ಎಲ್ಲ ಬಿಟ್ಟು ಇಂಗ್ಲೆಂಡಿಗೆ ಹೋಗಿಬಿಡಲೇ ಎಂದು ಯೋಚಿಸಿದ್ದಾಕೆಯೇ ಶಾಸ್ತ್ರೀಜಿ ಸತ್ತ ಮರುದಿನ ದೇಶದ ಜುಟ್ಟು ಹಿಡಿಯಲು ತಯಾರಾಗಿದ್ದಳು! ಎಮರ್ಜೆನ್ಸಿ ದಿನಗಳು – ಭಾಗ 1

ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ. ಸಾಗರಿಕಾ ಘೋಷ್ ಎಂಬ ಎಡಪಂಥೀಯ ಮತ್ತು ಮೋದಿ ದ್ವೇಷಿ ಪತ್ರಕರ್ತೆ ಇತ್ತೀಚೆಗೆ ಬರೆದು ಬಿಡುಗಡೆಗೊಳಿಸಿದ “ಇಂದಿರಾ” ಎಂಬ ಕೃತಿಯ ಕುರಿತು ನಿಧಿ ರಾಜ್ದಾನ್ ಎಂಬ ಎಡಪಂಥೀಯ ಮತ್ತು ಮೋದಿ ದ್ವೇಷಿ ನಿರೂಪಕಿ ಎನ್‍ಡಿಟಿವಿಯಲ್ಲಿ ನಡೆಸಿಕೊಡುತ್ತಿದ್ದ ಪರಿಚಯ ಕಾರ್ಯಕ್ರಮ ಅದು. ಮತ್ತೊಬ್ಬ ಎಡಪಂಥೀಯ ಮತ್ತು ಮೋದಿ ದ್ವೇಷಿ ಪತ್ರಕರ್ತ ಕಮ್ ಚಿಂತಕರಾದ ಎನ್. ರಾಮ್ ಕೂಡ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಡಪಂಥೀಯ ಮತ್ತು ಮೋದಿ ದ್ವೇಷಿಗಳ ಉಳಿದೆಲ್ಲ ಕಾರ್ಯಕ್ರಮಗಳಂತೆ ಇದು ಕೂಡ ಇಂದಿರಾ ಕುರಿತ ಪುಸ್ತಕದ ಪರಿಚಯ ಎಂಬಲ್ಲಿಂದ ಪ್ರಾರಂಭವಾಗಿ ಮೋದಿಯನ್ನು ಬಯ್ಯುವುದರತ್ತ ಹೊರಳಿತು. ಅರ್ಧ ತಾಸಿನ ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ನಿಮಿಷಗಳನ್ನು ಮೋದಿನಿಂದನೆಗೇ ಮೀಸಲಿಡಲಾಯಿತು. ಆದರೆ ಇದರಲ್ಲಿ ನನಗೆ ಕುತೂಹಲ ಮೂಡಿಸಿದ ಕೆಲವು ಸಾಲುಗಳೆಂದರೆ ಎನ್. ರಾಮ್ (ಆತ ಸಾಗರಿಕಾ ಬರೆದ ಪುಸ್ತಕ ಓದಿರಲಿಲ್ಲ. ಆದರೂ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಮೋದಿಭಂಜನೆಯನ್ನು ಮಾಡುತ್ತ ಸಕ್ರಿಯವಾಗಿ ಭಾಗವಹಿಸಿದರು!) ಹೇಳಿದ ಒಂದು ಮಾತು – “ಮೋದಿಯನ್ನೂ ಇಂದಿರಾಗಾಂಧಿಯನ್ನೂ ಹೋಲಿಸುವುದು ಹೇಗೆ ಸಾಧ್ಯ! ಇಂದಿರೆ ಸ್ವಾತಂತ್ರ್ಯ ಸಂಗ್ರಾಮದ ಮಗಳು. ಬ್ರಿಟಿಷರ ವಿರುದ್ಧ ಭಾರತೀಯರು ನಡೆಸುತ್ತಿದ್ದ ಸಂಗ್ರಾಮದ ಬೆಂಕಿಯಲ್ಲಿ ಅರಳಿದ ಕೂಸು ಅದು. ಆಕೆಯ ದೇಶಭಕ್ತಿ, ತ್ಯಾಗ, ನಿಸ್ವಾರ್ಥತೆ, ಪ್ರಾಮಾಣಿಕತೆಗಳು ಪ್ರಶ್ನಾತೀತ!” ಹಾಗೆಯೇ ಇಂದಿರೆಯ ಮೇಲೆ ಕೃತಿ ರಚಿಸಿದ ಸಾಗರಿಕಾ ಹೇಳಿದ ಮಾತು – “ಇಂದಿರಾಗಾಂಧಿ ಬಹಳ ಸಂಕೀರ್ಣವಾದ ವ್ಯಕ್ತಿತ್ವ. ಅರಮನೆಯೊಳಗೆ ಬಂಧಿಯಾದ ಸುಂದರ ರಾಜಕುಮಾರಿಯಂತೆ ಆಕೆ ಗಟ್ಟಿವ್ಯಕ್ತಿತ್ವ ಇದ್ದರೂ ಅಭದ್ರತೆಯ ಭಾವನೆಯೆಂಬ ಅರಮನೆಯೊಳಗೆ ಬಂಧಿಯಾದ ಅಸಹಾಯಕಿ. ಆಕೆ ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿದರು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಹಾಗೆ ಹೇರಿದ್ದ ತುರ್ತು ಪರಿಸ್ಥಿತಿಯನ್ನು ರದ್ದು ಮಾಡಿದವರೂ ಆಕೆಯೇ ಎಂಬುದನ್ನು ಮರೆಯಬಾರದು”.

ಈ ಮಾತುಗಳ ವಿಶ್ಲೇಷಣೆಯನ್ನು ಈ ಲೇಖನ ಸರಣಿಯ ಕೊನೆಗೆ ಮತ್ತೊಮ್ಮೆ ಎತ್ತಿಕೊಳ್ಳೋಣಂತೆ. ಸದ್ಯಕ್ಕೆ ನಾನಿಲ್ಲಿ ಇಂದಿರಾಗಾಂಧಿ ಎಂಬ “ಸಂಕೀರ್ಣ” ವ್ಯಕ್ತಿತ್ವ 1975ರಿಂದ 77ರವರೆಗೆ ಹೇಗೆ ನಡೆದುಕೊಂಡಿತು ಎಂಬುದನ್ನಷ್ಟೇ ವಿಶ್ಲೇಷಣೆಗೆ ಎತ್ತಿಕೊಂಡಿದ್ದೇನೆ. ಒಂದು “ಮಹಾನ್” ವ್ಯಕ್ತಿತ್ವದ ಇಡೀ ಜೀವಿತವನ್ನು ಪರಾಮರ್ಶಿಸುವುದು ಲೇಖನದ ವ್ಯಾಪ್ತಿಯನ್ನು ಮೀರುವುದರಿಂದ ಕೇವಲ 21 ತಿಂಗಳಲ್ಲಿ ಏನೇನು ಘಟನಾವಳಿಗಳಾದವು ಎಂಬುದನ್ನು ವಿಶ್ಲೇಷಿಸುವುದು ಸೂಕ್ತ ಎಂಬುದು ನನ್ನ ಭಾವನೆ. ಅದಕ್ಕೆ ಹಿನ್ನೆಲೆಯಾಗಿ ಇಂದಿರಾ ಭಾರತದ ಪ್ರಧಾನಿ ಆದದ್ದು ಹೇಗೆ ಎಂಬುದನ್ನು ಕೂಡ ನಾವು ಅವಲೋಕಿಸಬೇಕಾಗುತ್ತದೆ. ಜವಹರ್‍ಲಾಲ್ ನೆಹರೂ ಪ್ರಧಾನಿಯಾಗಿ ಹತ್ತು ವರ್ಷಗಳನ್ನು ಪೂರೈಸಿದ ಮೇಲೆ ಭಾರತದಲ್ಲಿ “ನೆಹರೂ ನಂತರ ಯಾರು?” ಎಂಬ ಚರ್ಚೆ ನಿಧಾನವಾಗಿ ಹುಟ್ಟಿಕೊಂಡಿತು. ಈ ದೇಶವನ್ನು ಬೂದಿಯಿಂದ ಎತ್ತಿಕಟ್ಟಿದ, ಹೊಚ್ಚಹೊಸದಾಗಿ ರೂಪಿಸಿದ ಶಿಲ್ಪಿ ನೆಹರೂ; ಅವರ ಎತ್ತರಕ್ಕೆ ಏರಬಲ್ಲ ಎರಡನೇ ವ್ಯಕ್ತಿತ್ವ ಕಾಂಗ್ರೆಸ್‍ನಲ್ಲಾಗಲೀ ಅದರ ಹೊರಗಾಗಲೀ ಯಾವುದಾದರೂ ಇದೆಯೇ ಎಂಬುದು ಆ ಚರ್ಚೆಯ ಮೂಲ ತಿರುಳಾಗಿತ್ತು. ಸ್ವಾರಸ್ಯವೆಂದರೆ, ಅಂಥ ಚರ್ಚೆಯನ್ನು ಮೂಲತಃ ಹುಟ್ಟುಹಾಕಿದ್ದು ಸ್ವತಃ ನೆಹರೂ ಅವರೇ! ಅವರು ನಿಸ್ವಾರ್ಥಿ ರಾಜಕಾರಣಿಯೇನೂ ಆಗಿರಲಿಲ್ಲ; ಆದರೆ ತಾನೊಬ್ಬ ಆದರ್ಶ ಮುತ್ಸದ್ದಿ ಮತ್ತು ತ್ಯಾಗಮಯಿ ದೇವತೆ ಎಂದು ಜಗತ್ತಿಗೆ ತೋರಿಸಿಕೊಳ್ಳುವುದು ಹೇಗೆ ಎಂಬುದು ಅವರಿಗೆ ಗೊತ್ತಿತ್ತು. ತಾನು ರಾಜಕೀಯ ನಿವೃತ್ತಿ ತೆಗೆದುಕೊಂಡುಬಿಟ್ಟರೆ ದೇಶದಲ್ಲಿ ವಿಪ್ಲವವೇ ನಡೆದುಹೋಗಬಹುದೆಂಬ ಭಾವನೆಯನ್ನು ವ್ಯವಸ್ಥಿತವಾಗಿ ಹರಡುವ ಮೂಲಕ ತನ್ನ ಸ್ಥಾನವನ್ನು ಸಾಯುವವರೆಗೂ ಭದ್ರಪಡಿಸಿಕೊಂಡ ನೆಹರೂ ದಗಲಬಾಜಿತನವನ್ನು ಆ ಕಾಲದಲ್ಲಿ ಕೆಲವರಾದರೂ ಅರ್ಥ ಮಾಡಿಕೊಂಡಿದ್ದರು. ಅಡಿಗರ “ನೆಹರೂ ನಿವೃತ್ತರಾಗುವುದಿಲ್ಲ” ಕವಿತೆ ಆ ಕಾಲದ ಅಂಥದೊಂದು ರಾಜಕೀಯ ವಿಡಂಬನೆ. ತನ್ನನ್ನು ತಾನು ಏಕಮೇವಾದ್ವಿತೀಯ ನಾಯಕನೆಂದು ಬಿಂಬಿಸಿಕೊಂಡರೂ ನೆಹರೂಗೆ ತನ್ನ ಪಕ್ಷದೊಳಗೆ ಬೆಳೆಯುತ್ತಿದ್ದ ಇತರ ಯುವನಾಯಕರು ಎಲ್ಲಿ ತನ್ನನ್ನು ಮೀರಿಸಿಬಿಡುತ್ತಾರೋ ಎಂಬ ಆತಂಕ ಇದ್ದದ್ದು ಕೂಡ ಸಹಜ. ವಿತ್ತಸಚಿವನಾಗಿದ್ದ ಮೊರಾರ್ಜಿ ದೇಸಾಯಿ ಕಾಂಗ್ರೆಸ್‍ನೊಳಗೇ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದು ಇನ್ನೇನು ತನ್ನನ್ನು ಮನೆಯಲ್ಲಿ ಕೂರಿಸಿ ಮುಂದುವರಿಯುತ್ತಾರೆಂಬುದು ಖಚಿತವಾದಾಗ ನೆಹರೂ 1963ರಲ್ಲಿ ದೇಸಾಯಿಯನ್ನು ಕೈಬಿಟ್ಟು ಕ್ಯಾಬಿನೆಟ್ ರಚಿಸಿ ತನಗೊದಗಲಿದ್ದ ಕಂಟಕವನ್ನು ತಾತ್ಕಾಲಿಕವಾಗಿ ಪರಿಹರಿಸಿಕೊಂಡರು.

ನೆಹರೂ ತೀರಿಕೊಂಡಾಗ ಮುಂದಿನ ಪ್ರಧಾನಿ ಯಾರಾಗಬೇಕೆಂಬ ವಿಷಯದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಮುಸುಕಿನ ಗುದ್ದಾಟಗಳು ಪ್ರಾರಂಭವಾದವು. ಆ ಕಾಲಕ್ಕಾಗಲೇ ಸಿಂಡಿಕೇಟ್ ಎಂಬ “ಹೈಕಮಾಂಡ್” ಒಂದು ಕಾಂಗ್ರೆಸ್‍ನೊಳಗೆ ರಚನೆಯಾಗಿತ್ತು. ಪಕ್ಷ ಮತ್ತು ಆ ಮೂಲಕ ದೇಶ ಮುನ್ನಡೆಯುವ ದಿಕ್ಕನ್ನು ನಿರ್ಧರಿಸುವ ಹಕ್ಕನ್ನು ಈ ಸಿಂಡಿಕೇಟ್ ತನ್ನ ಕೈಯಲ್ಲಿಟ್ಟುಕೊಂಡಿತ್ತು. ನೆಹರೂ ಮರಣದ ನಂತರ ಯಾವ ಕಾರಣಕ್ಕೂ ಮೊರಾರ್ಜಿ ದೇಸಾಯಿ ಪ್ರಧಾನಿಯಾಗದಂತೆ ತಡೆಯಬೇಕೆಂದು ಸಿಂಡಿಕೇಟ್‍ನ ಸದಸ್ಯರು ತೆರೆಮರೆಯ ಹಲವು ಮಾತುಕತೆ, ಒಪ್ಪಂದ ನಡೆಸತೊಡಗಿದರು. ಮೊರಾರ್ಜಿಯವರಿಗೂ ಸಿಂಡಿಕೇಟ್‍ನ ಸದಸ್ಯರಿಗೂ ತತ್ತ್ವ-ಸಿದ್ಧಾಂತಗಳಲ್ಲೇನೂ ಅಂಥ ದೊಡ್ಡ ಭೇದವಿರಲಿಲ್ಲ. ಇತ್ತಂಡಗಳೂ ಬಲಪಂಥೀಯ ವಿಚಾರಗಳನ್ನೇ ಹೆಚ್ಚಾಗಿ ಅಪ್ಪಿಕೊಂಡಿದ್ದವು. ನೆಹರೂ ಅವರ ಸಮಾಜವಾದಿ, ಕಮ್ಯುನಿಸ್ಟ್‍ವಾದಿ ಚಿಂತನೆಗೆ ಎರಡೂ ಕಡೆಯೂ ಹೆಚ್ಚು ಒಲವೇನೂ ಇರಲಿಲ್ಲ. ಆದರೆ ಅವರಿಬ್ಬರನ್ನು ಬೇರ್ಪಡಿಸಿದ್ದು ರಾಜಕೀಯ ಅಧಿಕಾರದ ಮೇಲಾಟ. ಮೊರಾರ್ಜಿ ಪ್ರಧಾನಿಯಾಗಿದ್ದೇ ಆದರೆ ಪಕ್ಷದೊಳಗೆ ನಮ್ಮ ಪ್ರಭುತ್ವ, ಪ್ರತಿಷ್ಠೆಗಳು ಗಣನೀಯವಾಗಿ ಕುಸಿಯುತ್ತವೆ; ಮೊರಾರ್ಜಿ ಇಡೀ ಸರಕಾರವನ್ನು ತನ್ನ ಮುಷ್ಟಿಯೊಳಗಿಟ್ಟುಕೊಂಡು ಆಡಳಿತ ನಡೆಸುತ್ತಾರೆ; ನಾವು ಇದ್ದೂ ಇಲ್ಲದಂತಾಗಿ ಅಸ್ತಿತ್ವ ಕಳೆದುಕೊಳ್ಳುತ್ತೇವೆ ಎಂಬುದು ಸಿಂಡಿಕೇಟ್ ಸದಸ್ಯರ ಆಂತರಿಕ ಅಳಲಾಗಿತ್ತು. ಹಾಗಾಗಿ ಅವರು ಪಕ್ಷದೊಳಗೆ ಮಿಂಚಿನ ಪ್ರಚಾರ ನಡೆಸಿ, ನೆಹರೂ ಸ್ಥಾನವನ್ನು ತುಂಬಬಲ್ಲ ಅರ್ಹತೆಯಿರುವುದು ಲಾಲ್ ಬಹದ್ದೂರ್ ಶಾಸ್ತ್ರಿಯೊಬ್ಬರಿಗೇ ಎಂಬ ಅಭಿಪ್ರಾಯ ಸರ್ವತ್ರ ಮೂಡುವಂತೆ ನೋಡಿಕೊಂಡರು. ಮೊರಾರ್ಜಿಗೆ ಹೋಲಿಸಿದರೆ ಶಾಸ್ತ್ರಿ ಅಜಾತಶತ್ರು; ಸಹೃದಯಿ; ಮೆಲುದನಿಯ ಮಾತುಗಾರ. ಅವರನ್ನು ಹೇಳಿದಂತೆ ಕುಣಿಸುವುದು ಸುಲಭವಾಗಬಹುದು ಎಂಬುದು ಸಿಂಡಿಕೇಟ್ ಲೆಕ್ಕಾಚಾರವಾಗಿತ್ತು.

ಆದರೆ ಶಾಸ್ತ್ರಿ ತನ್ನ ದೇಹದಷ್ಟು ಕುಬ್ಜ ವ್ಯಕ್ತಿತ್ವದವರೇನೂ ಅಲ್ಲ ಎಂಬುದು ಸಿಂಡಿಕೇಟಿಗೆ ಅರ್ಥವಾದದ್ದು ತಡವಾಗಿ. ಅಧಿಕಾರ ಪಡೆದ ಮೇಲೆ ತಾನೊಬ್ಬ ಅತ್ಯಂತ ಸಮರ್ಥ ಪ್ರಧಾನಿ ಎಂಬುದನ್ನು ಶಾಸ್ತ್ರೀಜಿ ತೋರಿಸಿಕೊಟ್ಟರು. ಆದರೆ ದುರದೃಷ್ಟವನ್ನು ಬೆನ್ನಿಗೆ ಕಟ್ಟಿಕೊಂಡೇ ಬಂದಂತಿದ್ದ ಅವರು ಪ್ರಧಾನಿಯಾಗಿ ಕೆಲಸ ಮಾಡಿದ್ದು 19 ತಿಂಗಳ ಕಾಲ ಮಾತ್ರ. ತಾಷ್ಕೆಂಟ್‍ಗೆ, ಪಾಕ್ ಪ್ರಧಾನಿಯ ಜೊತೆ ಮಾತುಕತೆ ನಡೆಸಲು ಹೋಗಿದ್ದ ಶಾಸ್ತ್ರೀಜಿ ಜೀವಂತವಾಗಿ ಬರಲಿಲ್ಲ; ಗಾಜಿನ ಪೆಟ್ಟಿಗೆಯಲ್ಲಿ ಮಲಗಿರುವ ಭಂಗಿಯಲ್ಲಿ ತಾಯ್ನೆಲಕ್ಕೆ ಮರಳಿದರು. ಶಾಸ್ತ್ರಿಯವರ ನಿಧನದಿಂದ ತೆರವಾದ ಪ್ರಧಾನಿಹುದ್ದೆಯನ್ನು ಆ ಕ್ಷಣದಲ್ಲಿ ತುಂಬಿದ್ದು ಗುಲ್ಜಾರಿಲಾಲ್ ನಂದಾ; ಹಂಗಾಮಿಯಾಗಿ. ಆದರೆ ದೇಶವನ್ನು ಮುನ್ನಡೆಸುವ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ – ಸಿಂಡಿಕೇಟ್ ಸದಸ್ಯರ ಮಾತುಗಳಿಗೆ ಜೀ ಹುಜೂರ್ ಎನ್ನುವ ವ್ಯಕ್ತಿತ್ವವೊಂದು ಬೇಕೇ ಬೇಕಾಗಿತ್ತಲ್ಲ? ಆಗ ಕಾಮರಾಜ್ ಅವರು ಗಾಳ ಹಾಕಿದ್ದು ನೆಹರೂ ಪುತ್ರಿ ಇಂದಿರಾಗಾಂಧಿಗೆ. ಹಿಂದೀ ಬರದ ತನ್ನನ್ನು ಅರ್ಧದಷ್ಟು ದೇಶ ಒಪ್ಪಿಕೊಳ್ಳುವುದಿಲ್ಲವೆಂಬ ಎಚ್ಚರವಿದ್ದ ಕಾಮರಾಜ್, ತಾನು ಕಿಂಗ್ ಆಗದೆ ಕಿಂಗ್‍ಮೇಕರ್ ಆಗಿಯೇ ಉಳಿಯುವ ಅನಿವಾರ್ಯಕ್ಕೆ ಸಂಕಟಪಟ್ಟು ಒಗ್ಗಿಕೊಂಡರು. ಇಂದಿರಾಗಾಂಧಿಗೆ ಆ ಸಮಯದಲ್ಲಿ ಮಹಿಳೆ ಮತ್ತು ನೆಹರೂ ಮಗಳು ಎಂಬೆರಡು ಅರ್ಹತೆಗಳ ಹೊರತಾಗಿ ಬೇರಾವ ಅರ್ಹತೆಯೂ ಇರಲಿಲ್ಲ. ಆದರೆ ಆಕೆಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಮೂಲಕ ಕಾಂಗ್ರೆಸ್ಸಿನೊಳಗಿನ ಎಲ್ಲ ಅಪಸ್ವರಗಳನ್ನೂ ಒಂದೇ ಏಟಿಗೆ ನಿಲ್ಲಿಸಬಹುದು; ಮೊರಾರ್ಜಿ ದೇಸಾಯಿಯ ಓಟವನ್ನು ಅಷ್ಟರಮಟ್ಟಿಗೆ ತಡೆಯಬಹುದು ಎಂಬ ಲೆಕ್ಕಾಚಾರ ಸಿಂಡಿಕೇಟ್ ಸದಸ್ಯರದ್ದಾಗಿತ್ತು. ಶಾಸ್ತ್ರಿಯವರ ಸಂಪುಟದಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವೆಯಾಗಿದ್ದ ಇಂದಿರೆಗೆ ರಾಜಕೀಯ ಆರಕ್ಕೇರದ ಮೂರಕ್ಕಿಳಿಯದ ವ್ಯರ್ಥ ಕಸರತ್ತಾಗಿತ್ತು. ಆಕೆಗೆ ಬದುಕು ಅದೆಷ್ಟು ನೀರಸವೆನಿಸಿತ್ತೆಂದರೆ ಒಂದು ಹಂತದಲ್ಲಿ ಆಕೆ ತನ್ನ ಭಾರತದ ಸಂಬಂಧಗಳನ್ನೆಲ್ಲ ಬಿಡಿಸಿಕೊಂಡು ಇಂಗ್ಲೆಂಡಿಗೆ ಹೋಗಿ ಸೆಟ್ಲ್ ಆಗುವ ಯೋಚನೆಯನ್ನೂ ಮಾಡಿದ್ದುಂಟು. ಆದರೆ ಶಾಸ್ತ್ರಿಯವರ ಅಕಾಲಮೃತ್ಯುವಿನಿಂದ ಭಾರತದಲ್ಲಿ ರಾಜಕೀಯ ಲೆಕ್ಕಾಚಾರಗಳೆಲ್ಲ ದಿನಬೆಳಗಾಗುವುದರಲ್ಲಿ ಬದಲಾಗಿಹೋದವು.  ಭಾರತದ ಬಂಧ ಹರಿದುಕೊಂಡು ವಿದೇಶೀ ನೆಲದಲ್ಲಿ ಬದುಕಿನ ಉಳಿದ ದಿನಗಳನ್ನು ಕಳೆವ ಇಂಗಿತ ತೋಡಿಕೊಂಡಿದ್ದ ಅದೇ ಮಹಿಳೆ ಈಗ ದೇಶ ನಡೆಸುವ ಜವಾಬ್ದಾರಿ ನಿರ್ವಹಿಸಲು ತುದಿಗಾಲಲ್ಲಿ ನಿಲ್ಲುವಂಥ ರಾಜಕೀಯ ಬದಲಾವಣೆಗಳು ಬೇಗಬೇಗನೆ ನಡೆದುಹೋದವು. ಹೀಗೆ, ಕಾಂಗ್ರೆಸ್‍ನೊಳಗಿದ್ದ ಒಂದಷ್ಟು ಹಿರಿಯ ಭಟ್ಟಂಗಿಗಳಿಂದಾಗಿ ಇಂದಿರೆ ಪ್ರಧಾನಿಯಾದರು. ಆ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ಅವರು ಈ ಭಟ್ಟಂಗಿಗಳ ಬೆಂಬಲದಿಂದ ಪ್ರಧಾನಿಯಂಥ ಉನ್ನತ ಸ್ಥಾನವನ್ನು ಅಲಂಕರಿಸುತ್ತಲೇ ಇದ್ದರು.

