ಎಮರ್ಜೆನ್ಸಿ ದಿನಗಳು – ಭಾಗ 2 ಕೇಂದ್ರ ಸರಕಾರದಲ್ಲಿ ಸಚಿವನಾಗಿದ್ದ ವ್ಯಕ್ತಿ ಸಂಜಯನೆಂಬ ಕ್ಷುದ್ರಜೀವಿಯ ಎದುರು ಕೈ ಕಟ್ಟಿ ನಿಂತಿದ್ದರು!

ಭಾರತದ ಸ್ವಾತಂತ್ರ್ಯಾನಂತರದ ಇತಿಹಾಸದಲ್ಲಿ ಹೀಗೆ ಮೊದಲ ಬಾರಿಗೆ ಚುನಾವಣಾ ಅಕ್ರಮ ಸದ್ದುಮಾಡಿತು. ಯಾರೋ ಕಾಂಜಿಪೀಂಜಿ ರಾಜಕೀಯ ಪುಢಾರಿ ಅಲ್ಲ; ದೇಶದ ಪ್ರಧಾನಿ ಸ್ಥಾನದಲ್ಲಿ ಕೂತ ವ್ಯಕ್ತಿಯೇ ಚುನಾವಣೆಯಲ್ಲಿ ನಡೆಸಬಾರದ – ಆದರೆ ನಡೆಸಲು ಸಾಧ್ಯವಿರುವ ಎಲ್ಲ ಅಕ್ರಮಗಳನ್ನೂ ನಡೆಸಿ ಕ್ಷೇತ್ರ ಉಳಿಸಿಕೊಂಡದ್ದು ಜಗಜ್ಜಾಹೀರಾಯಿತು. ಬಹುಶಃ ಅಷ್ಟೆಲ್ಲ ಅಕ್ರಮಗಳನ್ನು ಆಕೆ ನಡೆಸದೇ ಹೋಗಿದ್ದರೆ ರಾಯ್ ಬರೇಲಿಯ ಸೀಟು ಉಳಿಸಿಕೊಳ್ಳುವುದು ಸಾಧ್ಯ ಇರುತ್ತಿರಲಿಲ್ಲವೇನೋ! ತಾನೇ ಆ ಕ್ಷೇತ್ರದಲ್ಲಿ ಗೆದ್ದುಬರುತ್ತೇನೆಂಬ ವಿಶ್ವಾಸ ಆಕೆಗಿದ್ದದ್ದೇ ಆದರೆ ಲಕ್ಷಗಟ್ಟಲೆ ರುಪಾಯಿ ದುಡ್ಡನ್ನು ಆಕೆ ಯಾಕಾದರೂ ಅಲ್ಲಿ ಸುರಿಯಬೇಕಾಗಿತ್ತು! ಅಂದರೆ ರಾಯ್ ಬರೇಲಿಯಲ್ಲಿ ಗೆಲ್ಲುವ ಯಾವ ಭರವಸೆಯೂ ಆಕೆಗೆ ಇರಲಿಲ್ಲ ಎಂದಾಯಿತು. ಅದರರ್ಥ ಅದಕ್ಕಿಂತ ಹಿಂದಿನ ಐದು ವರ್ಷಗಳ ಆಡಳಿತದಲ್ಲಿ ಇಂದಿರಾ ಅದ್ಯಾವ ಮ್ಯಾಜಿಕ್ಕನ್ನೂ ತೋರಲಿಲ್ಲ ಎಂಬುದೂ ಸಾಬೀತಾಯಿತು! ಯಾಕೆಂದರೆ ಆ ಐದು ವರ್ಷಗಳ ಆಡಳಿತ ಜನಪರವಾಗಿದ್ದರೆ, ಪಾರದರ್ಶಕವಾಗಿದ್ದರೆ, ದೇಶದ ಅಭಿವೃದ್ಧಿಗೆ ಸಹಾಯ ಮಾಡಿದ್ದರೆ ಪ್ರಧಾನಿ ಅಭ್ಯರ್ಥಿಯಾಗಿರುವವರು 71ರ ಚುನಾವಣೆಯಲ್ಲಿ ಅಕ್ರಮ, ಅವ್ಯವಹಾರಗಳನ್ನು ನೆಚ್ಚಿಕೊಳ್ಳಬೇಕಾಗಿರಲಿಲ್ಲ. ಇನ್ನು ಪ್ರಧಾನಿ ಅಭ್ಯರ್ಥಿಯೇ ಇಷ್ಟೆಲ್ಲ ಭ್ರಷ್ಟರಾದರೆಂದ ಮೇಲೆ ಉಳಿದವರು ಸುಮ್ಮನಿದ್ದಾರೇ? ಅಥವಾ ಉಳಿದವರು ಭ್ರಷ್ಟರಾದರೂ ಅದನ್ನು ಪ್ರಶ್ನಿಸುವ ನೈತಿಕತೆಯನ್ನು ಇಂದಿರಾಗಾಂಧಿ ಉಳಿಸಿಕೊಂಡಿದ್ದರೇ? ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬ ಗಾದೆ ಮಾತೇ ಉಂಟಲ್ಲ! ಒಟ್ಟಾರೆ ಹೇಳುವುದಾದರೆ ಕಾಂಗ್ರೆಸ್ ನೈತಿಕ ಅಧಃಪತನದ ಇಳಿಜಾರಿನಲ್ಲಿ ಮೊದಲ ದೃಢಹೆಜ್ಜೆ ಇಟ್ಟಿತ್ತು.

