ಏನಾಗ್ತಾ ಇದೇರೀ ಕರ್ನಾಟಕದಲ್ಲಿ ಅಂದ ಪ್ರಕಾಶ್ ರೈ ಅವರೇ, ನೋಡಿ ಏನೇನಾಗ್ತಿದೆ ಅಂತ!

ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್, ಅದ್ಭುತ ನಟ. ಭ್ರಷ್ಟ ಪೊಲೀಸ್ ಅಧಿಕಾರಿಯ ಗೆಟಪ್‍ನಲ್ಲಿ, ಅಥವಾ ಹೆಣ್ಣುಗಳ ಮೈಮೇಲೆ ಬೀಳುವ ಕಾಮುಕ ವಿಲನ್ ಗೆಟಪ್‍ನಲ್ಲಿ ಅತ್ಯದ್ಭುತವಾಗಿ ನಟಿಸುವ ಪ್ರತಿಭಾವಂತ ನಟ. ರೈ ಬಗ್ಗೆ ನಮಗೆ ಒಂದಷ್ಟು ಮೆಚ್ಚುಗೆ, ಪ್ರೀತಿ ಇದ್ದವು. ಎರಡು ದಶಕಗಳ ಹಿಂದೇನೇ ಗುಡ್ಡದ ಭೂತದಲ್ಲಿ ಅವರ ನಟನೆಗೆ ಫಿದಾ ಆಗಿದ್ದೆವು. ಅದೂ ಅಲ್ಲದೆ, ಕರ್ನಾಟಕದವರು ಕಣ್ರಿ; ಕೆಳಮಧ್ಯಮ ಅನ್ನುವಂಥ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಮೇಲೆ ಬಂದ ಸಾಧಕ ಕಣ್ರಿ; ಸಾಹಿತ್ಯದ ಸಾಲುಗಳನ್ನು ಕೂಡ ಅಲ್ಲಿ ಇಲ್ಲಿ ಹೇಳಿಕೊಳ್ಳುವ ಕವಿಹೃದಯದ ವ್ಯಕ್ತಿ ಕಣ್ರಿ; ನಮ್ಮವರು ಕಣ್ರಿ ಎಂಬೆಲ್ಲ ವೃತ್ತಗಳನ್ನು ಅವರು ಮತ್ತು ನಮ್ಮ ಸುತ್ತ ಎಳೆದುಕೊಂಡು, ನಾವಿಬ್ಬರೂ ಒಂದೇ ವೃತ್ತದೊಳಗಿದ್ದೇವೆಂದು ಭ್ರಮಿಸುತ್ತ ಖುಷಿಪಟ್ಟಿದ್ದೆವು. ಆದರೆ ಅಂಥ ಗೌರವ, ಮೆಚ್ಚುಗೆಗಳನ್ನೆಲ್ಲ ಒಂದೇ ಏಟಿಗೆ ಹೊಡೆದುಹಾಕುವಂತೆ ಮೊನ್ನೆ ಪ್ರಕಾಶ್ ರಾಜ್ ಕೇಳಿಬಿಟ್ಟರು: ಏನಾಗ್ತಿದೇರೀ ಕರ್ನಾಟಕದಲ್ಲಿ?, ಅಂತ. ಅಂತೂ, ಎಟ್ ದಿ ಎಂಡ್ ಆಫ್ ದ ಡೇ, ತಾನೊಬ್ಬ ನಟ ಮತ್ತು ನಟ ಅಷ್ಟೇ ಎಂಬುದನ್ನು ಈ ವ್ಯಕ್ತಿ ನಮಗೆ ಮನವರಿಕೆ ಮಾಡಿಕೊಟ್ಟರು. ಸಿಂಹದ ತೊಗಲು ಹಾಕಿಕೊಂಡು ಹೆದರಿಸಲು ಬಂದದ್ದು ನಿಜವಾಗಿ ಸಿಂಹ ಅಲ್ಲ, ಒಂದು ಕತ್ತೆ ಎಂದು ಗೊತ್ತಾದಾಗ ಆಗುವ ಹೇವರಿಕೆ ಎಂಥಾದ್ದೋ ಅಂಥಾದ್ದೊಂದು ಭಾವ ಕನ್ನಡಿಗರೆಲ್ಲರ ಮನಸ್ಸಲ್ಲಿ ಹಾದುಹೋಯಿತು.

