ಕಾಂಗ್ರೆಸ್ ಪುಢಾರಿಯ ಮೇಲೆ ಐಟಿ ದಾಳಿ ಆದರೆ ಗಂಜಿ ಗಿರಾಕಿಗಳೇಕೆ ಬಟ್ಟೆ ಹರಿದುಕೊಳ್ಳುತ್ತಿದ್ದಾರೆ?

ಬಸಿರನ್ನೂ ಐಟಿ ಇಲಾಖೆಯನ್ನು ವಂಚಿಸಿ ಕೂಡಿಟ್ಟ ಅಕ್ರಮ ಸಂಪತ್ತನ್ನೂ ಹೆಚ್ಚು ದಿನ ಬಚ್ಚಿಡುವುದು ಸಾಧ್ಯವಿಲ್ಲ. ಎಂದೋ ಆಗಿಹೋಗಬೇಕಿದ್ದ ಐಟಿ ದಾಳಿ ಈಗ ಆಗಿದೆ. ಬೆಂಗಳೂರಿನಾದ್ಯಂತ ಹತ್ತಾರು ರಿಯಲ್ ಎಸ್ಟೇಟ್ ಬ್ಯುಸಿನೆಸ್ಸುಗಳು, ಹೆಸರುವೆತ್ತ ಡೆವಲಪರ್ಸ್, ಹತ್ತಾರು ಗಗನಚುಂಬಿ ಕಟ್ಟಡಗಳು, ಒಂದು ಹೆಸರಾಂತ ಜ್ಯುವೆಲ್ಲರಿ, ಇಂಟರ್ನ್ಯಾಷನಲ್ ಶಾಲೆ, ಟ್ರಾನ್ಸ್‍ಪೋರ್ಟ್ ಕಂಪೆನಿ, ಒಂದು ಬ್ಯಾಂಕು ಮತ್ತು ಇನ್ನೂ ನೂರಾರು ಹಣಕಾಸಿನ ವ್ಯವಹಾರಗಳು – ಇವನ್ನೆಲ್ಲ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಕೈ ಕೊಳೆ ಮಾಡಿಕೊಂಡಿರಲಿಲ್ಲ ಎಂದರೆ ಅವನು ದೇವತಾಮನುಷ್ಯನೇ ಆಗಿರಬೇಕು! ಜೇನುಗೂಡು ಇಳಿಸಿದವರೇ ಕೈ ನೆಕ್ಕಿಕೊಳ್ಳುತ್ತಾರಂತೆ; ಹಾಗಿರುವಾಗ ನೂರಾರು ಮರಗಳನ್ನು ನೆಟ್ಟು ಒಂದೊಂದರಲ್ಲೂ ಹೆಜ್ಜೇನುಗೂಡು ತೊನೆಯುವಂತೆ ವ್ಯವಸ್ಥೆ ಮಾಡಿಕೊಂಡಿರುವ ವ್ಯಕ್ತಿ ಪ್ರಾಮಾಣಿಕನಾಗಿದ್ದ, ಸತ್ಯ ಹರಿಶ್ಚಂದ್ರನಾಗಿದ್ದ, ಧರ್ಮಪರಾಯಣನಾಗಿದ್ದ ಎಂದು ಕತೆ ಕಟ್ಟಿದರೆ ನಂಬುವವರು ಯಾರೂ ಇಲ್ಲ ಈಗಿನ ಕಾಲದಲ್ಲಿ. ಇನ್ನು ಅಷ್ಟೆಲ್ಲ ವ್ಯವಸ್ಥೆ ಮಾಡಿಕೊಂಡಿರುವಾತ ರಾಜಕಾರಣಿಯೂ ಆಗಿದ್ದಾನೆ ಎಂದರೆ ಕೇಳಬೇಕೆ? 2013ರ ಚುನಾವಣೆಯಲ್ಲಿ ಘೋಷಿಸಿಕೊಂಡ ಆಸ್ತಿಯೇ 250 ಕೋಟಿ ರುಪಾಯಿಗೂ ಹೆಚ್ಚು! ಹಾಗಿರುವಾಗ ಘೋಷಿಸಿಕೊಳ್ಳದ ಬೇನಾಮಿ ಆಸ್ತಿ, ಕಪ್ಪುಹಣ, ಪಾಲುದಾರಿಕೆಯ ಬ್ಯುಸಿನೆಸ್ಸುಗಳಿಂದ ಬರುತ್ತಿರುವ ಆದಾಯ, ನಷ್ಟ ತೋರಿಸಲಿಕ್ಕೆಂದೇ ತೆರೆದ ಕಂಪೆನಿಗಳ ಮೂಲಕ ನಡೆಯುತ್ತಿರಬಹುದಾದ ವ್ಯವಹಾರ – ಇವೆಲ್ಲವುಗಳ ಪ್ರಮಾಣ ಅದೆಷ್ಟಿದ್ದೀತು? ಇಂದಲ್ಲ ನಾಳೆ ಐಟಿ ಇಲಾಖೆಯ ಬಲೆಗೆ ಬೀಳಲೇಬೇಕಿದ್ದ ಮಿಕ ಈಗ ಬಿದ್ದಿದೆ. ಇದಕ್ಕಾಗಿ ಜನ ಸಂತೋಷಪಡಬೇಕಿತ್ತು, ಅಲ್ಲವೆ?

