ಈ ಹಿಂದೂವಿರೋಧಿ ಸರಕಾರವನ್ನು ಚುನಾವಣೆಯಲ್ಲಿ ತಿರಸ್ಕರಿಸದೆ ಹೋದರೆ ಮುಂದಿನ ವರ್ಷದ ಗಣೇಶ ವಿಸರ್ಜನೆಗೆ ಮನೆ ತೊಟ್ಟಿಯೇ ಗತಿಯಾದೀತು!

ಭಾರತದಲ್ಲಿ ಸಾವಿರಾರು ವರ್ಷಗಳಿಂದ ನೆಲೆಯೂರಿ ಬಂದಿರುವ ಸಮುದಾಯವನ್ನು ಹಿಂದೂ ಧರ್ಮ ಎಂದು ಗುರುತಿಸುವುದಾದರೆ ಅದರ ಸಾಂಸ್ಕೃತಿಕ, ಸಾಮೂಹಿಕ ಏಕತೆಯ ತಾಯಿಬೇರು ಇರುವುದು ಆಚರಣೆಗಳಲ್ಲಿ, ಸಂಪ್ರದಾಯಗಳಲ್ಲಿ, ಹಬ್ಬಹರಿದಿನಗಳಲ್ಲಿ. ಬಹುಶಃ ಹಿಂದೂಗಳಲ್ಲಿ ಇರುವಷ್ಟು ಹಬ್ಬಗಳು ಜಗತ್ತಿನ ಯಾವ ಧರ್ಮ, ರಿಲಿಜನ್‍ನಲ್ಲಿ ಕೂಡ ಇಲ್ಲ. ಒಂದೊಂದು ಹಬ್ಬವೂ ಒಂದೊಂದು ಸೆಲಬ್ರೇಷನ್. ಉತ್ಸವ. ಖುಷಿ-ಸಂತೋಷ-ಸಂಭ್ರಮ. ಮನೆಮಂದಿಯೆಲ್ಲ ಒಟ್ಟಾಗಲು, ಪಾಯಸ-ಒಬ್ಬಟ್ಟು ಮಾಡಿ ತಿಂದು ಖುಷಿಪಡಲು ಸಿಗುವ ಅವಕಾಶ. ಇಡೀ ಸಮಾಜವೇ ಒಂದಾಗುವ ಅಪೂರ್ವ ಕ್ಷಣ ಅದು. ಹಿಂದೂ ಸಮುದಾಯದಲ್ಲಿ ಆಚರಿಸಲ್ಪಡುವ ಪ್ರತಿ ಹಬ್ಬವೂ ತನ್ನದೇ ಆದ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ. ಯುಗಾದಿ, ದೀಪಾವಳಿ, ಹೋಳಿ, ನಾಗರ ಪಂಚಮಿ, ಚತುರ್ಥಿ, ಜನ್ಮಾಷ್ಟಮಿ, ರಾಮ ನವಮಿ, ದಸರಾ, ನವರಾತ್ರಿ – ಪ್ರತಿಯೊಂದು ಹಬ್ಬವನ್ನೂ ನೋಡಿ; ಅದಕ್ಕೆ ಅದರದ್ದೇ ಆದ ಸ್ಪೆಷಾಲಿಟಿ ಇದೆ; ಭಿನ್ನತೆ ಇದೆ; ಅನನ್ಯತೆ ಇದೆ.

ಹಾಗಂತ ಹಿಂದೂ ಸಮಾಜದಲ್ಲಿ ಹಬ್ಬವನ್ನು ಹೀಗೆಯೇ ಆಚರಿಸಬೇಕೆಂಬ ಕಟ್ಟುನಿಟ್ಟಿನ ಕಟ್ಟುಪಾಡುಗಳೇನೂ ಇಲ್ಲ. ಸಮಾಜ, ಸಂದರ್ಭ, ಸನ್ನಿವೇಶಗಳಿಗೆ ತಕ್ಕಂತೆ ಹಬ್ಬಗಳ ಆಚರಣೆಯ ಕ್ರಮಗಳು ಬದಲಾಗುತ್ತ ಬಂದಿವೆ. ಹೊಸ ಹಬ್ಬಗಳನ್ನು ಯಾವ ಮುಜುಗರವಿಲ್ಲದೆ ಹಿಂದೂ ಧರ್ಮ ಸ್ವೀಕರಿಸಿ ತನ್ನದಾಗಿಸಿಕೊಂಡಿದೆ. ಕಂದಾಚಾರ ಅನ್ನಿಸಿದ ಅದೆಷ್ಟೋ ಹಳೆ ಕ್ರಮಗಳನ್ನು ಅದು ಬಿಟ್ಟಿದೆ, ಇಲ್ಲವೇ ಹೊಸ ಬಗೆಯಲ್ಲಿ ಮರುನಿರೂಪಿಸಿಕೊಂಡಿದೆ. ಅಂಥ ಹಬ್ಬಗಳ ಸಾಲಿನಲ್ಲಿ ನಮಗೆ ಕಾಣಿಸುವುದು ರಕ್ಷಾಬಂಧನ ಮತ್ತು ಗಣೇಶ ಚತುರ್ಥಿ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರ ಕೈ ಭಾರತೀಯರ ಮೇಲೆ ಬಿಗಿಯಾಯಿತು. ಭಾರತೀಯ ಸ್ವಾತಂತ್ರ್ಯ ಯೋಧರ ಕೊರಳಪಟ್ಟಿ ಹಿಡಿದು ಪರಂಗಿಗಳು ಜೈಲುಭರ್ತಿ ಮಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯರು ಗುಂಪುಗೂಡುವಂತಿಲ್ಲ; ಯಾವುದೇ ರಾಜಕೀಯ ಸಭೆ ನಡೆಸುವಂತಿಲ್ಲ; ಮಾರಕಾಸ್ತ್ರಗಳನ್ನು – ಅವು ಸ್ವರಕ್ಷಣೆಗೇ ಆದರೂ – ಹೊಂದುವಂತಿಲ್ಲ ಎಂಬ ನೂರೆಂಟು ನಿಬಂಧನೆಗಳು ಭಾರತೀಯರ ತಲೆಗೆ ಸುತ್ತಿಕೊಂಡವು. ಹಿಂದೂ ಸಮುದಾಯದ ಒಳಗೇ ಇದ್ದ ಹಲವು ಜಾತಿ ತಾರತಮ್ಯದ ಸಮಸ್ಯೆಗಳಿಂದಾಗಿ ತಿಲಕರಂಥ ದೂರದೃಷ್ಟಿಯುಳ್ಳ ರಾಷ್ಟ್ರೀಯವಾದಿ ಚಿಂತಕರಿಗೆ ಬಿಳಿಯರ ವಿರುದ್ಧ ಸೆಣಸುವುದಕ್ಕೆ ಹಿಂದೂಗಳನ್ನು ತಯಾರು ಮಾಡುವುದಂತಿರಲಿ; ಹಿಂದೂಗಳನ್ನು ಮೊದಲು ಜಾತಿಭೇದ ಮರೆಸಿ ಒಗ್ಗೂಡಿಸುವುದೇ ಮೊದಲ ಸವಾಲಾಗಿತ್ತು. ಹಿಂದೂಗಳು ಒಟ್ಟಾಗಬೇಕು; ತರತಮದ ಮೆಟ್ಟಿಲುಗಳಿಂದ ಇಳಿದು ಸಮಾನ ವೇದಿಕೆಯಲ್ಲಿ ಕಾಣಿಸಿಕೊಳ್ಳುವಂತಾಗಬೇಕು; ಮತ್ತು ಆ ಮೂಲಕ ಅವರೆಲ್ಲರೂ ತಮ್ಮ ವೈಮನಸ್ಯಗಳನ್ನು ಬದಿಗಿಟ್ಟು ಪರಂಗಿಗಳನ್ನು ದೇಶದಿಂದ ಹೊರಗೋಡಿಸುವ ದೊಡ್ಡ ಕೆಲಸಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವಂತಾಗಬೇಕು… ಈ ಎಲ್ಲ ಉದ್ದೇಶಗಳನ್ನು ಸಾಧಿಸುವುದಾದರೂ ಹೇಗೆ ಎಂದು ಯೋಚಿಸಿದ ತಿಲಕರ ಕಣ್ಮುಂದೆ ಕಾಣಿಸಿದ್ದು ಏಕದಂತ ವಕ್ರತುಂಡ ಗಣಪ! ಗಣೇಶ, ಸಮಾಜದ ಎಲ್ಲ ವರ್ಗಗಳಿಗೂ ಮೆಚ್ಚಿಕೆಯಾಗುವ ಅಜಾತಶತ್ರು ವಿಶ್ವಪ್ರಿಯ ದೇವತೆ. ಯಾವುದೇ ಕೆಲಸದ ಪ್ರಾರಂಭಕ್ಕೆ ಆತನ ಪೂಜೆ ಆಗಲೇಬೇಕೆಂಬುದು ಸಮಾಜದ ಕಟ್ಟಕಡೆಯ ಶ್ರೀಸಾಮಾನ್ಯನ ನಂಬಿಕೆ ಕೂಡ. ಅಂಥ ವಿನಾಯಕನನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೊಂದು ಹೊಸ ಆಯಾಮವಾಗುವಂತೆ ರೂಪಿಸುವುದು ಬಿಡಿ, ಯೋಚಿಸುವುದು ಕೂಡ ಕ್ರಾಂತಿಕಾರಕವಲ್ಲದೇ ಮತ್ತೇನು! ಬಾಲಗಂಗಾಧರ ತಿಲಕರ ಬುದ್ಧಿಮತ್ತೆಯಿಂದಾಗಿ ಗಣೇಶ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ. ಹಿಂದೂ ಸಮಾಜವನ್ನು ಒಗ್ಗೂಡಿಸಲು ಪ್ರೇರಕ ಶಕ್ತಿಯಾಗಿ ಒದಗಿಬಂದ. ಬಿಡಿಬಿಡಿಯಾಗಿ ಹರಡಿಕೊಂಡ ಹಿಟ್ಟಿನಂತಿದ್ದ ಹಿಂದೂ ಸಮಾಜವನ್ನು ಉಂಡೆಗಟ್ಟಿ ಒಗ್ಗೂಡಿಸಲು ಬೆಲ್ಲದ ಪಾಕವಾಗಿ ಬಂದವನು ಈ ಲಂಬೋದರ ಲಕುಮಿಕರ! 1893ರಿಂದ ಇಂದಿನವರೆಗೆ ಭಾರತೀಯ ಸಮಾಜದ ಐಕ್ಯಕ್ಕೆ ಗಣೇಶ ಕೊಟ್ಟಿರುವ ಕೊಡುಗೆ ಕಮ್ಮಿಯದಲ್ಲ. ಪರಕೀಯರು ದೇಶ ಬಿಟ್ಟುಹೋದರೇನಂತೆ, ಸಂಪೂರ್ಣ ಸ್ವರಾಜ್ಯ ಬಂದರೇನಂತೆ, ನಾವು ಗಣೇಶನನ್ನೂ ಆತನ ಸಾರ್ವಜನಿಕ ಆರಾಧನೆಯನ್ನೂ ಬಿಡದೆ ಉಳಿಸಿಕೊಂಡಿದ್ದೇವೆ; ಮಾತ್ರವಲ್ಲ ಅವನ್ನು ಹಿಂದೂ ಧರ್ಮದ ಒಂದು ಭಾಗವೇ ಆಗಿ ಮಾಡಿಬಿಟ್ಟಿದ್ದೇವೆ. ನಿಮ್ಮ ಹಬ್ಬವನ್ನು ಹೀಗೇ ಆಚರಿಸಬೇಕು ಎಂಬ ಯಾವ ಹೋಲಿಬುಕ್ಕಿನ ಕಟ್ಟಪ್ಪಣೆಗೊಡ್ಡಿಕೊಳ್ಳದ ಹಿಂದೂ ಸಮಾಜ ಲೋಕಹಿತಕ್ಕೊದಗುವ ಯಾವ ಅಂಶವನ್ನಾದರೂ ತನ್ನ ಭಾಗವಾಗಿ ಮಾಡಿಕೊಳ್ಳುತ್ತದೆಂಬುದಕ್ಕೆ ಸಾರ್ವಜನಿಕ ಗಣೇಶೋತ್ಸವ ಒಂದು ಸಾಕ್ಷಿ.

