ಈ 8 ಸಂಗತಿಗಳನ್ನು ಓದಿದರೆ ನೀವೇ ಹೇಳ್ತೀರಿ ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿ ಹೌದೋ ಅಲ್ವೋ ಅಂತ !

ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಅಂತ ಹೇಳಿ ಇರೋ ಏಳು ಕೋಟಿ ಜನರನ್ನು ಏಳೇಳು ಹೋಳು ಮಾಡಿ ಆಳುತ್ತಿರುವ ಸಿದ್ದರಾಮಯ್ಯ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮುದಾಯಗಳ ನಾಯಕನೆಂದು ಬಿಂಬಿಸಿಕೊಳ್ಳುವ ಆತುರದಲ್ಲಿ ಮಿಕ್ಕವರನ್ನೆಲ್ಲ ವ್ಯವಸ್ಥಿತವಾಗಿ ತುಳಿಯುತ್ತ ಬಂದಿದ್ದಾರೆ. ಇವರ ದ್ವೇಷದ ರಾಜಕಾರಣಕ್ಕೆ ಎಲ್ಲರಿಗಿಂತ ಹೆಚ್ಚು ತೀವ್ರವಾಗಿ ಬಲಿಯಾದದ್ದು ಒಕ್ಕಲಿಗ ಸಮುದಾಯ. ಮೇಲುಮೇಲಕ್ಕೆ ತಾನು ಸಮಾಜದ ಮುಂದುವರಿದ ಜಾತಿಗಳ ವಿರೋಧಿ ಎಂದು ಬಿಂಬಿಸಿಕೊಂಡರೂ ಆಳದಲ್ಲಿ ಸಿದ್ದರಾಮಯ್ಯನವರು ಒಕ್ಕಲಿಗ ಸಮುದಾಯದ ದೊಡ್ಡ ವಿರೋಧಿ ಎಂಬುದು ಕೆಳಗಿನ ಸ್ಟೋರಿಗಳನ್ನು ಓದಿದರೆ ಸ್ಪಷ್ಟವಾಗುತ್ತದೆ. ಸಿದ್ದರಾಮಯ್ಯ ಒಕ್ಕಲಿಗ ವಿರೋಧಿಯೇ? ಹೌದು! ಪುರಾವೆಗಳು ಇಲ್ಲಿವೆ.

ಪುರಾವೆ 1: ಸಿದ್ದರಾಮಯ್ಯನವರು ರಾಜಕೀಯದಲ್ಲಿ ಏನೇನೂ ಅಲ್ಲದೇ ಇದ್ದ ಕಾಲದಲ್ಲಿ ಅವರಿಗೆ ಸ್ಥಾನಮಾನ ಕೊಟ್ಟು, ಟಿಕೇಟು ಕೊಟ್ಟು ಗೆಲ್ಲಿಸಿದವರು ಮಾಜಿ ಪ್ರಧಾನಿ ದೇವೇಗೌಡರು. ದೇವೇಗೌಡರು ಜಾತಿ ರಾಜಕೀಯ ಮಾಡುವುದೇ ಆಗಿದ್ದರೆ ಕುರುಬ ಸಮುದಾಯದ ಸಿದ್ದರಾಮಯ್ಯನವರನ್ನು ತಮ್ಮ ಬಗಲಲ್ಲಿಟ್ಟು ಕಾಯುತ್ತಿದ್ದರೇ? ಅವರಿಗೆ ವಿತ್ತ ಖಾತೆಯಂಥ ಮಹತ್ವದ ಖಾತೆ ಕೊಟ್ಟು ಹೆಚ್ಚಿನ ಹೊಣೆಗಾರಿಕೆ ಹೊರಿಸುತ್ತಿದ್ದರೇ? ರಾಜಕೀಯದಲ್ಲಿ ಎಲ್ಲವನ್ನೂ ಧಾರೆ ಎರೆದುಕೊಟ್ಟ ದೇವೇಗೌಡರಿಗೆ ಸಿದ್ದರಾಮಯ್ಯ ಕೊನೆಗೊಂದು ದಿನ ಟಾಂಗ್ ಕೊಟ್ಟು ಹೊರನಡೆದರು. ಕಾಂಗ್ರೆಸ್‍ನ ಏಣಿಯನ್ನು ಭದ್ರವಾಗಿ ಹಿಡಿದುಕೊಂಡೆನೆಂದು ಖಾತ್ರಿಯಾದ ಮೇಲೆ ಜೆಡಿಎಸ್ ಏಣಿಯನ್ನು ಒದ್ದುಬಿಟ್ಟರು. ಜೆಡಿಎಸ್ ಪಕ್ಷದಿಂದ ಹೊರಹೋಗಿ ಬೇರೆ ಪಕ್ಷಗಳನ್ನು ಸೇರಿದ ಅವಕಾಶವಾದಿಗಳು ಬಹಳ ಮಂದಿ ಇದ್ದಾರೆ. ಉದಾಹರಣೆಗೆ ಬಿ.ಎಲ್. ಶಂಕರ್, ಸಿ.ಎಂ. ಇಬ್ರಾಹಿಮ್, ಸಿಂಧ್ಯಾ, ದೇಶಪಾಂಡೆ, ಮಹದೇವಪ್ಪ ಮುಂತಾದವರೆಲ್ಲ ಒಂದಾನೊಂದು ಕಾಲದಲ್ಲಿ ಜೆಡಿಎಸ್‍ನಲ್ಲಿ ತಮ್ಮ ರಾಜಕಾರಣದ ಪ್ರಾಥಮಿಕ ಪಾಠಗಳನ್ನು ಕಲಿತವರೇ. ಆದರೆ, ಮುಂದೆ ಜೆಡಿಎಸ್ ತೊರೆದು ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡರೂ ಇವರ್ಯಾರೂ ದೇವೇಗೌಡರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಕೊಟ್ಟಿಲ್ಲ. ಇಂದಿಗೂ ಗೌಡರ ಬಗ್ಗೆ ಅವರೆಲ್ಲರಿಗೂ ಗೌರವ ಇದ್ದೇ ಇದೆ. ಆದರೆ ಕಾಂಗ್ರೆಸ್ ಸೇರಿದ ದಿನದಿಂದಲೂ ಜೆಡಿಎಸ್ ಪಕ್ಷ ಮತ್ತು ಅದರ ನೇತಾರರಾದ ದೇವೇಗೌಡರ ವಿರುದ್ಧ ನಿರಂತರವಾಗಿ ಮಾತಿನ ದಾಳಿ ಮಾಡಿಕೊಂಡು ಬಂದವರು ಬಹುಶಃ ಸಿದ್ದರಾಮಯ್ಯ ಒಬ್ಬರೇ. ಅವರ ದ್ವೇಷ ಯಾವ ಪರಿ ಇತ್ತು ಎಂದರೆ ಹಾಸನ ದೇವೇಗೌಡರ ಕಾರ್ಯಕ್ಷೇತ್ರ ಎಂಬ ಏಕೈಕ ಕಾರಣಕ್ಕೆ ಕುಡಿಯುವ ನೀರಿನ ಯೋಜನೆಯಲ್ಲೂ ಪಕ್ಷಪಾತ ಮಾಡಿ ಆ ಜಿಲ್ಲೆಗೆ ನೀರು ಸಿಗದಂತೆ ನೋಡಿಕೊಂಡರು ಸಿದ್ದರಾಮಯ್ಯ! ತನ್ನ ಜಿಲ್ಲೆಗೆ ಕುಡಿಯುವ ನೀರಿನ ಸೌಲಭ್ಯ ಸರಿಪಡಿಸಬೇಕೆಂದು ಒತ್ತಾಯಿಸಿ 85 ವರ್ಷದ ದೇವೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಮುಂದೆ ಉಪವಾಸ ಸತ್ಯಾಗ್ರಹ ಮಾಡುವಂಥ ಸಂದರ್ಭವೂ ಬಂದಿತ್ತು!

ಪುರಾವೆ 2: ಸಿದ್ದರಾಮಯ್ಯನವರ ಮೊದಲ ಟಾರ್ಗೆಟ್ ದೇವೇಗೌಡರಾದರೆ ಎರಡನೇ ಟಾರ್ಗೆಟ್ ಕುಮಾರಸ್ವಾಮಿ. ಕುಮಾರಸ್ವಾಮಿಯವರ ಮೇಲೆ ಆಗಾಗ ಕಾನೂನಿನ ತೂಗುಗತ್ತಿ ತೂಗುವಂತೆ ನೋಡಿಕೊಂಡವರು ಸಿದ್ದರಾಮಯ್ಯ. ಈಗ ಡಿಕೆ ಶಿವಕುಮಾರ್ ಅವರ ಮೇಲೆ ಐಟಿ ದಾಳಿ ನಡೆದದ್ದಕ್ಕೆ ಪ್ರತಿಭಟನೆ ಮಾಡುತ್ತೇವೆ, ತೆರಿಗೆ ಆಯುಕ್ತರ ಕಚೇರಿ ಎದುರು ಘೋಷಣೆ ಕೂಗುತ್ತೇವೆ ಎಂದು ಹೇಳುತ್ತಿರುವ ಕಾಂಗ್ರೆಸಿಗರು ಒಂದು ವಿಷಯ ನೆನಪಿಡಬೇಕು. ದೇವೇಗೌಡರ ಮಗ ಮತ್ತು ಒಕ್ಕಲಿಗರ ಪ್ರಬಲ ನಾಯಕ ಎಂಬ ಕಾರಣಕ್ಕೇ ಕುಮಾರಸ್ವಾಮಿಯವರ ಮೇಲೆ ಹನ್ನೊಂದು ಸಲ ತೆರಿಗೆ ದಾಳಿ ಮಾಡಿಸಲಾಗಿತ್ತು! ಜೆಡಿಎಸ್ ಅನ್ನು ತಣ್ಣಗೆ ಮಲಗಿಸಿಬಿಟ್ಟರೆ ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯವನ್ನೂ ಅಷ್ಟೇ ಸುಲಭವಾಗಿ ಮಲಗಿಸಿಬಿಡಬಹುದು ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತು. ಅದಕ್ಕೇ ಕಳೆದ ಸಲ ನಡೆದ ಉಪಚುನಾವಣೆಗಳ ಸಂದರ್ಭದಲ್ಲಿ ಜೆಡಿಎಸ್ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಅವರ ಮನವೊಲಿಸಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಂತೆ ಸಿದ್ದರಾಮಯ್ಯ ನೋಡಿಕೊಂಡರು. ಜೆಡಿಎಸ್ ಅನ್ನು ಆ ಸಂದರ್ಭದಲ್ಲಿ ಬೆಣ್ಣೆ ಮಾತುಗಳಿಂದ ಒಲಿಸಿ ತಣ್ಣಗಿಡಬೇಕು; ಹಾಗಿದ್ದರೆ ಮಾತ್ರ ಬಿಜೆಪಿಯ ವಿರುದ್ಧ ಕಾಂಗ್ರೆಸ್‍ನ ಗೆಲುವು ನಿಶ್ಚಿತವಾಗುತ್ತದೆ ಎಂಬುದು 35 ವರ್ಷಗಳ ರಾಜಕೀಯ ಮಾಡಿರುವ ಸಿದ್ದರಾಮಯ್ಯನವರಿಗೆ ಗೊತ್ತಿಲದಿದ್ದ ವಿಷಯವೇನಲ್ಲ. ಜೊತೆಗೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮಾತ್ರ ತನ್ನ ಅಲುಗಾಡುತ್ತಿರುವ ಸಿಎಂ ಕುರ್ಚಿಯನ್ನು ಗಟ್ಟಿಮಾಡಿಕೊಳ್ಳಬಹುದು ಎಂಬುದೂ ಅವರಿಗೆ ತಿಳಿದಿತ್ತು. ಹೀಗೆ ತನ್ನ ರಾಜಕೀಯ ಲಾಭಗಳಿಗೋಸ್ಕರ ಅವರು ಜೆಡಿಎಸ್ ನಾಯಕ ಕುಮಾರಸ್ವಾಮಿಯವರ ಭವಿಷ್ಯಕ್ಕೆ ಕೊಡಲಿ ಏಟು ಹಾಕಿದರು. ಇನ್ನೂ ತಮಾಷೆ ಏನೆಂದರೆ, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ ಮೇಲೆ ಪತ್ರಿಕಾಗೋಷ್ಠಿ ಕರೆದು ಸಿದ್ದರಾಮಯ್ಯನವರು “ಕಾಂಗ್ರೆಸ್‍ನ ಈ ಗೆಲುವಿಗೆ ಮುಖ್ಯ ಕಾರಣ ಜೆಡಿಎಸ್. ಅವರ ಸಹಕಾರಕ್ಕೆ ಕೃತಜ್ಞತೆಗಳು” ಎಂದೂ ಹೇಳಿದರು!! ಸಿದ್ದರಾಮಯ್ಯನವರ ಮಾತಿನಲ್ಲಿದ್ದ ವ್ಯಂಗ್ಯ ಬಹುಶಃ ನೇರ ನಿಷ್ಕಪಟಿ ರಾಜಕಾರಣಿಯಾದ ಕುಮಾರಸ್ವಾಮಿಯವರಿಗೆ ಗೊತ್ತಾಗಲಿಲ್ಲ. ಇದು ವಿಪರ್ಯಾಸ!