ಆದರೆ ನಮ್ಮ ರಾಜ್ಯದ ಕೆಲವೊಂದು ಗಂಜಿಗಿರಾಕಿಗಳ ಪಾಡು ಕಂಡರೆ ಅಳಬೇಕೋ ನಗಬೇಕೋ ತಿಳಿಯುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಖುಲ್ಲಂಖುಲ್ಲಾ ಬಕೆಟ್ ಹಿಡಿದೇ ಮನೆಮಾತಾಗಿರುವ ಹೆಸರಾಂತ ಗಂಜಿಗಿರಾಕಿಯೊಂದು ಬರೆದುಕೊಳ್ಳುವ ಸಾಲುಗಳನ್ನು ನೋಡಿ: “ಐಟಿ ದಾಳಿಯನ್ನು ಜನಸಾಮಾನ್ಯರೂ ಸ್ವಾಗತಿಸದೆ ಕೇಂದ್ರದ ರಾಜಕೀಯವೆಂದು ಉಗಿಯುವ ಮಟ್ಟಕ್ಕೆ ಇಳಿಯಿತು ಮೋದಿ ಸರಕಾರದ ವರ್ತನೆ. ಸಿಬಿಐನಂತೆ ಐಟಿ ದಾಳಿಗಳೂ ಮೌಲ್ಯ ಕಳೆದುಕೊಳ್ಳುವಂತೆ ಮಾಡಿದ್ದು ಬಿಜೆಪಿಯ ಸಾಧನೆ.” ಮೊದಲನೆಯದಾಗಿ ಇಲ್ಲಿ ಸೂಚಿಸಿರುವ “ಜನಸಾಮಾನ್ಯರು” ಯಾರು ಎಂಬುದನ್ನು ಆ ಗಂಜಿಗಿರಾಕಿ ಹೇಳಿಲ್ಲ. ಯಾಕೆಂದರೆ ಕರ್ನಾಟಕದಲ್ಲಿ ಸದ್ಯಕ್ಕೆ ಕಾಂಗ್ರೆಸ್‍ನ ಕಟ್ಟಾ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟರೆ ಈ ಐಟಿ ದಾಳಿಯನ್ನು ಸ್ವಾಗತಿಸದೆ ಮುಗುಮ್ಮಾಗಿ ಕೂತ ಜನಸಾಮಾನ್ಯರು ಯಾರೂ ಇಲ್ಲ. ಇಷ್ಟು ದಿನ ಎರಡು ಕೈಯಲ್ಲಿ ತಿಂದಿದಾನೆ, ಈಗ ಕಕ್ಕಲಿ ಬಿಡ್ರೀ ಎಂದೇ ರಸ್ತೆಬದಿಯ ಎಂಕ, ನಾಣಿ, ಶೀನರು ಸಿಕ್ಕಿಬಿದ್ದ ಕಳ್ಳನ ಕುರಿತು ಆಡಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಜನ ಮೂರು ಹೊತ್ತು ಹೊಟ್ಟೆತುಂಬ ಉಣ್ಣಲು ಪರದಾಡುತ್ತಿರಬಹುದು. ಟೊಮೆಟೋ ಬೆಲೆ ಕೆಜಿಗೆ ಐವತ್ತು ದಾಟಿದರೆ ಎಷ್ಟೋ ಮನೆಗಳಲ್ಲಿ ಟೊಮೆಟೋ ಇಲ್ಲದ ತಿಳಿಸಾರನ್ನೇ ತಿಂಗಳುಗಟ್ಟಲೆ ಉಂಡು ತೃಪ್ತರಾಗುತ್ತಾರೆ. ಅಂಥ ಸರಳಜೀವಿಗಳು ಕೂಡ ನಮ್ಮಲ್ಲಿ ಖುಷಿ ಪಡುವುದು ಯಾವಾಗ ಎಂದರೆ ಟೊಮೆಟೋ ಬೆಲೆ ಕುಸಿದಾಗ ಎನ್ನುವುದಕ್ಕಿಂತ ಹೆಚ್ಚಾಗಿ ಭ್ರಷ್ಟ ಅಧಿಕಾರಿಗಳು ಕಾನೂನಿನ ಕುಣಿಕೆಗೆ ಸಿಕ್ಕಾಗ. ಭ್ರಷ್ಟ ಎಂದು ಜಗತ್ತೇ ಗುರುತಿಸಿರುವ; ಆದರೆ ಅಧಿಕಾರ ಇದೆಯೆಂಬ ಕಾರಣಕ್ಕೆ ಕಾನೂನಿಗೆ ಅತೀತನಾಗಿ ಅಡ್ಡಾಡಿಕೊಂಡಿರುವ ಮನುಷ್ಯನ ಮೇಲೆ ಈ ದೇಶದ ಜನಸಾಮಾನ್ಯರಿಗೆ ಭಯ ಇರುತ್ತದೆ, ಆದರೆ ಭಕ್ತಿ-ಗೌರವ ಏನೂ ಇರುವುದಿಲ್ಲ. ಅಂಥ ಭ್ರಷ್ಟರು ಪೊಲೀಸರ ಕೈಗೋ ಐಟಿ ಅಧಿಕಾರಿಗಳ ಕೈಗೋ ಸಿಕ್ಕಿಬಿದ್ದಾಗ ಈ ಜನಸಾಮಾನ್ಯರು ಮನಸ್ಸಿನಲ್ಲೇ ಚಪ್ಪಾಳೆ ತಟ್ಟಿಬಿಡುತ್ತಾರೆ. ಇಷ್ಟು ದಿನ ತಿಂದು ತೇಗಿ ಕೊಬ್ಬಿದ್ದ, ಈಗ ಅನುಭವಿಸಲಿ ಎಂದು ಶ್ರೀಸಾಮಾನ್ಯನ ಮನಸ್ಸು ಒಳಗೊಳಗೇ ಹಾರೈಸುತ್ತದೆ. ಸ್ವಲ್ಪ ಹೆಚ್ಚು ಧೈರ್ಯವಿರುವವರು ಅಂಥ ವಿಷಯಗಳನ್ನು ಮುಕ್ತವಾಗಿಯೇ ಹಂಚಿಕೊಳ್ಳುತ್ತಾರೆ. ಕೆಲವು ವರ್ಷಗಳ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದ ಸಮಯದಲ್ಲಿ ಆ ಪಕ್ಷದ ನಾಯಕರು ಮಾಡಿದ್ದ ಅನಾಚಾರಗಳನ್ನು, ಭ್ರಷ್ಟಾಚಾರಗಳನ್ನು ಕಂಡು ಹೇಸಿ ಬಯ್ದವರಲ್ಲಿ ಅದೆಷ್ಟೋ ಮಂದಿ ನಿಷ್ಠಾವಂತ ಬಿಜೆಪಿ ಬೆಂಬಲಿಗರೇ ಇದ್ದರು. ಯಾಕೆಂದರೆ ಭ್ರಷ್ಟಾಚಾರವನ್ನೂ ಭ್ರಷ್ಟರನ್ನೂ – ಅವರ್ಯಾವ ಪಕ್ಷದಲ್ಲೇ ಇರಲಿ, ಕಣ್ಮುಚ್ಚಿ ಸಹಿಸಿಕೊಳ್ಳದಷ್ಟು ನೈತಿಕತೆ ಮತ್ತು ಧರ್ಮಪ್ರಜ್ಞೆ ಜನಸಾಮಾನ್ಯರಲ್ಲಿ ಇನ್ನೂ ಉಳಿದುಕೊಂಡಿದೆ. ಹಾಗಿರುವಾಗ, ಪರಮಭ್ರಷ್ಟ ರಾಜಕಾರಣಿಯ ಮೇಲೆ ಐಟಿ ದಾಳಿ ಆದಾಗ ಅದನ್ನು ಕೇಂದ್ರದ ತಲೆಗೆ ಕಟ್ಟುವಷ್ಟು ಮುಟ್ಟಾಳತನ ಮತ್ತು ಬುದ್ಧಿದಾರಿದ್ರ್ಯ ಶ್ರೀಸಾಮಾನ್ಯರಿಗೆ ಬಂದಿಲ್ಲ. ಯಾರೋ ನಾಲ್ಕು ಗಂಜಿ ಗಿರಾಕಿಗಳು ಲಬೋ ಲಬೋ ಎಂದು ಬಾಯಿ ಬಡಿದುಕೊಂಡರೆಂಬಮಾತ್ರಕ್ಕೆ ಅದನ್ನೇ ರಾಜ್ಯದ ಸರ್ವಜನತೆಯ ಅಭಿಪ್ರಾಯ ಎಂದು ಬಿಂಬಿಸುವುದು ತಪ್ಪಾಗುತ್ತದೆ.

