ಜಿಲೇಬಿ ಕಡತಗಳನ್ನು ಅಂದು ಬದಿಗಿಟ್ಟವರು ಇಂದೇಕೆ ಲಿಂಗಾಯತರನ್ನು ಮುದ್ದಾಡುತ್ತಿದ್ದಾರೆ?

ಹೊಸ ಬೆಳವಣಿಗೆಯೊಂದು ಸದ್ದಿಲ್ಲದೆ ನಡೆದುಹೋಗಿದೆ. “ಲಿಂಗಾಯತ ಸಮುದಾಯಕ್ಕೆ ಹೊಸ ಧರ್ಮದ ಸ್ಥಾನಮಾನ ಕೊಡಬೇಕು ಎಂಬ ಮನವಿಯೇ ಯಾರಿಂದಲೂ ನನಗೆ ಬಂದಿಲ್ಲ. ಹಾಗಿರುವಾಗ ಆ ಕುರಿತು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವ ಪ್ರಶ್ನೆ ಎಲ್ಲಿಂದ ಬರುತ್ತದೆ?” – ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 26ರಂದು ಹೇಳಿದ್ದಾರೆ. ಕೇವಲ ನಾಲ್ಕು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡುತ್ತ ಇದೇ ವ್ಯಕ್ತಿ, ಲಿಂಗಾಯತವನ್ನು ಧರ್ಮ ಎನ್ನುವುದೇ ಸೂಕ್ತ. ಇದರ ಕುರಿತು ನಾನೇ ಖುದ್ದಾಗಿ ಕೇಂದ್ರಕ್ಕೆ ಮನವಿ ಮಾಡಿ, ಧರ್ಮದ ಸ್ಥಾನಮಾನ ಕೊಡಲು ಶಿಫಾರಸ್ಸು ಮಾಡುತ್ತೇನೆ – ಎಂದು ಹೇಳಿದ್ದರು! ರಾಜಕಾರಣಿಗಳ ಒಂದೊಂದು ಮಾತೂ ಒಂದೊಂದು ನಡೆಯೂ ಡಿಜಿಟಲ್ ಮಾಧ್ಯಮದಲ್ಲಿ ರೆಕಾರ್ಡ್ ಆಗುವಂಥ ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ರಾಜಕಾರಣಿಗಳು ಒಂದೆರಡು ದಿನಗಳ ಅಂತರದಲ್ಲಿ ಹೀಗೆ ಪೂರ್ತಿಯಾಗಿ 180 ಡಿಗ್ರಿ ತಿರುಗುವಂಥ ಹೇಳಿಕೆಗಳನ್ನು ಕೊಟ್ಟು ಬಚಾವಾಗುತ್ತಾರೆ ಎಂಬುದೇ ವಿಸ್ಮಯದ ಸಂಗತಿ! ಲಿಂಗಾಯತರು ಹಿಂದೂಗಳ ಕೈಯಡಿಯಲ್ಲಿ ಬದುಕುತ್ತಿದ್ದಾರೆ, ಅವರನ್ನು ಸ್ವತಂತ್ರಗೊಳಿಸಬೇಕು, ಲಿಂಗಾಯತವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಬೇಕು ಎಂದು ಹೇಳಿದ ಮುಖ್ಯಮಂತ್ರಿಗಳು ಒಂದು ವಾರ ಕಳೆಯುವುದಕ್ಕೂ ಮೊದಲೇ, ಆ ವಿಷಯವನ್ನು ಅರ್ಧದಲ್ಲೇ ಕೈ ಬಿಟ್ಟು ತನ್ನ ಪಾಡಿಗೆ ಎದ್ದು ನಡೆದಿದ್ದಾರೆ. ಹುಲ್ಲಿನ ಬಣವೆಗೆ ಬೆಂಕಿಯ ಕಿಡಿ ತಾಗಿಸುವ ಕೆಲಸ ಮಾಡಿಯಾಯಿತು; ಇನ್ನೇನು ಅದು ಧಗಧಗನೆ ಉರಿದು ಬೂದಿಯಾದರೂ ತನ್ನ ಜವಾಬ್ದಾರಿ ಏನೂ ಇಲ್ಲ ಎಂಬುದು ಅವರ ಸದ್ಯದ ಎಣಿಕೆ.