ಇಂದಿರಾಗಾಂಧಿ ಮೂಲತಃ ಸ್ವಯಮಾರಾಧಾಕಿಯಾಗಿದ್ದರು. ಪಾಶ್ಚಾತ್ಯ ಜಗತ್ತಿನಲ್ಲಿ ಇವರನ್ನು ನಾರ್ಸಿಸಿಸ್ಟಿಕ್ ಎನ್ನುವ ಪರಿಪಾಠವಿದೆ. ತನ್ನನ್ನು ಹೊಗಳುವ, ಮೆಚ್ಚಿ ಕೊಂಡಾಡುವ ದೊಡ್ಡ ಬಳಗವನ್ನೇ ಆಕೆ ಬೆನ್ನಿಗೆ ಕಟ್ಟಿಕೊಂಡರು. ತನ್ನ ವಿರುದ್ಧ ಸೆಟೆದುನಿಲ್ಲುವ ಯಾರೊಬ್ಬರನ್ನೂ ಇಂದಿರಾಗಾಂಧಿ ಸಹಿಸುತ್ತಿರಲಿಲ್ಲ ಎಂಬುದಕ್ಕೆ ಕಾಮರಾಜ್‍ರನ್ನು ಪಕ್ಷದಿಂದ ಹೊರಗಿಟ್ಟದ್ದೇ ಸಾಕ್ಷಿ. ಒಂದಾನೊಂದು ಕಾಲದಲ್ಲಿ ಇಡೀ ಕಾಂಗ್ರೆಸ್ ಪಕ್ಷವನ್ನು ನಿಸ್ವಾರ್ಥ ಭಾವದಿಂದ ಕಟ್ಟಿ ಬೆಳೆಸಿದ, ಪಕ್ಷವನ್ನು ಮನೆ ಮಗಳಂತೆ ನೋಡಿಕೊಂಡ ಕಾಮರಾಜ್, ಮೊರಾರ್ಜಿ ದೇಸಾಯಿಯವರನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಇಂದಿರಾ ಎಂಬ ಸಾಮಾನ್ಯ ಮಹಿಳೆಯನ್ನು ಪ್ರಧಾನಿಯೆಂಬ ಅತ್ಯುನ್ನತ ಹುದ್ದೆಯಲ್ಲಿ ಕೂರಿಸಿ ಮೆರೆಸಿದ ಕಾಮರಾಜ್ ಅತ್ಯಂತ ಸಣ್ಣ ಮನಸ್ತಾಪದಿಂದಾಗಿ ಅದೇ ಇಂದಿರೆಯಿಂದ ಪಕ್ಷದಿಂದ ಹೊರಹಾಕಿಸಿಕೊಳ್ಳಬೇಕಾಯಿತು. ಕಾಮರಾಜ್ ನಿರ್ಗಮನದಿಂದ ಕಾಂಗ್ರಸ್ ಪಕ್ಷ ಕಡಲೇಕಾಯಿಯಂತೆ ಎರಡು ಹೋಳಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್‍ಸಿ) – ಒರಿಜಿನಲ್ ಮತ್ತು ಐಎನ್‍ಸಿ – ಇಂದಿರಾ ಎಂದು ಗುರುತಿಸಿಕೊಂಡಿತು. ಇಂದಿರಾ ಮುನ್ನಡೆಸಿದ ಭಾಗ ಇಂದಿರಾ ಕಾಂಗ್ರೆಸ್ ಎಂದೇ ಹೆಸರಾಯಿತು. ಆಕೆಯ ಹೊಗಳುಭಟ್ಟರೆಲ್ಲ ಅಲ್ಲಿ ಸೇರಿಕೊಂಡರು. ನೀನೇ ದೇವತೆ, ನೀನೇ ಸರ್ವಶಕ್ತಿನಿಯಾಮಕಿ, ನೀನೇ ಮೂರುಲೋಕದ ಅಧಿನಾಯಕಿ ಎಂಬಂತಹ ನಿತ್ಯಭಜನೆಯೇ ಅಲ್ಲಿನ ಒಂದಂಶದ ಕಾರ್ಯಕ್ರಮವಾಯಿತು.

ಬಾಂಗ್ಲಾ ಯುದ್ಧದ ಸಾರಥ್ಯ ಮತ್ತು ಬ್ಯಾಂಕುಗಳ ರಾಷ್ಟ್ರೀಕರಣ – ಈ ಎರಡು ಸಂಗತಿಗಳನ್ನು ಬಿಟ್ಟರೆ ತನ್ನ ಹದಿನೆಂಟು ವರ್ಷಗಳ ದೀರ್ಘ ರಾಜಕೀಯ ಜೀವನದಲ್ಲಿ ಇಂದಿರಾಗಾಂಧಿ ಮಾಡಿದ ಸಾಧನೆ ಏನು ಎಂದರೆ ಉತ್ತರಕ್ಕೆ ತಡಕಾಡುವಂತಾಗುತ್ತದೆ. 1966ರಿಂದ 1971ರವರೆಗೆ ಮೊದಲ ಟರ್ಮ್ ಅನ್ನು ಪ್ರಧಾನಿಯಾಗಿ ಆಳಿದ ಇಂದಿರಾಗಾಂಧಿ 1971ರಲ್ಲಿ ಮತ್ತೊಮ್ಮೆ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಕಾಂಗ್ರೆಸ್ ಅನ್ನು ಬಹುಮತದಿಂದ ಗದ್ದುಗೆಯೇರುವಂತೆ ನೊಡಿಕೊಂಡರು. ಆ ಮೂಲಕ ತಾನು ಪ್ರಧಾನಿಯ ಪಟ್ಟದಲ್ಲಿ ಬಂದು ಕೂತರು. ಜನನಾಯಕಿಯೆಂಬ ಬಿರುದು ಕಿರೀಟವಾಗಿ ತಲೆಯ ಮೇಲೆ ಕೂತ ಹೆಮ್ಮೆಯಲ್ಲಿ ತೇಲುತ್ತಲೇ ಬಾಂಗ್ಲಾ ಯುದ್ಧ ಘೋಷಿಸಿದರು. ಆಕೆಯನ್ನು ಭಾರತದ ಉಕ್ಕಿನ ಮಹಿಳೆ, ದಿಟ್ಟೆ, ಕೆಚ್ಚೆದೆಯ ನಾಯಕಿ, ಕಾಂಗ್ರೆಸ್‍ನ ಏಕೈಕ ಪುರುಷ ಮುಂದಾಳು ಎಂದೆಲ್ಲ ಬಗೆಬಗೆಯ ವಿಶೇಷಣಗಳಿಂದ ಪತ್ರಿಕೆಗಳು ಅರ್ಚಿಸಿದ್ದೂ ಆಯಿತು. ತಾನು ಜನಪ್ರಿಯತೆಯ ತುತ್ತತುದಿಯಲ್ಲಿದ್ದೇನೆಂಬ ಕಣ್ಣಪೊರೆ ಆವರಿಸಿಕೊಂಡದ್ದು ಆಕೆಗೆ ಬಹುಶಃ ಆಗಲೇ ಇರಬೇಕು. ಪ್ರಧಾನಿಯಾಗಿ ಬಂದು ಎರಡು ವರ್ಷ ಕಳೆದಿತ್ತಷ್ಟೆ. ಇಸವಿ 1973. ರಣೋತ್ಸಾಹದಲ್ಲಿ ಹೂಡಿದ್ದ ಯುದ್ಧ ಗೆದ್ದು ಇದೀಗ ಭಾರತ ತನ್ನ ಕೈಕಾಲುಗಳಲ್ಲಾದ ಗಾಯಗಳಿಗೆ ಟಿಂಚರ್ ಹಚ್ಚಿಕೊಳ್ಳುತ್ತಿದ್ದ ಸಮಯ. ಮಳೆ ಕೈ ಕೊಟ್ಟಿತ್ತು. ದೇಶದಲ್ಲಿ ತರಕಾರಿ – ಅಕ್ಕಿಬೇಳೆ ಬೆಲೆ ಗಗನಕ್ಕೇರಿತ್ತು. ಅಭಿವೃದ್ಧಿ ಎಂಬುದು ತಟಸ್ಥ ಸ್ಥಿತಿಗೆ ಬಂದ ಸನ್ನಿವೇಶ. ಎಲ್ಲೂ ಲಂಚವಿಲ್ಲದೆ ಕೆಲಸವಾಗದ ಪರಿಸ್ಥಿತಿ. ನಿಧಾನವಾಗಿ ಬಾಲ ಬಿಚ್ಚುತ್ತಿದ್ದ ಕೆಂಪುಪಟ್ಟಿ ವ್ಯವಸ್ಥೆ. ಸರಕಾರೀ ಕೆಲಸ ಎಂದರೆ ಹೀಗೇನೇ, ಸಾರ್ವಜನಿಕರು ಹತ್ತು ಸಲ ಅಲೆದಾಡಿ ಚಪ್ಪಲಿ ಸವೆಸಬೇಕು, ಕೆಲಸ ಆಯಿತೋ ಅಜ್ಜಿಪುಣ್ಯ ಎಂಬ ನಿರಾಶಾದಾಯಕ ಸನ್ನಿವೇಶ ರೂಪುಪಡೆಯುತ್ತಿದ್ದ ಸಮಯ. ಸ್ವಾತಂತ್ರ್ಯ ಬಂದ ಹೊಸತರಲ್ಲಿದ್ದ ಚೈತನ್ಯ, ಭರವಸೆ, ಸರಕಾರೀ ಅಧಿಕಾರಿಗಳ ಸಮರ್ಪಣಾಭಾವ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ತಾವು ಜನರಿಗೆ ಉತ್ತರದಾಯಿಗಳೆಂಬ ಭಾವನೆ… ಎಲ್ಲವೂ ನಿಧಾನವಾಗಿ ಕರಗಿ ನೀರಾಗತೊಡಗಿದ್ದವು. ಕೆಲವರಂತೂ ಬ್ರಿಟಿಷರ ಆಡಳಿತದ ಸಮಯದಲ್ಲೇ ನೆಮ್ಮದಿಯಾಗಿದ್ದೆವು; ಈಗ ನಮ್ಮದೇ ಆಡಳಿತ ಎಂದ ಮೇಲೆ ಭ್ರಷ್ಟಾಚಾರ ಮಿತಿಮೀರಿದೆ ಎಂದು ಅಸಹಾಯಕತೆ ತೋಡಿಕೊಳ್ಳುತ್ತಿದ್ದರು. ಒಟ್ಟಾರೆಯಾಗಿ ಎಲ್ಲೆಲ್ಲೂ ಭರವಸೆ ಕಮರಿದ ನಿರಾಸೆಯ ಕಾರ್ಮೋಡ ಮುತ್ತಿಕೊಳ್ಳುತ್ತಿತ್ತು. ಮುಂದಿನ ಎರಡು ವರ್ಷಗಳಲ್ಲಿ ಪರಿಸ್ಥಿತಿ ಇನ್ನಷ್ಟು ಕೆಳಮಟ್ಟಕ್ಕೆ ಇಳಿಯಿತೇ ಹೊರತು ಸುಧಾರಣೆಯ ಭರವಸೆಯ ಕಿರಣವೇನೂ ಕಾಣಿಸಲಿಲ್ಲ. ದೇಶದ ಎಲ್ಲರಿಗೂ ಏಕಪ್ರಕಾರವಾಗಿ ಮಂಕುಬೂದಿ ಎರಚಿ ಅಧಿಕಾರ ಹಿಡಿದ ಇಂದಿರಾಗಾಂಧಿಯವರ ಸರಕಾರ ಹತ್ತರಲ್ಲಿ ಹನ್ನೊಂದು ಎಂದು ಜನಕ್ಕೆ ಅನ್ನಿಸಲಾರಂಭಿಸಿತ್ತು.