ಜೂನ್ 12ರ ಬೆಳ್ಳಂಬೆಳಿಗ್ಗೆ ಇಂದಿರಾಗಾಂಧಿಗೆ ಆಪ್ತರಾಗಿ ಗುರುತಿಸಿಕೊಂಡಿದ್ದ; ಆಕೆಯ ಎಲ್ಲ ಅವ್ಯವಹಾರಗಳಲ್ಲಿ ತಾನೂ ಕೈ ಕೆಸರು ಮಾಡಿಕೊಂಡಿದ್ದ ಸ್ನೇಹಿತ ಡಿ.ಪಿ. ಧರ್ ತೀರಿಕೊಂಡ ಸುದ್ದಿ ಬಂತು. ಅದಾಗಿ, ಹತ್ತು ಗಂಟೆಯ ಹೊತ್ತಿಗೆ ಅಲಹಾಬಾದ್ ನ್ಯಾಯಾಲಯದ ಮಹತ್ವದ ತೀರ್ಪು ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಿ ಇಡೀ ದೇಶಕ್ಕೆ ಪ್ರಧಾನಿಯ ಲಜ್ಜೆಗೇಡಿತನವನ್ನು ಜಾಹೀರುಪಡಿಸಿತು. ಕೋರ್ಟಿನ ತೀರ್ಪು ಹೊರಬಿದ್ದದ್ದೇ ಹಾವು ಮೆಟ್ಟಿದವರಂತೆ ಬೆಚ್ಚಿಬಿದ್ದ ಇಂದಿರಾ ಕಾನೂನು ತಜ್ಞರನ್ನೂ ರಾಜಕೀಯ ಪರಿಣಿತರನ್ನೂ ಒಬ್ಬರಾದ ಮೇಲೊಬ್ಬರಂತೆ ಭೇಟಿ ಮಾಡುತ್ತ ರಾಜಕೀಯದ ಮೊಗಸಾಲೆಯಲ್ಲಿ ತಲೆಕೆಟ್ಟ ಇಲಿಯಂತೆ ಕುಣಿದಾಡಹತ್ತಿದರು. ಅಷ್ಟರಲ್ಲಿ, ಅದೇ ದಿನ ಸಂಜೆ ಐದು ಗಂಟೆಗೆ ಬಂತು ಮತ್ತೊಂದು ಬರಸಿಡಿಲು: ಗುಜರಾತ್ ಚುನಾವಣೆಯ ಫಲಿತಾಂಶ ಪ್ರಕಟ. ಇಂದಿರಾ ಕಾಂಗ್ರೆಸ್‍ಗೆ ತೀವ್ರ ಮುಖಭಂಗ! ಮೊರಾರ್ಜಿ ದೇಸಾಯಿಯವರ ನೇತೃತ್ವದ ಜನತಾ ಮೋರ್ಚಾಕ್ಕೆ ಭರ್ಜರಿ ಗೆಲುವು!

ನದಿಯ ಪಕ್ಕದಲ್ಲಿ ಬುಡ ಅಲುಗುವ ಮರದಲ್ಲಿ ಒಂಟಿ ಕೈಯಲ್ಲಿ ಕೊಂಬೆ ಹಿಡಿದು ನೇತಾಡುವ ಹುಡುಗನನ್ನು ಕಲ್ಪಿಸಿಕೊಳ್ಳಿ. ಕೈ ಜಾರಿ ನೀರಿಗೆ ಬಿದ್ದರೆ ನುಂಗಿಬಿಡಲೆಂದು ಬಾಯ್ತೆರೆದು ನಿಂತಿರುವ ಮೊಸಳೆ. ಹೇಗೋ ಸಂಭಾಳಿಸಿಕೊಂಡು ಮರ ಇಳಿದು ಬರುತ್ತೇನೆಂದರೆ ತಿಂದು ತೇಗಲೆಂದೇ ನೆಲದಲ್ಲಿ ಕಾಯುತ್ತ ನಿಂತ ಹುಲಿ! ಆದರೆ, ಎಲ್ಲ ದಾರಿಗಳು ಮುಚ್ಚಿಹೋದಾಗಲೂ ನೈತಿಕತೆ ಸತ್ತಿರುವ ಮನುಷ್ಯನಿಗೆ ಕೊನೆಯದೊಂದು ದಾರಿ ಉಳಿದಿರುತ್ತದೆ. ಅದೇ ಕ್ರಿಮಿನಲ್ ದಾರಿ! ಕ್ರಿಮಿನಲ್ ಮನಸ್ಸಿನ ರಾಜಕಾರಣಿಗಳ ದುಷ್ಟಬುದ್ಧಿ ಮತ್ತು ನೀಚತನ ಅದೆಷ್ಟು ಆಳ-ಅಗಾಧ ಎಂಬುದು ತಿಳಿಯುವುದೇ ನಮಗೆ ಇಂಥ ಸಂದರ್ಭಗಳಲ್ಲಿ. ಕೋರ್ಟಿನ ತೀರ್ಪಿಗೆ ತಲೆಬಾಗಿ ಅಧಿಕಾರಪೀಠದಿಂದ ಇಳಿಯುವ ಬದಲು ಇಂದಿರಾಗಾಂಧಿ ಭೂಮಿಯನ್ನೇ ಅಡಿಮೇಲು ಮಾಡಿಯಾದರೂ ಕುರ್ಚಿ ಉಳಿಸಿಕೊಳ್ಳಬೇಕೆಂಬ ಭಂಡತನಕ್ಕೆ ಬಿದ್ದರು. ಇಂದಿರಾಗಾಂಧಿಯವರ ಆ ದಿನಗಳ ಮನಸ್ಥಿತಿಯನ್ನೂ, ಆಕೆ ತೆಗೆದುಕೊಂಡ ನಿರ್ಧಾರಗಳ ಗುರುತ್ವವನ್ನೂ ಅರ್ಥ ಮಾಡಿಕೊಳ್ಳಬೇಕಾದರೆ ಆಗ ಭಾರತದ ರಾಜಕೀಯ ಪರಿಸ್ಥಿತಿ ಹೇಗಿತ್ತೆಂಬುದನ್ನೂ ನಾವು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆ ಕಾಲದಲ್ಲಿ ಭಾರತದ ಎಡ-ಬಲಗಳಲ್ಲಿದ್ದ ಎರಡು ರಾಜ್ಯಗಳು – ಗುಜರಾತ್ ಮತ್ತು ಬಿಹಾರ ಕಾಂಗ್ರೆಸ್ ಪಾಲಿಗೆ ಅಗ್ನಿಪರೀಕ್ಷೆ ತಂದೊಡ್ಡಿದ್ದವು (ಸ್ವಾರಸ್ಯವೆಂದರೆ ಈ ಎರಡು ರಾಜ್ಯಗಳು ಕಳೆದ ಐದಾರು ದಶಕಗಳಲ್ಲಿ ಕಾಂಗ್ರೆಸ್‍ನ ರಾಜಕೀಯ ಭವಿಷ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಬದಲಿಸಬಲ್ಲಷ್ಟು ಪ್ರಬಲವಾದ ರಾಜಕೀಯ ನಡೆಗಳಿಗೆ ಸಾಕ್ಷಿಯಾಗುತ್ತ ಬಂದಿವೆ. ಯಾರಾದರೂ ಈ ಎರಡು ರಾಜ್ಯಗಳನ್ನೇ ಕೇಂದ್ರೀಕರಿಸಿಕೊಂಡು, ಅವು ಭಾರತದ ರಾಜಕೀಯವನ್ನು ಹೇಗೆ ಪ್ರಭಾವಿಸಿದವು ಎಂದು ಅಧ್ಯಯನ ಮಾಡಬಹುದೇನೋ). ಗುಜರಾತ್‍ನಲ್ಲಿ ಮೊರಾರ್ಜಿಯವರ ಮಾರ್ಗದರ್ಶನವಿದ್ದ ನವನಿರ್ಮಾಣ ಚಳವಳಿ ಅಲ್ಲಿನ ಕಾಂಗ್ರೆಸ್ ಆಡಳಿತವನ್ನು ಅಧಿಕಾರದಿಂದ ಕಿತ್ತೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು. ಗುಜರಾತ್‍ನ ಕಾಂಗ್ರೆಸ್ ಸರಕಾರವನ್ನು ಕೇಂದ್ರ ವಿಲೀನಗೊಳಿಸಿ ಚುನಾವಣೆಗೆ ಕರೆ ಕೊಟ್ಟ ರೀತಿಯಲ್ಲಿಯೇ ಬಿಹಾರದಲ್ಲೂ ಮಾಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದವು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಮಾಜವಾದಿ ಯುವಜನ ಸಭಾ, ಲೋಕದಳ ಮುಂತಾದ ಸಂಘ-ಸಂಸ್ಥೆಗಳು 71ರ ಹರೆಯದ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ 1973ರಲ್ಲಿ ಬಿಹಾರ ಬಂದ್‍ಗೆ ಕರೆಕೊಟ್ಟವು. ಬಿಹಾರದ ಮುಷ್ಕರ, ಹರತಾಳಗಳ ಬಿಸಿ ಮಧ್ಯಪ್ರದೇಶದ ಭೋಪಾಲಕ್ಕೂ ಹಬ್ಬಿತು. ಪೊಲೀಸ್ ಮತ್ತು ವಿದ್ಯಾರ್ಥಿಗಳ ನಡುವಿನ ಸಂಘರ್ಷ ತಾರಕಕ್ಕೇರಿ, ಪೊಲೀಸರು 8 ಜನ ವಿದ್ಯಾರ್ಥಿಗಳನ್ನು ಕೊಂದುಹಾಕಿದರು. ಇದರಿಂದಾಗಿ, ತಣ್ಣಗಾಗಬೇಕಿದ್ದ ಹೋರಾಟ ಏಕಾಏಕಿ ಅಬ್ಬರಿಸಿ ಇಡೀ ಉತ್ತರಭಾರತಕ್ಕೆ ವ್ಯಾಪಿಸುವ ಸೂಚನೆ ಕೊಟ್ಟಿತು. ದಿನಬೆಳಗಾದರೆ ವಿದ್ಯಾರ್ಥಿ ಸಂಘಟನೆಗಳನ್ನು ನಿಯಂತ್ರಿಸುವುದೇ ಪೊಲೀಸರಿಗೂ ಕೇಂದ್ರ ಸರಕಾರಕ್ಕೂ ದೊಡ್ಡ ತಲೆನೋವಿನ ಕೆಲಸವಾಯಿತು.

ಇಲ್ಲಿ ಜಯಪ್ರಕಾಶ ನಾರಾಯಣ, ಅಥವಾ ಸಂಕ್ಷಿಪ್ತವಾಗಿ ಜೆಪಿ ಎಂದು ಕರೆಸಿಕೊಳ್ಳುತ್ತಿದ್ದ ರಾಜಕೀಯ ನಾಯಕರ ಬಗ್ಗೆಯೂ ಒಂದೆರಡು ಮಾತುಗಳನ್ನು ಹೇಳುವುದು ಪ್ರಸ್ತುತವಾದೀತು. ಮಹಾತ್ಮಾ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿಳಿಯುವುದಕ್ಕೆ 13 ವರ್ಷಗಳ ಮೊದಲು ಬಿಹಾರದಲ್ಲಿ ಬಡ-ಮಧ್ಯಮ ಎಂದು ಹೇಳಬಹುದಾದ ಕುಟುಂಬದಲ್ಲಿ ಹುಟ್ಟಿದ ಜೆಪಿ ಮಹಾನ್ ಬುದ್ಧಿವಂತ; ಓದಿನಲ್ಲಿ ಮುಂದು. ತನ್ನ ಬುದ್ಧಿಮತ್ತೆಯಿಂದಲೇ ಸ್ಕಾಲರ್‍ಶಿಪ್ ಗಿಟ್ಟಿಸಿ ಅಮೆರಿಕೆಗೆ ಹೋಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಬಂದವರು. ಒಟ್ಟು ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿ ಪದವಿ ಪಡೆದಿದ್ದ ಜೆಪಿ, ಅಮೆರಿಕದಲ್ಲಿ ಗಾಢವಾಗಿ ಮಾರ್ಕ್ಸ್-ವಾದಿ ಚಿಂತನೆಯ ಪ್ರಭಾವಕ್ಕೆ ಒಳಗಾದರು. ತನ್ನ ಇಪ್ಪತ್ತೇಳನೆಯ ವಯಸ್ಸಿನಲ್ಲಿ ಅಮೆರಿಕೆಯಿಂದ ಭಾರತಕ್ಕೆ ಬಂದಿಳಿದ ಜೆಪಿ ಮಾರ್ಕ್ಸ್-ವಾದವನ್ನು ಅದು ಇದ್ದ ಹಾಗೆಯೇ ಭಾರತದ ಪರಿಸ್ಥಿತಿಗೆ ಅನ್ವಯಿಸುವ ತಪ್ಪು ಮಾಡಲಿಲ್ಲ. ಭಾರತದಲ್ಲಿರುವ ಸಂಕೀರ್ಣ ವ್ಯವಸ್ಥೆಗೆ ಮಾರ್ಕ್ಸ್’ನ ಸಿದ್ಧಾಂತವನ್ನು ನೇರವಾಗಿ ಅನ್ವಯಿಸಹೋದರೆ ಅಸಂಗತವಾಗಬಹುದು ಎಂಬ ಎಚ್ಚರವಿದ್ದ ಅವರು ಸಮಾಜವಾದದ ನಡುದಾರಿ ಹಿಡಿದರು. ಕಾಂಗ್ರೆಸ್ ಪಕ್ಷದೊಳಗಿದ್ದೂ ಕಾಂಗ್ರೆಸ್‍ನ ಸಿದ್ಧಾಂತಗಳಿಂದ ಅವರು ಅಂತರ ಕಾಯ್ದುಕೊಂಡರು. ನೆಹರೂ, ಗಾಂಧಿ, ಮೌಲಾನಾ ಆಜಾದ್ ಮುಂತಾದವರ ಅತ್ಯಂತ ನಿಕಟ ಒಡನಾಟ ಜೆಪಿಗೆ ಪ್ರಾಪ್ತವಾಯಿತು. ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಲ್ಲಿ ಅವರು ಗುರುತಿಸಿಕೊಂಡರು. 1942ರ ಕ್ವಿಟ್ ಇಂಡಿಯಾ ಚಳವಳಿ ಘೋಷಣೆಯಾದ ಮರುದಿನವೇ ಕಾಂಗ್ರೆಸ್‍ನ ಅಷ್ಟೂ ನಾಯಕರು ಜೈಲುಪಾಲಾದಾಗ; ಮತ್ತೆರಡು ವರ್ಷ ಅವರೆಲ್ಲರೂ ಜೈಲಿನಲ್ಲೇ ಉಳಿಯಬೇಕಾದ ಸಂದರ್ಭ ಬಂದಾಗ, ಆ ಎರಡು ವರ್ಷಗಳ ಕಾಲ ಹೋರಾಟವನ್ನು ಜಾರಿಯಲ್ಲಿಟ್ಟ ನಾಯಕ ಜೆಪಿ. ಸ್ವಾತಂತ್ರ್ಯ ಬಂದು ದೇಶದಲ್ಲಿ ಮೊದಲ ಸ್ವದೇಶೀ ಸರಕಾರ ರಚನೆಯಾದಾಗ ನೆಹರೂ ಜೆಪಿಯನ್ನು ತನ್ನ ಸಚಿವ ಸಂಪುಟ ಸೇರಿಕೊಳ್ಳುವಂತೆ ಕೇಳಿಕೊಂಡರು. ಜೆಪಿ ಮಾತ್ರ ಆಗ ತನ್ನ ಉದ್ದೇಶ ಅಧಿಕಾರ ಹಿಡಿಯುವುದು ಅಲ್ಲ; ಬಡಬಗ್ಗರಿಗೆ ಸಹಾಯವಾಗುವಂತೆ ಬದುಕುವುದು ಅಷ್ಟೇ ಎಂದು ಹೇಳಿ ಅಧಿಕಾರದಂಡವನ್ನು ನಯವಾಗಿ ನಿರಾಕರಿಸಿ ನಡೆದುಬಿಟ್ಟರು! ರಾಜೇಂದ್ರ ಪ್ರಸಾದರ ಅವಧಿ ಮುಗಿಯುತ್ತಲೇ ರಾಷ್ಟ್ರಾಧ್ಯಕ್ಷ ಪದವಿಗೆ ಜೆಪಿ ಹೆಸರು ಕೇಳಿಬಂತು. ಆಗಲೂ ಅವರ ತತ್ತ್ವನಿಷ್ಠೆ ಬದಲಾಗಲೇ ಇಲ್ಲ! ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಕೈಬೀಸಿ ಕರೆದಾಗಲೂ ಅವರು ನಿರ್ಮೋಹಿಯಾಗಿ, ನಿಸ್ವಾರ್ಥಿಯಾಗಿ ನಡೆದುಕೊಂಡದ್ದು ಅವರ ವ್ಯಕ್ತಿತ್ವವನ್ನು ತೀರ ಹತ್ತಿರದಿಂದ ಬಲ್ಲವರಿಗೆ ಅಚ್ಚರಿಯೇನೂ ಅಲ್ಲ. ಈ ಎಲ್ಲ ಮಾತುಗಳನ್ನು ಯಾಕಿಲ್ಲಿ ಬರೆಯುತ್ತಿದ್ದೇನೆ ಎಂದರೆ ಜೆಪಿ ಒಬ್ಬ ಯಃಕಶ್ಚಿತ್ ರಾಜಕಾರಣಿಯೋ ಕಾಂಜಿಪೀಂಜಿ ಪುಢಾರಿಯೋ ಆಗಿರಲಿಲ್ಲ ಎಂಬುದನ್ನು ಸೂಚಿಸಲಿಕ್ಕಾಗಿ. 1954ರಲ್ಲಿ ಜೆಪಿ ವಿನೋಬಾ ಭಾವೆಯವರ ಸರ್ವೋದಯ ಚಳವಳಿಗೆ ತನ್ನ ಸಮಸ್ತವನ್ನೂ ಅರ್ಪಿಸಿಕೊಂಡರು. ತೀನ್‍ ಮೂರ್ತಿ ಭವನದಲ್ಲಿ ರಾಜವೈಭೋಗದಲ್ಲಿ ಜೀವನ ಕಳೆಯುತ್ತಿದ್ದ ದೇಶದ ಪ್ರಧಾನಿಗೂ ಎರಡು ಅಂಗಿ-ಚಲ್ಲಣಗಳನ್ನು ಉಳಿಸಿಕೊಂಡು ಮಿಕ್ಕೆಲ್ಲವನ್ನೂ ತನ್ನ ದೇಶದ ಜನಸಾಮಾನ್ಯರ ಏಳಿಗೆಗಾಗಿ ದಾನ ಮಾಡಿಬಿಟ್ಟ ಈ ಲೋಕನಾಯಕನಿಗೂ ಇದ್ದದ್ದು ಭೂಮಿ-ಆಕಾಶಗಳ ವ್ಯತ್ಯಾಸ.