ಅಂದ ಹಾಗೆ, ಲಿಂಗಾಯತ ಎಂಬುದು ಸ್ವತಂತ್ರ ಧರ್ಮ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಗಳ ಮುಂದಿಡುತ್ತಿರುವ ವಾದಗಳು ಸ್ವಾರಸ್ಯಕರವಾಗಿವೆ. ಅವರು ಹೇಳುತ್ತಾರೆ – ಹಿಂದೂ ಧರ್ಮ ನಮ್ಮನ್ನು ಇಷ್ಟು ವರ್ಷ ತುಳಿಯಿತು. ಹಿಂದೂ ಧರ್ಮದಲ್ಲಿ ಮೌಢ್ಯಾಚರಣೆ ಇದೆ; ಮೇಲು-ಕೀಳೆಂಬ ತಾರತಮ್ಯ ವ್ಯವಸ್ಥೆ ಇದೆ; ವಿಗ್ರಹಾರಾಧನೆ ಇದೆ; ಕಂದಾಚಾರ ಸಂಪ್ರದಾಯಗಳಿವೆ. ನಮ್ಮದು ಅತ್ಯಂತ ವೈಜ್ಞಾನಿಕವಾದ ಧರ್ಮ. ಬಸವಣ್ಣ ಸ್ಥಾಪಿಸಿದ ಲಿಂಗಾಯತದಲ್ಲಿ ವಿಗ್ರಹ ಪೂಜೆ ಇಲ್ಲ, ಹೋಮ-ಹವನ ಇಲ್ಲ, ಮೌಢ್ಯ ಆಚರಣೆ ಇಲ್ಲ. ಹಿಂದೂಗಳು ನಮ್ಮನ್ನು ಗುಲಾಮರಂತೆ ನೋಡಿಕೊಳ್ಳುತ್ತಿದ್ದಾರೆ….

ಈ ಹೇಳಿಕೆಗಳಲ್ಲಿ ಯಾವುದಕ್ಕಾದರೂ ಸರಿಯಾದ ತಳಹದಿ ಇದೆಯೇ ಎಂದು ಯೋಚಿಸಿದರೆ ನಿರಾಶೆ ಕವಿಯುತ್ತದೆ. ಲಿಂಗಾಯತರು ಕೂಡ ಹಿಂದೂ ದೇವರುಗಳನ್ನೇ ಆರಾಧಿಸುವವರು. ಶಿವನನ್ನು ಪೂಜೆಪುನಸ್ಕಾರಗಳ ಮೂಲಕ ಒಪ್ಪಿಕೊಂಡವರು. ಶಿವರಾತ್ರಿಯನ್ನು ಅದ್ದೂರಿಯಾಗಿ, ಹಾಗೆಯೇ ಅರ್ಥಪೂರ್ಣವಾಗಿ ಆಚರಿಸುವ ಲಿಂಗಾಯತ ಮಠಗಳಿವೆ. ಇಷ್ಟಲಿಂಗ ಎಂಬುದು ಶಿವಲಿಂಗದ ಪ್ರತೀಕವೇ ಆಗಿರುವುದರಿಂದ ಮತ್ತು ಹಿಂದೂ ಸಂಪ್ರದಾಯಗಳಲ್ಲೂ ಶಿವನನ್ನು ಲಿಂಗರೂಪಿಯಾಗಿಯೇ ಪೂಜಿಸುವ ಕ್ರಮ ಇರುವುದರಿಂದ ಅದನ್ನು “ವಿಗ್ರಹ ಅಲ್ಲ, ಕೇವಲ ಸಂಕೇತ ಮಾತ್ರ” ಎಂದು ಹೇಳಲು ಸಾಧ್ಯವಿಲ್ಲ. ಶಿವ, ಓಂ ಪ್ರಣವಮಂತ್ರ, ವಿಭೂತಿ ಇವೆಲ್ಲ ಸಂಕೇತಗಳು ಹಿಂದೂ ಧರ್ಮದ ಒಳಗೇ ಇರುವಂಥ ಶೈವ ಸಂಪ್ರದಾಯವೇ ಹೊರತು ಪ್ರತ್ಯೇಕ ಧರ್ಮ ಅಲ್ಲ. ಬಸವಣ್ಣ ಮತ್ತು ಅವರ ಅನುಯಾಯಿಗಳು ಒಂದಷ್ಟು ವಚನಗಳಲ್ಲಿ ವೈದಿಕ ಆಚರಣೆಗಳನ್ನು ವಿರೋಧಿಸಿದರೆಂಬ ಕಾರಣಕ್ಕೇ ಅವರು ಹಿಂದೂ ಧರ್ಮವನ್ನು ಧಿಕ್ಕರಿಸಿದರು, ಹೊಸ ಧರ್ಮ ಸ್ಥಾಪಿಸಿದರು ಎಂದು ಹೇಳಲು ಸಾಧ್ಯವೇ? ಹರಿದಾಸ ಸಾಹಿತ್ಯದಲ್ಲಿಯೂ – ಮುಖ್ಯವಾಗಿ ಪುರಂದರದಾಸ ಮತ್ತು ಕನಕದಾಸರ ರಚನೆಗಳಲ್ಲೇ ಎಷ್ಟೋ ಕಡೆ ವೈದಿಕ ಕಂದಾಚಾರಗಳನ್ನು ನೇರಾನೇರವಾಗಿ ಕಠೋರ ಮಾತುಗಳಿಂದ ನಿಂದಿಸಿದ ಉದಾಹರಣೆ ಸಿಗುತ್ತವೆ. ಹಾಗೆಂದ ಮಾತ್ರಕ್ಕೆ ಅವರಿಬ್ಬರೂ ವೈಷ್ಣವ ಸಂಪ್ರದಾಯಕ್ಕೆ ವಿರುದ್ಧವಾಗಿದ್ದರು, ಹೊಸ ಧರ್ಮ ಸ್ಥಾಪನೆಗೆ ಅಡಿಪಾಯ ಹಾಕಿದ್ದರು ಎಂದು ಹೇಳಬಹುದೆ? ಎಲ್ಲಕ್ಕಿಂತ ಮುಖ್ಯವಾದ ಅಂಶ ಏನೆಂದರೆ ಬಸವಣ್ಣ ಆಗಲಿ ಅವರ ಸಮಕಾಲೀನರಾದ ಮಿಕ್ಕಾವ ಶರಣರೇ ಆಗಲಿ ಲಿಂಗಾಯತ ಎಂಬ ಶಬ್ದವನ್ನು ತಮ್ಮ ಯಾವ ವಚನಗಳಲ್ಲೂ ಬಳಸಿಲ್ಲ. ತಾವು ಹೊಸ ಧರ್ಮ ಸ್ಥಾಪನೆ ಮಾಡುತ್ತಿದ್ದೇವೆಂದು ಬಸವಣ್ಣ ಹೇಳಿಕೊಂಡಿಲ್ಲ. ಅಥವಾ ಬಸವಣ್ಣ ಸ್ಥಾಪಿಸಿದ ಹೊಸ ಧರ್ಮದ ಅನುಯಾಯಿಗಳು ತಾವು ಎಂದು ಅವರ ಯಾವ ಸಮಕಾಲೀನ ಶರಣರೂ ಬರೆದಿಲ್ಲ. ಹಾಗಿರುವಾಗ ಇಲ್ಲದೇ ಇರುವ ಸಂಗತಿಯನ್ನು ಐತಿಹಾಸಿಕ ಸತ್ಯ ಎಂದು ಬಿಂಬಿಸುವ ದರ್ದು ಈಗಿನ ರಾಜಕಾರಣಿಗಳಿಗೆ ಯಾಕೆ?

ಲಿಂಗಾಯತವನ್ನು ಸ್ವತಂತ್ರ ಧರ್ಮ ಎಂದು ಬಿಂಬಿಸುವ ಅಗತ್ಯ ಸಿದ್ದರಾಮಯ್ಯನವರಿಗೆ ಯಾಕೆ ಬಂತು ಎಂಬುದು ಪ್ರಜ್ಞಾವಂತ ಕನ್ನಡಿಗರಿಗೆ ಅರ್ಥವಾಗುವ ಸಂಗತಿ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಒಂದೇ ಒಂದು ಸಾಧನೆಯ ಕೆಲಸ ಮಾಡದೆ ಒಟ್ಟಾರೆ ಅವಧಿ ತಳ್ಳಿರುವ ಸರಕಾರಕ್ಕೆ ಈಗ “ಹೇಗಾದರೂ” ಗೆಲ್ಲಬೇಕಾದ ಅನಿವಾರ್ಯತೆ ಬಂದೊದಗಿದೆ. ಕಾಂಗ್ರೆಸ್ಸಿಗೆ ತನ್ನ ಪ್ರಬಲ ಪ್ರತಿಸ್ಪರ್ಧಿ ಭಾಜಪಾ ಮತ್ತು ಭಾಜಪಾದ ಭದ್ರಕೋಟೆ ಉತ್ತರಕರ್ನಾಟಕದ ಲಿಂಗಾಯತ ಸಮುದಾಯ ಎಂಬುದು ಅರ್ಥವಾಗಿದೆ. ಅದೆಷ್ಟು ವರ್ಷಗಳಾದರೂ ಲಿಂಗಾಯತ ಸಮುದಾಯವನ್ನು ಪೂರ್ಣವಾಗಿ ತನ್ನ ತೆಕ್ಕೆಗೆ ಹಾಕಿಕೊಳ್ಳಲಾಗದ ಹತಾಶೆಯೂ ಕಾಂಗ್ರೆಸ್ಸಿಗಿದೆ. ಹಾಗಾಗಿ ಆ ಸಮುದಾಯವನ್ನು ಹೇಗಾದರೂ ಮಾಡಿ ತನ್ನ ಮಡಿಲಿಗೆ ಹಾಕಿಕೊಳ್ಳುವ ಅನಿವಾರ್ಯತೆಗೆ ಅದು ಬಿದ್ದಿದೆ. ಅದರ ಮೊದಲ ಹಂತವಾಗಿ ಅದು ಎಸೆದಿರುವುದು ಒಲೈಕೆಯ ದಾಳ. “ನೀವು ಅನನ್ಯರು. ಹಿಂದೂಗಳಡಿಯಲ್ಲಿ ನೀವು ಗುರುತಿಸಿಕೊಳ್ಳಬೇಕಾಗಿಲ್ಲ. ನಿಮ್ಮನ್ನೆಲ್ಲ ಸ್ವತಂತ್ರ ಧರ್ಮದ ಅನುಯಾಯಿಗಳು ಎಂದು ಹೇಳಿಕೊಳ್ಳಬಹುದು” ಎಂಬ ಭರವಸೆ ಕೊಟ್ಟು ತಾವೆಲ್ಲರೂ ವಿಶೇಷ ಮಾನ್ಯತೆ ಇರುವವರು ಎಂಬ ಭಾವನೆ ಲಿಂಗಾಯತರಲ್ಲಿ ಬರುವಂತೆ ಮಾಡುವುದೇ ಸಿದ್ದರಾಮಯ್ಯನವರ ನಡೆಯ ಉದ್ದೇಶವಾಗಿತ್ತು. ಆದರೆ ಯಾವಾಗ ಆ ಸಮುದಾಯದೊಳಗಿಂದಲೇ ಅದಕ್ಕೆ ಅಪಸ್ವರ ಕೇಳಿಬಂತೋ ಆಗ ಸಿದ್ದರಾಮಯ್ಯ ಕೊಂಚ ಅಧೀರರಾದರು. ಲಿಂಗಾಯತರಲ್ಲೇ ಅನೇಕರು, “ನಾವು ಹಿಂದೆಯೂ ಹಿಂದೂಗಳಾಗಿದ್ದೆವು. ಮುಂದೆಯೂ ಆಗಿರುತ್ತೇವೆ. ನಾವೆಲ್ಲರೂ ಹಿಂದೂ ಎಂಬ ಬೃಹತ್ ವೃಕ್ಷದ ರೆಂಬೆಕೊಂಬೆಗಳು ಮಾತ್ರ. ನಾವೇ ಪ್ರತ್ಯೇಕ ಮರ ಎಂಬುದಕ್ಕೆ ಅರ್ಥವಿಲ್ಲ” ಎಂಬ ಮಾತುಗಳನ್ನು ಹೇಳತೊಡಗಿದಾಗ ಸಿದ್ದರಾಮಯ್ಯನವರು, ಆ ಸಮುದಾಯವನ್ನು ಒಗ್ಗೂಡಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಒಡೆದು ಚಂದವನ್ನಾದರೂ ನೋಡಬೇಕು ಎಂಬ ಹಠಕ್ಕೆ ಬಿದ್ದರು. ತನಗೆ ಉಪಯೋಗವಾಗದೇ ಇದ್ದರೆ ಅದು ಬಿಜೆಪಿಗೂ ಉಪಯೋಗ ಆಗಬಾರದು ಎಂಬುದು ಕಾಂಗ್ರೆಸ್‍ನ ಒಳತೋಟಿಯಾಯಿತು. ಏನು ಯೋಚಿಸುತ್ತಾರೋ ಅದನ್ನು ಶತಾಯಗತಾಯ ಮಾಡಿಮುಗಿಸಬಲ್ಲ ಛಲದಂಕಮಲ್ಲ ಸಿದ್ದರಾಮಯ್ಯ ಎಂಬುದು ಸಾಧಾರಣ ಎಲ್ಲರಿಗೂ ಗೊತ್ತಿದೆ. ಲಿಂಗಾಯತವೆಂಬ ಬೃಹತ್ ಕೋಟೆಯ ಅಲ್ಲಲ್ಲಿ ಒಡಕೆಬ್ಬಿಸಬೇಕೆಂಬ ಅವರ ಯೋಚನೆಯಂತೂ ಈಗ ಒಂದು ಹಂತಕ್ಕೆ ಸಾಧ್ಯವಾಗಿದೆ.

