ಪಶ್ಚಿಮಬುದ್ಧಿಗಳಾಗಿ ದಿಕ್ಕು ತಪ್ಪಿದ್ದು ಸಾಕು; ಪೂರ್ವಮೀಮಾಂಸೆಯನರಿವ ಹೊಸಗಣ್ಣು ಬೇಕು

ಐಎಎಸ್ ಅಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಇತ್ತೀಚೆಗೆ ಒಂದು ಫೇಸ್‍ಬುಕ್ ಪೋಸ್ಟ್ ಹಾಕಿದ್ದರು. ಬೆಲ್ಲವನ್ನು ಹಸಿ ಈರುಳ್ಳಿಯ ಜೊತೆ ಸೇವಿಸುವುದರಿಂದ ರಕ್ತದ ಪ್ಲೇಟ್‍ಲೆಟ್‍ಗಳ ಸಂಖ್ಯೆ ವೃದ್ಧಿಸಬಹುದು. ಡೆಂಘೀ ಜ್ವರಕ್ಕೆ ತುತ್ತಾದವರಲ್ಲಿ ಪ್ಲೇಟ್‍ಲೆಟ್‍ಗಳ ಸಂಖ್ಯೆ ಇಳಿಮುಖವಾಗುತ್ತದೆ. ಈರುಳ್ಳಿ ಮತ್ತು ಬೆಲ್ಲ ಸೇವಿಸಿದಾಗ ಪ್ಲೇಟ್‍ಲೆಟ್‍ಗಳ ಸಂಖ್ಯೆ ವೃದ್ಧಿಯಾಗುವುದರಿಂದ ಅದು ಡೆಂಘೀ ಜ್ವರಬಾಧಿತರಿಗೆ ವರದಾನವಾಗಬಹುದು. ಅಲ್ಲದೆ ಈರುಳ್ಳಿಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ – ಎಂಬುದು ಶಾಲಿನಿಯವರು ಬರೆದ ಪೋಸ್ಟ್ ನ ಸಾರಾಂಶವಾಗಿತ್ತು. ನೀವು ನಂಬುತ್ತೀರೋ ಬಿಡುತ್ತೀರೋ, ಯಾರೊಬ್ಬರಿಗೂ ಕೇಡು ಬಗೆಯದ ಈ ಪೋಸ್ಟ್ ನಲ್ಲಿ ಕೂಡ ಒಬ್ಬ ವಿಚಾರವ್ಯಾಧಿ ವಿಚಾರವಾದಿಗೆ ತಪ್ಪು ಕಾಣಿಸಿತು. ಆತ ನೇರವಾಗಿ ರಾಜ್ಯ ಸರಕಾರದ ಆರೋಗ್ಯ ಇಲಾಖೆಗೆ ಪತ್ರ ಬರೆದು “ಈಕೆ ರಾಜ್ಯ ಸರಕಾರದಲ್ಲಿ ಅಧಿಕಾರಿಯಾಗಿದ್ದುಕೊಂಡು ಹೀಗೆಲ್ಲ ಮೌಢ್ಯ ಹರಡುವುದು ಸರಿಯಲ್ಲ. ಇಂಥ ಸುಳ್ಳು ಪ್ರಚಾರ ತಕ್ಷಣ ನಿಲ್ಲಬೇಕು” ಎಂದು ಪತ್ರ ಬರೆದ. ಆರೋಗ್ಯ ಇಲಾಖೆಯ ಅಧಿಕಾರಿಗಳು ಶಾಲಿನಿ ಅವರನ್ನು ತರಾಟೆಗೆ ತೆಗೆದುಕೊಂಡರು. “ನಾನು ಆಯುಷ್ ಇಲಾಖೆಯಲ್ಲಿ ನಿರ್ದೇಶಕಿ ಕೂಡ. ಅಲ್ಲಿ ವೈಜ್ಞಾನಿಕವಾಗಿ ಸಾಬೀತಾದ ಸಂಗತಿಗಳನ್ನೇ ನಾನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇನೆಯೇ ವಿನಾ ಯಾರ್ಯಾರೋ ಹೇಳಿದ ಅಡಗೂಲಜ್ಜಿ ಕತೆಗಳನ್ನು ಅಲ್ಲ. ಆಯುಷ್ ಇಲಾಖೆಯಲ್ಲಿ ಡೆಂಘೀ ಕಾಯಿಲೆಗೆ ಈರುಳ್ಳಿ ಪರಿಣಾಮಕಾರಿ ಔಷಧ ಎಂದು ಸಾಬೀತಾದ ಮೇಲೆಯೇ ನಾನದನ್ನು ಸಾರ್ವಜನಿಕರ ಗಮನಕ್ಕೆ ತಂದಿದ್ದೇನೆ” ಎಂದು ಶಾಲಿನಿ ರಜನೀಶ್ ಸ್ಪಷ್ಟೀಕರಣ ಕೊಡಬೇಕಾಯಿತು. ಆದರೂ ಜಾಲತಾಣದಲ್ಲಿ ಬರೆದುಕೊಂಡಿದ್ದ ಪೋಸ್ಟ್ ಅನ್ನು ಅವರು ಅಳಿಸಿಹಾಕುವಂತೆ ಮಾಡುವಲ್ಲಿ ವಿಚಾರವ್ಯಾಧಿಗಳು ಯಶಸ್ವಿಯಾಗಿದ್ದಾರೆ.