1970ರ ದಶಕ. 70ರ ಹರೆಯದಲ್ಲಿದ್ದ ಜೆಪಿ, ರಾಜಕೀಯದಿಂದ ನಿವೃತ್ತರಾಗಿದ್ದರು. ತನ್ನ ಬದುಕಿನಲ್ಲಿ ಅವರೆಂದೂ ಅಧಿಕಾರಕ್ಕಾಗಿ ಆಸೆಪಡಲಿಲ್ಲ. ರಾಷ್ಟ್ರಪತಿಯಾಗಬಹುದಾಗಿದ್ದ ವ್ಯಕ್ತಿ ಕನಿಷ್ಠ ಗ್ರಾಮಪಂಚಾಯತಿಯ ಅಧ್ಯಕ್ಷ ಕೂಡ ಆಗಲು ಬಯಸಲಿಲ್ಲ! ಆದರೆ, ಬಿಹಾರದಲ್ಲಿ ದಿನನಿತ್ಯ ನಡೆಯುತ್ತಿದ್ದ ರಾಜಕೀಯ ದೊಂಬರಾಟಗಳನ್ನೂ, ಕಾಂಗ್ರೆಸ್ ಸರಕಾರದ ನಿರಂತರ ಭ್ರಷ್ಟಾಚಾರವನ್ನೂ ಅವರು ಕಣ್ಣಾರೆ ಕಂಡಿದ್ದರು. ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡು ಸರಕಾರದ ವಿರುದ್ಧ ತಿರುಗಿಬಿದ್ದಿದ್ದ ಲಾಲೂ ಪ್ರಸಾದ್ ಯಾದವ್, ಸುಶೀಲ್ ಕುಮಾರ್ ಮೋದಿ, ವಸಿಷ್ಠ ನಾರಾಯಣ ಸಿಂಗ್, ರಾಮ್‍ವಿಲಾಸ್ ಪಾಸ್ವಾನ್ ಮುಂತಾದವರು ಜೆಪಿಯ ಮನೆಬಾಗಿಲು ತಟ್ಟಿದರು. ಬಿಹಾರದ ಪರಿಸ್ಥಿತಿಯನ್ನು ಸೋದಾಹರಣ ವಿವರಿಸಿ “ಈಗ ನೀವೇ ನಮಗೆಲ್ಲ ಮಾರ್ಗದರ್ಶನ ಮಾಡಬೇಕು. ನಮ್ಮ ಹೋರಾಟದ ಮುಂದಾಳುತ್ವ ನೀವೇ ವಹಿಸಿಕೊಳ್ಳಬೇಕು. ನಮ್ಮ ನಾಯಕರಾಗಬೇಕು” ಎಂದು ಒತ್ತಾಯಿಸಿದರು. ಜೆಪಿ, ಸಕ್ರಿಯ ಹೋರಾಟದಿಂದ ದೂರ ಹೋಗಿ ಎರಡು ದಶಕಗಳೇ ಕಳೆದುಹೋಗಿದ್ದವು. ಭಾರತದಲ್ಲಿ ರಾಜಕೀಯವಾಗಿ ಸಕ್ರಿಯನಾಗಿದ್ದವನು ಕೂಡ ಐದು ವರ್ಷ ಮನೆಯಲ್ಲಿ ಕೂತರೆ ಜನತೆ ಆತನನ್ನು ಮರೆತು ಬದಿಗಿಡುತ್ತದೆ. ಅಂಥಾದ್ದರಲ್ಲಿ ರಾಜಕೀಯದಲ್ಲಿ ಶಾಸಕ ಅಥವಾ ಸಚಿವನಾಗದ ವ್ಯಕ್ತಿ ಇಪ್ಪತ್ತು ವರ್ಷ ಅಜ್ಞಾತವಾಸ ಮಾಡಿ ಮರಳಿ ಬೀದಿಗೆ ಇಳಿದರೆ ಗುರುತಿಸುವವರು ಯಾರು? ಜೆಪಿ ಬಿಹಾರದ ಬೀದಿ ಬೀದಿಗಳಲ್ಲಿ ಆಯೋಜನೆಯಾಗುತ್ತಿದ್ದ ಸಣ್ಣಪುಟ್ಟ ಸಭೆಗಳಲ್ಲಿ ಭಾಷಣ ಮಾಡತೊಡಗಿದಾಗ ಸೇರುತ್ತಿದ್ದದ್ದು ಎಂಟೋ ಹತ್ತೋ ಜನ ಅಷ್ಟೆ! ಯಾಕೆಂದರೆ ಅದೆಷ್ಟೋ ತರುಣರಿಗೆ ಜೆಪಿ ಯಾರು, ಅವರ ವ್ಯಕ್ತಿತ್ವ ಎಂಥಾದ್ದು, ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಪಾತ್ರ ಏನು ಎಂಬುದೇ ಗೊತ್ತಿರಲಿಲ್ಲ. ಹತ್ತಿಪ್ಪತ್ತು ಜನ ಕೂಡುವ ಸಭೆಗಳನ್ನು ಆಯೋಜಿಸಿಕೊಂಡು ದೇಶದಲ್ಲಿ ಏನಾದರೂ ಬದಲಾವಣೆ ತರುವುದಕ್ಕೆ ಸಾಧ್ಯವುಂಟೇ ಎಂದು, ನೋಡಿದವರು ಮೀಸೆಯಡಿ ನಗುವಂಥ ಪರಿಸ್ಥಿತಿ ಆಗ ಇತ್ತು. ಆದರೆ, ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ಬೇಕು ಎಂಬ ಸಂಕಲ್ಪ ಹೊತ್ತು ಬೀದಿಗಿಳಿದಿದ್ದ ಜೆಪಿಯವರಿಗೆ ಮಾತ್ರ ಗುರಿ ಸ್ಪಷ್ಟವಿತ್ತು. ಅವರು “ಸಂಪೂರ್ಣ ಕ್ರಾಂತಿ” ಎಂಬ ಹೊಸ ಆಲೋಚನೆಯನ್ನು ಜನರಲ್ಲಿ ಬಿತ್ತಿದರು. ಸ್ವಾತಂತ್ರ್ಯ ಬಂದು ಇಪ್ಪತ್ತೈದು ವರ್ಷಗಳಲ್ಲೇ ದೇಶ ಭ್ರಷ್ಟಾಚಾರದ ಕೆಸರಲ್ಲಿ ಮುಳುಗೇಳತೊಡಗಿದೆ. ಹೀಗೇ ಬಿಟ್ಟರೆ ಮುಂದೆಂದಾದರೂ ಮತ್ತೆ ಬ್ರಿಟಿಷರು ಈ ದೇಶದ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ದಟ್ಟವಾಗಿದೆ. ಅಥವಾ ಭಾರತೀಯರೇ ಇಲ್ಲಿನ ನಾಯಕರ ಭ್ರಷ್ಟಾಚಾರಕ್ಕೆ ಹೇಸಿಗೆಪಟ್ಟು ಬ್ರಿಟಿಷರನ್ನು ಕರೆತಂದರೂ ಅಚ್ಚರಿಯಿಲ್ಲ! ಹಾಗಾಗಿ ಈ ದೇಶ ಉಳಿಯಬೇಕಾದರೆ ರಾಜಕೀಯ ಕ್ಷೇತ್ರ ಶುದ್ಧವಾಗಬೇಕು. ಭ್ರಷ್ಟಾಚಾರಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು. ಫಟಿಂಗರು, ಲಫಂಗರು, ಅಯೋಗ್ಯರು ರಾಜಕೀಯಕ್ಕೆ ಬಂದು ಪಟ್ಟಕ್ಕೇರುವ ಬದಲು ಜನಸಾಮಾನ್ಯರಲ್ಲಿ ಪರಿಶುದ್ಧ ಹಸ್ತರು ರಾಜಕೀಯ ಪ್ರವೇಶ ಮಾಡುವಂತಾಗಬೇಕು. ಆರ್ಥಿಕ ಅಸಮಾನತೆ ತೊಲಗಬೇಕು. ದೇಶದ ಎಲ್ಲ ಪ್ರಜೆಗಳಿಗೂ ಕನಿಷ್ಠ ಶಿಕ್ಷಣವಾದರೂ ಸಿಗುವಂತಾಗಬೇಕು. ಹೀಗಾದಾಗಲೇ ಸಂಪೂರ್ಣ ಕ್ರಾಂತಿ ಆಯಿತೆಂದು ಅರ್ಥ – ಇದು ಜೆಪಿ ಹರಡುತ್ತಿದ್ದ ಸಂದೇಶ. ಒಟ್ಟು ಏಳು ಅಂಶಗಳನ್ನು ಇಟ್ಟುಕೊಂಡು ಅವರು ಸಪ್ತಕ್ರಾಂತಿಯ ಸುಪ್ತಬಯಕೆಯನ್ನು ಪ್ರಜೆಗಳ ಹೃದಯಗಳಲ್ಲಿ ಬಿತ್ತುವ ಕೆಲಸಕ್ಕೆ ಇಳಿದುಬಿಟ್ಟರು. ದಿನಗಳೆದಂತೆ, ಹತ್ತಿಪ್ಪತ್ತು ಜನ ಸೇರುತ್ತಿದ್ದಲ್ಲಿ ನೂರಿನ್ನೂರು ಮಂದಿ ಜಮಾಯಿಸತೊಡಗಿದರು. ನೂರುಗಳು ಮತ್ತಷ್ಟು ನೂರುಗಳನ್ನು ತಂದು ಸಾವಿರವಾದವು. ಪಾಟ್ನಾದ ಗಾಂಧಿ ಮೈದಾನದಲ್ಲಿ ಜೆಪಿಯ ಭಾಷಣ ಕೇಳಲು ಮೂರೂವರೆ ಲಕ್ಷ ಜನ ಸೇರಿಬಿಟ್ಟರು! ಅಷ್ಟೊಂದು ಜನರನ್ನು ತನ್ನ ಇತಿಹಾಸದಲ್ಲೇ ಆ ಮೈದಾನ ಕಂಡಿರಲಿಲ್ಲ. ಬಂದಿದ್ದ ಜನ ಬಿಸಿಲು, ಸೆಖೆ ಎನ್ನದೆ ಕಂಪೌಂಡು, ಮರ, ಕಟ್ಟಡ ಎನ್ನುತ್ತ ಸಿಕ್ಕಸಿಕ್ಕಲ್ಲಿ ಹತ್ತಿಕೂತು ಜೆಪಿಯವರ ಮಾತುಗಳನ್ನು ಉತ್ಸಾಹದಿಂದ ಕೇಳಿದರು. ಎರಡೇ ವರ್ಷಗಳಲ್ಲಿ ಬಿಹಾರದ ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜನವಿರೋಧಿ ನೀತಿಗಳಿಂದಾಗಿ ಪ್ರಜೆಗಳ ವಿಶ್ವಾಸ ಕಳೆದುಕೊಂಡು ಮುರಿದುಬೀಳುವ ಸ್ಥಿತಿಗೆ ಬಂದು ತಲುಪಿತು. ಅಧಿಕಾರಕ್ಕೇರಿದ ಎರಡೇ ವರ್ಷಗಳಲ್ಲಿ ಮುಖ್ಯಮಂತ್ರಿ ಅಬ್ದುಲ್ ಗಫೂರ್ ರಾಜೀನಾಮೆ ಕೊಟ್ಟು ತಲೆತಗ್ಗಿಸಿ ಅಧಿಕಾರದಿಂದ ಇಳಿದರು. ಈ ಎಲ್ಲ ಬೆಳವಣಿಗೆಗಳಿಂದ ಕೇಂದ್ರ ಸರ್ಕಾರಕ್ಕೆ ಹೋದ ಅತ್ಯಂತ ಸ್ಪಷ್ಟವಾದ ಸಂದೇಶ ಏನು ಎಂದರೆ – ಇಂದಿರಾಗಾಂಧಿ ಪ್ರಶ್ನಾತೀತ ನಾಯಕಿಯೇನೂ ಅಲ್ಲ! ಅಗತ್ಯ ಬಿದ್ದರೆ ಈ ದೇಶದ ಸಾಮಾನ್ಯರಲ್ಲಿ ಸಾಮಾನ್ಯರಾದ ಜನ ಆಕೆಯನ್ನು ಕೂಡ ಅಧಿಕಾರದಿಂದ ಕೆಳಗಿಳಿಸಿ ಮನೆಗೆ ಕಳಿಸಬಲ್ಲಷ್ಟು ಪ್ರಬಲರು. ಮತ್ತು ಅವರಿಗೆಲ್ಲ ಬೆಂಬಲಕ್ಕೆ ನಿಂತಿರುವ ಅಸಾಮಾನ್ಯ ನಾಯಕರೇ ಜೆಪಿ!