ಪುರಾವೆ 3: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ತನ್ನ ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆ ಏನೆಂದರೆ ಜಿ ಎಲ್ ಬಿ ಕಡತಗಳನ್ನು ಬೇಗ ಮೂವ್ ಮಾಡಬೇಡಿ; ಕಾಯಿಸಿ; ಸತಾಯಿಸಿ – ಎಂದು ವಿಧಾನಸೌಧದ ಮೊಗಸಾಲೆಗಳಲ್ಲಿ ಜನ ಮಾತಾಡಿಕೊಳ್ಳುತ್ತಿದ್ದಾರೆ. ಜಿ ಎಲ್ ಬಿ ಎಂದರೆ ಗೌಡ, ಲಿಂಗಾಯತ, ಬ್ರಾಹ್ಮಣ ಎಂದು ಅರ್ಥ. ಇದರಲ್ಲಿ ಮೊದಲನೆಯ ಸಮುದಾಯವೇ ಗೌಡ, ಅಂದರೆ ಒಕ್ಕಲಿಗ. ಒಕ್ಕಲಿಗರಿಗೆ ಸೇರಿದ ಯೋಜನೆಗಳಿಗೆ ಹಣ ವಿತರಿಸುವಲ್ಲಿ ವಿಳಂಬ ಮಾಡಿ. ಟೆಂಡರ್ ಪ್ರಕ್ರಿಯೆಯಲ್ಲಿ ಒಕ್ಕಲಿಗರನ್ನು ಬದಿಗಿಡಿ. ಒಕ್ಕಲಿಗರನ್ನು ರಾಜಕೀಯವಾಗಿ ಬೆಳೆಯಲು ಬಿಡಬೇಡಿ… ಹೀಗೆ ಪ್ರತಿ ಕ್ಷೇತ್ರದಲ್ಲೂ ಒಕ್ಕಲಿಗರನ್ನು ಸತಾಯಿಸಲು ಸೂಚನೆ ಹೋಗಿದೆ ಎಂಬ ದಟ್ಟ ವದಂತಿ ಇದೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲವಷ್ಟೆ?

ಪುರಾವೆ 4: ಸಿದ್ದರಾಮಯ್ಯನವರು ಯಾವ ಒಕ್ಕಲಿಗ ನಾಯಕನಿಗೆ ತನ್ನ ಸಂಪುಟದಲ್ಲಿ ನೇರವಾಗಿ ಸ್ಥಾನ ಕಲ್ಪಿಸಿದ್ದಾರೆ? ಒಕ್ಕಲಿಗ ಸಮುದಾಯದ ಅತ್ಯಂತ ಪ್ರಭಾವಿ ನಾಯಕ, ಮುಂದೆ ತನ್ನ ಸ್ಥಾನಕ್ಕೇ ಪ್ರಬಲ ಸ್ಪರ್ಧಿಯಾಗುವವನು ಎಂಬ ಕಾರಣಕ್ಕೆ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ಸಂಪುಟದಲ್ಲಿ ಹಲವು ತಿಂಗಳ ಕಾಲ ಸ್ಥಾನ ಕೊಡದೆ ಆಟವಾಡಿಸಿದರು. ಒಕ್ಕಲಿಗ ಸಮುದಾಯದ ಇನ್ನೋರ್ವ ಪ್ರಮುಖ ನಾಯಕ ಅಂಬರೀಷ್ ಅವರಿಗೂ ಸಿದ್ದರಾಮಯ್ಯ ಸಚಿವ ಸ್ಥಾನ ಕೊಡಲಿಲ್ಲ. ಅದೆಷ್ಟೋ ತಿಂಗಳು ಕಾದು, ಗೋಗರೆದು ಎಲ್ಲ ಆದ ಮೇಲೆ ಕೊನೆಗೆ ಭಿಕ್ಷೆ ಎನ್ನುವಂತೆ ಕೊಟ್ಟರು. ಆದರೆ ಅಂಬರೀಷ್ ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಲಿಲ್ಲ. ಕೆಲವೇ ತಿಂಗಳಲ್ಲಿ ಅಂಬರೀಷ್ ಅವರ ಕೆಲಸ ತೃಪ್ತಿದಾಯಕವಾಗಿಲ್ಲ ಎನ್ನುವ ನೆಪ ಒಡ್ಡಿ ಅವರನ್ನು ಐಸ್‍ಕ್ಯಾಂಡಿ ತಿಂದು ಮುಗಿಸಿ ಎಸೆಯುವ ಕಡ್ಡಿಯಂತೆ ಎಸೆದುಬಿಟ್ಟರು. ಕೊನೆಗೆ ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತ ಅಂಬರೀಷ್ ಕಾಂಗ್ರೆಸ್‍ನ ಸಹವಾಸವೇ ಬೇಡ ಎಂದು ಬಿಜೆಪಿ ಕಡೆ ಒಲವು ತೋರಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಸಮಾಧಾನ ಮಾಡಿ ಬಂದರು. ಅಷ್ಟೆ! ಇವತ್ತು ಅಂಬರೀಷ್ ಅವರು ಕಾಂಗ್ರೆಸ್‍ನಲ್ಲಿ ಹಲ್ಲು ಕಿತ್ತ ಹಾವು, ಪುಕ್ಕ ಕಿತ್ತ ಹಕ್ಕಿ! ಅಂಬರೀಷ್ ಅವರ ಕೈಯಲ್ಲಿ ಯಾವುದೇ ಅಧಿಕಾರ ಇಲ್ಲ. ಹಾಗಂತ ಬೇರೆ ಪಕ್ಷಕ್ಕೆ ಪಕ್ಷಾಂತರವಾಗಿ ಹೋಗುವ ಹಾಗೂ ಇಲ್ಲ. ಇನ್ನು ಮತ್ತೊಬ್ಬ ಒಕ್ಕಲಿಗ ನಾಯಕರಾದ ಎಂ. ಕೃಷ್ಣಪ್ಪ ಅವರಿಗೆ ಸಿದ್ದರಾಮಯ್ಯನವರು ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ್ದು ಯಾವಾಗ? ಸರಕಾರ ರಚನೆಯಾಗಿ ಮೂರೂವರೆ ವರ್ಷಗಳ ನಂತರ!!

ಪುರಾವೆ 5: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಯಾತ್ರೆಯನ್ನು ಚಾಮುಂಡೇಶ್ವರಿಯಿಂದ ಪ್ರಾರಂಭಿಸಿದರೂ ನಂತರದ ದಿನಗಳಲ್ಲಿ ನಿಷ್ಠೆ ಬದಲಿಸಿ ವರುಣಾ ಕ್ಷೇತ್ರವನ್ನು ಆರಿಸಿಕೊಂಡರು. ಇದರಿಂದ ಚಾಮುಂಡೇಶ್ವರಿಯಲ್ಲಿ ಜಿ.ಟಿ. ದೇವೇಗೌಡರಂಥ ಒಕ್ಕಲಿಗ ನಾಯಕರು ಬೆಳೆಯುವುದಕ್ಕೆ ಅವಕಾಶವಾಯಿತು. ಆದರೆ, ಈಗ ಸಿದ್ದರಾಮಯ್ಯನವರ ವಕ್ರದೃಷ್ಟಿ ಮತ್ತೆ ಚಾಮುಂಡೇಶ್ವರಿಯ ಮೇಲೆ ಬಿದ್ದಿದೆ! ತನ್ನ ಮುಂದಿನ ಮತ್ತು “ಕೊನೆಯ” ಚುನಾವಣೆಯನ್ನು ತಾನು ಚಾಮುಂಡೇಶ್ವರಿಯಿಂದ ಎದುರಿಸುತ್ತೇನೆ ಎಂಬ ಹೇಳಿಕೆ ಕೊಡುತ್ತ ತಿರುಗಾಡುತ್ತಿದ್ದಾರೆ. 2013ರಲ್ಲಿ ವರುಣಾದಿಂದ ಸ್ಪರ್ಧಿಸುವಾಗಲೇ “ಇದು ನನ್ನ ಕೊನೆಯ ಚುನಾವಣೆ” ಎಂಬ ಪುಂಗಿ ಊದಿದ್ದರು. ಜನ ಕೂಡ “ಹೋಗ್ಲಿ ಬಿಡಿ, ಕೊನೆಯ ಚುನಾವಣೆ ಅಂತಿದಾರೆ. ಹಾಗಾಗಿ ಗೆಲ್ಲಿಸಿ ಕಳಿಸೋಣ” ಎಂದು ಸಹಾನುಭೂತಿ ತೋರಿಸಿ ಗೆಲ್ಲಿಸಿದ್ದರು. ಆದರೆ ಈಗ ಚಾಮುಂಡೇಶ್ವರಿಯಿಂದ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಿರುವುದು ಜಿ.ಟಿ. ದೇವೇಗೌಡರಂಥ ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸುವುದಲ್ಲದೆ ಬೇರೆ ಯಾವ ಉದ್ದೇಶದಿಂದಲೂ ಅಲ್ಲ, ಅಲ್ಲವೆ?

