ಚೀನಾ ಎಂಬ ಬಲೂನು ಊದಿಕೊಂಡಿದೆ ಆದರೆ ಒಳಗೆ ಒತ್ತಡವಿದೆ

ಸಂತೋಷ್ ತಮ್ಮಯ್ಯ

ಒಂದು ಬಲೂನಿಗೆ ಎಷ್ಟು ಗಾಳಿ ತುಂಬಬಹುದು, ಎಷ್ಟರವರೆಗೆ ದೊಡ್ಡದು ಮಾಡಬಹುದು? ಎಲದಕ್ಕೂ ಒಂದು ಮಿತಿ ಇರುತ್ತದೆ. ಆ ಮಿತಿ ಮೀರಿದರೆ ದೊಡ್ಡದಾಗಿ, ಸುಂದರವಾಗಿರುವ ಯಾವುದೇ ಆದರೂ ಒಡೆಯಲೇ ಬೇಕು. ಪ್ರಸ್ತುತ ಚೀನಾದ ಪರಿಸ್ಥಿತಿ ಹಾಗಿದೆ. ಅದು ಬಲೂನಿನಂತೆ ಊದಿಕೊಂಡಿದೆ. ಹಾಗೆ ಊದಿಕೊಡ ಕಾರಣಕ್ಕೆ ಅದು ಬಲಶಾಲಿ, ಆರೋಗ್ಯವಂತ ಎಂಬಂತೆ ಕಾಣುತ್ತಿದೆ. ಆದರೆ ಅದರೊಳಗೆ ವಿಪರೀತ ಒತ್ತಡವಿರುವುದು, ಆ ಒತ್ತಡ ಹೊರಬರಲು ಹಾತೊರೆಯುತ್ತಿರುವುದು, ಅಸಹನೆಯಿಂದ ಚಡಪಡಿಸುತ್ತಿರುವುದು ಹೊರಗೆ ಕಾಣುತ್ತಿಲ್ಲ. ಚೀನಾ ಆರ್ಥಿಕ ಬಲಶಾಲಿ ಎಂಬುದು, ಅತೀ ದೊಡ್ಡ ದೇಶವೆಂಬುದು, ಮಿಲಿಟರಿ ಸಾಮರ್ಥ್ಯದಲ್ಲಿ ಪ್ರಬಲವಾಗಿರುವುದು, ಕಟ್ಟರ್ ಕಮ್ಯುನಿಸ್ಟ್ ಎಂಬ ಆತಂಕಗಳು ಚೀನಾದ ಚೆಹರೆಯನ್ನು ಬೇರೆಯೇ ಆಗಿ ಕಾಣುವಂತೆ ಮಾಡಿಬಿಟ್ಟಿದೆ. ಭಾರತದೊಂದಿಗಿನ ಅದರ ಗಡಿ ತಕರಾರು, ಹಳೆಯ ಸೋಲುಗಳು ಚೀನಾ ಅಂದರೆ ನಿಜಕ್ಕೂ ಡ್ರ್ಯಾಗನ್‍ನಂಥದ್ದೇ ಎಂಬ ಭಾವನೆ ನಮ್ಮಲ್ಲಿ ಮೂಡಿಬಿಟ್ಟಿದೆ.

ಆದರೆ ಚೀನಾ ವಾಸ್ತವದಲ್ಲಿ ಹಾಗಿಲ್ಲ. ಅದರ ಸೇನಾ ಬಲಾಬಲಗಳು ಭಾರತಕ್ಕಿಂತ ಮೂರು ಪಟ್ಟು ಹೆಚ್ಚಿದ್ದರೂ ಅದೇನೂ ಭಾರತವನ್ನು ನುಂಗಿ ನೀರು ಕುಡಿದುಬಿಡುತ್ತದೆ ಎಂದೇನೂ ಅಲ್ಲ. ಹೊರಗೆ ಥಳಕು ಬಳಕು, ಒಳಗೆಲ್ಲ ಜೊಳ್ಳು. ಕಮ್ಯುನಿಸಮ್ಮಿನ ದೌರ್ಬಲ್ಯಗಳೇನಿರುರುತ್ತವೋ ಅವೆಲ್ಲವೂ ಚೀನಾದಲ್ಲಿ ಢಾಳಾಗಿವೆ.

ಈ ಮಾಹಿತಿಗಳನ್ನು ಚೀನಾದ ನ್ಯಾಶನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್‍ಗಳೇ ಹೇಳುತ್ತವೆ. 2010ರ ಚೀನಾ ಜನಗಣತಿಯ ಪ್ರಕಾರ 2000ದಲ್ಲಿ ಶೇ.63.9ರಷ್ಟಿದ್ದ ಗ್ರಾಮೀಣ ಜನಸಂಖ್ಯೆಯ ಪ್ರಮಾಣ 2010ರ ಹೊತ್ತಿಗೆ ಶೇ.51.3ಕ್ಕೆ ಇಳಿದಿದೆ. ಅಂದರೆ ಚೀನಾ ತನ್ನ ಗ್ರಾಮೀಣ ಶಕ್ತಿಯನ್ನು ಕಳೆದುಕೊಳ್ಳುತ್ತಾ ಸಾಗುತ್ತಿದೆ. ಕಮ್ಯುನಿಸಮ್ಮಿನ ಹುಚ್ಚಾಟದಿಂದ ಗ್ರಾಮೀಣ ಉದ್ಯೋಗ ಕಡಿಮೆಯಾಗುತ್ತಿದೆ. ನಗರಗಳತ್ತ ವಲಸೆ ಹೆಚ್ಚುತ್ತಿದೆ. 70ರ ದಶಕದಿಂದೀಚೆಗೆ ಚೀನಾದ ಗ್ರಾಮೀಣ ಪ್ರದೇಶಗಳಿಂದ ಶೇ.45ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಗಳು ಖಾಲಿಯಾಗಿವೆ. ಹೀಗೆ ನಗರಗಳತ್ತ ಮುಖಮಾಡಿದ ಗ್ರಾಮೀಣ ಜನರನ್ನು ಕೈಗಾರಿಕೆಗಳು ಸೆಳೆಯುತ್ತಿವೆ. ಕಾರಣ ಗ್ರಾಮೀಣ ಪ್ರದೇಶದ ಪ್ರತೀ ವ್ಯಕ್ತಿಯ ವಾರ್ಷಿಕ ಆದಾಯ 1,300 ಡಾಲರ್‍ಗಳಾದರೆ ನಗರ ಪ್ರದೇಶದ ವ್ಯಕ್ತಿಯ ಸರಾಸರಿ ಆದಾಯ 4,000 ಡಾಲರುಗಳಾಗಿವೆ. ಅಂದರೆ ಚೀನಾ ತನ್ನ ಒಟ್ಟು ಜನಸಂಖ್ಯೆಯ ಅರ್ಧದಷ್ಟನ್ನು ನಗರಗಳತ್ತ ಸೆಳೆದು ಉತ್ಪಾದನೆಯನ್ನು ಮಾಡುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಪ್ರಕೃತಿಯೊಂದಿಗೆ, ಶ್ರೇಷ್ಠ ನಾಗರಿಕತೆಯ ಪ್ರತಿನಿಧಿಯೆಂಬಂತೆ ಬದುಕುತ್ತಿದ್ದ ಈ ಜನರಿಗೆ ಚೀನಾ ಕೊಟ್ಟ ಉದ್ಯೋಗಗಳೇನು ಎಂಬುದನ್ನು ಹೇಳಲು ಚೀನಾ ಸರಕುಗಳೇ ಸಾಕ್ಷಿ. ಇದರ ಪಾರ್ಶ್ವ ಪರಿಣಾಮವೆಂದರೆ ಅಳಿದುಳಿದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆ, ಕೃಷಿಯತ್ತ ನಿರ್ಲಕ್ಷ್ಯ. ಇದರಿಂದ ಸಾಮಾಜಿಕ ಪರಿಸ್ಥಿತಿ ಹದಗೆಡುವ ಹಂತಕ್ಕೆ ಬಂದಿದ್ದರೂ ಚೀನಾ ಅದರತ್ತ ಅಷ್ಟಾಗಿ ತಲೆಯನ್ನೇನೂ ಕೆಡಿಸಿಕೊಂಡಿಲ್ಲ. ಏಕೆಂದರೆ ಅದನ್ನು ಹೇಗೆ ನಿರ್ವಹಿಸಬಹುದು ಎಂಬುದು ಅದಕ್ಕೆ ಚೆನ್ನಾಗಿ ಗೊತ್ತಿದೆ. ಅಧಿಕಾರದ ಹಿಡಿತ ಅದನ್ನು ನಿಭಾಯಿಸುತ್ತಿದೆ. ಸದ್ಯಕ್ಕೆ ಸರಕುಗಳ ರಫ್ತಿನತ್ತ ಮಾತ್ರ ಗಮನ ಕೇಂದ್ರೀಕರಿಸಿರುವ ಚೀನಾಕ್ಕೆ ಇದು ಒಂದು ಹಂತದವರೆಗೆ ಪ್ರಯೋಜನಕಾರಿಯೂ ಆಗಿದೆ. ಇದರಿಂದ ಕಾರ್ಮಿಕರ ಅಭಾವ ನೀಗಿದೆ. ಆದರೆ ಕಾರ್ಮಿಕರು ಗಾಣದೆತ್ತಿನಂತಾಗಿರುವುದು ಹೊರಜಗತ್ತಿಗೆ ತಿಳಿದಿಲ್ಲ. ತನ್ನ ಕಾರ್ಮಿಕರನ್ನು ಚೀನಾ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ಚೀನಾ ಕೆಲ ವರ್ಷಗಳ ಹಿಂದಿನಿಂದಲೇ ಪ್ರಪಂಚಕ್ಕೆ ಮುಚ್ಚಿಡುತ್ತಾ ಬಂದಿದೆ. ಗ್ರಾಮೀಣ ಪ್ರದೇಶದ ಜನರ ನಗರ ವಲಸೆ ಇದೇ ವೇಗದಲ್ಲಿ ಮುಂದುವರಿದರೆ 2030ರ ಹೊತ್ತಿಗೆ ಚೀನಾದಲ್ಲಿ ಎಲ್ಲರೂ ನಗರವಾಸಿಗಳಾಗಲಿದ್ದಾರೆ. ಹೊರಜಗತ್ತಿಗೆ ಚೀನಾ ಎಂದರೆ ತಂತ್ರಜ್ಞಾನದಲ್ಲಿ ಮುಂದುವರಿದ, ಆಧುನಿಕತೆಗೆ ಒಡ್ಡಿಕೊಂಡ, ಕಮ್ಯುನಿಸಂ ಅನ್ನು ಹೊಂದಾಣಿಕೆ ಮಾಡಿಕೊಂಡ ಉದಾರವಾದಿ ದೇಶದ ಚಿತ್ರಣ ಬರುತ್ತದೆ. ಆದರೆ ಅಲ್ಲಿನ ಗ್ರಾಮೀಣ ಚಿತ್ರಣ ಬೇರೆಯೇ ರೀತಿಯಿದೆ. ಹಳ್ಳಿಗಳಲ್ಲಿ ಬಹುತೇಕರು ಕೆಳಮಧ್ಯಮ ವರ್ಗದ ರೈತರು. ಭತ್ತ, ಜೋಳ, ಮೆಣಸು ಮತ್ತು ತರಕಾರಿಗಳನ್ನು ಬೆಳೆಯುವ ಇವರು ತಮ್ಮ ಬೆಳೆಯನ್ನು ಮಾರಾಟ ಮಾಡುವಷ್ಟೂ ಸ್ಥಿತಿವಂತರಲ್ಲ. ಅಂದಂದಿನ ಹೊಟ್ಟೆಪಾಡಿಗೆ ದುಡಿಯುವವರ ಸಂಖ್ಯೆಯೇ ಅಲ್ಲಿ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲು ಫೋನುಗಳು ಹಳ್ಳಿಗಳಿಗೆ ಮುಟ್ಟಿದೆಯೇ ವಿನಾ ಈಗಲೂ ಚೀನಾದ ಬಹುಪಾಲು ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕವಿಲ್ಲ. ಆದ್ದರಿಂದ ಹೆಚ್ಚಿನ ಗ್ರಾಮೀಣ ಜನರು ನಗರಗಳತ್ತ ಮುಖ ಮಾಡಿದ್ದಾರೆ.

ನಗರಗಳತ್ತ ಉದ್ಯೋಗವನ್ನರಸಿ ಹೋದವರಿಗೆ ಸರಕಾರ ಉದ್ಯೋಗವನ್ನೇನೋ ಕೊಡುತ್ತದೆ. ಆದರೆ ಬದುಕನ್ನು ಕಿತ್ತುಕೊಳ್ಳುತ್ತದೆ. ಗಾರ್ಮೆಂಟ್ಸ್‍ಗಳು, ಆಟಿಕೆಗಳು, ಪಟಾಕಿಗಳು, ಕಪ್ಪು-ಸಾಸರ್‍ಗಳು, ಕಂಬಳಿಗಳು, ಅಲಂಕಾರಿಕ ವಸ್ತುಗಳಂತಹ ಕೌಶಲ್ಯರಹಿತ ಉತ್ಪನ್ನಗಳ ಕಾರ್ಖಾನೆಗಳಲ್ಲಿ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಜಗತ್ತಿನ ಸಮಸ್ತ ಕಾರ್ಮಿಕರ ಭಗವಂತನಂತೆ ನಟಿಸುವ ಕಮ್ಯುನಿಸ್ಟರು ತನ್ನ ಕಾರ್ಮಿಕರನ್ನು ದೊಡ್ಡಿಗಳಂಥಾ ವಾತಾವರಣದಲ್ಲಿ ಕೆಲಸಕ್ಕೆ ದೂಡುತ್ತದೆ. ಒಮ್ಮೆ ಈ ಕೂಪಕ್ಕೆ ಬಿದ್ದ ಕಾರ್ಮಿಕ ತನ್ನ ಕಸುವು ಇರುವವರೆಗೂ ಆ ಕಾರ್ಖಾನೆಗಳಲ್ಲಿ ಕೊಳೆಯಬೇಕು. ಕೆಲವು ವರ್ಷಗಳ ಹಿಂದೆ ಅಮೆರಿಕಾ ಮೂಲದ ಸಂಸ್ಥೆಯೊಂದು ಚೀನಿ ಕಾರ್ಮಿಕರ ಬವಣೆಯನ್ನು ಬಿಡುಗಡೆ ಮಾಡಿತ್ತು. ಮೂಲಸೌಲಭ್ಯಗಳನ್ನು ನೀಡದೆ ಪ್ರಾಣಿಗಳಂತೆ ದುಡಿಸಿಕೊಳ್ಳುವ, ಸದಾ ಪೋಲೀಸ್ ಕಣ್ಗಾವಲಿನಲ್ಲಿ ದುಡಿಯಬೇಕಾದ ಅನಿವಾರ್ಯತೆಯ ಮತ್ತು ರಜೆಯಿಲ್ಲದೆ ಮೂಲವನ್ನು ಮರೆಯಬೇಕಾದ ಕಾರ್ಮಿಕರ ಸಂಕಟವನ್ನು ಬಹಿರಂಗಪಡಿಸಿತ್ತು. ಹೀಗೆ ಕಡಿಮೆ ಖರ್ಚಿನಿಂದ ತಯಾರಿಸಿದ ಗಾರ್ಮೆಂಟ್ ಉತ್ಪನ್ನಗಳನ್ನು ಯೂರೋಪ್, ಅಮೆರಿಕಾ ಮತ್ತು ಕೆನಡಾಗಳಿಗೆ ರಫ್ತು ಮಾಡುವ ಚೀನಾದ ಆರ್ಥಿಕ ಶಕ್ತಿ ಎಷ್ಟು ದಿನ ನಡೆದೀತು ಎಂದು ಅದು ಪ್ರಶ್ನೆ ಹಾಕಿತ್ತು.