ಇಂಥ ಗಣೇಶನ ಹಬ್ಬಕ್ಕೆ ಈಗ ಎರಡನೇ ಸಲ ಮತ್ತೆ ಹಿಂದೂ ಸಮಾಜವನ್ನು ಒಗ್ಗೂಡಿಸುವ ಪ್ರೇರಕಶಕ್ತಿಯಾಗಿ ಒದಗಿಬರುವ ಭಾಗ್ಯ ಬಂದಿದೆ. ಹತ್ತೊಂಬತ್ತನೆ ಶತಮಾನದಲ್ಲಿ ಪರಂಗಿಗಳನ್ನು ದೇಶದಿಂದೋಡಿಸುವ ಕೆಲಸಕ್ಕೆ ಬಳಕೆಯಾದ ಗಣಪ ಈಗ ದೇಶದೊಳಗಿನ ಹಿಂದೂ ವಿರೋಧಿ ಶಕ್ತಿಗಳನ್ನು ಮಟ್ಟಹಾಕಲು ಮತ್ತೆ ತನ್ನ ಚಾಟಿ-ಈಟಿಗಳನ್ನು ಹೊರತೆಗೆಯಬೇಕಾಗಿದೆ. ಅದಕ್ಕೆ ಕಾರಣವಾಗಿರುವುದು ಕರ್ನಾಟಕದ ಹಿಂದೂವಿರೋಧಿ ಕಾಂಗ್ರೆಸ್ ಸರಕಾರದ ಕೆಲವು ನೀತಿಗಳು. ಈ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ ಹೆಚ್ಚು ಜನರನ್ನು ಸೇರಿಸುವಂತಿಲ್ಲ; ಅದ್ದೂರಿಯಾಗಿ ಕಾರ್ಯಕ್ರಮ ನಡೆಸುವಂತಿಲ್ಲ; ಗಣೇಶನ ಮೂರ್ತಿಗಳನ್ನು ಇಂತಿಂಥಾ ಸ್ಥಳಗಳಲ್ಲೇ ವಿಸರ್ಜನೆ ಮಾಡಬೇಕು; ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಗಣೇಶೋತ್ಸವದ ಮೆರವಣಿಗೆ “ಪ್ರಾರ್ಥನಾ ಮಂದಿರ”ಗಳಿರುವ ದಾರಿಯಲ್ಲಿ ಸಾಗುವಂತಿಲ್ಲ ಎಂಬ ಕಟ್ಟಾಜ್ಞೆಯನ್ನು ಸರಕಾರ ವಿಧಿಸಿದೆ. ಗಣೇಶನ ಮೂರ್ತಿಯ ಎತ್ತರವನ್ನು ಕೂಡ ಸರಕಾರವೇ ನಿಷ್ಕರ್ಷೆ ಮಾಡುತ್ತದಂತೆ. ನಿರ್ದಿಷ್ಟ ಎತ್ತರವನ್ನು ಮೀರಿದ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತಿಲ್ಲವಂತೆ! ಗಣೇಶ ಕೂರಿಸುವುದಾದರೆ ಇಷ್ಟೇ ದಿನ ಎಂಬ ದಿನಗಳ ಗಡುವನ್ನು ಕೂಡ ಸರಕಾರವೇ ಕೊಡುತ್ತದಂತೆ! ಸರಕಾರ ಅಥವಾ ಪೊಲೀಸರು ಅನುಮತಿಸುವ ಸಮಯಕ್ಕಿಂತ ಹೆಚ್ಚು ದಿನ ಗಣೇಶನ ಪೂಜೆ ಮಾಡುವಂತಿಲ್ಲವಂತೆ! ಗಣೇಶನಿಗೆ ಇಂಥಾದ್ದೇ ಬಣ್ಣ ಬಳಿಯಬೇಕು ಎಂಬುದನ್ನು ಕೂಡ ಸರಕಾರವೇ ಹೇಳುತ್ತದಂತೆ! ಅವರು ಹೇಳಿದ ಬಣ್ಣದಲ್ಲಿಲ್ಲದ ಗಣೇಶನನ್ನು ಅವರೇ ಎತ್ತಿ ನೀರಿಗೆ ಹಾಕುತ್ತಾರೋ ಅಥವಾ ಪೊಲೀಸ್ ವ್ಯವಸ್ಥೆ ಬಳಸಿ ಭಗ್ನಗೊಳಿಸುತ್ತಾರೋ ಗೊತ್ತಿಲ್ಲ! ಮೆರವಣಿಗೆಯ ವೇಳೆಯಲ್ಲಿ ಸಿಡಿಮದ್ದು-ಪಟಾಕಿ ಬಳಸಬಾರದಂತೆ. ಹಾಡುಗೀಡು ಇರಬಾರದಂತೆ. ಬಣ್ಣ ಎರಚುವಂತಿಲ್ಲವಂತೆ. ಇವೆಲ್ಲ ನೋಡಿದರೆ ಬಹುಶಃ ವಿಸರ್ಜನೆಯ ಯಾತ್ರೆಗೂ ಶವಯಾತ್ರೆಗೂ ಹೆಚ್ಚು ವ್ಯತ್ಯಾಸ ಇರುವಂತೆ ಕಾಣುತ್ತಿಲ್ಲ. ಕನಿಷ್ಠಪಕ್ಷ ಬೆಂಗಳೂರಲ್ಲಿ ಶವಯಾತ್ರೆಯಲ್ಲಿ ತಮಟೆ, ಡೋಲು, ಕುಣಿತ ಇರುತ್ತವೆ. ಆದರೆ ಗಣೇಶನ ಮೂರ್ತಿಯನ್ನು ಕೊಂಡೊಯ್ಯುವ ಮೆರವಣಿಗೆಯಲ್ಲಿ ಯಾವ ಸಂಭ್ರಮಾಚರಣೆಯನ್ನೂ ಮಾಡಬಾರದು ಎಂದು ಸರಕಾರ ಸೂಚನೆ ಹೊರಡಿಸಿದೆ. ಇನ್ನು ಎಲ್ಲಕ್ಕಿಂತ ಪ್ರಧಾನವಾದ ಅಂಶಕ್ಕೆ ಬರೋಣ. ಈ ವರ್ಷದ ಗಣೇಶ ಹಬ್ಬಕ್ಕೆ ಮೂರ್ತಿ ಕೂರಿಸುವ ಉತ್ಸಾಹವಿರುವವರು ಎಲ್ಲಕ್ಕಿಂತ ಮೊದಲು ಪೊಲೀಸ್ ಠಾಣೆಯಲ್ಲಿ ಒಂದೆರಡು ರುಪಾಯಿಯಲ್ಲ; ಬರೋಬ್ಬರಿ ಹತ್ತು ಲಕ್ಷ ರುಪಾಯಿಗಳ ಬಾಂಡ್ ಕಟ್ಟಬೇಕಂತೆ!

ಸ್ವಾಮಿ, ಯಾವ ಕಾಲದಲ್ಲಿದ್ದೇವೆ ನಾವು? ಇದೇನು ಪ್ರಜಾಪ್ರಭುತ್ವವಿರುವ ದೇಶದಲ್ಲಿರುವ ಕರ್ನಾಟಕವೋ ಇಲ್ಲಾ ಔರಂಗಜೇಬನ ಆಡಳಿತವೋ? ಅಥವಾ ಐಸಿಸ್ ಆಡಳಿತವಿರುವ ಸಿರಿಯಾಕ್ಕೆ ಈ ರಾಜ್ಯವನ್ನು ಮಾರಿಕೊಂಡಿದ್ದೇವೋ? ಏನಾಗುತ್ತಿದೆ ಈ ರಾಜ್ಯದಲ್ಲಿ? ಒಂದಾನೊಂದು ಕಾಲದಲ್ಲಿ, ಸಾರ್ವಜನಿಕರು ಗುಂಪುಗೂಡಬಾರದೆಂಬ ಕಾನೂನು ಇದ್ದ ಬ್ರಿಟಿಷರ ಕಾಲದಲ್ಲೇ ಸಾವಿರ ಅಲ್ಲ, ಲಕ್ಷ ಸಂಖ್ಯೆಯಲ್ಲಿ ಜನ ಗಣೇಶನ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಬ್ರಿಟಿಷರನ್ನೂ ನಾಚಿಕೆಪಡುವಂತೆ ಮಾಡಿರುವ ಕರ್ನಾಟಕದ ಸಿದ್ದರಾಮಯ್ಯ ಸರಕಾರ ಹತ್ತೊಂಬತ್ತನೇ ಶತಮಾನದ್ದಕ್ಕಿಂತ ಬಿಗಿಯಾದ ನಿಯಮಗಳನ್ನು ಈಗ ಜನರ ಮೇಲೆ ಹೇರಲು ಹೊರಟಿದೆ. ಗಣೇಶನ ವಿಗ್ರಹ ಇಟ್ಟು ಪೂಜಿಸಬೇಕಾದರೆ ಹತ್ತು ಲಕ್ಷ ರುಪಾಯಿ ಬಾಂಡ್ ಬರೆದುಕೊಡಬೇಕೆಂದು ಹಿಂದೂಗಳು ಬಹುಸಂಖ್ಯಾತರಾಗಿರುವ ರಾಜ್ಯದಲ್ಲೇ ಮುಖ್ಯಮಂತ್ರಿಯೊಬ್ಬರು ಆದೇಶಿಸುತ್ತಾರೆಂದರೆ ಏನು ಹೇಳಬೇಕು? ಹತ್ತು ಲಕ್ಷ ಜನರನ್ನು ಪೂಜೆಯಲ್ಲಿ ಕೂಡಿಸುವಂತಿಲ್ಲ ಎಂಬ ಹೊಸ ಕಾನೂನಿನ ಅರ್ಥ ಏನು? ಕುಂಭಮೇಳದಲ್ಲಿ ಮೂರು ಕೋಟಿ ಜನ ಜಮಾಯಿಸಿದರು, ಪುರಿಯ ಜಗನ್ನಾಥನ ಉತ್ಸವದಲ್ಲಿ ಐವತ್ತು ಲಕ್ಷ ಜನ ಭಾಗಿಯಾದರು, ಪಂಢರಾಪುರದ ಜಾತ್ರೆಯಲ್ಲಿ ಹದಿನೈದು ಲಕ್ಷ ಪಾಲ್ಗೊಂಡರು ಎಂಬೆಲ್ಲ ಸಂಗತಿಗಳು ಸುದ್ದಿಯಾಗುವ ದೇಶದಲ್ಲಿ ಉತ್ಸವದಲ್ಲಿ ಜನ ಸೇರಿಸಬೇಡಿ ಎಂಬ ಸರಕಾರವೂ ಒಂದಿದೆ ಎಂದರೆ ಅದು ಈ ಕರ್ನಾಟಕದ ಹಿಂದೂವಿರೋಧಿ ಸರಕಾರವೊಂದೇ ಇರಬೇಕು! ಎಂಥ ನತದೃಷ್ಟರು ಸ್ವಾಮಿ ನಾವು!

ಕಳೆದ ಕೆಲವು ವರ್ಷಗಳಿಂದ ರೂಪುಗೊಳ್ಳುತ್ತಿರುವ ಒಂದು ಟ್ರೆಂಡ್ ಅನ್ನು ಸೂಕ್ಷ್ಮವಾಗಿ ಗಮನಿಸೋಣ. ದೀಪಾವಳಿಯಲ್ಲಿ ಪಟಾಕಿ ಹೊಡೆಯಬೇಡಿ; ಅದರಿಂದ ಸಾಕುಪ್ರಾಣಿಗಳು ದಿಕ್ಕೆಟ್ಟು ಓಡುತ್ತವೆ ಎಂದು ಒಂದು ವಲಯದಿಂದ ಕೆಲವು ವರ್ಷಗಳ ಹಿಂದೆ ಸಣ್ಣದೊಂದು ಆಕ್ಷೇಪ ಕೇಳಿಬಂದಿತ್ತು. ಹಾಗೆ ಸಣ್ಣದಾಗಿದ್ದ ಆಕ್ಷೇಪವೇ ವರ್ಷ ವರ್ಷ ದೊಡ್ಡದಾಗುತ್ತ ಬಂದು ಇದೀಗ ದೀಪಾವಳಿಯಲ್ಲಿ ಪಟಾಕಿ ನಿಷೇಧಿಸಿ ಎಂಬಲ್ಲಿಗೆ ಬಂದು ನಿಂತಿದೆ. ಪಟಾಕಿಯಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ, ಸಾಕುಪ್ರಾಣಿಗಳು ಮತ್ತು ವೃದ್ಧರ ಆರೋಗ್ಯಕ್ಕೆ ಅಪಾಯ – ಎಲ್ಲವನ್ನೂ ಒಪ್ಪೋಣ. ಆದರೆ ಈ ದುರಂತಗಳು ಕ್ರಿಸ್‍ಮಸ್ ಸಂದರ್ಭದಲ್ಲೋ ಹೊಸವರ್ಷಕ್ಕೋ ಪಟಾಕಿ ಸಿಡಿಸಿದಾಗ ಸಂಭವಿಸುವುದೇ ಇಲ್ಲ ಎನ್ನುವುದು ವಿಶೇಷ! ದೀಪಾವಳಿಯಲ್ಲಿ ಪಟಾಕಿ ಹೊಡೆದು ವಾಯುಮಾಲಿನ್ಯ ಮಾಡಬೇಡಿ ಎಂದ ಗಂಜಿಗಿರಾಕಿಗಳು ಕ್ರಿಸ್‍ಮಸ್ ಹೊತ್ತಲ್ಲಿ ಮಾತ್ರ ಬಾಯಿಗೂ ಪೃಷ್ಟಕ್ಕೂ ಬಿರಡೆ ಸಿಕ್ಕಿಸಿಕೊಂಡು ಮುಗುಮ್ಮಾಗುತ್ತಾರೆ. ಯಾಕೆಂದರೆ ಅವರ ವಿರೋಧಗಳು ವ್ಯಕ್ತವಾಗಬೇಕಾದ್ದು ಹಿಂದೂ ಹಬ್ಬಗಳಿಗೆ ಮಾತ್ರ ನೋಡಿ! ಅನ್ಯಮತೀಯರ ಹಬ್ಬ-ಆಚರಣೆಗೆ ತಕರಾರು ಎತ್ತಿದರೆ ಗಂಜಿ ಸರಬರಾಜು ನಿಂತುಹೋಗುವ ಸಂಭವವುಂಟು! ಅನ್ಯಕೋಮಿನವರ ಹಬ್ಬಗಳಲ್ಲಿ ಎದೆ ಬಡಿದುಕೊಂಡು ರಕ್ತ ಕಾರಿಕೊಳ್ಳುವುದನ್ನು ವಿರೋಧಿಸಲು ನಾಲಗೆಯೇಳದ ಈ ಬುದ್ಧಿಜೀವಿ ಸರೀಸೃಪಗಳು ಮತ್ತೆ ಹುತ್ತಗಳಿಂದ ಹೊರಬರುವುದು ಯಾವಾಗ ಗೊತ್ತಾ? ನಾಗರಪಂಚಮಿಗೆ! ಹುತ್ತಕ್ಕೆ ಹಾಲೆರೆಯಬೇಡಿ; ಅದೇ ಹಾಲನ್ನು ಬಡಮಕ್ಕಳಿಗೆ ಕುಡಿಸಿ ಎಂಬ ಸಂದೇಶ ಕೊಡುವ ಹೊಸ ಟ್ರೆಂಡ್ ಇತ್ತೀಚೆಗೆ ಹುಟ್ಟಿಕೊಂಡಿದೆ. ಬಡಮಕ್ಕಳಿಗೆ ವರ್ಷದ ಮಿಕ್ಕ 364 ದಿನ ಹಸಿವಾಗುವುದಿಲ್ಲವೆ? ಹಾಲು ಬೇಕು ಅನ್ನಿಸುವುದಿಲ್ಲವೆ? ಆ ದಿನಗಳಲ್ಲಿ ನೀವ್ಯಾಕೆ ಹಾಲು ಕುಡಿಸುವುದಿಲ್ಲ? ನಾಗರಪಂಚಮಿಯ ದಿನವೇ ಬಡಮಕ್ಕಳಿಗೆ ಹಾಲು ಕುಡಿಸುವ ಮೂಲಕ ನೀವು ಬಿತ್ತರಿಸಲು ಯತ್ನಿಸುತ್ತಿರುವ ಸಂದೇಶ ಏನು? ಹಿಂದೂಗಳು ಈ ಪ್ರಶ್ನೆಗಳನ್ನು ಕೇಳಬೇಕು ತಾನೆ?

ತಮಾಷೆ ಮತ್ತು ದುರಂತದ ಸಂಗತಿ ಏನೆಂದರೆ ಕಲ್ಲಿನ ವಿಗ್ರಹಗಳಿಗೆ ಹಾಲೆರೆಯಬೇಡಿ; ಅವಕ್ಕೆ ಪೂಜೆ ಮಾಡಬೇಡಿ ಎಂದು ಹೇಳುವ ಕೆಲವು ಪ್ರಗತಿಪರ ನಾಯಕರು ಸಿದ್ದರಾಮಯ್ಯನವರ ಸರಕಾರದ ಒಳಗೇ ಇದ್ದಾರೆ. ಗ್ರಹಣ ಕಾಲದಲ್ಲಿ ರೊಟ್ಟಿ ತಿಂದು ತಮ್ಮ ಪ್ರಗತಿಶೀಲ ಚಿಂತನೆಯನ್ನು ಪ್ರದರ್ಶಿಸಬಲ್ಲ ಮೂಢರಿವರು. ಸ್ಮಶಾನದಲ್ಲಿ ರಾತ್ರಿ ಕಳೆದರೆ ಅದು ತಮ್ಮ ವೈಜ್ಞಾನಿಕ ಮನೋಧರ್ಮದ ಹೆಗ್ಗುರುತು ಎಂದು ಇವರು ತಿಳಿದಿದ್ದಾರೆ. ಸ್ಮಶಾನದಲ್ಲಿ ಭೂತ-ಪ್ರೇತಗಳಿರುತ್ತವೆ ಎಂಬುದನ್ನು ನಂಬುವುದು ಹೇಗೆ ಮೌಢ್ಯವೋ ಹಾಗೆಯೇ ಸ್ಮಶಾನದಲ್ಲಿ ರಾತ್ರಿ ಕಳೆಯುತ್ತೇವೆಂದು ಅಲ್ಲೇ ರೊಟ್ಟಿ ತಿಂದು ಚಳಿಯಲ್ಲಿ ಗಡಗಡ ಮಲಗಿ ಇರುಳು ಕಳೆಯುವುದು ಕೂಡ ಒಂದು ಮೌಢ್ಯ ಮತ್ತು ಪ್ರಾರಬ್ಧಕರ್ಮ ಅಲ್ಲವೇ! ಸಿದ್ದರಾಮಯ್ಯನವರ ಸರಕಾರದಲ್ಲಿರುವ ಇಂಥ ಕೆಲವು ಪ್ರಗತಿಪರ ಚಿಂತನೆ ಪ್ರಖರವಾಗಿರುವ ಶಾಸಕರು ಮತ್ತು ಸಚಿವರು ಹಿಂದೂ ಧರ್ಮದ ಆಚರಣೆಗಳನ್ನು ಹೀಗಳೆಯುವುದೇ ತಮ್ಮ ಸಾಧನೆ ಎಂದು ಭಾವಿಸಿದಂತಿದೆ. ಹಿಂದೂ ಹಬ್ಬಗಳನ್ನು ಹೀಯಾಳಿಸಿ; ಹಿಂದೂ ಆಚರಣೆಗಳನ್ನು ಪ್ರಶ್ನಿಸಿ; ಹಿಂದೂ ಸಂಪ್ರದಾಯಗಳನ್ನು ಮುರಿಯಿರಿ ಎಂದು ಸಂದೇಶ ಕೊಡುವ ಇಂಥ ಮನೆಮುರುಕರನ್ನು ಮತ್ತೆ ಮತ್ತೆ ಗೆಲ್ಲಿಸಿ ಕಳಿಸುವ ಹಿಂದೂಗಳು ಇನ್ನಾದರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಕಲ್ಲಿಗೆ ಹಾಲೆರೆಯಬೇಡಿ ಎಂದು ಹೇಳುವ ಇದೇ ಸರಕಾರ ಸಾವಿರಗಟ್ಟಲೆ ಲೀಟರ್ ಹಾಲು, ಜೇನು, ತುಪ್ಪ ಬಳಸಿ ಮಸ್ತಕಾಭಿಷೇಕ ಮಾಡುವುದಕ್ಕಾಗಿ ಒಂದು ಸಮುದಾಯಕ್ಕೆ ನೂರು ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಗಲ್ಲಿ ಗಲ್ಲಿಗಳಲ್ಲಿ ನಡೆಯುವ ಉರುಸ್‍ನಂಥ ಅನ್-ಇಸ್ಲಾಮಿಕ್ ಆಚರಣೆಗಳಲ್ಲಿ ಆಯಾ ಪ್ರಾಂತ್ಯದ ಶಾಸಕರು ಭಾಗವಹಿಸುತ್ತಾರೆ, ಭಾಷಣ ಹೊಡೆಯುತ್ತಾರೆ, ಅಲ್ಪಸಂಖ್ಯಾತರಿಂದ ಚಪ್ಪಾಳೆ ಗಿಟ್ಟಿಸುತ್ತಾರೆ. ಉಳಿದ ಕೋಮುಗಳ ಓಲೈಕೆ ತಪ್ಪೆಂದು ಹೇಳುತ್ತಿಲ್ಲ; ಆದರೆ ಬಹುಸಂಖ್ಯಾತರ ಭಾವನೆಗಳನ್ನೇಕೆ ಈ ಸರಕಾರ ಮತ್ತೆ ಮತ್ತೆ ಘಾಸಿಗೊಳಿಸುವ ಕೆಲಸ ಮಾಡಬೇಕು? ದೀಪಾವಳಿಗೆ ಪಟಾಕಿ ಹೊಡೆಯಬೇಡಿ, ಹೋಳಿಗೆ ಬಣ್ಣ ಎರಚಬೇಡಿ, ನಾಗರಪಂಚಮಿಗೆ ಹಾಲೆರೆದು