ಆಗಿದ್ದು ಇಷ್ಟೆ. ಗೌರಿ ಲಂಕೇಶ್ ಹತ್ಯೆಯಾದ ರಾತ್ರಿ, ಹತ್ಯೆಯಾದ ಒಂದು ತಾಸಿನ ಅಂತರದಲ್ಲೇ ಬಹುಶಃ ಪ್ರಕಾಶ್ ರಾಜ್ ಆ ಹೇಳಿಕೆ ಕೊಟ್ಟಿದ್ದರು: “ಕರ್ನಾಟಕದಲ್ಲಿ ಏನು ನಡೆಯುತ್ತಿದೆ? ಸೈದ್ಧಾಂತಿಕ ದ್ವೇಷಕ್ಕಾಗಿ ಬಲಪಂಥೀಯ ಉದ್ದಟರು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಪಂಚವೇ ತನ್ನ ಜತೆಗಿದೆ ಎಂದು ಭಾವಿಸಿಕೊಂಡು ಒಬ್ಬಂಟಿಯಾಗಿ ಬದುಕುತ್ತಿದ್ದ ಹೆಣ್ಣು ಮಗಳ ಮೇಲೆ ನಡೆದ ಹಲ್ಲೆ ಇದಲ್ಲ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ. ಡಾ. ಎಂ.ಎಂ. ಕಲ್ಬುರ್ಗಿಯವರ ಹತ್ಯೆ ನಡೆಸಿದ ಆರೋಪಿಗಳನ್ನು ಬಂಧಿಸುವುದಕ್ಕೆ ಮುನ್ನವೇ ಗೌರಿ ಹತ್ಯೆಯಾಗಿದೆ. ಬಲಪಂಥೀಯರ ಈ ದ್ವೇಷಪ್ರವೃತ್ತಿಯನ್ನು ನಾವೆಲ್ಲರೂ ಖಂಡಿಸಬೇಕು”. ಸರಿ, ಆ ಕ್ಷಣಕ್ಕೆ ಅದೊಂದು ಭಾವಾವೇಶದ ವಿಷಯ ಎಂದೇ ಹೇಳೋಣ. ಗೌರಿ ತನ್ನ ಜೀವನುದ್ದಕ್ಕೂ ಆರೆಸ್ಸೆಸ್ ಅನ್ನು, ಸಂಘಿಗಳನ್ನು ಹೀಯಾಳಿಸಿಕೊಂಡು ಬಂದರು. ತೀರಾ ಸೊಂಟದ ಕೆಳಗಿನ ಭಾಷೆಯಲ್ಲಿ ಆಡಿಕೊಂಡು ನಕ್ಕರು. ಸರಸಂಘಚಾಲಕರಾಗಿದ್ದ ಸುದರ್ಶನ್ ಸತ್ತಾಗ ನೋ ಚಿಯರ್ಸ್, ನೋ ಟಿಯರ್ಸ್ ಎಂದಾಕೆ ಆಕೆ! ಪಾಪ ಆ ಸುದರ್ಶನ್ ಈಕೆಯ ಯಾವ ಅನ್ನದ ತುತ್ತನ್ನು ಕಸಿಯಲು ಬಂದಿದ್ದರೋ ದೇವರಿಗೇ ಗೊತ್ತು! ದೇಶದ ಪ್ರಧಾನಿಗಳನ್ನು ಕೂಡ ಈಕೆ “ಯೂ ಈಡಿಯೆಟ್ ಮೋದಿ” ಎಂದೇ ಸಂಭೋದಿಸಿ ಮಾತಾಡುತ್ತಿದ್ದಾಕೆ. ಸಭ್ಯರಿಗೆ ಕೊಡಬೇಕಾದ ಗೌರವದ ಒಂದಂಶಕ್ಕೂ ಅರ್ಹಳಲ್ಲದ; ಕೇವಲ ಅಪ್ಪನ ಹೆಸರಿಂದ ಹೇಗೋ ಮೂರು ಕಾಸು ಸಂಪಾದಿಸುತ್ತಿದ್ದ ಓರ್ವ ಸಾಮಾನ್ಯರಲ್ಲಿ ಸಾಮಾನ್ಯ ಪತ್ರಕರ್ತೆಯಾಗಿದ್ದಾಕೆಗೆ ಸೈದ್ಧಾಂತಿಕ ದ್ವೇಷವೇ ಕಾರಣವಾಗಿ ಗುಂಡೇಟು ಹೊಡೆಯುವಷ್ಟು ಸಂಘ ದುರ್ಬಲವಾಗಿಲ್ಲ ಎಂಬುದು ಪ್ರಕಾಶ್ ರಾಜ್ ಅವರಿಗೆ ಆ ಕ್ಷಣಕ್ಕೆ ಮರೆತೇಹೋಗಿದ್ದರೂ, ಮರುದಿನವಾದರೂ ಅವರು ತನ್ನ ಮಾತುಗಳಿಗೆ ವಿಷಾದ ವ್ಯಕ್ತಪಡಿಸಬಹುದಿತ್ತು. “ಕ್ಷಮಿಸಿ! ನಾನು ದುಃಖದ ಉದ್ವೇಗದಲ್ಲಿ ಏನೋ ನಾಲ್ಕು ಮಾತು ಹೇಳಿಬಿಟ್ಟೆ. ಅದರಿಂದ ಯಾರಿಗೆಲ್ಲ ನೋವಾಗುತ್ತೆ ಎಂಬ ಕಲ್ಪನೆ ಇರಲಿಲ್ಲ. ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ. ಪೊಲೀಸ್ ತನಿಖೆಯಿಂದ ಸತ್ಯ ಹೊರಬೀಳುವವರೆಗೆ ನಾನು ಯಾರನ್ನೂ ತಪ್ಪಿತಸ್ಥರನ್ನಾಗಿ ಮಾಡುವುದಿಲ್ಲ” ಎಂದು ಹೇಳಿದ್ದರೆ ಪ್ರಕಾಶ್ ರಾಜ್ ದೊಡ್ಡವರಾಗುತ್ತಿದ್ದರು. ಅವರನ್ನು ಅತ್ಯಂತ ಪ್ರಾಮಾಣಿಕವಾಗಿ ಕ್ಷಮಿಸುವ ದೊಡ್ಡಗುಣ ಕನ್ನಡಿಗರಿಗೂ ಇರುತ್ತಿತ್ತು. ಆದರೆ ಪ್ರಕಾಶ್ ರಾಜ್ ಕ್ಷಮೆ ಕೇಳಲಿಲ್ಲ. ಆ ಮೂಲಕ ತಾನು ಕಳಂಕರಹಿತನಾಗುವ ಅವಕಾಶವನ್ನು ಒದ್ದುಬಿಟ್ಟರು ಅವರು. “ನಾನಿರುವುದೇ ಹೀಗೆ ಕಣ್ರಿ. ಅದೇನ್ ಮಾಡ್ಕೊಳ್ತೀರೋ ಮಾಡ್ಕೊಳ್ರಿ” ಎಂದು ಹೇಳುವ ಧಾಷ್ಟ್ರ್ಯ ಅವರ ಕೃತಿಯಲ್ಲಿತ್ತು. ಹಿಂದೊಮ್ಮೆ ಕಾವೇರಿ ಗಲಭೆಯ ಸಮಯದಲ್ಲಿ ತನಗೆ ಪ್ರಶ್ನೆ ಕೇಳಿದ ಪತ್ರಕರ್ತೆಗೆ, ಆಕೆ ಹೆಣ್ಣು ಎಂದೂ ನೋಡದೆ ವಾಚಾಮಗೋಚರ ಬೈದು ತನ್ನ ಮೈಕ್ರೋಫೋನ್ ಅನ್ನು ಕಿತ್ತು ಎಸೆದು, ಕೂಗಾಡಿ, ರಂಪ ಎಬ್ಬಿಸಿ, ತಾನು ನಿಜಜೀವನದಲ್ಲಿ ಕೂಡ ವಿಲನ್ ರೀತಿಯೇ ಇದ್ದೇನೆ ಎಂಬುದನ್ನು ತೋರಿಸಿಕೊಟ್ಟಿದ್ದ ವ್ಯಕ್ತಿ ಈತ. ಆ ಸಂದರ್ಭದಲ್ಲಿ ಅವರು ಹೇಳಿದ್ದ ಮಾತು: “ನಾನು ನಟ. ನನ್ನನ್ನು ನಟ ಎಂಬ ನೆಲೆಯಲ್ಲೇ ನೋಡಿ. ಸಿನೆಮಾ ಮಾತು ಬಿಟ್ಟು ಬೇರೆ ವಿಷಯಕ್ಕೆ ನನ್ನನ್ನು ಎಳೆದುತರಬೇಡಿ” ಅಂತ. ಹಾಗಿದ್ದ ಪ್ರಕಾಶ್ ರಾಜ್ ಅವರಿಗೆ ಈಗ ತನ್ನ ಪರಮಾಪ್ತೆಯ ಕೊಲೆಯ ಸಂದರ್ಭದಲ್ಲಿ ಕೊಲೆಯ ಎಲ್ಲ ಹೊಣೆಗಾರಿಕೆಯನ್ನೂ ಆರೆಸ್ಸೆಸ್ ಮತ್ತು ಸಂಘ ಪರಿವಾರದ ಮೇಲೆ ಹಾಕಲು ಅನುಮತಿ ಕೊಟ್ಟವರು ಯಾರು? ಈಗ ತಾನು ಮಾತಾಡುತ್ತಿರುವುದು ಸಿನೆಮಾಕ್ಕೆ ಹೊರತಾದ ರಾಜಕೀಯ ವಿಷಯ ಎಂದು ಅವರಿಗೆ ಅನ್ನಿಸಲಿಲ್ಲವೇ? ತಾನು ನಟ, ನಟನ ವ್ಯಾಪ್ತಿ ಎಷ್ಟೋ ಅಷ್ಟೇ ವೃತ್ತದೊಳಗೆ ನಿಯಂತ್ರಣ ಹೇರಿಕೊಂಡು ಇರಬೇಕು ಅನ್ನಿಸಲಿಲ್ಲವೇ? ಒಂದು ಕೊಲೆಗೆ, ತನಿಖೆ ಇನ್ನೂ ಪ್ರಾರಂಭ ಆಗುವುದಕ್ಕೂ ಮೊದಲೇ ತೀರ್ಪು ಕೊಟ್ಟರಲ್ಲ ಈ ಪ್ರಕಾಶ್ ರಾಜ್, ಇವರ ಮೇಲೆ ಸಂಘ ಪರಿವಾರ ಮಾನನಷ್ಟ ಮೊಕದ್ದಮೆ ಹೂಡಿದರೆ ಅದನ್ನು ಅವರು ಹೇಗೆ ಎದುರಿಸುತ್ತಾರೆ? ಆಗ ಮತ್ತೆ “ನಾನು ನಟ. ನಟನಾಗಿ ಅಷ್ಟೇ ನನ್ನನ್ನು ನೋಡಿ. ನಾನು ಅವತ್ತು ಹೇಳಿದ್ದು ನನ್ನ ಅಭಿಪ್ರಾಯ ಅಲ್ಲ; ಅದೊಂದು ಡೈಲಾಗ್ ಅಷ್ಟೇ” ಎಂದು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರಾ? ಕೊಲೆಯನ್ನು ಬಲಪಂಥೀಯ ಉದ್ದಟರೇ ಮಾಡಿದ್ದಾರೆ ಎಂಬುದು ಶತಪ್ರತಿಶತ ಗೊತ್ತಿದ್ದ ಮೇಲೆ ಅವರೇ ಮುಂದಾಗಿ ಪೊಲೀಸ್ ತನಿಖೆಯ ಸಾರಥ್ಯ ಏಕೆ ವಹಿಸಿಕೊಳ್ಳಬಾರದು? ಹೇಗೂ ಸಿನೆಮಾ ಪಾತ್ರಕ್ಕೆಂದು ಹೊಲಿಸಿದ ಪೊಲೀಸ್ ಧಿರಿಸು ಅಂತೂ ಇದ್ದೇ ಇದ್ದೀತು ಮನೆಯಲ್ಲಿ.