ಕಮ್ಯುನಿಸ್ಟರು ಸಮಾನತೆಯ ಸಿದ್ಧಾಂತವನ್ನು ಮಾತ್ರ ಹೇಳಬಲ್ಲರು, ಆದರೆ ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಲೂ ಬಲ್ಲರು. ಬಂಡವಾಳಷಾಹಿ ವಿರೋಧಿ ಧೋರಣೆಯನ್ನು ಮೈಯೆಲ್ಲ ತುಂಬಿಸಿಕೊಳ್ಳಬಲ್ಲರು, ಆದರೆ ಕಮ್ಯುನಿಸ್ಟ್ ನೆರಳಲ್ಲಿ ಅದನ್ನು ಚಾಚೂ ತಪ್ಪದೆ ಪಾಲಿಸಲೂ ಬಲ್ಲರು. ಚೀನಾ ಕಮ್ಯುನಿಸ್ಟರು ಉಳಿದೆಲ್ಲ ಸಂಪನ್ಮೂಲಗಳಿಗಿಂತ ಮಾನವ ಸಂಪನ್ಮೂಲವನ್ನೇ ದೊಡ್ಡ ಸಂಪತ್ತು ಎಂದು ಪರಿಗಣಿಸುತ್ತದೆ. ಜನರು ದುಡಿಯಲೆಂದೇ ಹುಟ್ಟಿದವರು ಎಂಬ ಭಾವನೆ ಅದರ ಆರ್ಥಿಕ ಬಲದ ಒಳಗುಟ್ಟು. ಗ್ರಾಮೀಣ ಜನ ತನ್ನ ಪಾಡಿಗೆ ತಿಂದುಂಡು ಸಂಸ್ಕೃತಿಯ ರಕ್ಷಕನಾಗಿರುವುದು ಕಮ್ಯುನಿಸ್ಟರ ಪಾಲಿಗೆ ಉತ್ಪಾದನೆಗೆ ಹಿನ್ನಡೆ. ಗ್ರಾಮೀಣ ಜನರು ಗೂಡುಗಳಲ್ಲಿ ಕಳೆದು ಯಂತ್ರಗಳಾಗುವುದು ಅಭಿವೃದ್ಧಿಗೆ ಸಹಕಾರಿ. ಇಂಥ ಚಿಂತನೆ, ಯೋಜನೆ ಎಷ್ಟು ದಿನ ನಡೆದೀತು? ಪ್ರಸ್ತುತ ಚೀನಾ-ಭಾರತ ಗಡಿ ಉದ್ವಿಗ್ನತೆಯಲ್ಲಿ ಚೀನಾ ಸೇನೆಯ ಬಗ್ಗೆ ಚರ್ಚೆಯಾಗುತ್ತಿದೆ. ಸಾಮರಿಕ ತುಲನೆಗಳ ಹೊರತಾಗಿಯೂ ಚೀನಾದ ಸೇನೆ ಕಮ್ಯುನಿಸ್ಟರಿಗೆ ಆನೆ ಬಲವಿದ್ದಂತೆ. ತನ್ನ ಅಗಾಧವಾದ ಸೇನಾಪಡೆಯನ್ನು ಚೀನಾ ಸುಮ್ಮನೆ ಸಾಕುತ್ತಿಲ್ಲ. ಕಾರ್ಖಾನೆಗಳಲ್ಲಿ ಕಾರ್ಮಿಕರು ಮಾಡುವ ಕೆಲಸವನ್ನು ಸೈನಿಕರಿಂದಲೂ ಮಾಡಿಸುತ್ತದೆ. ಸಂಖ್ಯೆಗೆ ತುಕಡಿಗಳೂ ಆದ ಸೈನಿಕರು ಕಾರ್ಖಾನೆಗಳಲ್ಲಿ ಕೂಲಿಗಳೂ ಆಗಿದ್ದಾರೆ.