ಪೂಜೆ ಮಾಡಬೇಡಿ, ಅಷ್ಟಮಿಯ ಮೊಸರುಕುಡಿಕೆ ಆಡಬೇಡಿ, ಗಣೇಶನ ಹಬ್ಬಕ್ಕೆ ವಿಗ್ರಹ ಕೂರಿಸಬೇಡಿ, ಶಿವರಾತ್ರಿಗೆ ಜಾಗರಣೆ ಮಾಡಬೇಡಿ, ನವರಾತ್ರಿಗೆ ದಸರಾ ಹಬ್ಬ ಸರಳವಾಗಿ ಮಾಡಿ, ಗಣೇಶ ಅಥವಾ ನವರಾತ್ರಿಯ ಉತ್ಸವಗಳನ್ನು ಅನ್ಯಕೋಮಿನ ಪ್ರಾರ್ಥನಾ ಮಂದಿರಗಳ ಎದುರಿಂದ ತೆಗೆದುಕೊಂಡು ಹೋದರೆ ಮುಲಾಜಿಲ್ಲದೆ ನಿಮ್ಮ ವಿಗ್ರಹಗಳನ್ನೂ ನಿಮ್ಮನ್ನೂ ಬಂಧಿಸುತ್ತೇವೆ, ಹತ್ತು ಲಕ್ಷ ರುಪಾಯಿ ಬಾಂಡ್ ಕೊಡುವ ಶಕ್ತಿ ಇಲ್ಲವಾದರೆ ನೀವು ಹಬ್ಬವನ್ನೇ ಮಾಡುವ ಹಾಗಿಲ್ಲ…. ಎಲ್ಲಿಗೆ ಹೋಗುತ್ತಿದ್ದೇವೆ ನಾವು?

ದಸರಾ ಹಬ್ಬಕ್ಕೆ ಪೈಸೆ ಬಿಚ್ಚುವುದಕ್ಕೂ ಹಿಂದೆ ಮುಂದೆ ನೋಡುವ ಸರಕಾರ ಅದ್ದೂರಿಯಾಗಿ ಟಿಪ್ಪು ಜಯಂತಿ ಮಾಡಿ ಹಿಂದೂಗಳ ಬಲಿ ಹಾಕುತ್ತದೆ. ಕುಕ್ಕೆಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆಸ್ನಾನದಂಥ ಭಕ್ತರ ನಂಬಿಕೆಗಳನ್ನು ಪ್ರಶ್ನಿಸುವ ಇದೇ ಸರಕಾರಕ್ಕೆ ಅಲ್ಲಿಯ ಅದೇ ಭಕ್ತರ ನಂಬಿಕೆಗಳನ್ನು ಎನ್‍ಕ್ಯಾಷ್ ಮಾಡಿಕೊಂಡು ಪುರೋಹಿತರಿಂದ ಆಶ್ಲೇಷಾಬಲಿ ಮಾಡಿಸಿದಾಗ ದ್ವಂದ್ವ ಕಾಡುವುದಿಲ್ಲ! ನಾಗರಪಂಚಮಿಯಿಂದ ಪ್ರಾರಂಭವಾಗಿ ಮುಂದಿನ ವರ್ಷದ ರಾಮನವಮಿಯವರೆಗೆ ಹಬ್ಬಗಳ ಸಾಲು ಸಾಲು ಬಂದಾಗೆಲ್ಲ ಕೆಎಸ್‍ಆರ್‍ಟಿಸಿ ಬಸ್ಸುಗಳ ದರಗಳನ್ನು ಆಕಾಶ ಮುಟ್ಟುವಷ್ಟು ಏರಿಸಿ ಬಡಬಗ್ಗರ ದುಡ್ಡು ಪೀಕುವಾಗ ಈ ಸರಕಾರಕ್ಕೆ ದ್ವಂದ್ವ ಕಾಡುವುದಿಲ್ಲ. ಎಲ್ಲೆಲ್ಲೂ ಸಮಾನತೆ ಬರಬೇಕು, ಮೇಲುಕೀಳು ಅಳಿಯಬೇಕು ಎಂದು ಪುಂಗಿ ಊದುವ ಸರಕಾರಕ್ಕೆ ದೇವಸ್ಥಾನಗಳಲ್ಲಿ ಭಕ್ತರ ಒಂದೊಂದು ಸಾಲಿಗೆ ಒಂದೊಂದು ದರ ನಿಗದಿಪಡಿಸಿ ದೇವರನ್ನು ಕಾಣಬೇಕಾದರೆ ನಮಗಿಷ್ಟು ಕೊಡಿ ಎಂದು ದುಡ್ಡು ಸೆಳೆಯುವಾಗ ದ್ವಂದ್ವ ಕಾಡುವುದಿಲ್ಲ. ಟಿಪ್ಪುವಿನಂಥ ಧರ್ಮಾಂಧನ ಜಯಂತಿಯನ್ನು ವರ್ಷ ವರ್ಷ ಹಿಂದೂಗಳ ಬಲಿ ಹಾಕುತ್ತ ಆಚರಿಸುವ ಸರಕಾರಕ್ಕೆ ರಾಮಾನುಜಾಚಾರ್ಯರ, ಮಧ್ವಾಚಾರ್ಯರ 1000 ಮತ್ತು 800ನೇ ವರ್ಷದ ವಿಶೇಷ ಜಯಂತಿಗಳು ನೆನಪಾಗಲಿಲ್ಲ. ದರ್ಗಾ, ಚರ್ಚುಗಳಿಗೆ ಕೋಟಿಗಟ್ಟಲೆ ಸುರಿವ ಸರಕಾರಕ್ಕೆ ಬೇಲೂರಿನ ಚೆನ್ನಕೇಶವ ದೇವಾಲಯಕ್ಕೆ 900 ವರ್ಷಗಳು ಸಂದದ್ದು ಮರೆತೇಹೋಗಿತ್ತು! ಎಷ್ಟೆಂದರೂ ನಮ್ಮದು ಸೆಕ್ಯುಲರ್ ಸರಕಾರ ನೋಡಿ!