ಇಂಥ ಸಂದರ್ಭದಲ್ಲೇ ಅವರು ಈಗ ಹೊಸ ಕಾಯಿ ಒಗೆದಿದ್ದಾರೆ. ನನ್ನ ಮುಂದೆ ಯಾವ ಮನವಿಗಳೂ ಬಂದಿಲ್ಲ. ಹಾಗಿರುವಾಗ ನಾನು ಯಾವ ರೀತಿಯಲ್ಲಿ ಧರ್ಮದ ಮಾನ್ಯತೆ ಕೊಡಿರೆಂದು ಶಿಫಾರಸ್ಸು ಮಾಡಲಿ ಎಂಬ ಮಾತುಗಳನ್ನು ಆಡಿದ್ದಾರೆ. ಪಟಾಕಿ ಅಂಗಡಿಯಲ್ಲಿ ಕಿಡಿ ಹಾರಿಸಿ ನಾನೇನೂ ಮಾಡಿಯೇ ಇಲ್ಲ ಎನ್ನುವ ಬುದ್ಧಿವಂತಿಕೆ ಇದು! ಸ್ವತಃ ವಕೀಲರಾಗಿರುವ ಸಿದ್ದರಾಮಯ್ಯನವರಿಗೆ ಕಾನೂನು ಧರ್ಮದ ವಿಷಯದಲ್ಲಿ ಏನು ಹೇಳುತ್ತದೆ ಎಂಬುದು ಮೊದಲು ಗೊತ್ತಿರಲಿಲ್ಲವೇ? ಕಳೆದ ಐವತ್ತು ವರ್ಷಗಳಲ್ಲಿ ಭಾರತದಲ್ಲಿ ಯಾವುದೇ ಪಂಗಡಕ್ಕೆ ಹೊಸ ಧರ್ಮ ಎಂಬ ಸ್ಥಾನಮಾನ ಸಿಕ್ಕಿದೆಯೇ? ಕಾನೂನಿನ ಅಧಿಕೃತ ಮುದ್ರೆ ಒತ್ತಿ ಹೊಸ ಧರ್ಮವನ್ನು ಸ್ಥಾಪಿಸುವುದು ಸಾಧ್ಯವಿದೆಯೇ? ಮುಖ್ಯಮಂತ್ರಿಗಳು ಹೊಸ ಧರ್ಮದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಿದರು ಎಂದೇ ಇಟ್ಟುಕೊಳ್ಳೋಣ, ಅದು ಕೇಂದ್ರದಲ್ಲಿ ರಾತ್ರಿಬೆಳಗಾಗುವುದರಲ್ಲಿ ನಡೆದುಹೋಗುವ ಪ್ರಕ್ರಿಯೆಯೆ? ಮೊದಲು ಕೆಳಮನೆಯಲ್ಲಿ ಚರ್ಚೆಗೆ ಬರಬೇಕು, ನಂತರ ಮೇಲ್ಮನೆಯಾದ ರಾಜ್ಯಸಭೆಯ ಆಂಗೀಕಾರದ ಮುದ್ರೆ ಬೀಳಬೇಕು. ನಂತರ ರಾಷ್ಟ್ರಪತಿಗಳ ಅಂಕಿತಕ್ಕೆ ಹೋಗಬೇಕು. ಇಷ್ಟಾಗಿಯೂ ಆ ಸಮುದಾಯವನ್ನು ಹೊಸ ಧರ್ಮ ಎಂದು ಒಪ್ಪಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಯಾರಾದರೊಬ್ಬರು ಆ ಸಮುದಾಯದ ವ್ಯಕ್ತಿ ಕೋರ್ಟಿನಲ್ಲಿ ಅರ್ಜಿ ಹಾಕಿಬಿಟ್ಟರೆ ಮುಗಿಯಿತು, ಧರ್ಮ ಹೌದೋ ಅಲ್ಲವೋ ಎಂಬ ಚರ್ಚೆ ಕೋರ್ಟಿನಲ್ಲಿ ವರ್ಷಗಟ್ಟಲೆ ನಡೆಯುತ್ತದೆ. ಧರ್ಮದ ಮಾನ್ಯತೆ ಸಿಕ್ಕಿತು ಎಂದೇ ಇಟ್ಟುಕೊಳ್ಳೋಣ; ಆ ಧರ್ಮಕ್ಕೆ ಪ್ರತ್ಯೇಕ ವಿವಾಹ ಕಾನೂನು, ಆಸ್ತಿಹಂಚಿಕೆ ಕಾನೂನು ಲಗಾವಾಗುತ್ತವೆಯೇ? ಖಂಡಿತ ಇಲ್ಲ! ಹಾಗಿರುವಾಗ ಸಿದ್ದರಾಮಯ್ಯನವರು ತಾನೇ ಮುಂದಾಗಿ ಲಿಂಗಾಯತಕ್ಕೆ ಧರ್ಮದ ಮಾನ್ಯತೆ ಕೊಡಿಸುವ ವಿಚಾರ ಮಾತಾಡಿದ್ದು ಏಕೆ? ರಾಜಕೀಯ ಧ್ರುವೀಕರಣದ, ಅವಕಾಶವಾದಿತನದ, ಶತ್ರುಕೋಟೆಯನ್ನು ಒಡೆಯುವ ಹುನ್ನಾರವಲ್ಲದೆ ಇಲ್ಲಿ ಬೇರೇನು ಲೆಕ್ಕಾಚಾರವಿದೆ?