ನಿಜಕ್ಕೂ ಆಶ್ಚರ್ಯವಾಗುತ್ತದೆ! ಈ ಸಂದರ್ಭದಲ್ಲಿ ನನ್ನ ವೈಯಕ್ತಿಕ ಅನುಭವವೊಂದನ್ನು ಹೇಳುತ್ತೇನೆ, ಕೇಳಿ. ಮೂರು ವರ್ಷದ ಹಿಂದೆ ಡೆಂಘೀ ಜ್ವರ ಇನ್ನೂ ಹೊಸ ಬಗೆಯ ಕಾಯಿಲೆಯಾಗಿದ್ದಾಗ ನನ್ನ ಸಂಬಂಧಿಯೊಬ್ಬರಿಗೆ ಆ ಜ್ವರ ಬಂತು. ಡೆಂಘೀ ಎಂಬ ಹೆಸರೇ ಭಯಂಕರವಾಗಿದ್ದುದರಿಂದ ಹೆದರಿದ ನಾನು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದೆ. ಎಲ್ಲೆಡೆ ಹರಡುತ್ತಿದೆ, ಜನ ಸಾಯುತ್ತಿದ್ದಾರೆ ಎಂಬ ಸುದ್ದಿ ವ್ಯಾಪಕವಾಗುತ್ತಿದ್ದ ಸಮಯವಾದ್ದರಿಂದ ಆಸ್ಪತ್ರೆಗೆ ದಾಖಲಾಗುವುದೇ ಪರಮ ಸುರಕ್ಷಿತ ಮಾರ್ಗ ಎಂದು ತಿಳಿದಿದ್ದೆ. ಅದಾದ ಎರಡನೇ ದಿನ, ಊರಿಂದ ಫೋನ್ ಮಾಡಿದ ಅಮ್ಮ ಮಾತ್ರ ಯಾವ ಭಯವಿಲ್ಲದೆ, ರೋಗಿಗೆ ದಿನಕ್ಕೆ ಮೂರ್ನಾಲ್ಕು ಬಾರಿ ಪರಂಗಿ ಗಿಡದ ಎಲೆಯ ರಸ ಕುಡಿಸುವಂತೆ ಹೇಳಿದ್ದರು. ಅದೊಂದು ತೀವ್ರಸ್ವರೂಪದ ಕಾಯಿಲೆ, ತುಸು ಎಚ್ಚರ ತಪ್ಪಿದರೂ ಮರಣವೇ ಬಹುಮಾನ ಎಂದು ಇಲ್ಲಿ ಆರೋಗ್ಯ ಇಲಾಖೆ ಡಂಗುರ ಹೊಡೆಯುತ್ತಿರುವಾಗ ಪರಂಗಿ ಎಲೆಯ ರಸದಂಥ ಸರಳೋಪಚಾರದಲ್ಲಿ ಅದು ಗುಣವಾಗುವುದುಂಟೆ ಎಂದು ನಾನು ಅಮ್ಮನಿಗೇ ಜೋರು ಮಾಡಿದ್ದೆ. ಆದರೆ, ಬಳಿಕ ಕುತೂಹಲದಿಂದ ಗೂಗಲ್ ಮಹಾಶಯನನ್ನು ತಡಕಾಡಿದಾಗ ನನಗೆ ಅಚ್ಚರಿ ಕಾದಿತ್ತು. ಡೆಂಘೀ ಜ್ವರಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದ್ದ ಒಂದು ಆನ್‍ಲೈನ್ ವೇದಿಕೆಯಲ್ಲಿ ನೂರಕ್ಕೆ ತೊಂಬತ್ತು ಜನ, ಪರಂಗಿ ಎಲೆ ಪರಿಣಾಮಕಾರಿ ಔಷಧ ಎಂದು ಹೇಳಿದ್ದರು! ಮತ್ತಷ್ಟು ಆಶ್ಚರ್ಯವಾಗುವ ಸಂಗತಿ ಎಂದರೆ, ಹಾಗೆ ಹೇಳಿದವರೆಲ್ಲರೂ ವಿದೇಶೀಯರು! ಯುರೋಪ್ ಮತ್ತು ಅಮೆರಿಕಾದ ಮಂದಿ! ದಿನಕ್ಕೆ ಹತ್ತು ಸಲ ಗೂಗಲ್‍ನ ಒಳಹೊರಗೆ ಜೀಕುತ್ತಿರುವ ನನಗೇ ತಿಳಿಯದ ಮಾಹಿತಿ, ಹಳ್ಳಿಯಲ್ಲಿರುವ ನನ್ನ ಅಮ್ಮನಿಗೆ ಹೇಗೆ ಗೊತ್ತಾಯಿತು ಎಂದು ಆ ಕ್ಷಣಕ್ಕೆ ಅಚ್ಚರಿಯಾದದ್ದು ಮಾತ್ರ ನಿಜ!

