ಸಿದ್ದರಾಮಯ್ಯ ಒಗೆದ ಎರಡು ಕಲ್ಲಿನಲ್ಲಿ ಹಣ್ಣಲ್ಲ ಮರವೇ ಅಡ್ಡಬಿದ್ದಂತಾಗಿದೆ! ತನ್ನ ಸ್ವಂತದ ಬೇಳೆ ಬೇಯಿಸಿಕೊಳ್ಳಲು ರಾಜ್ಯಕ್ಕೇ ಬೆಂಕಿ ಹಾಕುತ್ತಿರುವ ಕಾಂಗ್ರೆಸ್!

ಕರ್ನಾಟಕದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಕರ್ನಾಟಕದ ಜನತೆಯ ಮೇಲೆ ಎಸೆದ ಎರಡು ಬೆಂಕಿಚೆಂಡುಗಳು – ಒಂದು: ಲಿಂಗಾಯತ ಎಂಬುದನ್ನು ಪ್ರತ್ಯೇಕ ಧರ್ಮ ಎಂದು ಮಾನ್ಯ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತೇನೆ ಎಂದಿದ್ದು ಮತ್ತು ಎರಡು: ರಾಜ್ಯಕ್ಕೆ ಸ್ವತಂತ್ರವಾದ ಬಾವುಟವನ್ನು ಅಧಿಕೃತಗೊಳಿಸುವ ಪ್ರಕ್ರಿಯೆಯನ್ನು ಶುರು ಮಾಡುತ್ತೇನೆ ಎಂದಿದ್ದು.

ಗೇಮ್ ಪ್ಲ್ಯಾನ್ ನೋಡಿ – ಮೊದಲ ದಾಳದಲ್ಲಿ ಇವರ ಕೆಲಸ ಏನು? ಲಿಂಗಾಯತ ಎಂಬುದನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸುವುದು ಮಾತ್ರ! ಒಮ್ಮೆ ಅದನ್ನು ಕೇಂದ್ರ ಸರಕಾರದ ಅಂಗಳಕ್ಕೆ ಒಗೆದ ಮೇಲೆ ಅದರಲ್ಲಿ ಇವರ ಜವಾಬ್ದಾರಿ ಏನೂ ಇಲ್ಲ! ಆಮೇಲೆ ಬೇಕಾದರೆ ಆ ಸಮಸ್ಯೆಯನ್ನು ಎದುರಿಟ್ಟುಕೊಂಡು ಕೇಂದ್ರ ತಲೆ ಚಚ್ಚಿಕೊಳ್ಳಬೇಕು! ಒಂದು ವೇಳೆ, ಕೇಂದ್ರ ಸರಕಾರ “ಸರಿ, ನಾವು ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸುತ್ತೇವೆ” ಎಂದು ಹೇಳಿದ್ದೇ ಆದರೆ ಅದರ ಸಂಪೂರ್ಣ ಕ್ರೆಡಿಟ್ ಅನ್ನು ಪಡೆಯಲು ಸಿದ್ದರಾಮಯ್ಯ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಕೇಂದ್ರ ಯಾಕೋ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಗುರುತಿಸಲು ವಿಳಂಬ ಮಾಡಿತೆನ್ನಿ. ಅಥವಾ ನೋ ನೋ ಇದೆಲ್ಲ ಆಗದು ಎಂದು ತಳ್ಳಿಹಾಕಿತೆನ್ನಿ. ಆಗ ಕೇಂದ್ರವನ್ನು ವಾಚಾಮಗೋಚರ ಬಯ್ದು, “ನೋಡಿದ್ರಾ? ಈ ಕೇಂದ್ರ ಸರಕಾರ ಮನುವಾದಿ ಸರಕಾರ. ಹಿಂದೂಪರ ಕೋಮುವಾದಿ ಸರಕಾರ. ಲಿಂಗಾಯತರ ವಿರುದ್ಧ ಇರುವ ಸರಕಾರ” ಎಂದೆಲ್ಲ ಗುಲ್ಲೆಬ್ಬಿಸಿ ಎಲ್ಲಾ ಗೂಬೆಗಳನ್ನೂ ಕೇಂದ್ರದ ಮೇಲೆ, ಮೋದಿಯ ಮೇಲೆ ಕೂರಿಸುವುದಕ್ಕೂ ಇದೇ ಸಿದ್ದರಾಮಯ್ಯ ಸಿದ್ಧರಾಗಿ ಕೂತಿದ್ದಾರೆ! ಈ ಇಡೀ ನಾಟಕದಲ್ಲಿ ಅವರು ಕಳೆದುಕೊಳ್ಳುವಂಥಾದ್ದು ಏನೇನೂ ಇಲ್ಲ! ಆದರೆ ಕೇಂದ್ರ ಸರಕಾರ ಸಿಕ್ಸರ್ ಎತ್ತಿದರೂ ಬೌಲ್ಡ್ ಆದರೂ ಗೆಲ್ಲವುದು ಮಾತ್ರ ತಾನೇ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ತೇಲುತ್ತಿದ್ದಾರೆ.

