ಆರ್.ಎಸ್.ಎಸ್ ಕಟ್ಟಾಳು ಬಿ.ಎಲ್.ಸಂತೋಷ್ ಗೆ ರಾಜ್ಯ ಚುನಾವಣಾ ಉಸ್ತುವಾರಿ: ‘ಶಾ’ ಸೂಚನೆ

ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಮತ್ತು ಚುನಾವಣೆಗೆ ಸಜ್ಜುಗೊಳಿಸಲು ಬಿ.ಜೆ.ಪಿ ಯ ರಾಷ್ಟ್ರಾಧ್ಯಕ್ಷರಾದ ಶ್ರೀ ಅಮಿತ್ ಶಾ ರವರು ಆರ್.ಎಸ್.ಎಸ್. ಕಟ್ಟಾಳು ಮತ್ತು ಬಿ.ಜೆ.ಪಿ ಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯೂ  ಆಗಿರುವ ಬಿ.ಎಲ್.ಸಂತೋಷ್ ರವರಿಗೆ ಜವಾಬ್ದಾರಿಯನ್ನು ವಹಿಸಿದೆ.

ಪಕ್ಷದ ಮುಖ್ಯ ಮಂತ್ರಿ ಅಭ್ಯರ್ಥಿಯಾಗಿರುವ ಬಿ.ಎಸ್.ಯಡಿಯೂರಪ್ಪ -ರವರನ್ನು ಪಕ್ಷದ ಬಲವರ್ಧನೆಗೆ ಮತ್ತು ಚುನಾವಣಾ ಪೂರ್ವ ತಯಾರಿಗೆ ವಹಿಸದೆ ಸಂಘ ಪರಿವಾರದ ಬಿ.ಎಲ್.ಸಂತೋಷ್ ರವರಿಗೆ ಮಣೆ ಹಾಕಲಾಗಿದೆ.

ನವ ದೆಹಲಿಯಲ್ಲಿ ಕರ್ನಾಟಕ ಬಿ.ಜೆ.ಪಿ ಯ ಕೋರ್ ಸಮಿತಿ ಮೀಟಿಂಗ್ ನ ಬಳಿಕ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಬಿ.ಎಲ್.ಸಂತೋಷ್ ರವರೊಂದಿಗೆ ‘ಒಂದುಗೂಡಿ’ ಕೆಲಸಮಾಡುವಂತೆ ಬಿ.ಎಸ್.ವೈ ರವರಿಗೆ ಅಮಿತ್ ಶಾ ರವರು ಸೂಚಿಸಿದ್ದಾರೆ. ರಾಜ್ಯದಲ್ಲಿ ಶತಾಯಗತಾಯ ಮುಂದಿನ ಸಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹಲವು ಪ್ರಮುಖ ನಿರ್ಧಾರವನ್ನು ಅಮಿತ್‍ ಶಾ ಕೈಗೊಳ್ಳುತ್ತಿದ್ದು, ಸಂತೋಷ್‍ ಮರಳಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ.

ಬಿ.ಎಸ್.ವೈ ಮತ್ತು ಸಂತೋಷ್ ರವರೊಡನೆ ಹಲವು ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಪಕ್ಷದ ವೇದಿಕೆಗಳಲ್ಲಿ ತೋರಿಸಿಕೊಳ್ಳದೆ ಅವರವರ ಬಣದೊಂದಿಗೆ ಗುರುತುಸಿಕೊಂಡಿದ್ದಾರೆ.

ಸಂಘಟನಾ ಚತುರ ಬಿ.ಎಲ್.ಸಂತೋಷ್ ರವರು ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಗಳ ನಡುವಿನ ‘ಕೊಂಡಿ’ ಎಂದೇ ಪರಿಚಿತರಾಗಿರುವರು.  ಪಕ್ಷದ ‘ಆಂತರಿಕ ವಿಚಾರಗಳಲ್ಲಿ’ ಮಧ್ಯ ಪ್ರವೇಶಿಸುತ್ತಿದ್ದರೆಂದು ಬಿ.ಎಸ್.ವೈ ಸಂತೋಷರ ಮೇಲೆ ಈ ಹಿಂದೆ ಆಪಾದನೆ ಮಾಡಿದ್ದರು. ಕೋರ್ ಕಮಿಟಿ ಮೀಟಿಂಗ್ ನ ನಂತರ ಬಿ.ಎಲ್.ಸಂತೋಷ್ ರವರಿಗೆ ಮುಂಬರುವ ವಿಧಾನ ಸಭಾ ಚುನಾವಣೆಗೆ ಪಕ್ಷದ ಬಲವರ್ಧನೆ ಮತ್ತು ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವ ಜವಾಬ್ದಾರಿಯನ್ನು ನೀಡಿದ್ದಾರೆ. ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಕೋರ್ ಕಮಿಟಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಂತೋಷರಿಗೆ ಸೂಚಿಸಲಾಗಿದೆ.