ಅದರ ಮುಂದಿನ ಕತೆ ಸ್ವಾರಸ್ಯವಾಗಿದೆ. ನನ್ನ ಸಂಬಂಧಿಯನ್ನು ಆಸ್ಪತ್ರೆಯಲ್ಲಿ ಮಲಗಿಸಿ ವೈದ್ಯರು ದಿನಕ್ಕೊಂದು ಬಾಟಲಿ ಗ್ಲುಕೋಸನ್ನು ಸೂಜಿ ಮೂಲಕ ಕುಡಿಸಿ, ದಿನಕ್ಕೊಂದು ಪ್ಯಾರಾಸೆಟಮಾಲ್ ಮಾತ್ರೆ ತಿನ್ನಿಸಿ, ದಿನಕ್ಕೆ ಮೂರು ಸಾವಿರ ರುಪಾಯಿಯ ಬಿಲ್ ಮಾಡುತ್ತಿದ್ದರು. ಮೊದಲ ಎರಡು ದಿನ ವೈದ್ಯೋಪಚಾರದ ಮೇಲೆ ನಂಬಿಕೆ ಇಟ್ಟು ನಾವು ಪರಂಗಿ ಎಲೆಯ ರಸ ಕುಡಿಸಲು ಹೋಗಿರಲಿಲ್ಲ. ಆದರೆ ರೋಗಿಯ ಆರೋಗ್ಯದಲ್ಲಿ ಚೇತರಿಕೆಯೇನೂ ಕಾಣಲಿಲ್ಲ. ಗ್ಲುಕೋಸ್ ಮತ್ತು ಪ್ಯಾರಾಸೆಟಮಾಲ್ ಬಿಟ್ಟರೆ ಬೇರಾವ ಉಪಚಾರವನ್ನೂ ಆಸ್ಪತ್ರೆಯವರು ಮಾಡಿರಲಿಲ್ಲ. ಮೂರನೇ ದಿನ ವೈದ್ಯರನ್ನೇ ನೇರವಾಗಿ ವಿಚಾರಿಸಿದಾಗ, ಡೆಂಘೀಗೆ ಪ್ಯಾರಾಸೆಟಮಾಲ್ ಬಿಟ್ಟರೆ ಬೇರೇನೂ ಔಷಧಿ ಆಲೋಪತಿ ಇಲ್ಲವೆಂದೂ ಇನ್ನೂ ಎರಡು ದಿನ ಕಳೆದ ಮೇಲೂ ಪ್ಲೇಟ್‍ಲೆಟ್‍ಗಳ ಸಂಖ್ಯೆ ಹೆಚ್ಚಾಗದೇ ಹೋದರೆ ಕೃತಕ ಪ್ಲೇಟ್‍ಲೆಟ್‍ಗಳನ್ನು ಕೊಡುವುದಾಗಿಯೂ ಹೇಳಿದರು. ನಾವು ಧೈರ್ಯ ಮಾಡಿ ರೋಗಿಗೆ ಪರಂಗಿಯ ಎಲೆ ಹಿಂಡಿ ತೆಗೆದ ರಸ ಕುಡಿಸಲು ಮೊದಲು ಮಾಡಿದೆವು. ಅದುವರೆಗೆ ಹಗ್ಗದಂತಾಗಿದ್ದ ರೋಗಿ ನಂತರ ಚೇತರಿಸಿಕೊಳ್ಳತೊಡಗಿದರು. ಮರುದಿನದಿಂದ ನಮ್ಮ ಮನೆಮದ್ದಿನ ಪ್ರಮಾಣವನ್ನು ಮತ್ತೂ ಕೊಂಚ ಹೆಚ್ಚಿಸಿದೆವು. ಅದೇ ವಾರ್ಡ್‍ನಲ್ಲಿ ಅಕ್ಕಪಕ್ಕದಲ್ಲಿ ಮಲಗಿದ್ದ ಉಳಿದ ಡೆಂಘೀ ರೋಗಿಗಳಿಗೂ ಅದನ್ನೇ ಶಿಫಾರಸ್ಸು ಮಾಡಿದೆವು. ಐದು ದಿನ ಪೂರ್ಣಗೊಳ್ಳುವ ಹೊತ್ತಿಗೆ ನಮ್ಮ ಸಂಬಂಧಿ ಪೂರ್ಣ ಚೇತರಿಸಿಕೊಂಡರು. ಪ್ಲೇಟ್‍ಲೆಟ್ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆಂದು ಊಹಿಸಿದ್ದ ವೈದ್ಯರಿಗೆ ಅಚ್ಚರಿಯಾಗುವಂತೆ ಅದರ ಸಂಖ್ಯೆ ಏರುಮುಖವಾಗಿತ್ತು. ಪೇಷಂಟ್‍ಗೆ ಏನು ತಿನ್ನಿಸಿದ್ದೀರಿ ಎಂದು ಖಾರವಾಗಿಯೇ ವೈದ್ಯರು ಕೇಳಿದಾಗ ಪರಂಗಿ ಎಲೆಯ ಮಹಾತ್ಮೆಯ ಬಗ್ಗೆ ನಾವು ಹೇಳದೆ ದಾರಿಯಿರಲಿಲ್ಲ. ಅದು ಗೊತ್ತಾಗುತ್ತಲೇ ಅವರು ಇನ್ನೂ ಜೋರಾಗಿ ಹಾರಾಡಿದರು. ನಮ್ಮ ಆಲೋಪತಿ ಮೆಡಿಸಿನ್ ಮೇಲೆ ನಿಮಗೆ ನಂಬಿಕೆ ಇಲ್ಲವಾ ಎಂದು ಗರಂ ಆದರು. ಕೃತಕ ಪ್ಲೇಟ್‍ಲೆಟ್ ಕೊಡುವ ಮೂಲಕ ಮತ್ತೂ ಒಂದಿಪ್ಪತ್ತು ಸಾವಿರ ರುಪಾಯಿಯ ಹೆಚ್ಚುವರಿ ಬಿಲ್ ಮಾಡಲು ತಯಾರಾಗಿದ್ದವರಿಗೆ ಆ ಅವಕಾಶ ತಪ್ಪಿಹೋದಾಗ ಕೋಪ ಬರುವುದು ಸಹಜವೇ ತಾನೇ?

ಇಲ್ಲಿ ನಾನು, ಅಜ್ಜಿ ಹೇಳುವ ಮನೆಮದ್ದೇ ಶ್ರೇಷ್ಠ, ಉಳಿದದ್ದೆಲ್ಲ ಕನಿಷ್ಠ ಎಂಬ ಸರಳೀಕರಣ ಮಾಡಲು ಹೊರಟಿಲ್ಲ. ಆದರೆ ನಾವು ಹೇಗೆ ನಮಗೇ ತಿಳಿಯದಂತೆ ಆಧುನಿಕತೆ ದಯಪಾಲಿಸಿದ ಸಂಕುಚಿತ ದೃಷ್ಟಿಕೋನವನ್ನು ಧರಿಸಿ ದಾರಿ ತಪ್ಪುತ್ತಿದ್ದೇವೆ ಎಂಬುದನ್ನು ಹೇಳಹೊರಟಿದ್ದೇನೆ. ನಿಮಗೆ ನಿಜವಾಗಿಯೂ ಅಚ್ಚರಿಯಾಗಬಹುದು; ಓರ್ವ ವ್ಯಕ್ತಿಗೆ ಡೆಂಘೀ ಬಂದಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸುವ ಕಿಟ್‍ಗೆ ತಗುಲುವ ನಿಜ ಖರ್ಚು 30 ರುಪಾಯಿಯ ಆಜುಬಾಜು. ಆದರೆ ಒಂದು ಸುಸಜ್ಜಿತ ಆಸ್ಪತ್ರೆಗೆ ಎಡತಾಕಿದರೆ ಅವರು ನಿಮಗೆ ತಲೆಯ ಎಂಆರ್‍ಐಯಿಂದ ಹಿಡಿದು ಅಂಗುಷ್ಠದ ಸ್ಕ್ಯಾನಿಂಗ್ ವರೆಗೆ ಬೇಕಾದ್ದು ಬೇಡವಾದ್ದು ಎಲ್ಲವನ್ನೂ ಮಾಡಿಸಿ 800-1000 ರುಪಾಯಿಯ ಬಿಲ್ ಮಾಡಿ ಕಳಿಸುತ್ತಾರೆ. ವರದಿಯಲ್ಲಿ ನಿಮಗೆ ಡೆಂಘೀ ಇಲ್ಲ ಎಂದೇ ಫಲಿತಾಂಶ ಬಂದರೂ ನೀವು ಆ ದುಡ್ಡು ತೆರುವುದನ್ನು ತೆರಲೇಬೇಕು! ರೋಗಪತ್ತೆ ವಿಧಾನ ಹೇಗಿರುತ್ತದೆ ಎಂಬುದರ ತಲೆಬುಡ ಗೊತ್ತಿಲ್ಲದ ಸಾಮಾನ್ಯ ಜನ ಈ ದುಬಾರಿ ಬೆಲೆ ತೆತ್ತು ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಬೆಂಗಳೂರಂಥ ನಗರದಲ್ಲಿ ಸುಮ್ಮನೇ ಒಂದು ಸುತ್ತು ಹೊಡೆದರೂ ಸಾಕು, ಡಯಗ್ನೋಸ್ಟಿಕ್ ಸೆಂಟರ್‍ಗಳು ನಾಯಿಕೊಡೆಯಂತೆ ತಲೆಯೆತ್ತಿರುವುದನ್ನು ನೋಡಬಹುದು. ರೋಗಪತ್ತೆ ಕ್ಷೇತ್ರದಲ್ಲಿ ಎಷ್ಟು ದೊಡ್ಡ ಲಾಭಾಂಶವಿದೆ ಎಂಬುದನ್ನು ಈ ಸಂಖ್ಯಾಬಾಹುಳ್ಯವೇ ಹೇಳುತ್ತಿಲ್ಲವೆ?

ಡೆಂಘೀ ಕಾಯಿಲೆ ಬಂದಾಗ ಮುಖ್ಯವಾಗಿ ಬೇಕಾದದ್ದು ವಿಶ್ರಾಂತಿ. ಜ್ವರ ಹೆಚ್ಚದಂತೆ ತಡೆಯಲು ಒಂದಷ್ಟು ಉಪಚಾರ. ಬಿಸಿ ಅನ್ನ, ಹಾಲು, ಕಷಾಯ. ರಕ್ತದಲ್ಲಿ ಪ್ಲೇಟ್‍ಲೆಟ್‍ಗಳ ಸಂಖ್ಯೆ ಹೆಚ್ಚುವಂತೆ ಮಾಡುವ ನೈಸರ್ಗಿಕ ಆಹಾರ. ಅದು ಪರಂಗಿಯ ಎಲೆಯಾದರೂ ಆದೀತು, ಕಿವಿ ಹಣ್ಣಾದರೂ ಆದೀತು, ಈರುಳ್ಳಿ-ಬೆಲ್ಲದಂಥ ಮನೆಮದ್ದಾದರೂ ಆದೀತು. ಇವಿಷ್ಟು ಸಿಗುವಂತೆ ನೋಡಿಕೊಂಡರೆ ಡೆಂಘೀ ತೊಂದರೆಯಿಂದ ಆರಾಮಾಗಿ ಈಚೆ ಬಂದುಬಿಡಬಹುದು. ಆದರೆ ನಮ್ಮ ಆಸ್ಪತ್ರೆಗಳು, ವೈದ್ಯರು ಇದನ್ನು ದೊಡ್ರೋಗ ಎಂಬಂತೆ ಬಿಂಬಿಸಿ, ಸಾವಿರಾರು ರುಪಾಯಿಗಳನ್ನು ಸುಲಿಗೆ ಮಾಡುತ್ತಿರುವಾಗ ನಮಗೆ ಸರಿಯಾದ ದಾರಿ ತೋರಬೇಕಾದವರು ಶಾಲಿನಿ ರಜನೀಶ್ ಥರದವರೋ ಇಲ್ಲಾ ಮಂಗಳೂರಿನ ವಿಚಾರವ್ಯಾಧಿಗಳಂಥವರೋ? ಮನೆಯಲ್ಲೇ ನಡೆದುಹೋಗುತ್ತಿದ್ದ ಹೆರಿಗೆ ಇಂದು ಕೆಲವು ಐಷಾರಾಮಿ ಆಸ್ಪತ್ರೆಗಳ ದೆಸೆಯಿಂದ ಮೂರು ಲಕ್ಷ ರುಪಾಯಿಯ ವ್ಯವಹಾರವಾಗಿದೆ. ಕಿಡ್ನಿಸ್ಟೋನ್ ಆದಾಗ ನೀರು, ಬಾರ್ಲಿ ನೀರು ಕುಡಿಸಿ ಕರಗಿಸಿ ತೆಗೆಯುವ ಕಾಲ ಹೋಗಿ ಅದಕ್ಕೂ ಲೇಸರ್ ಕಿರಣ ಹಾಯಿಸಿ ಲಕ್ಷಾಂತರ ಪೀಕುವ ದಂಧೆ ಶುರುವಾಗಿದೆ. ಇಂದು ಅದುರುವ ಹಲ್ಲು ಕೀಳುವುದಕ್ಕೂ ವೈದ್ಯರು ನಾಲ್ಕು ಎಕ್ಸ್ ರೇ ತೆಗೆದು ಐನೂರು ರುಪಾಯಿ ಬಿಲ್ ಮಾಡಿ ನಂತರ ಸುತ್ತಿಗೆ ಎತ್ತಿಕೊಳ್ಳುತ್ತಾರೆ ಎಂಬಂಥ ಸನ್ನಿವೇಶ. ಹೌದು, ಹಾಗೆ ಬಳಿ ಬಂದ ಬಡವರ ರಕ್ತ ಹೀರದೆ ಹೋದರೆ ಅವರು ಎಂಬಿಬಿಎಸ್, ಎಂಡಿ ಮಾಡಲು ಸುರಿದಿರುವ ಲಕ್ಷ-ಕೋಟಿಗಳ ಬಾಬ್ತು ವಾಪಸು ಬರುವುದಾದರೂ ಹೇಗೆ! ಒಂದು ಕಡೆ ಇಂಥ ರಕ್ತಪಿಪಾಸು ವೈದ್ಯರ ಹಗಲುದರೋಡೆ ಅವ್ಯಾಹತವಾಗಿದ್ದರೆ ಇನ್ನೊಂದು ಕಡೆ, ಆಲೋಪತಿಯೊಂದೇ ಜಗತ್ತಿನ ಸರ್ವಸಮಸ್ಯೆಗಳಿಗೂ ಪರಿಹಾರ; ಮಿಕ್ಕವೆಲ್ಲ ಮೌಢ್ಯದ ಮೊತ್ತ ಎಂಬ ಪ್ರಚಾರ ಮಾಡುವ ಬುದ್ಧಿಜೀವಿಗಳ ಹಾವಳಿ! ಭಾರತ ಸರಕಾರ ಯೋಗದಿನ ಮಾಡಲು ಹೊರಟಾಗ ಮಂಗಳೂರಿನ ಇಂಥಾದ್ದೇ ಓರ್ವ ವಿಚಾರವ್ಯಾಧಿ ವೈದ್ಯ, ಯೋಗದಿಂದ ಯಾವ ಕಾಯಿಲೆಯೂ ಗುಣವಾಗದು ಎಂದು ಪ್ರಚಾರ ನಡೆಸಿದ್ದ. ಯೋಗ ಭಾರತದ್ದು; ಅದನ್ನು ಅಭಿವೃದ್ಧಿಪಡಿಸಿ ಚಾಲ್ತಿಗೆ ತಂದವರು ಭಾರತೀಯ ಋಷಿಮುನಿಗಳು; ಯೋಗಶಾಸ್ತ್ರವನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ; ಮತ್ತು ಅದನ್ನೀಗ ಇಂಟನ್ರ್ಯಾಷನಲ್ ಡೇ ಆಗಿ ಆಚರಿಸಹೋಗುತ್ತಿರುವುದು ಭಾಜಪಾ ಸರಕಾರ – ಎಂಬ ಅಂಶವೇ ಆ ಸೆಕ್ಯುಲರ್ ವೈದ್ಯ ಯೋಗವನ್ನು ನಿರಾಕರಿಸಲು ಪ್ರಮುಖ ಕಾರಣವಾಗಿತ್ತು! ಭಾರತದ ಯಾವುದನ್ನೇ ಆದರೂ ಹೀಯಾಳಿಸಬೇಕು; ತುಚ್ಛೀಕರಿಸಬೇಕು ಎಂಬುದು ಕಮ್ಯುನಿಸ್ಟ್ ಕಮ್ಮಿನಿಷ್ಠರು ದಶಕಗಳಿಂದ ಪಾಲಿಸಿಕೊಂಡುಬಂದ ಕ್ರಮ. ಪರಂಪರಾಗತವಾಗಿ ಬಂದ ಔಷಧಪದ್ಧತಿಗಳು ಇವರಿಗೆ ಕಂದಾಚಾರ. ಹಳ್ಳಿಗಳಲ್ಲಿ ದಶಕಗಳಿಂದ ಗ್ರಾಮಸ್ಥರ ಆರೋಗ್ಯದ ದೇಖರೇಖಿ ನೋಡಿಕೊಂಡ ಅಳಲೆಕಾಯಿ ಪಂಡಿತರು ಇವರಿಗೆ ಮೌಢ್ಯದ ಪ್ರತಿಪಾದಕರು, ಪ್ರಚಾರಕರು. ಆಲೋಪತಿಯನ್ನೇ ಶಾಸ್ತ್ರೀಯವಾಗಿ ಕಲಿತೂ, ವೈದ್ಯಕೀಯ ರಂಗದ ಹುಳುಕುಗಳನ್ನು ಎತ್ತಿ ಜಗತ್ತಿಗೆ ತೋರಿಸುವ ಡಾ. ಬಿ.