ಆಶ್ಚರ್ಯ ಆಗುವುದು ಎಲ್ಲಿ ಗೊತ್ತಾ? ಇಷ್ಟು ವರ್ಷ ಬಿಜೆಪಿಯನ್ನು ಸೈದ್ಧಾಂತಿಕ ನೆಲೆಯಲ್ಲಿ ಟೀಕಿಸುತ್ತ ಬಂದ ಕಾಂಗಿ ಪುಂಗಿಗಳು ಈಗ ತಮ್ಮಲ್ಲೇ ಒಬ್ಬನ ಮೇಲೆ ಸರಕಾರೀ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಾಗ ತೊಡೆ ಚಿವುಟಿಸಿಕೊಂಡ ಮಗುವಿನಂತೆ ಕೂಗಾಡುವುದು. ಇನ್ನಷ್ಟು ಅಚ್ಚರಿಯ ಮಾತೆಂದರೆ ಭ್ರಷ್ಟನ ಮನೆ ಮೇಲೆ ಐಟಿ ದಾಳಿ ನಡೆದ ಬೆನ್ನಿಗೇ ಒಂದಷ್ಟು ಕಾಂಗ್ರೆಸ್ ಕಾರ್ಯಕರ್ತರು ತೆರಿಗೆ ಇಲಾಖೆಯ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿ ಘೋಷಣೆ ಕೂಗುವುದು, ಪ್ರತಿಭಟನೆ ದಾಖಲಿಸುವುದು! ಅಂದರೆ ಒಬ್ಬ ಕಾಂಗ್ರೆಸ್ ರಾಜಕಾರಣಿ ಭ್ರಷ್ಟಾಚಾರಿಯಾಗಿದ್ದರೆ ಆತನ ಮೇಲೆ ತೆರಿಗೆ ಇಲಾಖೆಯ ದಾಳಿ ನಡೆಯುವಂತಿಲ್ಲ. ಆತನನ್ನು ತೆರಿಗೆ ಅಧಿಕಾರಿಗಳು ತೆರಿಗೆ ವಂಚಿಸಿದ್ದಿ ಏಕೆ ಎಂದು ಪ್ರಶ್ನಿಸುವಂತಿಲ್ಲ, ಆತನನ್ನು ಯಾವ ಕಾನೂನಿನ ಉಲ್ಲಂಘನೆಯ ಆರೋಪದ ಮೇಲೆಯೂ ಪೊಲೀಸರು ಬಂಧಿಸುವಂತಿಲ್ಲ, ಆತನನ್ನು ವಿಚಾರಣೆಗೆ ಗುರಿಪಡಿಸುವಂತಿಲ್ಲ. ಆತ ಭ್ರಷ್ಟಾಚಾರಿಯಾಗಿದ್ದರೂ ಕಾಂಗ್ರೆಸಿಗನಾದರೆ ಪ್ರಶ್ನಾತೀತನಾಗುತ್ತಾನೆ. ಆತನನ್ನು ಅಧಿಕಾರಿಗಳು ಮುಟ್ಟಿದ್ದೇ ತಡ ದೇಶಾದ್ಯಂತ ನಿರಶನ ನಡೆಯುತ್ತವೆ; ಸತ್ಯಾಗ್ರಹ ಆಯೋಜನೆಯಾಗುತ್ತವೆ. ಗಂಜಿಗಿರಾಕಿಗಳು ಉದ್ದುದ್ದ ಕವಿತೆಗಳನ್ನು ಬರೆದುಕೊಂಡು ತಮ್ಮ ನೆಚ್ಚಿನ ನೇತಾರನಿಗೆ ಬೆಂಬಲ ಸೂಚಿಸುತ್ತಾರೆ. ಆತನನ್ನು ವಿಚಾರಿಸಿದ್ದೇ ತಪ್ಪು, ಬಂಧಿಸಿದ್ದೇ ತಪ್ಪು ಎನ್ನುವ ರೀತಿಯಲ್ಲಿ ಇಡೀ ದೇಶದ ಗಂಜಿ ಗಿರಾಕಿ ಸಂಘ ವರ್ತಿಸತೊಡಗುತ್ತದೆ. ದೇಶದ ಉದ್ದಗಲಕ್ಕೆ ಹರಡಿರುವ ಎಲ್ಲ ಗಂಜಿಗಳೂ ಒಂದೇ ಭಾಷೆ-ಪರಿಭಾಷೆಯಲ್ಲಿ ಮಾತಾಡತೊಡಗುತ್ತಾರೆ. ಭ್ರಷ್ಟನನ್ನು ಪರಮ ಸತ್ಯವಂತ ಎಂದು ಬಿಂಬಿಸುವ, ಆ ಮೂಲಕ ಜನರನ್ನು ನಂಬಿಸುವ ಕೆಲಸಕ್ಕೆ ಚಾಲನೆ ದೊರೆಯುತ್ತದೆ.

ಕರ್ನಾಟಕದ ಮಟ್ಟಿಗೆ ಕಾಂಗ್ರೆಸಿಗರು ಅದೃಷ್ಟಶಾಲಿಗಳು. ಯಾಕೆಂದರೆ ಅವರ ಭ್ರಷ್ಟಾಚಾರದ ಹೂಸಿನ ವಾಸನೆ ರಾಜ್ಯದ ತುಂಬ ಹರಡಿಕೊಳ್ಳದಂತೆ ಅಕ್ಷರದೂಪವನ್ನು ಜೋರು ಜೋರಾಗಿ ಬೀಸಿ ಹೊಗೆ ಎಬ್ಬಿಸಬಲ್ಲ ಬಹುದೊಡ್ಡ ಗಂಜಿಗಳ ಬಳಗವೇ ಇದೆ. ಈ ಗಂಜಿಗಳಲ್ಲಿ ನಾನಾವಿಧ. ಹೊರಗೆ ಕಮ್ಯುನಿಸ್ಟ್ ಎಂದು ಹೇಳಿಕೊಂಡು ಕಾಂಗಿಗಳ ಪಾದ ನೆಕ್ಕುವವರು ಇದ್ದಾರೆ. ನಾನು ಕಾಂಗ್ರೆಸ್ಸಿನ ಭಕ್ತ ಅಥವಾ ಭಕ್ತೆ ಎಂದು ಹೇಳಿಕೊಂಡು ಒಳಗಿಂದ ಕಮ್ಯುನಿಸ್ಟ್ ಅಜೆಂಡಾಗಳ ಪರವಾಗಿ ಕೆಲಸ ಮಾಡುವವರೂ ಇದ್ದಾರೆ. ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ತನ್ನ ಗಂಜಿಋಣವಿರುವ ವ್ಯಕ್ತಿಗಳನ್ನು ಅದೆಷ್ಟು ಚೆನ್ನಾಗಿ ಸಾಕಿ ಸಲಹುತ್ತದೆಂದರೆ ಅವರು ಹಲವು ನಿಗಮ-ಮಂಡಳಿಗಳಲ್ಲಿ ತುಂಬಿಕೊಂಡು ಸರಕಾರದ ಬಿಟ್ಟಿ ಪ್ರಸಾದವನ್ನು ಐದು ವರ್ಷ ಹೊಡೆಯುತ್ತಾರೆ. ಸರಕಾರವೇ ಮುಂದಾಗಿ ತನ್ನ ಭಜನಾಮಂಡಳಿಯನ್ನು ಪ್ರಶಸ್ತಿ-ಪುರಸ್ಕಾರ ಕೊಟ್ಟು ಸಲಹುತ್ತದೆ. ಅವರ ಮೇಲೆ ಕೇಸಾಗದಂತೆ ನೋಡಿಕೊಳ್ಳುತ್ತದೆ. ಕೇಸ್ ಬಿದ್ದರೂ ಕೇಸುಗಳೇ ಬಿದ್ದುಹೋಗುವಂತೆ ತನ್ನ “ಪ್ರಭಾ”ವಲಯವನ್ನು ಪೊಲೀಸ್ ಇಲಾಖೆಯ ಮೇಲೆ ಬೀರುತ್ತದೆ. ತನಗಾಗದ ವ್ಯಕ್ತಿಗಳನ್ನು ಸಿಕ್ಕ ಸಿಕ್ಕ ಕೇಸುಗಳಲ್ಲಿ ಸಿಕ್ಕಿಸಿ ಬಂಧಿಸಲು ತಾನಾಗಿ ಪೊಲೀಸರಿಗೆ ಆದೇಶಿಸುತ್ತದೆ. ಪಠ್ಯಪುಸ್ತಕಗಳಲ್ಲಿ, ಮಾಧ್ಯಮದಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ ಎಲ್ಲೆಲ್ಲೂ ತನ್ನ ಅಜೆಂಡಾಗಳ ಪ್ರಸಾರವಾಗುವಂತೆ, ತನ್ನ ಹಿತಾಸಕ್ತಿಗಳ ರಕ್ಷಣೆಯಾಗುವಂತೆ ಕಾಂಗ್ರೆಸ್ ನೋಡಿಕೊಳ್ಳುತ್ತದೆ. ಒಂದೇ ವಾಕ್ಯದಲ್ಲಿ ಹೇಳಬೇಕು ಎಂದರೆ – ಕಾಂಗ್ರೆಸ್ ಗಂಜಿಗಿರಾಕಿಗಳನ್ನು ಅತ್ಯಂತ ಮುತುವರ್ಜಿಯಿಂದ ಸಾಕಿಸಲಹಿ ಬೆಳೆಸುತ್ತದೆ. ಯಾಕೆಂದರೆ ಅವರಿಂದ ತನಗೆ ಲಾಭವಿದೆ, ಎಸೆದ ಬಿಸ್ಕತ್ತಿಗೆ ಜೀವನಪೂರ್ತಿ ನಿಷ್ಠೆ ತೋರುವವರು ಅವರು ಎಂಬುದು ಅದಕ್ಕೆ ಚೆನ್ನಾಗಿ ಗೊತ್ತು. ಮೇಲಾಗಿ ಎಪ್ಪತ್ತು ವರ್ಷಗಳಲ್ಲಿ ಅಂಥ ಬಹುಪರಾಕ್ ಭಟ್ಟಂಗಿಗಳನ್ನು ಉಳಿಸಿ ಬೆಳೆಸಿದ ಅನುಭವ ಬೇರೆ ಅದರ ಬೆನ್ನಿಗಿದೆಯಲ್ಲ!

ಇಂಥ ಭಟ್ಟಂಗಿಗಳ ಸಮಸ್ಯೆ ಏನೆಂದರೆ ಅವರಿಗೆ ಸ್ವತಂತ್ರ ಚಿಂತನಾಶಕ್ತಿ ಇಲ್ಲ (ಕಾಂಗ್ರೆಸ್‍ಗೆ ಬೇಕಾಗಿರುವುದೂ ಅಂಥ ಖಾಲಿತಲೆಗಳೇ. ತಲೆ ಖಾಲಿ ಇದ್ದರಷ್ಟೇ ಅವರಿಗೆ ತಮ್ಮ ಕಡೆಯ ಸಿದ್ಧಾಂತಗಳನ್ನು ತುಂಬಿಸಲು ಸಾಧ್ಯವಾಗುವುದು ಅಲ್ಲವೆ?). ಕಾಂಗ್ರೆಸ್ ಅನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯತೆ ಅವರಿಗೆ ಅದೆಷ್ಟಿದೆಯೆಂದರೆ ಭ್ರಷ್ಟ ರಾಜಕಾರಣಿಯನ್ನು ಐಟಿ ಅಧಿಕಾರಿಗಳು ಪ್ರಶ್ನಿಸಿದರು ಎಂಬ ಸಂಗತಿಯನ್ನೂ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಜರಾತ್ ರಾಜ್ಯ ಪ್ರವಾಹದಲ್ಲಿ ನಲುಗುತ್ತಿರುವಾಗ, ಅಲ್ಲಿನ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುವಂಥ ಪರಿಸ್ಥಿತಿ ಏರ್ಪಟ್ಟಿರುವಾಗ ಅಲ್ಲಿಂದ ಹಾರಿಬಂದ 44 ಮಂದಿ ಎಮ್ಮೆಲ್ಲೆಗಳು ಇಲ್ಲಿನ ಐಷಾರಾಮಿ ರೆಸಾರ್ಟಿನಲ್ಲಿ ಎಮ್ಮೆಗಳಂತೆ ಮೇಯುತ್ತಿದ್ದಾರಲ್ಲ; ಅದು ನೈತಿಕ ಅಧಃಪತನ ಎಂಬುದನ್ನು ಗುರುತಿಸಲಾಗದಷ್ಟು ದಪ್ಪದಲ್ಲಿ ಕಾಂಗಿ ಭಟ್ಟಂಗಿಗಳಿಗೆ ಕ್ಯಾಟರಾಕ್ಟ್ ಬಂದಿದೆ. ಅಂಥ ಗುಜರಾತಿ ಎಮ್ಮೆಗಳನ್ನು ಅಲ್ಲಿಲ್ಲಿ ಮೇಯಿಸಿಕೊಂಡು ಧರ್ಮಸ್ಥಳ ತಿರುಪತಿ ಎನ್ನುತ್ತ ಪ್ಯಾಕೇಜ್ ಟೂರ್ ಏಜೆಂಟನಂತೆ ತಿರುಗಾಡಿಸಿಕೊಂಡು ಆರಾಮಾಗಿದ್ದ ವ್ಯಕ್ತಿ ಇವರ ಪಾಲಿಗೆ ದೇವತಾಮನುಷ್ಯನಾಗುತ್ತಾನಲ್ಲ, ಇದಕ್ಕಿಂತ ನಾಚಿಕೆಗೇಡು ಇದೆಯೇ? ಆತನನ್ನು ಐಟಿ ಅಧಿಕಾರಿಗಳು ಹಿಡಿದೊಯ್ದರೆ, ವಿಚಾರಣೆ ನಡೆಸಿದರೆ ಗಂಜಿಗಳೇಕೆ ಬಾಯಿ ಬಡಿದುಕೊಳ್ಳಬೇಕು? ಯಾಕೆ ಅಂಗಿ ಕಿತ್ತುಕೊಳ್ಳಬೇಕು? ಜಾಲತಾಣದಲ್ಲಿ ಇವರ ಆಕ್ರೋಶ ಯಾಕೆ ಇಷ್ಟೊಂದು ವ್ಯಾಪಕವಾಗಿ ಭುಗಿಲ್ಲೆದ್ದಿದೆ? ಕಾರಣ ಇದೆ!

ಜಾಲತಾಣದಲ್ಲಿ ಹುಟ್ಟಿ ಹಬ್ಬುತ್ತಿರುವ ಹೋರಾಟ, ಪ್ರತಿಭಟನೆಗಳ ಸ್ವರೂಪವನ್ನು ಕಳೆದ ಎರಡು ತಿಂಗಳಿಂದ ಸೂಕ್ಷ್ಮವಾಗಿ ನೋಡಿದವರು ನೀವಾಗಿದ್ದರೆ ನಿಮಗೆ ಇದರ ಎಳೆ ಸಿಕ್ಕಿರಬೇಕು. ಕರ್ನಾಟಕದಲ್ಲಿ ಮೊದಲು ಮೆಟ್ರೋಗಳಲ್ಲಿ ಹಿಂದೀ ಹೇರಿಕೆ ಎಂಬ ವಿಷಯವಿಟ್ಟುಕೊಂಡು ಸಣ್ಣದಾಗಿ ಗಲಭೆ ಎಬ್ಬಿಸಲಾಯಿತು. ಟ್ವಿಟ್ಟರ್‍ನಲ್ಲಿ ಅದನ್ನು ಒಂದು ಆಂದೋಲನದ ರೂಪದಲ್ಲಿ ಕೆಲವರು ನಡೆಸಿದರು. ವಿಷಯವೇ ಅಲ್ಲದ ಆ ವಿಷಯವನ್ನಿಟ್ಟುಕೊಂಡು ಕನ್ನಡಿಗರು ಎರಡು ವಾರ ಬ್ಯುಸಿಯಾಗಿಬಿಟ್ಟರು. ಅದು ಅಷ್ಟೇನೂ ದೂರಕ್ಕೆ ಹೋಗಬಲ್ಲ ಸಂಗತಿಯಲ್ಲ; ಬೇಗ ತಣ್ಣಗಾಯಿತು ಎನ್ನುವಷ್ಟರಲ್ಲಿ ಕನ್ನಡಕ್ಕೊಂದು ಬಾವುಟ ಬೇಕು ಎಂಬ ವಿಷಯವನ್ನು ತೇಲಿಬಿಡಲಾಯಿತು. ಮತ್ತೆ ಟ್ವಿಟ್ಟರಲ್ಲಿ ಒಂದಷ್ಟು ಜನ ಹಾರಾಡಿದರು, ಕೂಗಾಡಿದರು. ಮೆಟ್ರೋದಲ್ಲಿ ಹಿಂದಿ ಹೇರಿಕೆಯಾಗಿದೆ ಎಂದ ಅದೇ ವ್ಯಕ್ತಿಗಳೇ ಈಗ ಬಾವುಟದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು ಎಂಬುದೇ ಇಲ್ಲಿ ಅತ್ಯಂತ ಮುಖ್ಯ ವಿಷಯ. ಬಾವುಟದ ವಿಷಯವೂ ಅಷ್ಟೇನೂ ದೊಡ್ಡಮಟ್ಟಕ್ಕೆ ವಿವಾದದ ತೆರೆ ಎಬ್ಬಿಸಲಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಇನ್ನೊಂದು ದೋಣಿಯನ್ನು ತೇಲಿಬಿಡಲಾಯಿತು. ಅದೇ ಲಿಂಗಾಯತವು ಧರ್ಮವಾಗಲೆಂಬ ವಿವಾದ. ಈ ಮೂರನ್ನೂ ಒಂದರ ಹಿಂದೊಂದು ಬಿಟ್ಟದ್ದು ಯಾಕೆ ಎಂದರೆ ರಾಜ್ಯದ ಜನರ ಮೂಡ್ ಹೇಗಿದೆ, ಯಾವ ವಿಷಯಕ್ಕೆ ಸ್ಪಂದಿಸುತ್ತಾರೆ, ಯಾವ ವಿಷಯದಲ್ಲಿ ಇಡೀ ರಾಜ್ಯ ವಿಭಜನೆಯಾಗುತ್ತದೆ ಇಲ್ಲವೇ ಒಂದಾಗುತ್ತದೆ ಎಂಬುದನ್ನು ನೋಡುವುದಕ್ಕಾಗಿ. ಮೂರೂ ವಿವಾದಗಳನ್ನು ನೋಡಿ – ಒಂದು ಪ್ರಾದೇಶಿಕತೆಗೆ ಸಂಬಂಧಿಸಿದ್ದು, ಇನ್ನೊಂದು ಭಾಷೆಗೆ, ಮತ್ತೊಂದು ಧರ್ಮಕ್ಕೆ. ಕರ್ನಾಟಕದ ಎಲೆಕ್ಷನ್‍ಗಳಲ್ಲಿ ವರ್ಕ್ ಔಟ್ ಆಗುವ ಸಂಗತಿಗಳೇ ಈ ಮೂರು, ಅಲ್ಲವೆ? ಈ ಮೂರನ್ನು ಹೊರತುಪಡಿಸಿ ಕನ್ನಡಿಗರನ್ನು ಭಾವನಾತ್ಮಕವಾಗಿ ಉದ್ವೇಗಪಡಿಸಬಲ್ಲ ಸಂಗತಿ ಬೇರೇನಾದರೂ ಇದೆಯೇ?

