಕೆಗಳನ್ನು ತೆಗೆದುನೋಡಿ. ಪ್ರತಿ ವರ್ಷದ ಈ ಎರಡು ತಿಂಗಳಲ್ಲೂ ಬೆಂಗಳೂರಲ್ಲಿ ಕನಿಷ್ಠ 100 ಮಿಲಿಮೀಟರ್‍ನಷ್ಟು ಮಳೆಯಾಗಿರುವ ದಾಖಲೆ ಸಿಗುತ್ತದೆ. ಬೆಂಗಳೂರಂಥ ನಗರಕ್ಕೆ 100 ಮಿಲಿಮೀಟರ್ ಮಳೆ ಎಂದರೆ ಬೇಕಾದಷ್ಟಾಯಿತು. ಅಂಥದೊಂದು ಮಳೆ, ವರುಣನ ಕೃಪೆಯಿಂದ ಈ ನಗರದಲ್ಲಿ ಪ್ರತಿ ವರ್ಷದ ಶ್ರಾವಣದಲ್ಲೂ ಸುರಿದಿದೆ. ಹಾಗೆಯೇ ಈ ಸುದ್ದಿಯ ಆಸುಪಾಸಿನಲ್ಲಿ ನಿಮಗೆ ವರುಣನ ವಕ್ರದೃಷ್ಟಿ, ಜನಜೀವನ ಅಸ್ತವ್ಯಸ್ತ, ಅಪಾರ್ಟ್‍ಮೆಂಟುಗಳಿಗೆ ನುಗ್ಗಿದ ನೀರು, ಅಂಡರ್‍ಪಾಸ್‍ಗಳಲ್ಲಿ ಮುಳುಗಿದ ಕಾರು-ಬಸ್ಸುಗಳು, ಕೆರೆಯಾದ ರಸ್ತೆ, ತುಂಬಿಹರಿದ ರಾಜಕಾಲುವೆ ಎಂಬಂಥ ಸುದ್ದಿಗಳೂ ಕಂಡಿದ್ದಾವು. ಯಾಕೆಂದರೆ ಪ್ರತಿವರ್ಷದ ಮಳೆಗಾಲದಲ್ಲೂ ಬೆಂಗಳೂರು ಅಖಂಡ ಕೆರೆಯಾಗುತ್ತದೆ. ರಾಜಕಾಲುವೆಗಳು ತುಂಬಿ ರಸ್ತೆಯ ಮೇಲೆ ಚೆಲ್ಲಾಡುತ್ತವೆ. ರಸ್ತೆಗೆ ನುಗ್ಗಿದ ನೀರು ಅಲ್ಲಿಂದ ತಗ್ಗುಪ್ರದೇಶದ ಮನೆಗಳಿಗೂ ನುಗ್ಗಿ ಅಲ್ಲಿನ ಪಾತ್ರೆಪರಡಿಯನ್ನು ತೇಲಾಡಿಸುತ್ತವೆ. ಅಲ್ಲಲ್ಲಿ ತಡೆಗೋಡೆಗಳು ಕುಸಿದು ಚರಂಡಿಯೂ ಶುದ್ಧನೀರೂ ಬೆರೆಯುತ್ತವೆ. ಸಂತ್ರಸ್ತ ಜನ ಸರಕಾರಕ್ಕೆ, ಮುಖ್ಯಮಂತ್ರಿಗೆ, ಕಾರ್ಪೊರೇಟರುಗಳಿಗೆ ಹಿಡಿಶಾಪ ಹಾಕುತ್ತಾರೆ. ಮತ್ತೆರಡು ದಿನಗಳ ನಂತರ ಸರಕಾರ, ಬಿಬಿಎಂಪಿ ಮತ್ತು ಜನಸಾಮಾನ್ಯರು ಎಲ್ಲರೂ ಆ ದುರ್ದಿನವನ್ನು ಮರೆತು ಯಥಾಪ್ರಕಾರ ಲೋಕವ್ಯವಹಾರಗಳಲ್ಲಿ ತೊಡಗಿಕೊಂಡುಬಿಡುತ್ತಾರೆ. ಅಂಥದೊಂದು ದಿನಕ್ಕೆ ಮೊದಲೇ ಸಿದ್ಧರಾಗಿರಬೇಕಿತ್ತೆಂಬ ನೆನಪು ಇವರೆಲ್ಲರಿಗೆ ಆಗುವುದು ಮರುವರ್ಷ ಮತ್ತೆ ನೆರೆ ಸೃಷ್ಟಿಯಾದಾಗಲೇ!

ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಆಯಿತು ಎನ್ನುತ್ತೇವೆ. ಮನುಷ್ಯನ ನಾಗರಿಕತೆ ಬೆಳೆದುಬಂದು ಕನಿಷ್ಠ ಐದು ಸಾವಿರ ವರ್ಷ ಆಗಿದೆಯೆನ್ನುತ್ತೇವೆ. ಆದರೆ ಒಂದು ನಗರವ್ಯವಸ್ಥೆ ರೂಪಿಸುವುದು ಹೇಗೆ? ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಹೇಗೆ? ನಗರದೊಳಗಿನ ಕಾಲುವೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ? ಊರೊಳಗಿನ ಕೆರೆಗಳನ್ನು ಹೂಳೆತ್ತಿ ತಯಾರಿಡುವುದು ಹೇಗೆ? ಎಂಬ ಬೇಸಿಕ್ ಜ್ಞಾನ ಮಾತ್ರ ನಮಗಿನ್ನೂ ಬಂದಿಲ್ಲ ಎಂದರೆ ಆಶ್ಚರ್ಯ ಆಗುವುದಿಲ್ಲವೆ? ನಮ್ಮ ಹಳ್ಳಿ-ನಗರಗಳಲ್ಲಿ ಪ್ರತಿವರ್ಷ ಮಳೆ ಬರುವುದೇ ಹೆಚ್ಚೆಂದರೆ ನಾಲ್ಕು ತಿಂಗಳು. ಕರಾವಳಿ ಪ್ರದೇಶದಲ್ಲಿ ಹಿಂದೆಲ್ಲ ಭರ್ತಿ ಆರು ತಿಂಗಳು ಮಳೆ ಸುರಿದು ಇನ್ನಾರು ತಿಂಗಳು ಬಿಸಿಲು ಕಾಯುವ ಪರಿಸ್ಥಿತಿ ಇತ್ತು. ಆದರೆ, ಅಲ್ಲೂ ಇತ್ತಿತ್ತೀಚೆಗೆ ಮಳೆಗಾಲವೆಂಬುದು ಹೀಗೆ ಬಂದು ಹಾಗೆ ಹೋಗುವ ಋತುಮಾನ ಅಷ್ಟೆ. ಏನೇ ಇರಲಿ, ನಮಗೆ ಮುಂದಿನ ಮಳೆಗಾಲಕ್ಕೆ ನಮ್ಮ ಊರನ್ನು, ನಗರಗಳನ್ನು ತಯಾರು ಮಾಡಲು ಕನಿಷ್ಠ ಆರು ತಿಂಗಳಂತೂ ಸಿಕ್ಕೇ ಸಿಗುತ್ತದೆನ್ನಬಹುದು. ಈ ಆರು ತಿಂಗಳಲ್ಲಿ ನಮ್ಮ ಸರಕಾರ, ಸರಕಾರದ ಅಧಿಕಾರಿಗಳು ತಮ್ಮ ಮೈಚಳಿ ಬಿಟ್ಟು, ಉದಾಸೀನ ಮರೆತು ನೆಟ್ಟಗೆ ಮೂರು ತಿಂಗಳು ಕೆಲಸ ಮಾಡಿದ್ದರೂ ಮುಂದಿನ ಮಳೆಗಾಲಕ್ಕೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಬಹುದಾದ ವ್ಯವಸ್ಥೆಗಳನ್ನು ರೂಪಿಸಬಹುದು. ಆದರೆ ನಮ್ಮ ಜಡ್ಡುಗಟ್ಟಿದ ಸರಕಾರವನ್ನು ಬಡ್ಡುಹಿಡಿದ ಅಧಿಕಾರಿಗಳನ್ನು ಕೋಲು ಹಾಕಿ ಎಬ್ಬಿಸುವವರು ಯಾರು?

ಬೆಂಗಳೂರಿನ ಕತೆಯನ್ನೇ ನೋಡಿ. ಇಲ್ಲಿ ಒಟ್ಟು 842 ಕಿಲೋಮೀಟರ್ ಉದ್ದದ ಕಾಲುವೆ ವ್ಯವಸ್ಥೆ ಇದೆ. ನಗರದೊಳಗೆ ಸಂಚಯವಾದ ಎಲ್ಲ ಕೊಳೆ, ಕಲ್ಮಶವನ್ನು ಹೊತ್ತು ಸಾಗಿಸುವುದು ಇದರ ಕೆಲಸ. ಇದರಲ್ಲಿ 415 ಕಿಮೀ ರಾಜಕಾಲುವೆಯಾದರೆ ಮಿಕ್ಕಿದ್ದು ಸಣ್ಣ ಪ್ರಮಾಣದ ಕಾಲುವೆ. ಬಿಬಿಎಂಪಿಯ ದೂಳು ಹಿಡಿದ ಕಡತಗಳಲ್ಲಿ ಈ ಲೆಕ್ಕ ಇದೆಯೇ ಹೊರತು ನಿಜವಾಗಿಯೂ ಇಷ್ಟುದ್ದದ ಕಾಲುವೆ ವ್ಯವಸ್ಥೆ ಕೆಲಸ ಮಾಡುತ್ತಿದೆಯೇ ಎಂಬುದನ್ನು ಪರೀಕ್ಷಿಸಿ ಹೌದೆಂದವರು ಯಾರೂ ಇಲ್ಲ. ಕಾಲುವೆ, ರಾಜಕಾಲುವೆಗಳ ಹೆಚ್ಚಿನೆಲ್ಲ ಭಾಗ ರಿಯಲ್ ಎಸ್ಟೇಟ್ ಕುಳಗಳಿಂದ, ರಾಜಕಾರಣಿಗಳಿಂದ, ಬಿಲ್ಡರ್‍ಗಳಿಂದ ಒತ್ತುವರಿಯಾಗಿವೆ. ರಾಜಕಾಲುವೆಯ ಮೇಲೆಯೇ ಈ ರಾಜ್ಯದ ಸೆಲೆಬ್ರಿಟಿಗಳು ಕೂಡ ಕೋಟಿಗಟ್ಟಲೆ ರುಪಾಯಿ ಬೆಲೆಬಾಳುವ ಬಂಗಲೆಗಳನ್ನು ಕಟ್ಟಿಕೊಂಡಿದ್ದಾರೆಂಬುದು ಬೆಳಕಿಗೆ ಬಂದದ್ದು ಕಳೆದ ಬಾರಿ ಒತ್ತುವರಿ ತೆರವು ಕೆಲಸವನ್ನು ಸರಕಾರ ಜೋರಾಗಿ ಎತ್ತಿಕೊಂಡಾಗಲೇ. ಸರಕಾರದ್ದೇನಿದ್ದರೂ ಆರಂಭಶೂರತ್ವ ನೋಡಿ! ಒತ್ತುವರಿ ತೆರವು ಮಾಡಲು ಇನ್ನಿಲ್ಲದ ಸಿದ್ಧತೆ ಮಾಡಿಕೊಂಡು ಹೊರಟಿದ್ದ ಸರಕಾರ ಎರಡು ವಾರಗಳಾಗುವಷ್ಟರಲ್ಲಿ ತನ್ನ ಎಲ್ಲ ಕಸುವು, ಜೋಶ್ ಕಳೆದುಕೊಂಡು ಹಲ್ಲು ಕಿತ್ತ ಹಾವಿನಂತೆ ತಣ್ಣಗಾಗಿಬಿಟ್ಟಿತು. ಒಡೆದುಹಾಕಿದ್ದ ಒಂದಷ್ಟು ಇಟ್ಟಿಗೆ-ಸಿಮೆಂಟನ್ನು ಅಧಿಕಾರಿಗಳು ಮತ್ತೆ ಅಲ್ಲಿದ್ದ ಕಾಲುವೆಗಳಲ್ಲೇ ಸುರಿದು ಕೈ ಕೊಡವಿಕೊಂಡು ಹೋದರು. ಅಲ್ಲಿಗೆ ತೆರವು ಕಾರ್ಯಾಚರಣೆ ಗೋವಿಂದ ಆಯಿತು.