ಇವೆಲ್ಲದರ ನಡುವೆ ಚೀನಾ ಕಮ್ಯುನಿಸ್ಟರು ಪಕ್ಕಾ ವ್ಯಾಪಾರಿ ಮನೋಭಾವದವರು. ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವ ಶಕ್ತಿ ಹೊಂದಿರುವ ಕಮ್ಯುನಿಸ್ಟರು ಬೇಡಿಕೆಯ ಯಾವುದೇ ಸರಕನ್ನೂ ಉತ್ಪಾದಿಸಲು ಹಿಂಜರಿಯುವುದಿಲ್ಲ. ಅದಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಮುಟ್ಟಲು ಅದು ಹಿಂಜರಿಯುವುದಿಲ್ಲ. ಆ ಮನೋಭಾವ ಅವರಲ್ಲಿ ಸಾಮ್ರಾಜ್ಯ ವಿಸ್ತರಣಾ ಮನಸ್ಥಿತಿಯನ್ನು ರೂಪಿಸಿದೆ. ಎಷ್ಟೆಂದರೆ ತನ್ನ ಸುತ್ತಲಿರುವ ಯಾವ ದೇಶಗಳೊಂದಿಗೂ ಅದು ಸಂಬಂಧ ಉತ್ತಮವಾಗಿಟ್ಟುಕೊಂಡಿಲ್ಲ. ಅದರ ವಿಸ್ತರಣಾವಾದದ ಹಿಂದೆ ಸಂಪಾದನೆಯ ಲಾಲಸೆಯಿದೆ. ಮಹತ್ತ್ವಾಕಾಂಕ್ಷೆಯಿದೆ. ಕಮ್ಯುನಿಸಮ್ಮಿನ ಕಿರೀಟವನ್ನು ಜಗತ್ತು ನೋಡಬೇಕೆಂಬ ಹಪಾಹಪಿಯಿದೆ. ಅದಕ್ಕಾಗಿ ಅದು ಮಾನವೀಯತೆಯನ್ನು ಸಂಪೂರ್ಣ ಕಳೆದುಕೊಂಡಿದೆ. ಧೂರ್ತತನಕ್ಕೆ ಅದೆಂದೂ ಹಿಂಜರಿಯಲಾರದಂತೆ ತನ್ನನ್ನು ಸಿದ್ಧಮಾಡಿಕೊಂಡಿದೆ. ಇವೆಲ್ಲವನ್ನೂ ದೀರ್ಘಕಾಲ ಕಾಪಿಟ್ಟುಕೊಳ್ಳುವ ಒತ್ತಡವೂ ಅದಕ್ಕಿದೆ. ಬಲೂನಿಗೆ ವಿಪರೀತ ಗಾಳಿಯನ್ನೇನೋ ಅದು ತುಂಬಿಸಿಬಿಟ್ಟಿದೆ. ಇನ್ನು ಜಾಗವೇ ಇಲ್ಲವೆನ್ನುವಂತೆ ಆ ಬಲೂನು ಕೂಡಾ ಊದಿಕೊಂಡಿದೆ. ಒಳಗಿನ ಒತ್ತಡ, ಚಡಪಡಿಕೆ, ಯೋಗ್ಯವಲ್ಲದ ಕಮ್ಯುನಿಸಂ ಎಲ್ಲವೂ ಸೇರಿಕೊಂಡು ಅದರ ವಿಸ್ತರಣಾವಾದದ ಲೆಕ್ಕಾಚಾರ ಎಲ್ಲೋ ತಪ್ಪಿದೆ.

Comments

comments