ಲಿಂಗಾಯತವು ಪ್ರತ್ಯೇಕ ಧರ್ಮವಾಗಿ ರೂಪು ಪಡೆಯಬೇಕು ಎಂದು ಕೇವಲ ಭಾವನಾತ್ಮಕ ನೆಲೆಯಿಂದ ಯೋಚಿಸುತ್ತಿರುವವರಿಗೆ ವಿಷಯ ಸ್ಪಷ್ಟವಾಗುವಂತೆ ಕಾನೂನಿನ ತೊಡಕುಗಳ ಬಗ್ಗೆ ಇನ್ನೊಮ್ಮೆ ಸರಳವಾಗಿ ವಿವರಿಸುತ್ತೇನೆ, ಕೇಳಿ. ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳಿದ್ದರೂ ಅದು ಭಾರತದ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಬೇಕಾದ ಸಂದರ್ಭದಲ್ಲಿ ಏನಾಗುತ್ತದೆ ನೋಡೋಣ. ವಿವಾಹ ಅಥವಾ ವಿಚ್ಛೇದನಕ್ಕೆ ಸಂಬಂಧಿಸಿದ ವ್ಯಕ್ತಿ/ವ್ಯಕ್ತಿಗಳು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಯಹೂದಿ – ಈ ನಾಲ್ಕು ಸಮುದಾಯಗಳಲ್ಲಿ ಯಾವೊಂದಕ್ಕೂ ಸೇರಿದವರಲ್ಲವಾದರೆ ಅವರ ಪ್ರಕರಣವನ್ನು ನ್ಯಾಯಾಲಯ ಇತ್ಯರ್ಥಪಡಿಸುವುದು “ಹಿಂದೂ ವಿವಾಹ ಅಧಿನಿಯಮ, 1955” – ಇದನ್ನು ಅನುಸರಿಸಿ. ಅಂದರೆ ಭಾರತದಲ್ಲಿ ಮೇಲೆ ಹೇಳಿದ ನಾಲ್ಕು ಮತೀಯರ ಹೊರತಾಗಿ ಬೇರೆ ಯಾರೇ ಇದ್ದರೂ – ಅದು ಲಿಂಗಾಯತ, ವೀರಶೈವ, ಆರ್ಯಸಮಾಜ, ಬ್ರಹ್ಮಸಮಾಜ, ಬೌದ್ಧ, ಜೈನ, ಸಿಖ್ – ಯಾರೇ ಆಗಿರಲಿ, ಅವರೆಲ್ಲರಿಗೂ ಅನ್ವಯವಾಗುವುದು “ಹಿಂದೂ ವಿವಾಹ ಅಧಿನಿಯಮ, 1955″ವೇ! ಹಾಗೆಯೇ, ದತ್ತು ವಿಚಾರದಲ್ಲಿ ಏನಾದರೂ ತಕರಾರುಗಳೆದ್ದಾಗ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಆಗ ವ್ಯಕ್ತಿಗಳು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಅಥವಾ ಯಹೂದಿ ಅಲ್ಲವಾದರೆ, ಅವರು ಯಾರೇ ಆಗಿರಲಿ, ಅವರ ಪ್ರಕರಣವನ್ನು ನ್ಯಾಯಾಲಯ ಇತ್ಯರ್ಥಪಡಿಸುವುದು “ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ, 1956” – ಇದನ್ನು ಅನುಸರಿಸಿ. ಯಾವುದಾದರೂ ವ್ಯಕ್ತಿ ಸತ್ತಾಗ ಆತನ/ಆಕೆಯ ಆಸ್ತಿ ಒಂದೋ ಉಯಿಲಲ್ಲಿ ಯಾರ ಹೆಸರಿಗೆ ಸೂಚಿಸಲಾಗಿದೆಯೋ ಅವರಿಗೆ ಹೋಗುತ್ತದೆ; ಇಲ್ಲವಾದರೆ ಮಕ್ಕಳಿಗೆ ಹಸ್ತಾಂತರವಾಗುತ್ತದೆ. ವ್ಯಕ್ತಿ ಬದುಕಿದ್ದಾಗ ಕೂಡ ತನ್ನ ಆಸ್ತಿಯ ಹಂಚಿಕೆ ಮಾಡಬಹುದು. ಈ ಎಲ್ಲ ಬಗೆಯ ಆಸ್ತಿ ವಿಚಾರದಲ್ಲಿಯೂ ಸಮಸ್ಯೆಗಳೆದ್ದಾಗ, ವ್ಯಕ್ತಿ ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಅಥವಾ ಯಹೂದಿ – ಈ ನಾಲ್ಕು ಮತಗಳಿಗೆ ಸೇರಿದವನಲ್ಲವಾದರೆ ಆತನ ಆಸ್ತಿ ವಿಚಾರವನ್ನು ನ್ಯಾಯಾಲಯ ಇತ್ಯರ್ಥಪಡಿಸುವುದು “ಹಿಂದೂ ವಾರಸಾ (ಉತ್ತರಾಧಿಕಾರ) ಅಧಿನಿಯಮ, 1956” – ಇದನ್ನು ಅನುಸರಿಸಿ. ಅಂದರೆ ಭಾರತದಲ್ಲಿರುವ, ಭಾರತೀಯನೆಂದು ಗುರುತಿಸಿಕೊಂಡಿರುವ ಯಾವುದೇ ವ್ಯಕ್ತಿ ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಅಥವಾ ಯಹೂದಿ – ಈ ನಾಲ್ಕರಲ್ಲಿ ಯಾವ ಮತಕ್ಕೂ ಸೇರದವನಲ್ಲವಾದರೆ ಆತನಿಗೆ ನ್ಯಾಯಾಲಯದಲ್ಲಿ ಅನ್ವಯವಾಗುವುದು ಹಿಂದೂಗಳೆಂದು ಗುರುತಿಸಿಕೊಂಡವರಿಗೆ ಅನ್ವಯವಾಗುವ ಕಾನೂನೇ! ವಿಷಯ ಹೀಗಿರುವಾಗ ಲಿಂಗಾಯತ ಹೊಸ ಧರ್ಮ ಎಂದು ಗುರುತಿಸಿಕೊಂಡು ಪಡೆಯುವ ಹೆಚ್ಚುಗಾರಿಕೆಯಾದರೂ ಯಾವುದು? ಕಾನೂನಿನ ಯಾವುದೇ ಜ್ಞಾನವಿಲ್ಲದೆ ಕೆಲವೊಂದು ಮಂದಿ ರಾಜಕೀಯ ಪುಢಾರಿಗಳ ಮಾತಿನ ಪುಂಗಿಗೆ ತಕ್ಕಂತೆ ತಮ್ಮ ಹೆಡೆ ಆಡಿಸುತ್ತ ಹಾಸ್ಯಾಸ್ಪದರಾಗಿದ್ದಾರೆ ಎಂದಷ್ಟೇ ಹೇಳಬಹುದು. ಹಿಂದೊಮ್ಮೆ ಇದೇ ಕಾಂಗ್ರೆಸ್ ಸರಕಾರ, ಇದೇ ಮುಖ್ಯಮಂತ್ರಿ ಗೌಡ, ಲಿಂಗಾಯತ ಮತ್ತು ಬ್ರಾಹ್ಮಣ – ಈ ಮೂರು ಸಮುದಾಯಗಳಿಗೆ ಸಂಬಂಧಪಟ್ಟವರ ಕಡತಗಳನ್ನು ಮುಟ್ಟುವುದಿಲ್ಲ ಎಂದು ಹೇಳಿದ್ದರೆನ್ನಲಾದ ಸುದ್ದಿಯನ್ನು ನೀವೆಲ್ಲ ಅಷ್ಟು ಬೇಗ ಮರೆತಿದ್ದೀರಾ? ವೀರೇಂದ್ರ ಪಾಟೀಲರಿಗೆ 1990ರಲ್ಲಿ ಬ್ರೂಟಸ್‍ನಂತೆ ಇರಿದ ಪಕ್ಷ ಯಾವುದು, ನೆನಪು ಮಾಡಿಕೊಳ್ಳಿ!