ಬೆಂಗಳೂರಿನ ಪ್ರಮುಖ ನದಿ – ಈಗ ಕೇವಲ ಕೊಳಚೆ ಹರಿವ ನಾಲೆಯಾಗಿರುವ ವೃಷಭಾವತಿ – ಇದರ ಸುತ್ತಮುತ್ತ ಅಪಾರ ಪ್ರಮಾಣದ ಅಕ್ರಮ ಒತ್ತುವರಿ ನಡೆದಿದೆ. ಸಾಲದ್ದಕ್ಕೆ ಇದಕ್ಕೆ ದಶಕಗಳಷ್ಟು ಹಿಂದೆ ಕಟ್ಟಿದ್ದ ದಂಡೆ ಅಲ್ಲಲ್ಲಿ ಕುಸಿದಿದೆ. ಮರುನಿರ್ಮಿಸಿಕೊಡಿ ಎಂದು ಶ್ರೀಸಾಮಾನ್ಯರು ಅದೆಷ್ಟು ಗೋಗರೆದರೂ ಅವರದೆಲ್ಲ ವಿಧಾನಸಭಾರೋದನವಾಗಿದೆ. ಜನರ ಅಹವಾಲುಗಳಿಗೆ ಸ್ಪಂದಿಸುವವರು ಯಾರೂ ಇಲ್ಲ. ವೃಷಭಾವತಿ ಮತ್ತು ಆ ಮುಖ್ಯ ಕಾಲುವೆಗೆ ಹರಿದುಬರುವ ಉಪಕಾಲುವೆಗಳ ದಂಡೆ ಕುಸಿದಿರುವುದರಿಂದ; ಕಾಲುವೆಗಳ ಭಾಗ ಅಲ್ಲಲ್ಲಿ ಪೂರ್ತಿಯಾಗಿ ಅಥವಾ ಆಂಶಿಕವಾಗಿ ಒತ್ತುವರಿಯಾಗಿ ಬಹುಮಹಡಿ ಸಮುಚ್ಚಯಗಳು ಎದ್ದಿರುವುದರಿಂದ ವಿಜಯನಗರ, ದೀಪಾಂಜಲಿ ನಗರ, ನಾಗರಬಾವಿ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ರಾಜರಾಜೇಶ್ವರಿ ನಗರ, ನಾಯಂಡನಹಳ್ಳಿ ಜಂಕ್ಷನ್ ಮುಂತಾದ ಪ್ರದೇಶಗಳಲ್ಲಿ ಪ್ರತಿ ಮಳೆಗಾಲಕ್ಕೂ ಕಿಷ್ಕಿಂದೆ ಸೃಷ್ಟಿ. ಹತ್ತಿಪ್ಪತ್ತು ನಿಮಿಷಗಳ ಸಣ್ಣ ಮಳೆ ಸುರಿದರೆ ಸಾಕು ಇಲ್ಲೆಲ್ಲ ಜನಸಾಗರ; ವಾಹನಗಳ ಜಾತ್ರೆ. ಕಾರಣ, ಮುಘಲರ ಕಾಲದಲ್ಲಿ ಉದ್ಯಾನಗಳ ನಡುವಲ್ಲಿ ನೀರಿನ ಕಾರಂಜಿ ಚಿಮ್ಮುತ್ತಿದ್ದುದನ್ನು ನೆನಪಿಸುವಂಥ ನೀರಿನ ಚಿಲುಮೆಗಳು ರಸ್ತೆಗಳ ನಡು ನಡುವಿಂದ ಎದ್ದು ಬರುತ್ತವೆ. ರಸ್ತೆಗಳ ಅಲ್ಲಲ್ಲಿ ಕಾಲುವೆಯ ನೀರು ಸಿಕ್ಕ ಸಿಕ್ಕ ತೂಬುಗಳಲ್ಲಿ ಭುಸ್ಸೆಂದು ಹೊರಹಾರುತ್ತದೆ. ನೋಡನೋಡುತ್ತಿದ್ದಂತೆ ರಸ್ತೆಗಳು ಕೊಳಚೆ ನೀರಿಂದ ತುಂಬಿಹೋಗುತ್ತವೆ. ಫ್ಲೈಓವರ್‍ಗಳ ಮೇಲೆ ವಾಹನಗಳ ಜಾತ್ರೆ; ಅಂಡರ್‍ಪಾಸ್‍ಗಳಲ್ಲಿ ಸಿಕ್ಕಿಕೊಂಡ ವಾಹನಗಳಿಗೆ ಜಲಸಮಾಧಿ ಯೋಗ!

ಒಂದು ನಗರವನ್ನು ಮಳೆಗಾಲಕ್ಕೆ ಸರ್ವಸನ್ನದ್ಧವಾಗಿಸುವುದು ಹೇಗೆ? ಇರುವ ಉಪಾಯಗಳು ಎರಡೇ. ಒಂದು – ರಾಜಕಾಲುವೆ ಮತ್ತು ಸಣ್ಣ ಕಾಲುವೆಗಳ ಹೂಳೆತ್ತುವುದು. ಅವನ್ನು ಕಾಲಕಾಲಕ್ಕೆ ಶುಭ್ರಗೊಳಿಸುವುದು. ಕಾಲುವೆಗಳ ತೂಬುಗಳಲ್ಲಿ ಪ್ಲಾಸ್ಟಿಕ್ ಸಿಕ್ಕಿಕೊಳ್ಳದಂತೆ ಅವನ್ನೆಲ್ಲ ಹೊರಗೆಳೆದುಹಾಕುವುದು. ನೀರು ಸರಾಗವಾಗಿ ಹರಿದುಹೋಗುವಂಥ ವ್ಯವಸ್ಥೆ ಕಲ್ಪಿಸುವುದು. ಕಾಲುವೆಗಳಿಗೆ ಘನತ್ಯಾಜ್ಯ ತಂದು ಸುರಿವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು. ನಗರದ ಒಳಚರಂಡಿ ವ್ಯವಸ್ಥೆ ಎಂದರೆ ಮನುಷ್ಯದೇಹದ ನರನಾಡಿಗಳಿದ್ದಂತೆ ಎಂಬ ತಿಳಿವಳಿಕೆಯನ್ನು ಜನರಿಗೆ ಕೊಡುವುದು. ಮಕ್ಕಳ ಪಾಠಪುಸ್ತಕಗಳಲ್ಲಿ, ನಗರವನ್ನು ಸಭ್ಯವಾಗಿಯೂ ಸಹ್ಯವಾಗಿಯೂ ಇಟ್ಟುಕೊಳ್ಳುವುದು ಹೇಗೆ ಎಂಬ ಪಾಠಗಳನ್ನು ಕಡ್ಡಾಯವಾಗಿ ಇಡುವುದು. ಇನ್ನು ಎರಡನೆಯದಾಗಿ, ನಗರದೊಳಗಿನ ಕೆರೆಗಳನ್ನು ಬೇಸಿಗೆಯಲ್ಲಿ ಹೂಳೆತ್ತಿ ಮಳೆಗಾಲದ ಮಳೆನೀರು ತುಂಬಿಕೊಳ್ಳಲು ತಯಾರು ಮಾಡುವುದು. ಕೆರೆಗಳಲ್ಲಿ ಕಸಕಡ್ಡಿ ತುಂಬಿಕೊಳ್ಳದಂತೆ, ನಗರದ ಕಲ್ಮಶ ಸೇರದಂತೆ, ರಾಸಾಯನಿಕ ತ್ಯಾಜ್ಯ ಕೂಡದಂತೆ ಜಾಗ್ರತೆ ವಹಿಸುವುದು. ನಗರದ ಒಂದಿಪ್ಪತ್ತು ಕೆರೆಗಳನ್ನು ಹಾಗೆ ಬೇಸಿಗೆಯಲ್ಲಿ – ನೀರಿನ ಹರಿವು ಮತ್ತು ಪ್ರಮಾಣ ಕಡಿಮೆಯಿದ್ದಾಗ – ಸ್ವಚ್ಛವಾಗಿಟ್ಟರೆ ಸಾಕು, ಮಳೆಗಾಲದ ನೀರನ್ನು ತುಂಬಿಕೊಳ್ಳಲು ಅವು ತಯಾರಾಗುತ್ತವೆ. ಮಳೆಗಾಲದಲ್ಲಿ ಬಂದುಹೋಗುವ ಮೂರ್ನಾಲ್ಕು ದೊಡ್ಡ ಮಳೆಯ ನೀರನ್ನು ಕೆರೆಗಳು ತುಂಬಿಟ್ಟುಕೊಳ್ಳಲು ಶಕ್ತವಾದದ್ದೇ ಆದರೆ, ಮುಂದಿನ ಬೇಸಿಗೆಯ ಚಿಂತೆಯನ್ನು ಆ ನಗರ ಪರಿಹರಿಸಿಕೊಂಡಿತೆಂದೇ ಲೆಕ್ಕ! ಬೆಂಗಳೂರಿಗೆ ಬೇಕಿರುವುದು ನೂರು ಮೈಲಿ ದೂರದ ಕಾವೇರಿಯ ನೀರಲ್ಲ; ಮುನ್ನೂರು ಮೈಲಿ ದೂರದ ಅರಬ್ಬಿ ಕಡಲಿಂದ ತೆಗೆದು ನಿರ್ಲವಣೀಕರಿಸಿದ ನೀರೂ ಅಲ್ಲ. ಈ ನಗರಕ್ಕೆ ಬೇಕಿರುವುದು, ಮತ್ತು ಸಾಕಿರುವುದು ಇದೇ ನಗರದೊಳಗಿರುವ ಬೆಳ್ಳಂದೂರು, ವರ್ತೂರು, ಯಲಹಂಕ, ಅಗರ, ಹಲಸೂರು, ಕೆಂಪಾಂಬುಧಿಯಂಥ ಹತ್ತು-ಮತ್ತೊಂದು ಕೆರೆಗಳಲ್ಲಿ ಸಂಚಯವಾದ ಮಳೆನೀರು.