ಬಿ.ಎಲ್.ಸಂತೋಷ್ ಮತ್ತು ಬಿ.ಎಸ್.ವೈ ಮಧ್ಯೆ ಇರುವ ಹಗೆತನ ಹೊಸದೇನಲ್ಲ. ೨೦೧೧ ರಲ್ಲಿ  ಅಕ್ರಮ ಗಣಿಗಾರಿಕೆ ಆರೋಪವನ್ನು  ಎದುರಿಸುತ್ತಿದ್ದ ಬಿ.ಎಸ್.ವೈ ರವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಸುವಂತೆ ಸಂತೋಷ್ ಲಾಬಿ ನಡೆಸಿದ್ದರು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ೨೦೧೬ ರಲ್ಲಿ ಯಡಿಯೂರಪ್ಪನವರನ್ನು ಬಿ.ಜೆ.ಪಿ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾಗಲೂ ‘ಅಸಂತೋಷ’ ಗೊಂಡಿದ್ದರು; ಅವರದ್ದೇ ಬಣದ ಈಶ್ವರಪ್ಪ ಅಥವಾ ಸಿ.ಟಿ.ರವಿ- ಯವರಿಗೆ ಪಕ್ಷದ ಚುಕ್ಕಾಣಿ ಹಿಡಿಯಲು ಹೈ ಕಮಾಂಡ್ ಮೇಲೆ ಒತ್ತಡ ಹೇರಿದ್ದರು .

ಆದರೆ ಇವೆಲ್ಲವನ್ನೂ ಪರಿಗಣಿಸದೆ ಪಕ್ಷದ ‘ಚಾಣಕ್ಯ’ ರೆಂದೇ ಕರೆಯಲ್ಪಡುವ ಅಮಿತ್ ಶಾ ರವರು ಬಿ.ಎಲ್.ಸಂತೋಷ್ ರವರಿಗೆ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸಲು ಮತ್ತು ಪಕ್ಷವನ್ನು ಬೇರು ಮಟ್ಟದಿಂದ ಬಲಪಡಿಸಲು ಸ್ವತಂತ್ರ ಅಧಿಕಾರ ನೀಡಿದ್ದಾರೆ.

“೨೦೦೮ ರ ಚುನಾವಣೆಯಲ್ಲಿ ಬಿ.ಜೆ.ಪಿ ಪ್ರ ಪ್ರಥಮ ಬಾರಿಗೆ ದಕ್ಷಿಣ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿ.ಎಲ್. ಸಂತೋಷ್ ಮುಖ್ಯ ಪಾತ್ರ ವಹಿಸಿದ್ದಾರೆ. ಚುನಾವಣಾ ತಂತ್ರಗಾರಿಕೆ  ರೂಪಿಸಲು ಮತ್ತು ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸುವ ಸಾಮರ್ಥ್ಯ ಬಿ.ಎಲ್.ಸಂತೋಷ್ ರವರಿಗಿದೆ. ಎಲ್ಲ ಜಾತಿಯನ್ನು ಪ್ರತಿನಿಧಿಸುವ ೯ ಜನರ ಬೂತ್ ಮಟ್ಟದ ಕಾರ್ಯಕರ್ತರನ್ನು  ನೇಮಿಸುವ ಪ್ರಕ್ರಿಯೆಗೆ ಶೀಘ್ರವೇ ಸಂತೋಷ್ ಚಾಲನೆ ನೀಡಲಿದ್ದಾರೆ. ”

ಬಿ.ಜೆ.ಪಿ ಯ ರಾಜ್ಯಮಟ್ಟದ ಕಾರ್ಯಕರ್ತರು ಆಗಸ್ಟ್ ೨೮ ರಿಂದ ಸೆಪ್ಟೆಂಬರ್ ೦೩ ರ ವರೆಗೆ ಜಿಲ್ಲಾ ಕೋರ್ ಕಮಿಟಿ ಸದಸ್ಯರೊಂದಿಗೆ ಮತ್ತು ಚುನಾವಣಾ ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ಪಕ್ಷದಲ್ಲಿರುವ ಸಾಂಸ್ಥಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಕುರಿತು ಸಮಾಲೋಚಿಸಲಿದ್ದಾರೆ.

Comments

comments