ಇನ್ನು ಎರಡನೆಯದಾಗಿ ಇವರು ಎತ್ತಿಕೊಂಡ ವಿಷಯ ಕನ್ನಡ ಬಾವುಟಕ್ಕೆ ಸಂಬಂಧಿಸಿದ್ದು. ಆದರೆ ಇದರಲ್ಲೂ ಶಾಣ್ಯಾ ಸಿದ್ದಣ್ಣ ಬಹಳ ಎಚ್ಚರಿಕೆಯ ಹೆಜ್ಜೆಯನ್ನೇ ಇಟ್ಟಿದ್ದಾರೆ. ಇವರು ಹೇಳುತ್ತಿರುವುದೇನು ಗೊತ್ತೆ? ಅಧಿಕೃತ ಬಾವುಟ ಬೇಕು ಅಂತ ನಾನಾಗಿ ಏನೂ ವಿಷಯ ಎತ್ತಿಲ್ಲ. ಕನ್ನಡದ ಕಟ್ಟಾಳು, ಹಿರಿಯ ಹೋರಾಟಗಾರರಾದ ಪಾಟೀಲ ಪುಟ್ಟಪ್ಪನವರು ಆ ಬೇಡಿಕೆ ಇಟ್ಟಿದ್ದರು. ಅದನ್ನು ನಾನು ಮಾನ್ಯ ಮಾಡಿ ಅವರ ಬೇಡಿಕೆಗೆ ಸ್ಪಂದಿಸುವ ಸಲುವಾಗಿ ಒಂದು ಕಮಿಟಿ ಮಾಡಿದ್ದೇನೆ ಅಷ್ಟೆ. ಕಮಿಟಿ ಕೊಡೋ ತೀರ್ಮಾನಕ್ಕೆ ನನ್ನ ಸರಕಾರ ಬದ್ಧವಾಗಿರುತ್ತದೆ – ಎಂದಿದ್ದಾರೆ. ಆದರೆ, ಇಲ್ಲೂ ಕೂಡ ಅವರು ಟಾರ್ಗೆಟ್ ಮಾಡಿರುವುದು ಕೇಂದ್ರ ಸರಕಾರವನ್ನೇ ಎಂಬುದನ್ನು ಪ್ರಜ್ಞಾವಂತ ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು. ಯಾಕೆ ಗೊತ್ತಾ? ಕನ್ನಡದ ಬಾವುಟಕ್ಕೆ ಅಧಿಕೃತ ಸ್ಥಾನಮಾನ ಕೊಡುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ! ಅದು ಕೇವಲ – ನೋಡಿ, ನಾವು ಹೀಗೆ ಹೀಗೆ ಮಾಡ್ಬೇಕು ಅಂತ ಇದ್ದೇವೆ. ಇದಕ್ಕೆ ಮಾನ್ಯತೆ ಕೊಡಿ – ಅಂತ ಕೇಂದ್ರ ಸರಕಾರಕ್ಕೆ ಒಂದು ಮನವಿಪತ್ರ ಸಲ್ಲಿಸಬಹುದು ಅಷ್ಟೆ. ರಾಜ್ಯ ಕೊಟ್ಟ ಮನವಿ ಸಂವಿಧಾನಾತ್ಮಕವಾಗಿದೆಯೇ? ಅಥವಾ ರಾಷ್ಟ್ರದ ಅಖಂಡತೆಗೆ ಧಕ್ಕೆ ಬರುವಂತಿದೆಯೇ? ಎಂಬುದನ್ನೆಲ್ಲ ನೋಡಿ, ಪರಾಮರ್ಶಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳುವ ಹಕ್ಕು ಮತ್ತು ಜವಾಬ್ದಾರಿ ಎರಡೂ ಇರುವುದು ಕೇಂದ್ರ ಸರಕಾರದ ಮೇಲೆ. ಹಾಗಾದರೆ ಇಲ್ಲಿ ನಮ್ಮ ಮುಖ್ಯಮಂತ್ರಿಗಳ ಕೆಲಸ ಏನು? ಬಾವುಟಕ್ಕೆ ಅಧಿಕೃತ ಸ್ಥಾನಮಾನ ಕೊಡಿ ಎಂಬ ಅರ್ಜಿಯನ್ನು ಕೇಂದ್ರಕ್ಕೆ ಸಲ್ಲಿಸುವುದು, ಅಷ್ಟೆ! ಕೇಂದ್ರ ಇವರ ಅರ್ಜಿಯನ್ನು ಪುರಸ್ಕರಿಸಿ ಯೆಸ್ ಅಂದಿತೆನ್ನಿ. ಅದರ ಪೂರ್ತಿ ಕ್ರೆಡಿಟ್ಟನ್ನು ಗಿಟ್ಟಿಸಿಕೊಳ್ಳುವುದು ಒನ್ ಆಂಡ್ ಓನ್ಲಿ ಸಿದ್ದರಾಮಯ್ಯ. ಆದರೆ, ಕೇಂದ್ರ, ಇದು ಅಸಾಂವಿಧಾನಿಕ. ರಾಷ್ಟ್ರಕ್ಕೆ ಒಂದು ಧ್ವಜ ಇರೋವಾಗ ಮತ್ತೊಂದು ಧ್ವಜಕ್ಕೆ ದೇಶದೊಳಗೆ ಮಾನ್ಯತೆ ಕೊಡಲು ಸಾಧ್ಯವಿಲ್ಲ – ಎಂದು ಖಡಕ್ಕಾಗಿ ಹೇಳಿತು ಅನ್ನಿ, ಶುರುವಾಗುತ್ತೆ ಸಿದ್ದರಾಮಯ್ಯನವರ ಕ್ಯಾತೆ! ನೋಡಿದ್ರಾ? ಇದು ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಸರಕಾರ. ಇವರು ದಕ್ಷಿಣ ಭಾರತವನ್ನು ತುಳೀತಿದ್ದಾರೆ. ಇಂಥ ರಾಷ್ಟ್ರೀಯ ಪಕ್ಷಕ್ಕೆ ಯಾವ ಕಾರಣಕ್ಕೂ ಬೆಂಬಲ ಕೊಡಬೇಡಿ. ಚುನಾವಣೆ ಸಂದರ್ಭದಲ್ಲಿ ಇದನ್ನು ಹೋಲ್‍ಸೇಲ್ ಆಗಿ ತಿರಸ್ಕರಿಸಿ ಅನ್ನುವ ಮಾತುಗಳನ್ನು ಆಡಲು ಸಿದ್ದರಾಮಯ್ಯ ಸಿದ್ಧರಾಗಿ ನಿಂತಿದ್ದಾರೆ! ಒಟ್ಟಾರೆ, ಈ ವಿಷಯದಲ್ಲೂ ಅವರು ಕಳೆದುಕೊಳ್ಳುವುದು ಏನೂ ಇಲ್ಲ; ಗಳಿಸುವುದೇ ಎಲ್ಲಾ!!

ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನೂ ಹಣ್ಣುಗಳನ್ನೂ ಹೊಡೆದುರುಳಿಸುವ ಕಲೆ ಸಿದ್ದರಾಮಯ್ಯನವರಿಗೆ ಕರಗತ. ಬಹುಶಃ ಅದೊಂದೇ ಕಲೆಯಿಂದಲೇ ಅವರು ಕಾಂಗ್ರೆಸ್‍ನಂಥ ಕಾಂಗ್ರೆಸ್ ಪಕ್ಷದಲ್ಲೇ ಉಳಿದವರನ್ನೆಲ್ಲ ಮಕಾಡೆ ಮಲಗಿಸಿ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಆಗಿರುವುದು. ಪಕ್ಷಕ್ಕೆ ಹೊರಗಿನವರಾದ ಸಿದ್ದರಾಮಯ್ಯನವರನ್ನು ಮೊದಮೊದಲು ಕಾಂಗ್ರೆಸ್‍ನೊಳಗಿನ ಹಳೆ ಹುಲಿಗಳು ಅಡ್ಡಡ್ಡ ಮಲಗಿಸಿಬಿಡಬಹುದೆಂದು ತಿಳಿದಿದ್ದವು. ಆದರೆ ಆ ಹಳೆ ಹುಲಿಗಳಿಗೇ ಹುಲ್ಲಿನ ಸಾರು ಕುಡಿಸುವಷ್ಟು ಚಾಣಾಕ್ಷತೆಯನ್ನು ಸಿದ್ದರಾಮಯ್ಯ ಕಳೆದ ನಾಲ್ಕೂವರೆ ವರ್ಷಗಳಲ್ಲಿ ತೋರಿದ್ದಾರೆ. ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವಂತೆ ಮಾಡಿ – ಅಂತೂ ಇಡೀ ಪಕ್ಷದಲ್ಲೇ ಒಬ್ಬರನ್ನು ಮತ್ತೊಬ್ಬರು ಸಂಪೂರ್ಣವಾಗಿ ನಂಬಲಾರದ ಸ್ಥಿತಿ ಸೃಷ್ಟಿಸಿ ಸಿದ್ದರಾಮಯ್ಯನವರು ತನ್ನ ಸಾಮ್ರಾಜ್ಯದ ಬುಡವನ್ನು ಗಟ್ಟಿಗೊಳಿಸಿಕೊಂಡದ್ದು ಕಡಿಮೆ ಸಾಧನೆಯೇನೂ ಅಲ್ಲ. ಅಂಥ ಚಾಣಕ್ಯ ಸಿದ್ದರಾಮಯ್ಯನವರು ಇದೀಗ ಒಗೆದಿರುವ ಎರಡು ದಾಳಗಳನ್ನು ನಾವು ಸ್ವಲ್ಪ ಗಂಭೀರವಾಗಿಯೇ ವಿಶ್ಲೇಷಿಸಬೇಕಾಗಿದೆ.

ಮೊದಲನೆಯದಾಗಿ – ಲಿಂಗಾಯತ ಧರ್ಮದ ಸ್ಥಾಪನೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆರಿಸಿಬಂದ ಮೊದಲ ಮೂರು ವರ್ಷಗಳಲ್ಲಿ ಇಡೀ ಕರ್ನಾಟಕದ ಮುಖ್ಯಮಂತ್ರಿ ಎಂಬ ಮುದ್ರೆಯನ್ನು ಇನ್ನೂ ಗಟ್ಟಿಯಾಗಿ ಒತ್ತಿರಲಿಲ್ಲ. ಅವರು ಏನಿದ್ದರೂ ಹಳೆಮೈಸೂರು ಭಾಗಕ್ಕಷ್ಟೇ ಮುಖ್ಯಮಂತ್ರಿಯಾಗಿದ್ದರು. ಉತ್ತರ ಕರ್ನಾಟಕದ ಜನ ಅವರನ್ನು ಯಾವ ಕಾರಣಕ್ಕೂ ತಮ್ಮ ನಾಯಕ ಎಂದು ಒಪ್ಪಿಕೊಂಡಿರಲಿಲ್ಲ. ಆದರೆ ಇಡೀ ಕರ್ನಾಟಕದ ವಿಶ್ವಾಸ ಗಳಿಸಲೇಬೇಕು ಎಂಬ ಜಿದ್ದಿಗೆ ಬಿದ್ದ ಸಿದ್ದರಾಮಯ್ಯ ಮೇಲಿಂದ ಮೇಲೆ ಉತ್ತರ ಕರ್ನಾಟಕದ ಟೂರ್ ಕೈಗೊಂಡರು. ಉತ್ತರ ಕರ್ನಾಟಕ – ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಕಲ್ಪಿಸಿದರು. ಐಐಟಿಯನ್ನು ಧಾರವಾಡಕ್ಕೆ ಕೊಟ್ಟರು. ಉತ್ತರ ಕರ್ನಾಟಕದ ಯಾವ ನಾಯಕರೂ ಕಾಂಗ್ರೆಸ್‍ನಲ್ಲಿ ತನ್ನಷ್ಟು ವರ್ಚಸ್ವೀಯಾಗಿ ಬೆಳೆಯಗೊಡದಂತೆ ನೋಡಿಕೊಂಡರು. ಆರ್.ವಿ. ದೇಶಪಾಂಡೆಯಂಥ ಹಿರಿಯ ನಾಯಕರನ್ನೇ ಹೆಡೆಮುರಿಕಟ್ಟಿ, ಹಲ್ಲು ಕಿತ್ತ ಹಾವಿನಂತೆ ಕೂರಿಸಿಬಿಟ್ಟರು. ಉತ್ತರ ಕರ್ನಾಟಕದಲ್ಲಿ ನಾಯಕ ಅನ್ನಿಸಿಕೊಳ್ಳಬೇಕಾದರೆ ಇಷ್ಟೆಲ್ಲ ಮಾಡಿದರೆ ಸಾಕಾಗದು; ಅಲ್ಲಿನ ಜಾತಿ ವಿಷಯದಲ್ಲೂ ಕೈ ಹಾಕಬೇಕು ಎಂಬುದು ಯಾವಾಗ ಅರ್ಥವಾಯಿತೋ ಆಗ ಸಿದ್ದರಾಮಯ್ಯನವರು ಹೊಸೆದ ತಂತ್ರವೇ “ಲಿಂಗಾಯತ ಧರ್ಮ”.

ಈ ತಂತ್ರದಿಂದ ಅವರು ಸಾಧಿಸಹೊರಟಿರುವುದು ಎರಡು ವಿಷಯಗಳು. ಒಂದು – ತನ್ನ ಮತ್ತು ಪರೋಕ್ಷವಾಗಿ ಕಾಂಗ್ರೆಸ್‍ನ ಬುಡವನ್ನು ಉತ್ತರ ಕರ್ನಾಟಕದಲ್ಲಿ ಭದ್ರಪಡಿಸುವುದು. ಎರಡು – ತನ್ನ ಪ್ರಬಲ ಪ್ರತಿಸ್ಫರ್ಧಿಯಾಗಿರುವ ಬಿ.ಎಸ್. ಯಡಿಯೂರಪ್ಪನವರನ್ನು ಅವರದ್ದೇ ಅಖಾಡಾದಲ್ಲಿ ಎದುರಿಸಿ ನಡುಮುರಿಯುವುದು. ಲಿಂಗಾಯತವೆಂಬುದು ಧರ್ಮವೇ ಅಲ್ಲವೇ ಎಂಬ ಪ್ರಶ್ನೆಯನ್ನು ಯಡಿಯೂರಪ್ಪನವರು ಅತ್ಯಂತ ಸುಲಭವಾಗಿ ಪರಿಹರಿಸಿಕೊಳ್ಳುವುದಕ್ಕಂತೂ ಸಾಧ್ಯವಿಲ್ಲ. ಯಾಕೆಂದರೆ ಅರ್ಧ ಜನ ಅದೊಂದು ಧರ್ಮ ಎಂದು ಒಪ್ಪಿಕೊಂಡರೆ ಇನ್ನರ್ಧ ಜನ ನಾವೆಲ್ಲ ಹಿಂದೂ ಧರ್ಮದ ಭಾಗವೇ ಎಂದು ಹೇಳುತ್ತಾರೆ. ಯಾವ ಪಕ್ಷದತ್ತ ವಾಲಿದರೂ ಯಡಿಯೂರಪ್ಪನವರು ಮಿಕ್ಕ ಅರ್ಧ ಜನರ ವಿಶ್ವಾಸವನ್ನು ಮತ್ತು ಓಟನ್ನು ಕಳೆದುಕೊಳ್ಳುತ್ತಾರೆ. ಡಿನೋಟಿಫಿಕೇಶನ್ ಹಗರಣದಲ್ಲಿ ಯಡಿಯೂರಪ್ಪನವರನ್ನು ಹಣ್ಣುಗಾಯಿ ನೀರುಗಾಯಿ ಮಾಡಲು ಹೊರಟಿದ್ದ ಸಿದ್ದರಾಮಯ್ಯನವರಿಗೆ ಅದು ಯಾವಾಗ ಸಾಧಿತವಾಗುವುದಿಲ್ಲ ಎಂಬುದು ಖಚಿತವಾಯಿತೋ ಆಗ ಅವರು ಯಡಿಯೂರಪ್ಪನವರನ್ನು ಈ ರೀತಿ ಕಟ್ಟಿಹಾಕಲು ನೋಡಿದರು. ಮತ್ತು ಅದರಲ್ಲಿ ಒಂದು ಹಂತಕ್ಕೆ ಯಶಸ್ವಿಯೂ ಆಗಿದ್ದಾರೆ ಎಂದು ಹೇಳಬಹುದು. ಲಿಂಗಾಯತರೊಳಗೇ ಈಗ (1) ನಾವು ಲಿಂಗಾಯತ ಆದರೆ ವೀರಶೈವ ಅಲ್ಲ; (2) ವೀರಶೈವ ಹೌದು ಲಿಂಗಾಯತ ಅಲ್ಲ; (3) ವೀರಶೈವ ಲಿಂಗಾಯತ ಎರಡೂ ಒಂದೇ ಮತ್ತು (4) ವೀರಶೈವ ಅಥವಾ ಲಿಂಗಾಯತ ಏನೇ ಆಗಿರಲಿ, ನಾವು ಹಿಂದೂಗಳು – ಎಂದು ಹೇಳುವ ಒಟ್ಟು ನಾಲ್ಕು ಗುಂಪುಗಳು ಸಿಡಿದೆದ್ದಿವೆ. ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಕೊಟ್ಟದ್ದೂ ಹಾಲು-ಅನ್ನ ಅನ್ನುವಂಥ, ಭುವನದ ಭಾಗ್ಯ ಸಿದ್ದರಾಮಯ್ಯನವರಿಗೆ!! ಸಿದ್ದರಾಮಯ್ಯನವರು ಏನು ಆಗಬೇಕೆಂದು ಬಯಸಿ ಈ ಬಾಂಬ್ ಹಾಕಿದ್ದರೋ ಅದು ಸರಿಯಾದ ಸಮಯಕ್ಕೆ ಸರಿಯಾದ ಸ್ಥಳಕ್ಕೆ ಬಿದ್ದು, ಅವರೆಣಿಸಿದಂತೆ ಲಿಂಗಾಯತ ಎಂಬ ಸಮುದಾಯ ಈಗ ಛಪ್ಪನ್ನಾರು ಚೂರಾಗಿ ಬಿದ್ದಿದೆ! ಅದನ್ನು ಮತ್ತೆ ಒಟ್ಟುಸೇರಿಸುವ ಕೆಲಸಕ್ಕೆ ಯಡಿಯೂರಪ್ಪನವರು ಕೂತುಬಿಟ್ಟರೆ ಮತ್ತು ಅದರಲ್ಲೇ ಕಳೆದುಹೋಗುವಂತಾದರೆ ಚುನಾವಣೆ ಸಮಯಕ್ಕೆ ತನ್ನ ಬೇಳೆ ಸರಿಯಾಗಿ ಬೆಂದಿರುತ್ತದೆ ಎಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ!