ಪ್ರಕಾಶ್ ರಾಜ್ ಅವರ ಹೇಳಿಕೆಯನ್ನು ಈಗ ಸದ್ಯಕ್ಕೆ ಪಕ್ಕಕ್ಕಿಡೋಣ. ಅದೇ ಸಂದರ್ಭದಲ್ಲಿ ನಡೆದುಹೋದ ಇನ್ನೊಂದು ಘಟನೆಯತ್ತ ನೋಡೋಣ. ಇದೇ ಗೌರಿ ಲಂಕೇಶ್ ಹತ್ಯೆಯ ಸಂದರ್ಭದಲ್ಲಿ ವಿಜಯಪುರದಲ್ಲಿ ಮಲ್ಲನಗೌಡ ಬಿರಾದಾರ ಎಂಬ 22 ವರ್ಷದ ಯುವಕ ಒಂದು ಫೇಸ್‍ಬುಕ್ ಪೋಸ್ಟ್ ಬರೆದಿದ್ದ. “ಒಂದು ಗಂಜಿ ಗಿರಾಕಿಯ ಹೆಣ ಬಿತ್ತು. ಮಿಕ್ಕ ಗಂಜಿ ಗಿರಾಕಿಗಳಿಗೂ ಇದೇ ಗತಿ. ಗೌರಿ ಲಂಕೇಶ್ ಮಟ್ಯಾಷ್” ಎಂಬುದು ಅದರ ಒಕ್ಕಣೆ. ಜೊತೆಗೆ “ಧರ್ಮಕ್ಕಾಗಿ ಜೀವ ಕೊಡಬೇಕು ಅಂತೇನಿಲ್ಲ. ಧರ್ಮದ ವಿರುದ್ಧವಾದವರ ಜೀವ ತೆಗೆದರೆ ಆಯ್ತು” ಎಂಬ ಸಾಲೂ ಅವನ ಜಾಲತಾಣದಲ್ಲಿತ್ತು. ಈ ಬರಹಗಳನ್ನು ನೋಡಿದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದರು. ಬಂಧಿಸಿದ ದಿನವೇ ಆತನನ್ನು 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನನ್ನು 7 ದಿನಗಳವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿದ ಒಂದೇ ದಿನದಲ್ಲಿ ಪೊಲೀಸರು “ಆರೋಪಿಗೂ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ವಶದಲ್ಲಿರುವ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ ಬಳಿಕ ಏನಾದರೂ ಗೊತ್ತಾಗಬಹುದು” ಎಂದು ಹೇಳಿದ್ದಾರೆ.

ಮಲ್ಲನಗೌಡ ಬಿರಾದಾರ್ ಬರೆದುಕೊಂಡದ್ದನ್ನು ಯಾರೂ ಸಮರ್ಥನೆ ಮಾಡಲಾರರು. ಧರ್ಮಕ್ಕಾಗಿ ಜೀವ ಕೊಡಬೇಕು ಅಂತೇನಿಲ್ಲ; ಧರ್ಮದ ವಿರುದ್ಧವಾದವರ ಜೀವ ತೆಗೆದರೆ ಆಯ್ತು ಎಂದು ಹಿಂದೂ ಧರ್ಮ ಯಾರಿಗೂ ಉಪದೇಶವಿತ್ತಿಲ್ಲ. ಶತ್ರುಗಳನ್ನೇ ಆದರೂ ಬೌದ್ಧಿಕ ಸಮರದಲ್ಲಿ ಸೋಲಿಸಬೇಕು ಎಂದೇ ಹಿಂದೂ ಸಾಧುಸಂತರು ಹೇಳಿಕೊಂಡುಬಂದಿದ್ದಾರೆ. ಧರ್ಮರಕ್ಷಣೆಗಾಗಿ ಕತ್ತಿ ಹಿಡಿಯಬೇಕಾದ ಪರಿಸ್ಥಿತಿ ವಿಜಯನಗರದ ಕಾಲದಲ್ಲಿ, ಮೌರ್ಯರ ಯುಗದಲ್ಲಿ ಇದ್ದಿರಬಹುದು. ಆದರೆ ಈಗ ನಾವ್ಯಾರೂ ಕತ್ತಿ, ಬಂದೂಕು, ಬಾಂಬು ಹಿಡಿದು ಹಿಂದೂ ಧರ್ಮವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ಅವನ್ನೆಲ್ಲ ಹಿಡಿದು ತಮ್ಮ ಮತಪ್ರಸಾರಕ್ಕೆ ಹೊರಟಿರುವವರನ್ನು ಕಟ್ಟಿಹಾಕುವುದಷ್ಟೇ ಸದ್ಯಕ್ಕೆ ಹಿಂದೂಗಳ ಆದ್ಯತೆಯಾಗಬೇಕಿರುವುದು. ಹಾಗಿರುವಾಗ ಮಲ್ಲನಗೌಡ ಬರೆದುಕೊಂಡದ್ದು ತಪ್ಪು. ಅದನ್ನು ಹಿಂದೂರಾಷ್ಟ್ರದ ಪ್ರತಿಪಾದನೆ ಮಾಡುವ ಕಟ್ಟಾ ಹಿಂದೂಗಳು ಕೂಡ ಒಪ್ಪುತ್ತಾರೆ. ಆದರೆ? ಆದರೆ ಒಂದು ಕ್ಷಣ ಯೋಚಿಸಿ. ಮಲ್ಲನಗೌಡ ಬಿರಾದಾರ್ ಬರೆದುಕೊಂಡದ್ದು ತಪ್ಪೇ ಆದರೂ ಇಲ್ಲಿ ಪೊಲೀಸರ ಕೆಲಸ ಏನಾಗಿರಬೇಕಿತ್ತು? ಆತನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿದರೆಂದೇ ಇಟ್ಟುಕೊಳ್ಳೋಣ. ಆತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ಆತ ಭಾವೋದ್ವೇಗಕ್ಕೆ ಒಳಗಾಗಿ ನಾಲ್ಕು ಸಾಲು ಬರೆದುಕೊಂಡಿದ್ದಾನೆ ಎಂಬುದು ಗೊತ್ತಾದ ಮೇಲೆ ಆತನನ್ನು ಗದರಿಸಿ ಕಳಿಸಬಹುದಿತ್ತಲ್ಲ? ನಮ್ಮ ಎದುರೇ ಆ ನಿನ್ನ ಪೋಸ್ಟ್ ಅಳಿಸಿಹಾಕು; ಜೊತೆಗೆ ಒಂದು ಕ್ಷಮಾಪಣೆಯನ್ನೂ ಕೇಳು ಎಂದು, ಬೇಕಾದರೆ “ಪೊಲೀಸ್ ಭಾಷೆ”ಯಲ್ಲೇ ಆತನಿಗೆ ಎಚ್ಚರಿಕೆ ಕೊಡಬಹುದಿತ್ತಲ್ಲ? ಆತನನ್ನು ಪ್ರಾಥಮಿಕವಾಗಿ ವಿಚಾರಣೆ ನಡೆಸಿದಾಗಲೇ ಅವರಿಗೆ ಆತನಿಗೂ ಗೌರಿ ಕೊಲೆಗೂ ಸಂಬಂಧ ಇಲ್ಲ ಎಂಬುದು ಗೊತ್ತಾಗಿದೆ. ಅದನ್ನೇ ಪೊಲೀಸ್ ಅಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲೂ (ಪ್ರಜಾವಾಣಿ 7 ಸೆಪ್ಟೆಂಬರ್ 2017) ಹೇಳಿದ್ದಾರೆ. ಹಾಗಿದ್ದ ಮೇಲೂ ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದೇಕೆ? ನ್ಯಾಯಾಲಯ ಯಾಕೆ ಆತನನ್ನು ಮತ್ತೆ 7 ದಿನಗಳ ಪೊಲೀಸ್ ಸುಪರ್ದಿಗೆ ಒಪ್ಪಿಸಿದೆ? ನಿರಪರಾಧಿ ಎಂದು ಪೊಲೀಸರೇ ಹೇಳಿದ ಮೇಲೆ ಆತನನ್ನು ಠಾಣೆಯಲ್ಲಿ ಏಳು ದಿನ ಕೂರಿಸಿಕೊಳ್ಳುವ ಔಚಿತ್ಯ ಏನು? ಆ ಏಳು ದಿನಗಳ ಕಾಲ ಆತನ ಮೇಲೆ ನಡೆಯುವ ಮಾನಸಿಕ, ದೈಹಿಕ ಹಲ್ಲೆಗಳಿಗೆ ಯಾರು ಹೊಣೆ? ಪೊಲೀಸರು ತನಿಖೆಯ ಹೆಸರಲ್ಲಿ ಆತನಿಗೆ ಚಿತ್ರಹಿಂಸೆ ಕೊಡುವುದಿಲ್ಲ ಎಂದು ಏನು ಗ್ಯಾರಂಟಿ? ರಾಜ್ಯದಲ್ಲಿ ಯಾವುದೇ ಪ್ರಗತಿಪರರ ಕೊಲೆಯಾಗಲಿ, ಸಂಘ ಪರಿವಾರದ ಜೊತೆ ಗುರುತಿಸಿಕೊಂಡವರನ್ನು ಹಿಡಿದು ರುಬ್ಬಬೇಕು ಎಂದು ಶಪಥ ತೊಟ್ಟಿರುವ ಕರ್ನಾಟಕ ಸರಕಾರದಿಂದ ಪೊಲೀಸ್ ಠಾಣೆಗೆ ಹೋಗಿರಬಹುದಾದ ಸೂಚನೆಗಳು ಏನೇನಿರಬಹುದು, ಒಮ್ಮೆ ಯೋಚನೆ ಮಾಡಿ!

ಸಮಾಜದಲ್ಲಿ ಅತ್ಯಂತ ಪ್ರಬುದ್ಧ ನಟ, ಚಿಂತಕ, ಸಾಕ್ಷಿಪ್ರಜ್ಞೆ ಎಂದೆಲ್ಲ ಗುರುತಿಸಿಕೊಳ್ಳುವ ಪ್ರಕಾಶ್ ರಾಜ್ ಹೇಳಿಕೆಯನ್ನೂ ಇನ್ನೂ 22ರ ಎಳೆಹರೆಯದ ಬಿಸಿರಕ್ತದ ಮಲ್ಲನಗೌಡನ ಹೇಳಿಕೆಯನ್ನೂ ಅಕ್ಕಪಕ್ಕದಲ್ಲಿಟ್ಟು ನೋಡಿ. ಏನಾದರೂ ವ್ಯತ್ಯಾಸ ಕಾಣುತ್ತದಾ? ಒಂದು ಗಂಜಿ ಗಿರಾಕಿಯ ಹೆಣಬಿತ್ತು ಎಂದು ಮಲ್ಲನಗೌಡ ಬರೆದುಕೊಂಡರೆ ಸೈದ್ಧಾಂತಿಕ ದ್ವೇಷಕ್ಕಾಗಿ ಬಲಪಂಥೀಯ ಉದ್ದಟರು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪ್ರಕಾಶ್ ರಾಜ್ ಹೇಳುತ್ತಿದ್ದಾರೆ. ಇಬ್ಬರೂ ಪೂರ್ವಗ್ರಹಪೀಡಿತರು. ಕೊಲೆ ನಡೆಸಿದವರು ನಿಜವಾಗಿಯೂ ಯಾರು ಎಂಬುದು ಇಬ್ಬರಿಗೂ ಗೊತ್ತಿಲ್ಲ. ಇಬ್ಬರೂ ಆ ಕ್ಷಣದ ತಮ್ಮ ಭಾವನೆಗಳನ್ನು ಹೊರಹಾಕಿದ್ದಾರೆ. ಆದರೆ, ಪ್ರಕಾಶ್ ರಾಜ್ ಮಾತಿಗೆ ನಾವು ಚಪ್ಪಾಳೆ ತಟ್ಟುತ್ತೇವೆ. “ಆಹಾ ಎಂಥಾ ಅದ್ಭುತ ಮಾತು!” ಎನ್ನುತ್ತೇವೆ. ಆದರೆ ಮಲ್ಲನಗೌಡನನ್ನು ಆ ಕೂಡಲೇ ಬಂಧಿಸುತ್ತೇವೆ. ವಿಚಾರಣೆಯ ಹೆಸರಲ್ಲಿ ಪೊಲೀಸ್ ಟಾರ್ಚರ್ ಕೊಡುತ್ತೇವೆ. ನ್ಯಾಯಾಲಯಕ್ಕೆ ಅಲೆಸುತ್ತೇವೆ. ಬೆಂಡೆತ್ತುತ್ತೇವೆ. ಆತನ ಜೀವನ ಬರ್ಬಾದ್ ಆಗುವಂತೆ ಮಾಡಿ ಖುಷಿಪಡುತ್ತೇವೆ. ನಾಚಿಕೆ ಆಗೋಲ್ಲವೇನ್ರೀ?

ಹಿಂದೂ ಧರ್ಮಕ್ಕೆ  ಅಪ್ಪ ಅಮ್ಮ ಇಲ್ಲ. ಹುಟ್ಟಿಸಿದವರು ಯಾರು ಅನ್ನೋದೇ ಗೊತ್ತಿಲ್ಲದ ಧರ್ಮ ಇದು. ಇದನ್ನೂ ಒಂದು ಧರ್ಮ ಅಂತಾರೇನ್ರೀ? – ಎಂದಾಕೆ ಗೌರಿ. ಆಕೆಯ ಮೇಲೆ ಎರಡು ವರ್ಷದ ಹಿಂದೆಯೇ 66 ಎಫ್‍ಐಆರ್‍ಗಳು ನಡೆಯುತ್ತಿದ್ದವು. ಆದರೆ ಒಂದಾದರೂ ಎಫ್‍ಐಆರ್ ಅನ್ನು ಪೊಲೀಸರು ಗಂಭೀರವಾಗಿ ಕೈಗೆತ್ತಿಕೊಂಡಿರಲಿಲ್ಲ. ಆಕೆ ತಮ್ಮ ಠಾಣೆಯ ಎದುರಲ್ಲಿ ಹಾದುಹೋದರೆ ಸಾಕು ಸೆಲ್ಯೂಟ್ ಹೊಡೆಯುವ, ಸಾಷ್ಠಾಂಗ ಬೀಳುವ ನಿಯತ್ತನ್ನು ಪೊಲೀಸ್ ಇಲಾಖೆ ಆಕೆಗೆ ತೋರುತ್ತಿತ್ತು. ತನ್ನ ಜೀವಿತದುದ್ದಕ್ಕೂ ಆಕೆ ಈ ನೆಲದ ಸಂವಿಧಾನಕ್ಕೆ, ಕಾನೂನಿಗೆ ಬೆಲೆ ಕೊಡದೆ ಎಲ್ಲಕ್ಕೂ ತಾನು ಅತೀತೆ ಎಂಬಂತೆಯೇ ಬದುಕಿದರು. ಕೆಲವು ತಿಂಗಳ ಹಿಂದೆ ಪ್ರಭಾ ಬೆಳವಂಗಲ ಎಂಬ ಮಹಿಳೆ ಯೋಗಿ ಆದಿತ್ಯನಾಥ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದಾಗ ಒಂದು ಅಶ್ಲೀಲ ಚಿತ್ರವನ್ನು ತನ್ನ ಜಾಲತಾಣದಲ್ಲಿ ಹಂಚಿಕೊಂಡು ವಿಕೃತಾನಂದ ಪಟ್ಟಿದ್ದರು. ಆಕೆಯ ಮೇಲೆ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾದವು. ನಂಬಿದರೆ ನಂಬಿ, ನಮ್ಮ ಕರ್ನಾಟಕ ರಾಜ್ಯ ಪೊಲೀಸರಿಗೆ ಆಕೆಯ ಮನೆಯ ವಿಳಾಸವೇ ಸಿಗಲಿಲ್ಲವಂತೆ! ಇದಕ್ಕಿಂತ ಜೋಕ್ ಇದೆಯೇನ್ರೀ? ಮೈಸೂರು ಸಂಸದ ಪ್ರತಾಪ್ ಸಿಂಹ, “ನಿಮ್ಮಲ್ಲಿ ಇಲ್ಲವಾದರೆ ನಾನೇ ಕೊಡುತ್ತೇನೆ. ಬರೆದುಕೊಳ್ಳಿ” ಎಂದಾಗ ಹಿರಿಯ ಪೊಲೀಸ್ ಅಧಿಕಾರಿ “ಬೇಡ ಬೇಡ! ಆದರೂ ನಮಗೆ ಅಂಥದೊಂದು ಮಹಿಳೆ ಅಸ್ತಿತ್ವದಲ್ಲಿ ಇರಬಹುದೇ ಎಂಬ ಬಗ್ಗೆಯೇ ಅನುಮಾನ ಇದೆ” ಎಂದಿದ್ದರು! ಇದು ನಮ್ಮ ರಾಜ್ಯ! ಇದು ನಮ್ಮ ಪೊಲೀಸ್ ವ್ಯವಸ್ಥೆ! ನಾವು ನಮ್ಮ ಮುಂದಿನ ತಲೆಮಾರಿಗೆ ಎಂತೆಂಥಾ ಉದಾಹರಣೆಗಳನ್ನು ಬಿಟ್ಟುಹೋಗುತ್ತಿದ್ದೇವೆ ನೋಡಿ! ಮೈಸೂರಿನ ಹುಚ್ಚು ಚಿಂತಕ ಭಗವಾನ್ ಮೇಲೆ ನೂರೆಂಟು