ಪುರಾವೆ 6: ಕರ್ನಾಟಕದಲ್ಲಿ ಎಲ್ಲರಿಗಿಂತ ಹೆಚ್ಚು ಮೆಚ್ಚುಗೆಗೆ ಪಾತ್ರರಾದ ಮುಖ್ಯಮಂತ್ರಿ ಯಾರು ಎಂದು ಕೇಳಿದರೆ ಹತ್ತರಲ್ಲಿ ಐದು ಮಂದಿಯಾದರೂ ಹೇಳುವ ಹೆಸರು ಎಸ್.ಎಂ. ಕೃಷ್ಣ. ಅವರ ವ್ಯಕ್ತಿತ್ವವೇ ಅಂಥದ್ದು. ಕೇಂದ್ರದಲ್ಲಿ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಹಿರಿಯ ರಾಜಕಾರಣಿ ಕೃಷ್ಣ. ಯುಪಿಎ ಸರಕಾರದ ಅವಧಿಯಲ್ಲಿ ತಾನು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಬೇಕು ಎಂಬ ಉತ್ಸಾಹದಿಂದ ಅವರು ಕೇಂದ್ರದ ಸಚಿವ ಸಂಪುಟಕ್ಕೆ ರಾಜೀನಾಮೆ ಕೊಟ್ಟಾಗ ನಿಜವಾಗಿಯೂ ಭಯಪಡಬೇಕಿದ್ದದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ. ಯಾಕೆಂದರೆ ಅವರಿಗೆ ಹಳೆ ಮೈಸೂರು ಭಾಗದಲ್ಲಿ ಮತ್ತೊಬ್ಬ ಪ್ರಬಲ ಒಕ್ಕಲಿಗ ನಾಯಕನಾಗಿ ತಲೆನೋವಾಗುವವರು ಕೃಷ್ಣ ಒಬ್ಬರೇ. ಆದರೆ ಗೌಡರ ಕುಟುಂಬಕ್ಕಿಂತ ಮೊದಲೇ ಕೃಷ್ಣರ ವಿರುದ್ಧ ಹೈಕಮಾಂಡ್‍ಗೆ ಇಲ್ಲಸಲ್ಲದ ಚಾಡಿ ಹೇಳಿ ಅವರನ್ನು ಪಕ್ಷವೇ ಮೂಲೆಗುಂಪು ಮಾಡುವಂತೆ ನೋಡಿಕೊಂಡದ್ದು ಸಿದ್ದರಾಮಯ್ಯ! ಯಾಕೆಂದರೆ ಸಿದ್ದರಾಮಯ್ಯನವರಿಗೆ ಕೃಷ್ಣ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕನ್ಫರ್ಮ್ ಆಗಿತ್ತು. “ನಿಮ್ಮ ಆಡಳಿತ ಸರಿಯಾಗಿಲ್ಲ. ನೀವು ಅಧಿಕಾರದಿಂದ ಇಳಿಯಿರಿ. ಕೃಷ್ಣ ಅವರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳಿ” ಎಂದು ಹೈಕಮಾಂಡ್ ಏನಾದರೂ ಹೇಳಿದ್ದರೆ ಅದು ಹೇಳಿದಂತೆ ಕೇಳಬೇಕಾದ ಅನಿವಾರ್ಯತೆ ಸಿದ್ದರಾಮಯ್ಯನವರಿಗೆ ಇತ್ತು. ಅದಕ್ಕೇ, ಎಲ್ಲಕ್ಕಿಂತ ಮೊದಲು ತಾನೇ ಕೃಷ್ಣ ಕುರಿತು ದೂರು ಸಲ್ಲಿಸಿಬಿಟ್ಟರೆ ಒಳ್ಳೆಯದಲ್ಲವೇ ಎಂಬ ಯೋಚನೆಗೆ ಬಿದ್ದು ತಂತ್ರ ರೂಪಿಸಿದರು ಸಿದ್ದರಾಮಯ್ಯ. ಪರಿಣಾಮ? ಕೃಷ್ಣ ಅವರಂಥ ಸಮರ್ಥ ಒಕ್ಕಲಿಗ ನಾಯಕರೇ ಕಾಂಗ್ರೆಸ್ ಪಕ್ಷ ಬಿಟ್ಟುಹೋಗುವಂತಾಯಿತು!! ಸಿದ್ದರಾಮಯ್ಯನವರ ಒಕ್ಕಲಿಗ ದ್ವೇಷದಿಂದ ಪಕ್ಷಕ್ಕೇ ದೊಡ್ಡ ಧಕ್ಕೆಯಾಗಿದೆ.

ಪುರಾವೆ 7: ಸಿದ್ದರಾಮಯ್ಯನವರಿಗೆ ಕೇವಲ ದೇವೇಗೌಡ ಅಥವಾ ಕುಮಾರಸ್ವಾಮಿಯವರ ಮೇಲೆ ಮಾತ್ರ ಸೇಡು ಇರುವುದಲ್ಲ; ಆ ಇಡೀ ಕುಟುಂಬವನ್ನೇ ಮುಗಿಸಿಬಿಡಬೇಕೆಂದು ಅವರು ಸ್ಕೆಚ್ ಹಾಕಿದ್ದಾರೇನೋ ಅನ್ನಿಸುತ್ತದೆ. ದೇವೇಗೌಡರ ಅಳಿಯ ಡಾ. ಮಂಜುನಾಥ್ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರು. ಬೆಂಗಳೂರಲ್ಲಿರುವ ಪ್ರತಿಷ್ಠಿತ ಜಯದೇವ ಆಸ್ಪತ್ರೆಯ ಮುಖ್ಯಸ್ಥರು. ಆದರೆ ಅವರನ್ನು ಅಧಿಕಾರದಿಂದ ಇಳಿಸಲು ಕಸರತ್ತು ನಡೆಸಿದವರು ಇದೇ ಮುಖ್ಯಮಂತ್ರಿಗಳು! ಇನ್ನೊಂದು ಸಂಗತಿ ನೋಡಿ – ಗೌಡರ ಕುಟುಂಬದೊಳಗೇ ಒಂದು ಬಾಂಬ್ ಸಿಡಿಯಿತು ಇತ್ತೀಚೆಗೆ. ರೇವಣ್ಣ ಅವರ ಮಗ ಪ್ರಜ್ವಲ್ ತಮ್ಮ ಪಕ್ಷದ ವಿರುದ್ಧವೇ ಒಂದು ವಿವಾದಾತ್ಮಕ ಹೇಳಿಕೆ ಕೊಟ್ಟರು. ಅವರಿಂದ ಅಂಥದೊಂದು ಡ್ಯಾಮೇಜಿಂಗ್ ಸ್ಟೇಟ್‍ಮೆಂಟ್ ಬರುವಂತೆ ಮಾಡಿದವರು ಯಾರು? ಆ ಹೇಳಿಕೆ ಹಿಂದಿನ ಮುಖ್ಯ ರೂವಾರಿಗಳು ಯಾರು? ಇದೆಲ್ಲ ಇನ್ನೂ ನಿಗೂಢವಾಗಿದೆ. ಅದು ಬಿಡಿ, ಕರ್ನಾಟಕದಲ್ಲಿ ಈಗ ಸರಕಾರೀ ಸೇವೆಯಲ್ಲಿರುವ ಒಕ್ಕಲಿಗ ಅಧಿಕಾರಿಗಳ ಸ್ಥಿತಿಯನ್ನೇನಾದರೂ ನೋಡಿದ್ದೀರಾ? ಹೆಚ್ಚಿನವರು ನೀರು ನೆರಳಿಲ್ಲದ ಭಾಗಗಳಿಗೆ ವರ್ಗಾವಣೆಯಾಗಿದ್ದಾರೆ. ಒಟ್ಟಲ್ಲಿ ಒಕ್ಕಲಿಗರ ಪರಿಸ್ಥಿತಿ ಈ ಸರಕಾರದಲ್ಲಿ ಶೋಚನೀಯವಾಗಿದೆ.