ಇನ್ನು ಬಾವುಟದ ವಿಷಯದಲ್ಲೂ ಅಷ್ಟೇ. ಸಿದ್ದರಾಮಯ್ಯನವರ ಸರಕಾರ ಬರುವ ಮೊದಲೂ ಕನ್ನಡ ಬಾವುಟ ಇತ್ತು. ಮುಂದೆಯೂ ಇರುತ್ತದೆ. ಅದಕ್ಕೆ ಸಿದ್ದರಾಮಯ್ಯನವರ ಸರಕಾರ ಕೊಟ್ಟ ಅಥವಾ ಕೊಡಲಿರುವ ಕೊಡುಗೆ ಏನೇನೂ ಇಲ್ಲ. ಇನ್ನು ಪಾಟೀಲ ಪುಟ್ಟಪ್ಪನವರು ಧ್ವಜಕ್ಕೆ ಅಧಿಕೃತ ಮಾನ್ಯತೆ ಬೇಕು ಎಂಬ ಬೇಡಿಕೆ ಸಲ್ಲಿಸಿದ್ದು 2015ರಲ್ಲಿಯೇ ಹೊರತು ನಿನ್ನೆ ಮೊನ್ನೆ ಅಲ್ಲ! ಸರಕಾರಕ್ಕೆ ನಿಜವಾಗಿಯೂ ಕನ್ನಡದ ಬಗ್ಗೆ ಕಾಳಜಿ ಇದ್ದರೆ ಆಗಲೇ ಆ ವಿಷಯವನ್ನು ಎತ್ತಿಕೊಳ್ಳಬಹುದಿತ್ತಲ್ಲ? ಯಾಕೆ ಅದು ಚುನಾವಣೆ ಸಮೀಪಿಸುವವರೆಗೆ ಕಾಯಬೇಕಿತ್ತು? ಈಗ, ರಾಜ್ಯವೊಂದು ಬೇರೆ ಧ್ವಜ ಹೊಂದುವುದಕ್ಕೆ ಸಂವಿಧಾನದ ಯಾವ ಮಾನ್ಯತೆಯೂ ಇಲ್ಲ ಎಂಬುದು ಅತ್ಯಂತ ಸ್ಪಷ್ಟವಾಗಿ ಗೊತ್ತಿದ್ದ ಮೇಲೂ ಯಾಕೆ ಅದು ಕಮಿಟಿ ರಚನೆ ಮಾಡಿದೆ? ಕನ್ನಡ ಧ್ವಜ ಎಂದು ಗುರುತಿಸಿಕೊಂಡಿರುವ, ರಾಮಮೂರ್ತಿಯವರು ವಿನ್ಯಾಸಗೊಳಿಸಿದ ಹಳದಿ-ಕೆಂಪು ಧ್ವಜವನ್ನೇ ಆರಿಸುವುದಿದ್ದರೆ ಸರಕಾರ ಯಾಕೆ ಕಮಿಟಿ ರಚನೆ ಮಾಡಬೇಕಿತ್ತು? ಹಾಗಾದರೆ ಈಗ ಇರುವ ಧ್ವಜಕ್ಕಿಂತ ಬೇರೆಯದಾದ ಹೊಸ ಧ್ವಜ ವಿನ್ಯಾಸಗೊಳ್ಳುತ್ತದೆಯೇ? ಅದರಲ್ಲಿ ಕೆಂಪು, ಹಳದಿ ಜೊತೆ ಹಸಿರು ಬಣ್ಣವನ್ನೂ ಸೇರಿಸಲಾಗುವುದು ಎಂಬ ಗುಸುಗುಸು ಕೇಳಿಬರುತ್ತಿದೆ. ಸಿದ್ದರಾಮಯ್ಯನವರ ಸರಕಾರ ಏನು ಮಾಡಲು ಹೊರಟಿದೆ? ಇಷ್ಟೆಲ್ಲ ಕಸರತ್ತು ಮಾಡಿಯೂ ಆ ಬೇಡಿಕೆಯನ್ನು ಕೇಂದ್ರ ಸರಕಾರ ಅಸಾಂವಿಧಾನಿಕ ಎಂಬ ನೆಲೆಯಲ್ಲಿ ತಿರಸ್ಕರಿಸಿದ್ದೇ ಆದರೆ ಆಗ ಕರ್ನಾಟಕದಲ್ಲಿ ಭುಗಿಲೇಳಬಹುದಾದ ಗಲಭೆ-ಗಲಾಟೆಗಳಿಗೆ ಹೊಣೆ ಯಾರಾಗುತ್ತಾರೆ? ಸಿದ್ದರಾಮಯ್ಯನವರಿಗೇನೋ ಮುಂದಿನ ಅಸೆಂಬ್ಲಿ ಚುನಾವಣೆ ಮುಖ್ಯವಾಗಿರಬಹುದು. ಆದರೆ ಹಿಂಸಾಚಾರದ ದಳ್ಳುರಿಯಲ್ಲಿ ಬೆಂದು ಆಲೂಗಡ್ಡೆಯಾಗಬಹುದಾದ ಕರ್ನಾಟಕವನ್ನು ಬಚಾವ್ ಮಾಡುವವರು ಯಾರು??