ಎಂ. ಹೆಗ್ಡೆಯವರಂಥ ವ್ಯಕ್ತಿಗಳು ಇವರ ಪಾಲಿಗೆ ನುಂಗಲಾರದ ತುತ್ತುಗಳು.

ಭಾರತ ಸ್ವಾತಂತ್ರ್ಯ ಗಳಿಸಿ 70 ವರ್ಷವಾಯಿತು. ಆದರೆ ಈ ಏಳು ದಶಕಗಳಲ್ಲಿ ಸಾಧಿಸಿದ್ದೇನು? ಭಾರತೀಯವಾದದ್ದನ್ನು ದ್ವೇಷಿಸು, ಹೀಯಾಳಿಸು, ಅದರ ಮೇಲೆ ನಂಜು ಕಾರು, ಭಾರತದ್ದೆಲ್ಲವೂ ನಿಕೃಷ್ಟ ಎಂದು ಪ್ರಚಾರ ಮಾಡು – ಇದಷ್ಟೇ ಏನು? ಮೊನ್ನೆಯಷ್ಟೇ ಬರಗೂರು ರಾಮಚಂದ್ರಪ್ಪ ಅವರಿಂದ ಪರಿಷ್ಕೃತಗೊಂಡು ಬಂದಿರುವ ಪಠ್ಯಪುಸ್ತಕಗಳ ಅವಸ್ಥೆ ಕಂಡರೆ ಕರುಳು ಚುರ್ ಎನ್ನುತ್ತದೆ. ಪರಮಾಣು ಸಿದ್ಧಾಂತದ ವಿಚಾರ ಬಂದಾಗ ಜಗತ್ತಿನಲ್ಲೇ ಮೊದಲ ಬಾರಿಗೆ ಪರಮಾಣುವಿನ ಕುರಿತು ಯೋಚಿಸಿದವರು, ಮಾತಾಡಿದವರು ಕಣಾದ ಮಹರ್ಷಿಗಳು. ಅವರ ಹೆಸರಲ್ಲಿದ್ದ ಮಹರ್ಷಿ ಎಂಬ ಪದವನ್ನು ಕಿತ್ತುಹಾಕಿ ಬರಗೂರು ಅವರ ಸಮಿತಿ, ಕಣಾದ ಪರಮಾಣುಗಳ ಬಗ್ಗೆ ಹೇಳಿದ್ದೇನೋ ಹೌದು, ಆದರೆ ಅದನ್ನು ಆಧುನಿಕ ಜಗತ್ತಿನ ಪರಿಭಾಷೆಯಲ್ಲಿ ಓದಿ ಮೆಚ್ಚುವಂತೇನೂ ಇಲ್ಲ ಎಂದು ಬರೆದಿದೆ! ಆಧುನಿಕ ವಿಜ್ಞಾನದ ಪರಿಭಾಷೆಯಲ್ಲೇ ನಮ್ಮ ಪೂರ್ವಿಕರು ಮಾತಾಡಬೇಕಿತ್ತು ಎಂಬುದೇ ದೊಡ್ಡ ಮೂಢನಂಬಿಕೆ. ಇಂಥ ಸೋಗಲಾಡಿ ಸೆಕ್ಯುಲರ್ ಜಾತ್ಯತೀತ ಬುದ್ಧಿಜೀವಿಗಳಿಗೆ ಇಂದಿಗೂ ಪ್ರಾಚೀನ ಚಿಂತಕರಾಗಿ ಕಾಣುವುದು ಅರಿಸ್ಟಾಟಲ್, ಪ್ಲೇಟೋ, ಸಾಕ್ರಟೀಸ್‍ಗಳೇ ಹೊರತು ನಮ್ಮವರಾದ ಕಣಾದ, ಸುಶ್ರುತ, ಪತಂಜಲಿ, ಯಾಜ್ಞವಲ್ಕ್ಯರಲ್ಲ! ಸಂಸ್ಕೃತದಲ್ಲಿ ಬರೆದ್ದೆಲ್ಲವೂ ಪರೋಹಿತಶಾಹಿ, ಆ ಕಾರಣಕ್ಕಾಗಿ ನಾವದನ್ನು ವಿರೋಧಿಸಬೇಕು ಎಂದೇ ತಮ್ಮ ವಾದಗಳನ್ನು ಮುಂದಿಡುವ ಈ ಸೋಗಲಾಡಿಗಳಿಗೆ ಅದೇ ಸಂಸ್ಕೃತ ಸಾಹಿತ್ಯವನ್ನು ವಿದೇಶೀಯರು ಕಣ್ಣಿಗೊತ್ತಿ ಭಕ್ತಿಯಿಂದ ಗೌರವದಿಂದ ಅಭ್ಯಸಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಸಂಸ್ಕೃತದ ವ್ಯಾಕರಣವನ್ನು ಕೊಟ್ಟ ಪಾಣಿನಿಯ ಸಾಧನೆಯ ಔನ್ನತ್ಯವನ್ನು ಮೆಚ್ಚಲು ಇನ್ನೂ ನಮಗೆ ಸಾಧ್ಯವಾಗದೇ ಹೋಗಿರುವುದು ಈ ಬಗೆಯ ಕುರುಡುತನದಿಂದಾಗಿಯೇ. ದೇಶದ ಉನ್ನತ ತಂತ್ರಜ್ಞಾನ ಸಂಸ್ಥೆಗಳಲ್ಲಿ ಸಂಸ್ಕೃತ ಲ್ಯಾಬ್‍ಗಳನ್ನು ತೆರೆಯಲಾಗುತ್ತಿದೆ ಎಂಬುದನ್ನು ದೊಡ್ಡ ವಿಪ್ಲವ ಎನ್ನುವಂತೆ ಇತ್ತೀಚೆಗೆ ವಿಜ್ಞಾನ ಲೇಖಕರೊಬ್ಬರು ಬರೆದಿದ್ದರು. ಫೀಲ್ಡ್ ಪದಕ ಪಡೆದ ಪ್ರಸಿದ್ಧ ಗಣಿತಜ್ಞ ಮಂಜುಲ್ ಭಾರ್ಗವ ಅತ್ತ ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದಲ್ಲಿ, “ನಾನು ಗಣಿತದಲ್ಲಿ ಆಸಕ್ತಿವಹಿಸಲು ಮುಖ್ಯ ಪ್ರೇರಣೆಯಾಗಿ ಒದಗಿದ್ದೇ ಸಂಸ್ಕೃತ ಸಾಹಿತ್ಯ. ಅದನ್ನು ಓದುತ್ತ ಓದುತ್ತ ನನ್ನ ಜ್ಞಾನದಿಗಂತ ವಿಸ್ತಾರವಾಯಿತು” ಎಂದು ಹೇಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಸಂಸ್ಕøತ ಓದಿಸುತ್ತಿದ್ದಾರೆ!

ಏಳು ದಶಕಗಳ ಹಿಂದೆ ಭಾರತ ಭೌಗೋಳಿಕವಾಗಿ, ರಾಜಕೀಯವಾಗಿ ಹೇಗೋ ಸ್ವಾತಂತ್ರ್ಯ ಪಡೆಯಿತು ನಿಜ. ಆದರೆ ಭಾರತದ ಮೇಲೆ ನಿಜವಾದ ಅಭಿಮಾನ, ಪ್ರೀತಿ, ಗೌರವಗಳು ಈ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಮೂಡುವ ದಿನವೇ ಆ ಸ್ವಾತಂತ್ರ್ಯಕ್ಕೆ ಬಂದೀತು ನಿಜವಾದ ಅರ್ಥ.

Comments

comments