ಪುರಾವೆ 8: ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಓಟಕ್ಕೆ ಬ್ರೇಕ್ ಹಾಕಬೇಕು ಎಂಬುದೇ ಸಿದ್ದರಾಮಯ್ಯನವರ ಯೋಚನೆಯಾಗಿತ್ತೆ? ಡಿ.ಕೆ. ಶಿವಕುಮಾರ್ ಅವರ ತಾಯಿಯ ಸಂದರ್ಶನದ ತುಣುಕುಗಳನ್ನು ನೋಡಿದರೆ ಹೌದು ಅನ್ನಿಸುತ್ತದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಇನ್ನೊಂದು ಟರ್ಮ್ ಮುಂದುವರೆಸುವ ಆಸೆ ಸಿದ್ದರಾಮಯ್ಯನವರಿಗಿದೆ. ಆದರೆ ಒಮ್ಮೆ ಮುಖ್ಯಮಂತ್ರಿಯಾದವರನ್ನು ಮತ್ತೊಂದು ಸುತ್ತಿಗೆ ಆರಿಸಿ ಕೂರಿಸಿದ ಉದಾಹರಣೆ ಕಾಂಗ್ರೆಸ್ ಪಕ್ಷದಲ್ಲಿಲ್ಲ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದಿದ್ದೇ ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಪರಮೇಶ್ವರ್, ಖರ್ಗೆ, ರಮಾನಾಥ ರೈ, ಜಾರ್ಜ್ ಅಥವಾ ಡಿಕೆಶಿ ಈ ಯಾರೂ ಕೂರಬಹುದು. ಇವರಲ್ಲಿ ಡಿಕೆಶಿ ಅವರಿಗೆ ಇರುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಅವರನ್ನು ರಾಜಕೀಯವಾಗಿ ಬೆಳೆಯಲು ಬಿಡದಂತೆ ಮಾಡಿದರೆ ಮುಖ್ಯಮಂತ್ರಿ ಕುರ್ಚಿಯನ್ನು ತನ್ನಲ್ಲೇ ಉಳಿಸಿಕೊಳ್ಳಬಹುದು ಎಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ ಆಗಿರಬಹುದು. ಐಟಿ ದಾಳಿ ಆಗುವ ಕುರಿತು ಅವರಿಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಇತ್ತು ಎಂದೂ ಹೇಳಲಾಗುತ್ತಿದೆ. ಹಾಗೆಂದು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ದಾಳಿಯನ್ನು ಸಿದ್ದರಾಮಯ್ಯನವರೇ ನೇರವಾಗಿ ನಿರ್ದೇಶಿಸಿದ್ದರೆ ಅಥವಾ ದಾಳಿ ನಡೆಸಲು ಬೇಕಾದ ಪೂರಕ ಮಾಹಿತಿಯನ್ನು ಸಿದ್ದರಾಮಯ್ಯನವರ ಬಳಗವೇ ಐಟಿ ಇಲಾಖೆಗೆ ಕೊಟ್ಟಿದ್ದರೆ ಅದು ಒಕ್ಕಲಿಗ ಸಮುದಾಯಕ್ಕೆ ಅವರು ಮಾಡಿರುವ ದೊಡ್ಡ ದ್ರೋಹ ಎಂದು ಹೇಳಬಹುದು. ಈಗ ರಾಷ್ಟ್ರೀಯ ಮಟ್ಟದಲ್ಲಿ ಡಿ.ಕೆ. ಶಿವಕುಮಾರ್ ಒಬ್ಬರೇ ಭ್ರಷ್ಟ ಎಂಬಂತೆ ಬಿಂಬಿಸಲಾಗುತ್ತಿದೆ. ಹಾಗಾದರೆ ಸಿದ್ದರಾಮಯ್ಯನವರ ಸರಕಾರದಲ್ಲಿರುವ ಉಳಿದ ಸಚಿವರು ಎಷ್ಟು ಸಾಚಾ ಎಂದು ಜನಸಾಮಾನ್ಯರು ಕೇಳುತ್ತಿದ್ದಾರೆ.

Comments

comments