ಸಿದ್ದರಾಮಯ್ಯನವರು ಯೋಚಿಸಬೇಕು. ಲಿಂಗಾಯತರಲ್ಲಿ ಒಡಕು ಮೂಡಿಸಿ ಇವರು ಸಾಧಿಸಿರುವುದಾದರೂ ಏನು? ಲಿಂಗಾಯತ ಎಂಬುದು ಹಿಂದೂ ಧರ್ಮದ ಭಾಗವೇ. ಅದು ಪ್ರತ್ಯೇಕ ಧರ್ಮ ಅಲ್ಲ ಎಂಬ ಮಾನ್ಯ ಚಿದಾನಂದಮೂರ್ತಿಯವರ ಮಾತು ಅರಣ್ಯರೋದನವಾಗಿದೆ. ಸಿದ್ದರಾಮಯ್ಯನವರ ರಾಜಕೀಯ ಕಸರತ್ತುಗಳ ಎದುರಲ್ಲಿ ಆ ಪ್ರಾಮಾಣಿಕ ಸಂಶೋಧಕನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವವರೇ ಯಾರೂ ಇಲ್ಲ ಎಂಬಂಥ ಸನ್ನಿವೇಶ ಸೃಷ್ಟಿಯಾಗಿದೆ. ಇನ್ನೊಂದು ಕಡೆ, ಕನ್ನಡ ಧ್ವಜ ಇರಲಿ; ಆದರೆ ಕರ್ನಾಟಕ ಧ್ವಜ ಎಂಬ ಮಾನ್ಯತೆ ನೀಡುವ ಕಸರತ್ತು ಮಾಡಬೇಡಿ ಎಂದು ಹೇಳುವವರನ್ನೆಲ್ಲ ಕನ್ನಡ ವಿರೋಧಿಗಳು ಎಂದು ಬಿಂಬಿಸುವ ಕೆಲಸಕ್ಕೂ ಚಾಲನೆ ಸಿಕ್ಕಿದೆ. ಇವೆಲ್ಲವೂ ಕಾಂಗ್ರೆಸ್‍ನ ಗೇಮ್ ಪ್ಲ್ಯಾನ್‍ನ ಒಂದು ಭಾಗ ಎಂಬುದು ಮಾತ್ರ ಪ್ರಜ್ಞಾವಂತರಿಗೆ ಹೊಳೆಯದಿರುವ ಸಂಗತಿಯಲ್ಲ. ಚುನಾವಣೆ ಗೆಲ್ಲುವುದಕ್ಕಾಗಿ ಎಂಥ ಹೀನ ಪಾತಾಳಕ್ಕೂ ಇಳಿಯಬಲ್ಲ ಕಾಂಗ್ರೆಸ್ ಪಕ್ಷ ಸದ್ಯ ಹೂಡುತ್ತಿರುವ ಒಂದೊಂದು ಬಾಣವೂ ಮುಂದೆ ಬಿಜೆಪಿಯನ್ನಲ್ಲ ಈ ರಾಜ್ಯವನ್ನು, ರಾಜ್ಯದ ಅಮಾಯಕರನ್ನು ಅಪಾಯದ ಅಂಚಿಗೆ ತಂದುನಿಲ್ಲಿಸಲಿದೆ ಎಂಬುದನ್ನು ನಾವೆಲ್ಲರೂ ಅರಿಯಬೇಕಾದ ಕಾಲ ಇದು.

Comments

comments