ಪ್ರಕರಣಗಳು ದಾಖಲಾದವು. ಆತನನ್ನು ಬಂಧಿಸಿ ಕಂಬಿ ಹಿಂದೆ ಕೂರಿಸುವ ಬದಲು ರಾಜ್ಯ ಸರಕಾರವೇ ಲಕ್ಷ ಲಕ್ಷ ಖರ್ಚು ಮಾಡಿ ಆತನಿಗೆ ಪೊಲೀಸ್ ಪ್ರೊಟೆಕ್ಷನ್ ಕೊಟ್ಟಿತು. ಅರವಿಂದ ಮಾಲಗತ್ತಿ ಮೇಲೆ ಪ್ರಕರಣ ಇತ್ತು, ವಿಚಾರಣೆ ನಡೆಯಲಿಲ್ಲ. ಮಹೇಶ್‍ಚಂದ್ರ ಗುರು ಮೇಲೆ ಕೇಸ್ ಇತ್ತು, ತನಿಖೆಯೇ ಪ್ರಾರಂಭವಾಗಲಿಲ್ಲ. ಚಕ್ರವರ್ತಿ ಸೂಲಿಬೆಲೆ ಮತ್ತು ಪ್ರತಾಪ್ ಸಿಂಹ ಇಬ್ಬರ ಮೇಲೂ ಕೊಲೆ ಬೆದರಿಕೆ ಇದ್ದವು, ಪೊಲೀಸರು ದೂರನ್ನೇ ತೆಗೆದುಕೊಳ್ಳಲಿಲ್ಲ! ರಾಜ್ಯದಲ್ಲಿ 12 ಆರೆಸ್ಸೆಸ್ ಕಾರ್ಯಕರ್ತರ ಭೀಕರ ಹತ್ಯೆಗಳಾದವು. ಯಾವೊಂದಕ್ಕೂ, ಕೇಂದ್ರದಿಂದ ಒತ್ತಡ ಬರದೆ ನಮ್ಮ ರಾಜ್ಯದ ಪೊಲೀಸರು ತನಿಖೆಗೆ ಹೊರಡಲಿಲ್ಲ. ಕಲಬುರ್ಗಿಯವರ ಕೊಲೆಯಾದಾಗ ಯಥಾಪ್ರಕಾರ, ಜಾಲತಾಣದಲ್ಲಿ ಬರೆದುಕೊಂಡಿದ್ದ ಒಂದಿಬ್ಬರು ನಿಷ್ಪಾಪಿಗಳ ಮೇಲೆ ಕೇಸ್ ಹಾಕಿ, ಠಾಣೆಗೆ ಕರೆಸಿ, ಬೆಂಡೆತ್ತಿ ಇವರು ತಮ್ಮ ತೀಟೆ ತೀರಿಸಿಕೊಂಡಿದ್ದರು. ಸಿದ್ದರಾಮಯ್ಯನವರ ಸರಕಾರಾವಧಿಯಲ್ಲಿ ನಡೆಯುತ್ತಿರುವ ಈ ಪೊಲೀಸ್ ಅಟ್ರಾಸಿಟಿಗಳ ಬಗ್ಗೆ ಬರೆಯುತ್ತಹೋದರೆ ಕೈ ಕಂಪಿಸುತ್ತದೆ, ಹಣೆಯಲ್ಲಿ ನೆರಿಗೆಗಟ್ಟುತ್ತದೆ, ಕಣ್ಣಲ್ಲಿ ನೀರಾಡುತ್ತದೆ. ಎಷ್ಟೊಂದು ಅಮಾಯಕರ ಬೆನ್ನು ಸುಲಿದರಲ್ಲಾ ಇವರು? ಎಷ್ಟೊಂದು ನಿಸ್ಸಹಾಯಕರ ನಿಸ್ಸಹಾಯಕತೆಯ ಲಾಭವೆತ್ತಿದರಲ್ಲಾ ಇವರು? ಭಗವಾನ್‍ಗೆ ಪ್ರಶಸ್ತಿ ಕೊಟ್ಟದ್ದು ಸರಿಯಾ ಎಂದು ಸಾಹಿತ್ಯ ಅಕಾಡೆಮಿಗೆ ಫೋನ್ ಮಾಡಿ ಕೇಳಿದ್ದ ಓರ್ವ ನಿಷ್ಪಾಪಿಯನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಎಳೆದು ತಂದು ಅವನ ಜೇಬಿನ ದುಡ್ಡೆಲ್ಲ ಕಿತ್ತುತೆಗೆದು ಅದರಲ್ಲಿ ಬಿರಿಯಾನಿ ತಿಂದು, ಒಂದೇ ಒಂದು ರುಪಾಯಿಯ ನಾಣ್ಯ ಕೂಡ ಜೇಬಲ್ಲಿ ಉಳಿಯದಂತೆ ಮಾಡಿ ಆತನನ್ನು ಹೋಗಾಚೆ ಎಂದು ನೂಕಿದ ಈ ವ್ಯವಸ್ಥೆ ಅದೆಷ್ಟು ಕ್ರೂರಿ!!