ಹಿಂದೂಗಳು ಮತ್ತೆ ಎಚ್ಚೆತ್ತುಕೊಳ್ಳಬೇಕಾದ ಸಮಯ ಇದು. ಹಿಂದೂ ಎಂಬುದು ಮಹಾವೃಕ್ಷ; ಇಷ್ಟು ಸಾವಿರ ವರ್ಷಗಳಿಂದ ಅಳಿಯದೆ ಉಳಿದಿದೆ, ಇನ್ನು ಮುಂದೆಯೂ ಉಳಿಯುತ್ತದೆ ಎಂಬ ಉಡಾಫೆ, ಉದಾಸೀನಗಳನ್ನು ಬಿಟ್ಟು ಕಣ್ತೆರೆದೆವೋ ಉಳಿದುಕೊಂಡೇವು. ಹಿಂದೂ ಧರ್ಮ ಸಾವಿರ ವರ್ಷಗಳಿಂದ ಉಳಿದುಬಂದಿದ್ದರೆ ಅದಕ್ಕೆ ವಿದ್ಯಾರಣ್ಯ, ಶಂಕರ, ರಾಮಾನುಜ, ಮಧ್ವ, ತುಲಸೀದಾಸ, ತಿಲಕ, ವಿವೇಕಾನಂದರಂಥ ನೂರಾರು ಮಹಾತ್ಮರು ಕಾರಣರೇ ಹೊರತು “ಬಾರದು ಬಪ್ಪುದು, ಬಪ್ಪುದು ತಪ್ಪದು” ಎಂದು ಮುಸುಕೆಳೆದು ಮಲಗಿದ ಷಂಡ ಆಲಸಿಗಳು ಖಂಡಿತವಾಗಿಯೂ ಅಲ್ಲ. ಹಿಂದೂ ಧರ್ಮದ ಎಲ್ಲ ಬಹುಮುಖಿ ಆಯಾಮಗಳನ್ನು ಕತ್ತರಿಸಿ ತೆಗೆದು ಅದನ್ನೊಂದು ಎಲೆ-ಹೂವುಗಳಿಲ್ಲದ ಕ್ರಿಸ್‍ಮಸ್ ಟ್ರೀ ಮಾಡುವುದೇ ತಮ್ಮ ಹುನ್ನಾರವೆನ್ನುವವರು ತಮ್ಮ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಲೇ ಇದ್ದಾರೆ. ಆದರೆ ಎಂತೆಂಥ ಘಜ್ನಿ, ಘೋರಿಗಳು ಬಂದರೂ ನಮ್ಮ ಬುಡ ಅಲುಗಿಸಲಾಗುವುದಿಲ್ಲವೆಂಬ ಉದಾಸೀನತೆ ಮೆರೆಯುವವರು ಮಾತ್ರ ದಿನಗಳೆದಂತೆ ಅಪ್ರಸ್ತುತರೂ ಅಪ್ರಯೋಜಕರೂ ಆಗುತ್ತಿದ್ದಾರೆ. ಅವರು ತಮ್ಮ ಬುಡಕ್ಕೇ ಬೆಂಕಿ ಬಿದ್ದಾಗ ಕಣ್ಣುಬಿಟ್ಟರೆ ಪ್ರಯೋಜನ ಇಲ್ಲ; ಸುತ್ತ ಇದ್ದದ್ದೆಲ್ಲ ಬೂದಿಯಾದದ್ದನ್ನು ಕಂಡು ಮರುಗುವುದು ಬಿಟ್ಟು ಬೇರಾವ ಆಯ್ಕೆಯೂ ಅವರಿಗೆ ಉಳಿದಿರಲಾರದು. ಹಿಂದೂ ವಿರೋಧಿ ಸರಕಾರವನ್ನು ಚುನಾವಣೆಯ ಹೊತ್ತಿಗೆ ಹೆಡೆಮುರಿಕಟ್ಟಿ ಕೂರಿಸದೆ ಮನೆಯಲ್ಲೇ ಕೌಚ್ ಪೊಟ್ಯಾಟೋ ಆಗಿ ಕೂತರೆ ಮುಂದಿನ ವರ್ಷದ ಗಣೇಶನ ಹಬ್ಬಕ್ಕೆ ಪುಟಾಣಿ ಗಣೇಶನನ್ನು ಮನೆಯ ಬಕೆಟಲ್ಲಿ ಮುಳುಗಿಸಿ “ಶಾಸ್ತ್ರ ಮುಗಿಸ”ಬೇಕಾದೀತು. ಮನೆಯಲ್ಲಿ ಪೂಜೆಯ ಸಮಯದಲ್ಲಿ ಗಂಟಾಮಣಿ ಅಲ್ಲಾಡಿಸುವುದಕ್ಕೂ ಪೊಲೀಸರ ಅನುಮತಿ ಕೇಳಬೇಕಾದ ಪರಿಸ್ಥಿತಿ ಬರಬಹುದು. ಅನಾಗತಭಯರಾಗದೇ ಹೋದರೂ ಪ್ರತ್ಯುತ್ಪನ್ನಮತಿಗಳಾದರೂ ಆಗಬೇಕಲ್ಲವೇ? ಯದ್ಭವಿಷ್ಯಗಳೇ ಆಗಿ ಉಳಿಯೋಣ ಎಂದರೆ ಹಿಂದೂಗಳ ಭವಿಷ್ಯ ಗೋವಿಂದಾ ಗೋವಿಂದ. ಯೋಚನೆ ಮಾಡಿ.

Comments

comments