ಈಗ ಸ್ವಲ್ಪ ಫ್ಲ್ಯಾಷ್ ಬ್ಯಾಕ್ ಮಾಡಿ. ಇದೇ ತಂತ್ರವನ್ನೇ ಹಿಂದೆ ಬಿಹಾರ, ಬಂಗಾಳ, ಉತ್ತರ ಪ್ರದೇಶಗಳ ಚುನಾವಣೆಗಳಲ್ಲೂ ಬಳಸಿಕೊಳ್ಳಲಾಗಿತ್ತು. ಚುನಾವಣೆಗೆ ಆರೇಳು ತಿಂಗಳು ಇದೆ ಎನ್ನುವಾಗ ಇಲ್ಲೆಲ್ಲ ಕಡೆಗಳಲ್ಲಿ ಇದೇ ಬಗೆಯ ವಿವಾದ, ಗಲಾಟೆ, ದೊಂಬಿಗಳು ನಡೆದಿದ್ದವು, ನೆನಪಿದೆಯೇ? ಮತ್ತು ಅವೆಲ್ಲವೂ ಟ್ವಿಟ್ಟರ್, ಫೇಸ್‍ಬುಕ್‍ನಂಥ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದ್ದವು ನೆನಪಿದೆಯೇ? ಜಾಲತಾಣಗಳಲ್ಲಿ ಒಂದಷ್ಟು ಜನರನ್ನು ಕೆಲಸಕ್ಕಿಟ್ಟುಕೊಂಡು ಹೀಗೆ ಬೆಂಕಿಗೆ ತುಪ್ಪ ಸುರಿವ ಕೆಲಸ ಮಾಡಿಸಿ ವಿವಾದಗಳು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿ, ಒಂದು ಪಕ್ಷವನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟುವಂತೆ ಮಾಡಲಾಗಿತ್ತು ಈ ಎಲ್ಲ ಸಂದರ್ಭಗಳಲ್ಲೂ. ಯಾಕೆಂದರೆ ಈ ಎಲ್ಲ ಚುನಾವಣೆಗಳ ಸಮಯದಲ್ಲೂ ಅವುಗಳ ಹಿಂದೆ ನಿಂತು ಕೆಲಸ ಮಾಡಿದ ಮಾಸ್ಟರ್ ಮೈಂಡ್ ಒಬ್ಬನೇ ಆಗಿದ್ದ. ಆತನೇ ಈಗ ಕರ್ನಾಟಕ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲಿ ಒಂದು ರಾಜಕೀಯ ಪಕ್ಷದ ಚುನಾವಣಾ ತಂತ್ರಗಾರಿಕೆಯ ಹೊಣೆ ಹೊತ್ತಿದ್ದಾನೆ. ಉತ್ತರ ಪ್ರದೇಶದಲ್ಲಿ ದಯನೀಯವಾಗಿ ಸೋತಮೇಲೂ ಆತನ ತಂತ್ರಗಾರಿಕೆಯನ್ನು ಆ ಪಕ್ಷ ನೆಚ್ಚಿಕೊಂಡಿದೆ ಎಂದರೆ ತೂತು ದೋಣಿಯಲ್ಲಿ ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಕೂತವರ ಸ್ಥಿತಿಗಿಂತ ಅವರದ್ದು ಭಿನ್ನವಲ್ಲ ಎನ್ನಬಹುದು.

ಹೀಗೆ ಉತ್ತರ ಪ್ರದೇಶ, ಬಿಹಾರಗಳಲ್ಲಿ ಗಾಂಧಿ ಕುಟುಂಬವನ್ನು ಕೈ ಹಿಡಿದು ಹಳ್ಳಹಿಡಿಸಿದ ಚುನಾವಣಾ ಸ್ಟ್ರಾಟೆಜಿಸ್ಟೇ ಈಗ ಕರ್ನಾಟಕ, ಗುಜರಾತ್‍ಗಳಲ್ಲಿ ಅದನ್ನು ಹೇಗಾದರೂ ದಡ ಮುಟ್ಟಿಸುವ ಹೊಣೆಗಾರಿಕೆಯನ್ನು ಹೊತ್ತಿದ್ದಾನೆ. ಈತನ ಬಲ ಇರುವುದು ಸೋಷಿಯಲ್ ಮೀಡಿಯಾದಲ್ಲಿ. ಕೆಲವರು ಈಗಾಗಲೇ ಈತನ ಕೈ ಕೆಳಗೆ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದರೆ ಇನ್ನು ಕೆಲವರು ತಾವು ಏನು ಮಾಡುತ್ತಿದ್ದೇವೆ, ಯಾರ ಆಜ್ಞಾನುವರ್ತಿಗಳಾಗಿ ಬಿಟ್ಟಿ ದುಡಿಯುತ್ತಿದ್ದೇವೆ ಎನ್ನುವುದೇ ತಿಳಿಯದೆ ಕಾಂಗ್ರೆಸ್ಸನ್ನು ರಕ್ಷಣಾತ್ಮಕವಾಗಿ ಬೆಂಬಲಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಅಶಾಂತಿ ಹಬ್ಬಿಸುವ ನಿಟ್ಟಿನಲ್ಲಿ ಇವರು ಅದೆಷ್ಟು ಹತಾಶಯತ್ನಗಳನ್ನು ಮಾಡುತ್ತಿದ್ದಾರೆಂದರೆ ಮುಖ್ಯಮಂತ್ರಿಯವರ ಟ್ವಿಟ್ಟರ್ ಹ್ಯಾಂಡಲ್ ಕೂಡ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ. ಅದು ಮುಖ್ಯಮಂತ್ರಿ ಎಂಬ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ಟ್ವಿಟ್ಟರ್ ಖಾತೆಯೋ ಇಲ್ಲಾ ಕಾಂಗ್ರೆಸ್ ಪಕ್ಷದ ಟ್ವಟ್ಟರ್ ಖಾತೆಯೋ ಎಂದು ಗೊಂದಲ ಮೂಡುವಷ್ಟು ಆ ಖಾತೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೇ ಬಿಜೆಪಿಯನ್ನು ನಖಶಿಖಾಂತ ದ್ವೇಷಿಸುವ, ವಾಚಾಮಗೋಚರ ಬಯ್ಯುವ ಟ್ವೀಟ್‍ಗಳನ್ನು ಹಾಕಲಾಗುತ್ತಿದೆ. ಅದೊಂದು ಖಾತೆ ಮಾತ್ರವಲ್ಲದೆ ಕರ್ನಾಟಕದ ಹಲವು ಗಂಜಿ ಗಿರಾಕಿಗಳನ್ನೂ ಟ್ವಿಟ್ಟರ್, ಫೇಸ್‍ಬುಕ್ ಯುದ್ಧಗಳಲ್ಲಿ ಕುದುರೆಗಳಾಗಿ ಅಟ್ಟಲಾಗಿದೆ. ಈ ಗಂಜಿ ಗಿರಾಕಿಗಳು ನಿರಂತರವಾಗಿ ಕೇಂದ್ರ ಸರಕಾರ, ಮೋದಿ, ಅಮಿತ್ ಷಾ, ಬಿಜೆಪಿ, ಹಿಂದುತ್ವ ಮುಂತಾದ ವಿಷಯಗಳನ್ನು ವಿರೋಧಿಸಿ ಬರೆಯುತ್ತಿರುವಂತೆ ಪ್ರಚೋದಿಸಲಾಗಿದೆ. ತೆರಿಗೆ ವಂಚಿಸಿ ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದ ಭ್ರಷ್ಟನನ್ನು ರಕ್ಷಿಸಿಕೊಳ್ಳಲೋಸುಗ ಈ ಗಂಜಿ ಗಿರಾಕಿಗಳು ಇದೆಲ್ಲವೂ ಕೇಂದ್ರ ಸರಕಾರದ ವ್ಯವಸ್ಥಿತ ಷಡ್ಯಂತ್ರ ಎನ್ನಬೇಕಾದರೆ ಇವರನ್ನು ಯಾವ ಮಟ್ಟಕ್ಕೆ ತಯಾರಿಸಲಾಗಿದೆ ನೀವೇ ಯೋಚಿಸಿ!