ಈ ಸಂದರ್ಭದಲ್ಲಿ ಕನ್ನಡದ ಜನ ಎಚ್ಚೆತ್ತುಕೊಳ್ಳಬೇಕಿರುವುದು ಕಾಂಗ್ರೆಸ್‍ನ ಒಡೆದು ಆಳುವ ನೀತಿಯ ಬಗ್ಗೆ. ಹೊಸ ಧರ್ಮ ಎಂದು ಘೋಷಣೆ ಮಾಡಿಸುವೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರು ಇದುವರೆಗೆ ಶಾಂತವಾಗಿದ್ದ ಕೊಳದಲ್ಲಿ ಕಲ್ಲೊಗೆದು ಅಲೆಗಳೇಳುವಂತೆ ಮಾಡಿದ್ದಾರೆ. ಇವೆಲ್ಲದರ ಮಧ್ಯೆ ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂಬ ಮಾತುಗಳೂ ಎದ್ದಿವೆ. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಕೆಲವು ದಿನಗಳ ಹಿಂದೆ ತುಂಗಭದ್ರಾ ನದಿಗೆ ಪೂಜೆ ಮಾಡಿ ಬಾಗಿನ ಅರ್ಪಿಸಿದ್ದರು. ಇಷ್ಟಲಿಂಗಕ್ಕಲ್ಲದೆ ಬೇರಾವುದಕ್ಕೂ ಪೂಜೆ, ಆರಾಧನೆ ಮಾಡುವುದಿಲ್ಲ ಎನ್ನುವ ಪಾಟೀಲರೇ ಖುದ್ದುನಿಂತು ನದಿಗೆ ಬಾಗಿನ ಅರ್ಪಿಸಿ ಪೂಜೆ ಮಾಡಿದರಲ್ಲ? ನಮ್ಮ ಸುತ್ತಮುತ್ತಲಿನ ನದಿ, ಕೆರೆ, ಪರ್ವತ, ವೃಕ್ಷಗಳಿಗೆ ಪೂಜೆಯ ಮೂಲಕ ನಮ್ಮ ಕೃತಜ್ಞತೆ ಅರ್ಪಿಸುವುದು ಹಿಂದೂ ಸಂಸ್ಕೃತಿಯ ಭಾಗವೇ ತಾನೇ? ನಮ್ಮ ಧರ್ಮದಲ್ಲಿ ವಿಗ್ರಹಾರಾಧನೆಯೇ ಇಲ್ಲ ಎನ್ನುವ ಪಾಟೀಲರು ಸ್ವತಃ ಬಸವೇಶ್ವರರ ಮೂರ್ತಿಯನ್ನು ಜನ ಪೂಜಿಸುವುದನ್ನು ಅಲ್ಲಗಳೆಯುತ್ತಾರೆಯೇ? ಲಿಂಗಾಯತವು ಹೊಸ ಧರ್ಮ, ಸ್ವತಂತ್ರ ಧರ್ಮ, ಅದು ಹಿಂದೂ ಧರ್ಮದಿಂದ ಪ್ರತ್ಯೇಕವಾದದ್ದು ಎನ್ನುವ ಸಿದ್ಧಾಂತವನ್ನು ಪ್ರತಿಷ್ಠಾಪಿಸಲಿಕ್ಕಾಗಿಯೇ ಈಗ ಇವರು ಹಲವು ಹೊಸ ಆಚರಣೆಗಳನ್ನು ಜಾರಿಗೆ ತರಬೇಕಾಗಿದೆ; ಹಲವು ಹಳೆ ಆಚರಣೆ-ಸಂಪ್ರದಾಯಗಳನ್ನು ಕೈ ಬಿಡಬೇಕಾಗಿದೆ. ಇಂಥ ಗೊಂದಲಗಳು ಈಗ ನಮ್ಮ ಸಮಾಜಕ್ಕೆ ನಿಜವಾಗಿಯೂ ಬೇಕಾಗಿದೆಯೇ? ಲಿಂಗಾಯತರು ಹಿಂದೂ ಧರ್ಮದ ಒಳಗೆ ಗುರುತಿಸಿಕೊಳ್ಳುತ್ತಾರೋ ಇಲ್ಲವೋ ಎನ್ನುವುದು ಸದ್ಯದ ಪ್ರಶ್ನೆಯಲ್ಲ. ಆದರೆ ಸದ್ಯದ ರಾಜಕೀಯ ಲಾಭಗಳನ್ನಷ್ಟೇ ನೋಡುತ್ತಿರುವ ಪುಢಾರಿಗಳ ಮಾತು ನಂಬಿ ಲಿಂಗಾಯತ ಸಮುದಾಯ ಮುಂದುವರಿದರೆ ಅತ್ತ ಅದೂ ಇಲ್ಲ ಇತ್ತ ಇದೂ ಇಲ್ಲ ಎಂಬಂಥ ತ್ರಿಶಂಕು ಸ್ಥಿತಿಯಲ್ಲಿ ಡೋಲಾಯಮಾನರಾಗಬೇಕಾಗುತ್ತದೆ. ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯನವರಿಗೆ ಲಿಂಗಾಯತ ಸಮುದಾಯವನ್ನು ಧರ್ಮವಾಗಿ ನೋಡಬೇಕೋ ಬೇಡವೋ ಎಂಬ ಪ್ರಶ್ನೆ ಅಪ್ರಸ್ತುತವಾಗುತ್ತದೆ ಎಂಬುದು ಸದ್ಯದ ಲಿಂಗಾಯತ ಸಮುದಾಯಕ್ಕೆ ತಿಳಿದಿದ್ದರೆ ಸಾಕು.

(ಕಾನೂನಿನ ಅಂಶಗಳನ್ನು ತಿಳಿಸಿಕೊಟ್ಟ ಪಿ.ಜೆ. ರಾಘವೇಂದ್ರ, ನ್ಯಾಯವಾದಿಗಳು, ಮೈಸೂರು – ಇವರಿಗೆ ಲೇಖಕ ಕೃತಜ್ಞ)

Comments

comments