1975ರ ಜೂನ್ 12ರಂದು ಅಲಹಾಬಾದ್ ಹೈಕೋರ್ಟ್ ತೀರ್ಪು ಇಂದಿರಾಗಾಂಧಿಯವರ ವಿರುದ್ಧ ಬಂದ ಬೆನ್ನಲ್ಲೇ ಜೆಪಿಯವರು ಬಿಹಾರದಲ್ಲಿ ಆಕೆಯ ವಿರುದ್ಧ ಭಾಷಣ ಮಾಡಿದರು. “ಇಂದಿರಾಗಾಂಧಿ ಎಂದರೆ ಭ್ರಷ್ಟಾಚಾರದ ಮೂರ್ತರೂಪ. ಈ ದೇಶದಲ್ಲಿ ಪ್ರಧಾನಮಂತ್ರಿಯಾಗಿರುವವರೇ ಚುನಾವಣಾ ಅಕ್ರಮ ಮಾಡಿ ಗೆದ್ದುಬಂದ ಪ್ರಕರಣ ಹಿಂದೆ ನಡೆದಿರಲಿಲ್ಲ, ಮುಂದೆ ನಡೆಯಲೂಬಾರದು. ನಮ್ಮ ಪ್ರಜಾಪ್ರಭುತ್ವ ಇಂಥ ದುರವಸ್ಥೆಗೆ ಇಳಿದಿದೆ ಎಂದಾದರೆ ಇದಕ್ಕಿಂತ ಬ್ರಿಟಿಷರ ಆಡಳಿತವೇ ನೂರು ಪಟ್ಟು ಚೆನ್ನಾಗಿತ್ತೆಂದು ಜನರು ಭಾವಿಸುವಂತಾಗುತ್ತದೆ. ಹಾಗಾಗಿ, ತನ್ನ ಹುದ್ದೆಗೆ ಕಳಂಕ ಮೆತ್ತಿಕೊಳ್ಳುವಂತೆ ಮಾಡಿದ ಇಂದಿರಾಗಾಂಧಿ ಪ್ರಧಾನಿಪೀಠದಿಂದ ಇಳಿಯಬೇಕು” ಎಂದು ಜೆಪಿ ವೇದಿಕೆಯ ಮೇಲಿಂದ ಹೇಳಿದರು. ಇದು ದೊಡ್ಡ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿತು. ಇಂದಿರಾಗಾಂಧಿಯ ಸುತ್ತ ನ್ಯಾಯಾಂಗದ ಕುಣಿಕೆಗಳು ದಿನದಿನಕ್ಕೂ ಬಿಗಿಯಾಗತೊಡಗಿದವು. ಸುದ್ದಿಪತ್ರಿಕೆಗಳು ಇಂದಿರಾ ರಾಯ್‍ಬರೇಲಿಯಲ್ಲಿ ಎಂತೆಂಥ ಅಕ್ರಮಗಳನ್ನು ಚುನಾವಣೆ ಸಂದರ್ಭದಲ್ಲಿ ಮಾಡಿದರು ಎಂಬುದನ್ನು ವಿವರವಾಗಿ ಪ್ರಕಟಿಸತೊಡಗಿದವು. ಭಾರತದಲ್ಲಿ ಅದುವರೆಗೆ ಪ್ರಧಾನಿಯೊಬ್ಬರು ಚುನಾವಣಾ ಅಕ್ರಮದ ಆರೋಪ ಹೊತ್ತು ರಾಜೀನಾಮೆ ಕೊಟ್ಟು ಅಧಿಕಾರತ್ಯಾಗ ಮಾಡಿದ ಪ್ರಕರಣ ನಡೆದಿರಲಿಲ್ಲ. ಈಗ ಇಂದಿರಾ ಅಂಥದೊಂದು ಕ್ರಮಕ್ಕೆ ಮುಂದಾಗಿ ಇತಿಹಾಸ ಸೃಷ್ಟಿಸಬೇಕಿತ್ತು. ನೆಹರೂ ಮಗಳು ಎಂಬುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಏಕಮೇವಾದ್ವಿತೀಯ ನಾಯಕಿ ಎಂದು ಕರೆಸಿಕೊಂಡಿದ್ದ ಇಂದಿರೆಗೆ ಈ ಅವಮಾನವನ್ನು ಸಹಿಸಿಕೊಳ್ಳುವುದು ಬಹಳ ಕಷ್ಟದ ಮಾತಾಗಿತ್ತು. ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳುವ ಸಲುವಾಗಿ ಆಕೆ ತನ್ನ ಅರ್ಜಿಯನ್ನು ಸುಪ್ರೀಂ ಕೋರ್ಟಿನ ಮುಂದಿಟ್ಟರು. ಆ ಕಾಲದ ಅತ್ಯಂತ ಪ್ರಸಿದ್ಧ ವಕೀಲ ನಾನಾ ಪಾಲಖೀವಾಲ ಇಂದಿರಾಗಾಂಧಿಯ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದಿಸುವವರಿದ್ದರು.

ಭಟ್ಟಂಗಿಗಳಿಂದ ತುಂಬಿಹೋಗಿದ್ದ ಕಾಂಗ್ರೆಸ್ ಪಕ್ಷ ತನ್ನ ರಾಣಿಜೇನನ್ನು ರಕ್ಷಿಸಿಕೊಳ್ಳಲೋಸುಗ ಎಲ್ಲ ಬಗೆಯ ಸರ್ಕಸ್ಸನ್ನೂ ಪ್ರಾರಂಭಿಸಿತು. ದೆಹಲಿಯ ಬೋಟ್ ಕ್ಲಬ್ ಮೈದಾನದಲ್ಲಿ ಜೂನ್ 20ರಂದು ಒಂದು ಬೃಹತ್ ಸಮಾವೇಶ ಆಯೋಜನೆಯಾಯಿತು. ಇಂದಿರಾಗಾಂಧಿಯೇ ಅದರ ಪ್ರಮುಖ ಆಕರ್ಷಣೆ. ಸಮಾವೇಶದಲ್ಲಿ “ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ” ಎಂಬ ಘೋಷಣೆಯನ್ನು ಸಾವಿರಾರು ಜನರಿಂದ ಕೂಗಿಸಲಾಯಿತು. ಇಂದಿರಾಗಾಂಧಿ ವೇದಿಕೆಯಲ್ಲಿ ನಿಂತು ತಾಸಿಗೂ ಮಿಕ್ಕಿ ಉದ್ದದ ಒಂದು ಭಾಷಣ ಮಾಡಿದರು. ತಾನು ಹೇಗೆ ಅಮಾಯಕಿ, ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತೆ, ತನ್ನನ್ನು ಹೇಗೆ ಪರಿಸ್ಥಿತಿಯ ಅಡಕತ್ತರಿಯಲ್ಲಿ ಹಾಕಿ ಅಮುಕಲಾಗಿದೆ, ಹೇಗೆ ತನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ನಡೆಸಲಾಗಿದೆ… ಇತ್ಯಾದೀತ್ಯಾದಿ ಈಗಿನ ಕಳ್ಳ ರಾಜಕಾರಣಿಗಳ ರೀತಿಯಲ್ಲೇ ಅಂದೂ ಇಂದಿರಾಗಾಂಧಿ ಭಾವನಾತ್ಮಕ ಕರುಣಾಜನಕ ಭಾಷಣ ಒರಲಿದರು. ಈ ಕಾರ್ಯಕ್ರಮವನ್ನು ಸಾಧ್ಯವಾದಷ್ಟು ವಿಸ್ತಾರವಾಗಿ ದೂರದರ್ಶನದಲ್ಲಿ ತೋರಿಸಬೇಕು ಎಂದು ಮಾಹಿತಿ ಮತ್ತು ಪ್ರಸಾರ ಖಾತೆಗೆ ಮೊದಲೇ ಖಡಕ್ ಸೂಚನೆ ಹೋಗಿತ್ತು. ಹಾಗಾಗಿ, ಇಂದಿರೆಯ ಸುತ್ತಮುತ್ತ ನಾಲ್ಕೈದು ಕ್ಯಾಮರಾಗಳನ್ನಿಟ್ಟು ದೂರದರ್ಶನದ ಸಿಬ್ಬಂದಿ ವಿಡಿಯೋ ಚಿತ್ರೀಕರಣ ಮಾಡಿದರು. ಅದನ್ನು ನಂತರ ಸುಮಾರು ಮುಕ್ಕಾಲು ತಾಸಿನ ಕಾರ್ಯಕ್ರಮವಾಗಿ ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. ಆದರೆ, ಕಾರ್ಯಕ್ರಮ ಟಿವಿಯಲ್ಲಿ ಬಿತ್ತರಗೊಂಡ ಸ್ವಲ್ಪ ಸಮಯದಲ್ಲೇ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಐ.ಕೆ. ಗುಜ್ರಾಲ್ ಅವರಿಗೆ ಪ್ರಧಾನಮಂತ್ರಿಗಳ ಕಚೇರಿಯಿಂದ ತುರ್ತುಕರೆ ಬಂತು. ಇಂದಿರೆಯ ಸೂಚನೆ ಎಂದರೆ ತೊಟ್ಟ ಅಂಗಿಯಲ್ಲಿ, ಇದ್ದ ಭಂಗಿಯಲ್ಲಿ ಹಿಂದೆಮುಂದೆ ಯೋಚಿಸದೆ ಓಡಿ ಆಕೆಯ ಮುಂದೆ ನಿಲ್ಲಬೇಕೆಂಬುದು ಆಗಿದ್ದ ಅಲಿಖಿತ ಕಾನೂನು. ಗುಜ್ರಾಲ್ ಕೂಡ ಎದ್ದೆನೋ ಬಿದ್ದೆನೋ ಎಂಬಂತೆ ಪ್ರಧಾನಿ ಕಾರ್ಯಾಲಯಕ್ಕೆ ಓಡಿದರು. ಅಲ್ಲಿ ಹೋದರೆ, “ಪ್ರಧಾನಿಗಳು ಯಾವುದೋ ಕೆಲಸದಲ್ಲಿ ಬ್ಯುಸಿ ಇದ್ದಾರೆ. ನೀವು ಅರ್ಜೆಂಟಾಗಿ ಸಂಜಯ ಗಾಂಧಿ ಅವರನ್ನು ಕಾಣಬೇಕೆಂದು ಸೂಚನೆ ಬಂದಿದೆ” ಎಂದು ತಿಳಿಸಲಾಯಿತು. ಗುಜ್ರಾಲ್ ಮತ್ತೆ ಸಂಜಯ್ ಗಾಂಧಿಯಿದ್ದ ಸ್ಥಳಕ್ಕೆ ಓಡಿದರು. ಅಲ್ಲಿ ಇಂದಿರೆಯ ಮಗ ಸಂಜಯ ಕೆಂಡಗಣ್ಣನಾಗಿ ಹಾವಿನಂತೆ ಬುಸ ಬುಸ ಉಸಿರುಬಿಡುತ್ತ ಗುಜ್ರಾಲ್ ಎಂಬ ಮಿಕ ಬರುವುದನ್ನೇ ಕಾಯುತ್ತ ನಿಂತಿದ್ದ. ಗುಜ್ರಾಲ್ ಆತನ ಎದುರುಹೋಗಿ ಜೀ ಹುಜೂರ್ ಎನ್ನುವಷ್ಟರಲ್ಲಿ ಆತ ತನ್ನ ಫೈರಿಂಗ್ ಶುರುವಿಟ್ಟುಕೊಂಡ. “ಈ ಕಾರ್ಯಕ್ರಮಕ್ಕಾಗಿ ಇಡೀ ಪಕ್ಷ ದುಡಿದಿತ್ತು. ರಾತ್ರಿಹಗಲು ತಯಾರಿಗಳಾಗಿತ್ತು. ಸುಮಾರು ಮೂರು ಗಂಟೆಯ ಈ ಕಾರ್ಯಕ್ರಮಕ್ಕಾಗಿ ಅದೆಷ್ಟು ಜನ ನಿದ್ದೆಬಿಟ್ಟು ಕೆಲಸ ಮಾಡಿದ್ದಾರೆ! ಹಾಗಿರುವಾಗ ಈ ಕಾರ್ಯಕ್ರಮ ದೂರದರ್ಶನದಲ್ಲಿ ನೇರಪ್ರಸಾರ ಆಗಬೇಕೋ ಬೇಡವೋ? ನೀನೇನು ಕಾಂಗ್ರೆಸ್ ಸರಕಾರದಲ್ಲಿ ಸಚಿವನಾಗಿ ಕೆಲಸ ಮಾಡುತ್ತಿದ್ದೀಯೋ ಇಲ್ಲಾ ಕತ್ತೆ ಕಾಯುತ್ತಿದ್ದೀಯೋ?” ಎಂಬ ಸಿಡಿಗುಂಡು ನೇರವಾಗಿ ಬಂದು ಐ.ಕೆ. ಗುಜ್ರಾಲ್ ಎದೆಯನ್ನು ಹೊಕ್ಕಿತು.

(ಮುಂದುವರಿಯುವುದು)

Comments

comments