ಮೆಟ್ರೋಗಳ ಸೂಚನಾಫಲಕಗಳಲ್ಲಿ ಹಿಂದಿ ಇದೆ; ಇದು ಕೇಂದ್ರ ಸರಕಾರ ಕರ್ನಾಟಕದ ಮೇಲೆ ಮಾಡುತ್ತಿರುವ ದಬ್ಬಾಳಿಕೆ. ಕರ್ನಾಟಕಕ್ಕೆ ಪ್ರತ್ಯೇಕ ಬಾವುಟ ಬೇಕು ಎಂಬ ಬೇಡಿಕೆಯನ್ನು ಕೇಂದ್ರ ಪುರಸ್ಕರಿಸುತ್ತಿಲ್ಲ. ಇದು ಕರ್ನಾಟಕದ ಮೇಲೆ ಉತ್ತರ ಭಾರತೀಯ ಮನಸ್ಥಿತಿಯ ಮೋದಿ ಸರಕಾರದ ದಬ್ಬಾಳಿಕೆ. ನಮಗೆ ಲಿಂಗಾಯತವೆಂಬ ಪ್ರತ್ಯೇಕ ಧರ್ಮವೇ ಬೇಕು. ಈ ಬೇಡಿಕೆಯನ್ನು ಕೇಂದ್ರ ಪುರಸ್ಕರಿಸದೆ ಹೋದರೆ ಅವರು ದ್ರಾವಿಡದ್ವೇಷಿಗಳು. ಕಾಂಗ್ರೆಸ್‍ನ ಭ್ರಷ್ಟ ರಾಜಕಾರಣಿಯ ಮೇಲೆ ಐಟಿ ದಾಳಿ ಆಯಿತು. ದಾಳಿ ಅನಿರೀಕ್ಷಿತವಾಗಿತ್ತು. ನಮಗೆ ಸಾಕಷ್ಟು ಸಮಯ ಕೊಟ್ಟು ಮುಂಚಿತವಾಗಿಯೇ ತಿಳಿಸಿ ಬರದೇ ಇದ್ದದ್ದರಿಂದ ಇದು ದ್ವೇಷದ ರಾಜಕಾರಣ…. ಹೀಗೆ ಒಂದು ಹೊಸ ಧಾಟಿಯಲ್ಲಿ ಇತ್ತೀಚಿನ ಎಲ್ಲ ಚಿಂತನೆಗಳೂ ಹೊಮ್ಮುತ್ತಿವೆ. ದೇಶದಲ್ಲಾಗುತ್ತಿರುವ ಪ್ರತಿಯೊಂದು ಬೆಳವಣಿಗೆಯನ್ನೂ – ಅದು ಕೇಂದ್ರ ಮಾಡಿದೆ, ಕರ್ನಾಟಕದ ಮೇಲಿನ ದ್ವೇಷದಿಂದ ಮಾಡಿದೆ – ಎಂಬ ಅತ್ಯಂತ ಅಪಾಯಕಾರಿ ಸಿದ್ಧಾಂತದ ಅಚ್ಚಿನಲ್ಲಿ ಎರಕ ಹೊಯ್ದು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇವನ್ನೆಲ್ಲ ಜಾಲತಾಣಗಳಲ್ಲಿ ಬಹಳ ವ್ಯವಸ್ಥಿತವಾಗಿ ಹರಡಲು, ಕೇಂದ್ರದ ವಿರುದ್ಧ ಜನರಲ್ಲಿ ದ್ವೇಷಭಾವನೆ ಹಬ್ಬಿಸಲು ಕೆಲಸ ಮಾಡಲಾಗುತ್ತಿದೆ. ಮತ್ತು ಅಂಥ ಎಲ್ಲ ಕೆಲಸಕ್ಕೂ ಧನಸಂಪನ್ಮೂಲ ಬರುತ್ತಿದ್ದದ್ದು ಈಗ ತೆರಿಗೆ ತೊಂದರೆಯಲ್ಲಿ ಸಿಕ್ಕಿಕೊಂಡಿರುವ ಧನಿಕ ಮಹಾಶಯರ ಕಡೆಯಿಂದಲೇ. ಹಾಗಾಗಿ ಸಹಜವಾಗಿಯೇ ಜಾಲತಾಣದ ಯೋಧರು ಕೇಂದ್ರದ ಮೇಲೆ ಎಂದಿಗಿಂತ ಹೆಚ್ಚು ಉರಿ ಕಾರಿಕೊಂಡಿದ್ದಾರೆ. ತಮ್ಮ ಗಂಜಿಗಾಗಿ ಓರ್ವ ಭ್ರಷ್ಟನನ್ನೂ ವಹಿಸಿಕೊಂಡು ಮಾತಾಡುವ ದರ್ದು, ದುರವಸ್ಥೆ ಅವರಿಗೆ ಒದಗಿದೆ. ಇದು ಒಟ್ಟಾರೆ ಕಾಂಗ್ರೆಸ್ಸಿನ ಸದ್ಯದ ಸ್ಥಿತಿಯೂ ಹೌದು. ಶತಾಯಗತಾಯ ಕರ್ನಾಟಕವನ್ನು ಉಳಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಈಗ ನೈತಿಕತೆ, ರಾಜಧರ್ಮ ಇವೆನ್ನೆಲ್ಲ ಗಂಟುಮೂಟೆ ಕಟ್ಟಿ ಅಟ್ಟಕ್ಕೆ ಒಗೆದಿದೆಯೇನೋ.