ಬೆಂಗಳೂರು ಈ ವರ್ಷ ಒಂದೇ ರಾತ್ರಿಯಲ್ಲಿ 180 ಮಿಲಿಮೀಟರ್ ಮಳೆಯಲ್ಲಿ ತೊಯ್ದೆದ್ದಿದೆ. ಧೋ ಎಂದು ಎಡೆಬಿಡದೆ ಸುರಿದ ಮಳೆ ಈ ನಗರದ ಕೆರೆಕೊಳ್ಳಗಳಲ್ಲಿ ತುಂಬಿ, ಹಳ್ಳಕೋಡಿಗಳಲ್ಲಿ ಹರಿದು, ಮನೆಮಠಗಳಿಗೆ ನುಗ್ಗಿ ತನ್ನ ರೌದ್ರಾವತಾರವನ್ನು ತೋರಿಸಿದೆ. ಎಂದಿನಂತೆ ಬೆಂಗಳೂರು ಸಣ್ಣದೊಂದು ಮಳೆಯನ್ನೂ ತಡೆದುಕೊಳ್ಳುವ ತ್ರಾಣ ಉಳಿಸಿಕೊಂಡಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಹೀಗೆ ಮಳೆ ಸುರಿದು ನಿಂತ ನೀರಲ್ಲಿ ಸೊಳ್ಳೆಗಳು ಸುಖವಾಗಿ ಹೆರಿಗೆ ಮಾಡಿ ಮಕ್ಕಳುಮರಿಗಳನ್ನು ಬೆಳೆಸಿದ್ದೇ ಆದರೆ ಇನ್ನೊಂದು ತಿಂಗಳಲ್ಲಿ ಈ ನಗರದಲ್ಲಿ ಮಲೇರಿಯಾದಿಂದ ಹಿಡಿದು ಡೆಂಗೀ, ಚಿಕೂನ್‍ಗುನ್ಯದವರೆಗೆ ಕಾಯಿಲೆಗಳ ಹಬ್ಬ. ಈಗಾಗಲೇ ನಗರದೊಳಗೆ ದಾಖಲಾಗಿರುವ 30,000 ಡೆಂಗೀ ಪ್ರಕರಣಗಳಲ್ಲೇ ಏನನ್ನೂ ಮಾಡದೆ ಕೈ ಕಟ್ಟಿ ಕೂತಿರುವ ಸರಕಾರ ಹೊಸದಾಗಿ ದಾಖಲಾಗುವ ಪ್ರಕರಣಗಳ ವಿಷಯದಲ್ಲಿ ಏನನ್ನಾದರೂ ಮಾಡೀತು ಎಂದು ನಂಬುವುದು ನಮ್ಮ ಭ್ರಮೆ. ಯಾಕೆ? ಯಾಕೆ ನಮ್ಮ ಸರಕಾರಗಳು ಇಷ್ಟೊಂದು ನಿಷ್ಕ್ರಿಯ? ಇಷ್ಟೊಂದು ಬೇಜಾವಾಬ್ದಾರ? ಇದು ಸದ್ಯಕ್ಕೆ ಪಟ್ಟದಲ್ಲಿ ಕೂತಿರುವ ಸರಕಾರದ ವೈಫಲ್ಯವೆಂದೇನೂ ಅಲ್ಲ; ಮುಂದಿನ ವರ್ಷದ ಮಳೆಗಾಲಕ್ಕೆ ಸರಕಾರ ಬದಲಾದರೂ ಬೆಂಗಳೂರಿನ ಮಳೆಸಮಸ್ಯೆಗಳು ಜೀವಂತವಾಗಿಯೇ ಇರುತ್ತವೆ. ಯಾಕೆಂದರೆ ಸದ್ಯಕ್ಕೆ ಪಟ್ಟದಲ್ಲಿರುವ ಸರಕಾರವನ್ನು ಸೋಲಿಸಿ ಅಧಿಕಾರ ಹಿಡಿವ ಕನಸು ಕಾಣುತ್ತಿರುವವರಲ್ಲಿ ಈ ನಗರವನ್ನು ಪೂರ್ತಿ ಬಿಚ್ಚಿಕಟ್ಟುವ ಇಚ್ಛಾಶಕ್ತಿ ಬಿಡಿ, ಯಾವೊಂದು ಕನಸುಗಳೂ ಇಲ್ಲ!

Comments

comments