1971ರಲ್ಲಿ ನಡೆದ ಚುನಾವಣೆ ಪಾರದರ್ಶಕವಾಗಿರಲಿಲ್ಲ. ಅದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ರಾಯ್ ಬರೇಲಿಯಲ್ಲಿ ಇಂದಿರಾಗಾಂಧಿ ಚುನಾವಣಾ ಪ್ರಚಾರಕ್ಕೆ ಸರಕಾರೀ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ಅಲ್ಲದೆ ಚುನಾವಣಾ ಆಯೋಗ ನಿಗದಿಪಡಿಸಿದ್ದಕ್ಕಿಂತ ಹಲವು ಪಟ್ಟು ಹೆಚ್ಚು ದುಡ್ಡನ್ನು ವಿನಿಯೋಗಿಸಿದ್ದಾರೆ. ಆಕೆಯ ಗೆಲುವನ್ನು ಅಸಿಂಧು ಎಂದು ಘೋಷಿಸಬೇಕು ಎಂಬ ಬೇಡಿಕೆಯೊಂದಿಗೆ ಅದೇ ಕ್ಷೇತ್ರದಲ್ಲಿ ಆಕೆಯ ವಿರುದ್ಧ ಸ್ಪರ್ಧಿಸಿದ್ದ ರಾಜ್ ನಾರಾಯಣ್ ಕೋರ್ಟು ಮೆಟ್ಟಿಲು ಹತ್ತಿದರು. ಅಲಹಾಬಾದ್ ಹೈಕೋರ್ಟ್‍ನಲ್ಲಿ ತಿಂಗಳುಗಟ್ಟಲೆ ವಿಚಾರಣೆ ನಡೆಯಿತು. ರಾಜ್ ನಾರಾಯಣ್ ಕೇವಲ ಆರೋಪ ಮಾಡಿದ್ದಲ್ಲ; ತನ್ನ ಪ್ರತಿ ಆರೋಪಕ್ಕೂ ತಕ್ಕ ಸಾಕ್ಷ್ಯಗಳನ್ನೂ ಒದಗಿಸಿದ್ದರಿಂದ ಪ್ರಕರಣಕ್ಕೆ ಬಲ ಬಂತು. ಶಾಂತಿ ಭೂಷಣ್, ರಾಜ್ ನಾರಾಯಣ್ ಪರವಾಗಿ ಕೋರ್ಟಿನಲ್ಲಿ ವಾದಿಸಿದರು. ವಾದ-ಪ್ರತಿವಾದಗಳನ್ನು ಸುದೀರ್ಘವಾಗಿ ಕೇಳಿದ ಕೋರ್ಟು ಕೊನೆಗೆ 1975ರ ಜೂನ್ 12ರಂದು ಬೆಳಗ್ಗೆ ಹತ್ತು ಗಂಟೆಗೆ ಒಂದು ಮಹತ್ವದ ತೀರ್ಪು ಕೊಟ್ಟಿತು. ಅದರ ಪ್ರಕಾರ, “ಶ್ರೀಮತಿ ಇಂದಿರಾಗಾಂಧಿಯವರು 1971ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರ ನಡೆಸಿರುವುದೂ ಸರಕಾರೀ ಅಧಿಕಾರಿಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡಿರುವುದೂ ನಿಗದಿಪಡಿಸಿದ ವೆಚ್ಚಕ್ಕಿಂತ ಹಲವುಪಟ್ಟು ಹೆಚ್ಚು ದುಡ್ಡನ್ನು ವ್ಯಯಿಸಿ ಚುನಾವಣೆ ಗೆದ್ದಿರುವುದೂ ಸಾಬೀತಾಗಿರುವುದರಿಂದ ಆಕೆ ಲೋಕಸಭೆಯಲ್ಲಿ ರಾಯ್‍ಬರೇಲಿಯ ಪ್ರತಿನಿಧಿಯಾಗಿ ಮುಂದುವರಿಯುವುದು ಸರಿಯಲ್ಲ ಎಂದು ನ್ಯಾಯಾಲಯ ಭಾವಿಸಿದೆ.  ಆಕೆಯ ಸಂಸತ್ ಸದಸ್ಯತ್ವವನ್ನು ತಕ್ಷಣ ಅಸಿಂಧುಗೊಳಿಸಬೇಕು. ಚುನಾವಣಾ ಅಕ್ರಮ ನಡೆಸಿರುವ ವಿಷಯದಲ್ಲಿ ಆಕೆ ಕೋರ್ಟು ಹೇಳುವ ಶಿಕ್ಷೆ ಅನುಭವಿಸಲು ಸಿದ್ಧಳಾಗಬೇಕು” ಎಂದು ಹೇಳಲಾಯಿತು.

(ಮುಂದುವರಿಯುವುದು)

Comments

comments