ಕಾಂಗ್ರೆಸ್‍ಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ. ಗಂಜಿ ಗಿರಾಕಿಗಳಿಗೆ ಕಾಂಗ್ರೆಸ್ಸನ್ನು ಉಳಿಸಿಕೊಳ್ಳುವ ಮೂಲಕ ತಮ್ಮ ನೆಲೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ. ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಬಂಪರ್ ಬೆಳೆ ತೆಗೆದುಕೊಡುತ್ತೇನೆಂದು ಭರವಸೆ ಕೊಟ್ಟು ಕೊನೆಗೆ ಮಣ್ಣುಮುಕ್ಕಿಸಿದ ಚುನಾವಣಾ ತಂತ್ರಗಾರನಿಗೆ ಕನಿಷ್ಠ ಈಗ ಕರ್ನಾಟಕದಲ್ಲಾದರೂ ಪಕ್ಷದ ಸ್ಥಿತಿಯನ್ನು ಎತ್ತರಿಸಿ ಆ ಮೂಲಕ ತನ್ನ ಕಳೆದುಹೋಗಿರುವ ಪ್ರತಿಷ್ಠೆಯನ್ನು ಮರುಸ್ಥಾಪಿಸಿಕೊಳ್ಳಬೇಕಾದ ಅನಿವಾರ್ಯತೆ. ಮತ್ತು ಇವರೆಲ್ಲರಿಗೂ ತಮ್ಮ ಆದಾಯದ ಮೂಲವಾಗಿರುವ ಪರಮಭ್ರಷ್ಟನನ್ನು ಉಳಿಸಿಕೊಳ್ಳಬೇಕಾದ, ಆತನ ಪರವಾಗಿ ಬೀದಿಹೋರಾಟಕ್ಕೂ ಇಳಿಯಬೇಕಾದ ಅನಿವಾರ್ಯತೆ. ಒಂದು ಪಕ್ಷ ತಾನು ಸೈದ್ಧಾಂತಿಕವಾಗಿ ದಿವಾಳಿಯಾದಾಗ ತನ್ನೊಂದಿಗೆ ಅದೆಷ್ಟು ಜನರನ್ನು ನೈತಿಕವಾಗಿ ದಿವಾಳಿಗೊಳಿಸುತ್ತದೆ ಎಂಬುದಕ್ಕೆ ಸದ್ಯದ ಕರ್ನಾಟಕದ ಕಾಂಗ್ರೆಸ್ ಪಕ್ಷವೇ ಜ್ವಲಂತ ಉದಾಹರಣೆ. ಸ್ನೇಹಿತ ಕೆ. ಪ್ರಸನ್ನ ಅವರು ಜಾಲತಾಣದಲ್ಲಿ ಬರೆದಿದ್ದ ಒಂದು ನೋಟ್ ಮೂಲಕ ಈ ಲೇಖನವನ್ನು ಕೊನೆಗೊಳಿಸುತ್ತೇನೆ. ಅವರು ಬರೆದಿರುವುದು ಇದು: ಭ್ರಷ್ಟ ಯಾವ ಪಕ್ಷದವನೆ ಆಗಿರಲಿ, ಅವನು ಭ್ರಷ್ಟ ಅಷ್ಟೆ. ನಮ್ಮ ಐಡಿಯಾಲಜಿ ಅವನ ಸಮರ್ಥನೆಗೆ ಅನುವು ಮಾಡಿಕೊಟ್ಟರೆ ಆ ಐಡಿಯಾಲಜಿ ಕೂಡ ಭ್ರಷ್ಟವೇ. ಅವನು ಬಿಜೆಪಿಯವನಾಗಿರಲಿ ಕಾಂಗಿಯಾಗಿರಲಿ ಜೆಡಿಎಸ್ ಆಗಿರಲಿ, ಅದು ನ್ಯಾಯಯುತವಾದ ಹಣವಲ್ಲ. ಅದು ಸಾರ್ವಜನಿಕರ ಹಣ. ನಮ್ಮ ಭಾಷೆಯವನು, ಜಾತಿಯವನು, ಪಕ್ಷದವನು ಎಂದು ಭ್ರಷ್ಟನ ಸಮರ್ಥನೆಗೆ ನಿಂತರೆ ಪ್ರತಿಯೊಬ್ಬನಿಗೂ ಅಂತಹ ಒಂದು ಐಡೆಂಟಿಟಿ ಇದ್ದೇ ಇರುತ್ತದೆ, ಮತ್ತು ಆ ಕಾರಣಕ್ಕಾಗಿ ಎಲ್ಲರನ್ನೂ ಸಮರ್ಥಿಸಿಕೊಳ್ಳಬೇಕಾಗುತ್ತದೆ. ಆಗ ಇಡೀ ದೇಶ/ರಾಜ್ಯ ಭ್ರಷ್ಟರ ಆಡುಂಬೊಲವಾಗಬಹುದು. ಅದರಿಂದ ನಷ್ಟವಾಗುವುದು ಯಾರಿಗೆ? ಜನಗಳಿಗೆ ಮಾತ್ರ. ಅಂಥದೊಂದು ವಿಷಮ ಪರಿಸ್ಥಿತಿ ಉದ್ಭವಿಸಿದಾಗ ಪ್ರಾಮಾಣಿಕವಾಗಿ ದುಡಿದು ತಿನ್ನುವವನಿಗಿಂತ ಹೊಡೆದು ತಿನ್ನುವವರೇ ಹೆಚ್ಚಾಗುತ್ತಾರೆ, ದೇಶ ಅರಾಜಕವಾಗುತ್ತದೆ. ಸರಳವಾಗಿ ಇದರ ಸಾರಾಂಶ ಹೇಳುವುದಾದರೆ – ಐಡಿಯಾಲಜಿ ಭಾಷೆ, ಜಾತಿ, ಜನಾಂಗ, ಧರ್ಮ, ಪ್ರದೇಶ, ಪಕ್ಷ ಮುಂತಾಗಿ ಯಾವುದೇ ಭ್ರಷ್ಟರ ಸಮರ್ಥನೆಗೆ ಬಳಕೆಯಾಗಬಾರದು. ಹಾಗೆ ಬಳಕೆಯಾದರೆ ಆ ಐಡಿಯಾಲಜಿ ಭ್ರಷ್ಟವೆನ್ನುವುದರಲ್ಲಿ ಎರಡು ಮಾತಿಲ್ಲ.

ಗಂಜಿ ಗಿರಾಕಿಗಳನ್ನು ಪೊರೆಯುತ್ತಲೇ ಈ ದೇಶವನ್ನು ದಿಕ್ಕು ತಪ್ಪಿಸುತ್ತ ಹೋದ ಕಾಂಗ್ರೆಸ್ ಹಾಗೂ ಕಾಂಗ್ರೆಸ್‍ನ ನೆರಳಿನಲ್ಲಿರುವುದೇ ಬದುಕಿನ ಪರಮಸಾರ್ಥಕ್ಯವೆಂದು ಬಗೆದಿರುವ ಗಂಜಿ ಗಿರಾಕಿಗಳು – ಇಬ್ಬರೂ ಆತ್ಮಸಾಕ್ಷಿ ಎಂಬುದಿದ್ದರೆ ತಮ್ಮನ್ನು ತಿದ್ದಿಕೊಂಡು ಬದಲಾಗಬೇಕಾದ ಸಮಯ ಇದು.

Comments

comments