ಭಾರತೀಯ ಜನತಾ ಪಕ್ಷಕ್ಕೆ ಹೇಳಬೇಕಾಗಿದೆ – ನೀವು ಈಗಾಗಲೇ ಸತ್ತಿರುವವರ ಪರವಾಗಿ ಹೋರಾಟ ಮಾಡುತ್ತಿದ್ದೀರಿ. ಮಾಡಿ, ಒಳ್ಳೆಯದೆ. ಆದರೆ ಇಲ್ಲಿ ಬದುಕಿದ್ದೂ ಸತ್ತಂತಾಗಿರುವವರ, ಪೊಲೀಸರಿಂದ ದಿನನಿತ್ಯ ಹಿಂಸೆ ಅನುಭವಿಸುತ್ತಿರುವವರ ಕತೆ ಏನು ಸ್ವಾಮಿ? ಇವರ ಪರವಾಗಿ ನೀವೇಕೆ ಒಂದು ಸಂಘಟಿತ ಹೋರಾಟ ಮಾಡಬಾರದು? ಯಾಕೆ ಇವರಿಗೊಂದು ಕಾನೂನು ಬೆಂಬಲ ನಿಮ್ಮ ಕಡೆಯಿಂದ ಸಿಗಬಾರದು? ಯಾವುದೇ ವ್ಯಕ್ತಿ ಮೊಟ್ಟಮೊದಲ ಬಾರಿಗೆ ಪೊಲೀಸ್ ಕೇಸ್ ಹಾಕಿಸಿಕೊಂಡಾಗ ಅಧೀರನಾಗುತ್ತಾನೆ; ಮನೆಯಲ್ಲಿ ಸಮಾಜದಲ್ಲಿ ತನ್ನ ಗೌರವ ಮೂರಾಬಟ್ಟೆಯಾದೀತೆಂದು ಭಯಪಡುತ್ತಾನೆ. ಆಗ ಅವನಿಗೆ ತಕ್ಷಣ ಬೇಕಾಗುವುದು ಒಂದಷ್ಟು ಧೈರ್ಯ ಹೇಳುವ ಮಾತು; ಮತ್ತು ಕಾನೂನು ಬೆಂಬಲ. ಅದನ್ನೇಕೆ ನಿಮ್ಮ ಪಕ್ಷ ಹಿಂದೂಪರ ವಿಚಾರಕ್ಕಾಗಿ ನಿಂತಿರುವವರಿಗೆ ಕೊಡಬಾರದು? ನೀವು ತಪ್ಪನ್ನು ಸಮರ್ಥಿಸಿಕೊಳ್ಳಿ ಎಂದು ನಾವು ಹೇಳುತ್ತಿಲ್ಲ. ತಪ್ಪನ್ನು ಖಂಡಿತಾ ಖಂಡಿಸಿ. ಆದರೆ, ಸಣ್ಣ ತಪ್ಪಿಗೇ ಬಹುದೊಡ್ಡ ಬೆಲೆ ತೆರಬೇಕಾಗಿ ಬಂದ ಅಮಾಯಕರ ಪರವಾಗಿ ನಿಲ್ಲಿ. ಆವೇಶದ ಕ್ಷಣದಲ್ಲಿ ಎರಡು ಸಾಲು ತಪ್ಪೇ ಬರೆದರೂ ಮಲ್ಲನಗೌಡ ಬಿರಾದಾರ್ ಖಂಡಿತವಾಗಿ ಏಳು ದಿನ ಪೊಲೀಸ್ ಕಸ್ಟಡಿ ಅನುಭವಿಸಬೇಕಾಗಿಲ್ಲ. ಪದವಿ ಪಡೆದು ಈಗಷ್ಟೇ ಉದ್ಯೋಗದ ಬೇಟೆಗೆ ಹೊರಟಿರುವ ಆತನ ಬದುಕಿನ ಪ್ರಾರಂಭದಲ್ಲೇ ನಡೆದಿರುವ ಈ ಬಂಧನದಿಂದ ಆತನಿಗೆ ಆಗಬಹುದಾದ ಮಾನಸಿಕ ಆಘಾತ ಎಂಥಾದ್ದು? ಸಮಾಜದಲ್ಲಿ ಆತ ಕಳೆದುಕೊಳ್ಳುವ ಮಾನ ಮರಳಿಸಿಗುತ್ತದೆಯೇ? ಮರಳುವುದೇ ಆದರೂ ಅದಕ್ಕೆಷ್ಟು ಕಾಲ ಬೇಕಾದೀತು? ತನ್ನ ಕಷ್ಟಕಾಲದಲ್ಲಿ ಯಾರೊಬ್ಬರೂ ಸಹಾಯಕ್ಕೆ ಬರದೆ ಇದ್ದರೆ ಆತನಿಗೆ ಹಿಂದೂ ಧರ್ಮದ ಬಗ್ಗೆಯೇ ಜಿಗುಪ್ಸೆ ಬರಲಿಕ್ಕಿಲ್ಲವೇ? ಹಾಗೆ ಜಿಗುಪ್ಸೆ ತಳೆದು ಆತ ಬೇರೆ ಮತಕ್ಕೆ ಮತಾಂತರವಾದ ಮೇಲೆ ಘರ್ ವಾಪಸಿ ಮಾಡಲು ಹೋಗುವ ಬದಲು ಈಗ, ಅವನ ಕಷ್ಟ ಕಾಲದಲ್ಲಿ ಅವನ ಸಹಾಯಕ್ಕೆ ನಿಲ್ಲಿ. ಅವನಂತೆಯೇ ಈ ರಾಜ್ಯದಲ್ಲಿ ಸುಖಾಸುಮ್ಮನೆ ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿರುವ ಹಲವು ಮಂದಿ ಇದ್ದಾರು. ಒಂದಷ್ಟು ತಪಾಸಣೆ ನಡೆಸಿದರೆ, ಅವರಲ್ಲಿ ಹೆಚ್ಚಿನವರೆಲ್ಲ ರಾಜಕೀಯ ಬಲಿಪಶುಗಳು ಅಷ್ಟೇ. ಕಾಂಗ್ರೆಸ್ ತನ್ನ ವಿರೋಧಿಗಳನ್ನು ಹಣಿಯಲು ಸರ್ವ ಮಾರ್ಗಗಳನ್ನೂ ಬಳಸಿಕೊಳ್ಳುತ್ತಿದೆ. ಪೊಲೀಸ್ ವ್ಯವಸ್ಥೆಯನ್ನು ಅತ್ಯಂತ ವ್ಯಾಪಕವಾಗಿ ಬಳಸಿಕೊಂಡು ಸಿಕ್ಕಸಿಕ್ಕವರ ಮೇಲೆ ಹಲವು ಪ್ರಕರಣಗಳನ್ನು ಹಾಕುತ್ತಿದೆ. ಠಾಣೆ, ನ್ಯಾಯಾಲಯ ಅಲೆಸುತ್ತಿದೆ. ಅವರ ಪರವಾಗಿ ನಿಲ್ಲಬೇಕಾದ್ದು ನಿಮ್ಮ ನೈತಿಕ ಹೊಣೆ. ಪ್ರಕಾಶ್ ರಾಜ್ “ಏನಾಗ್ತಿದೆ ಕರ್ನಾಟಕದಲ್ಲಿ?” ಅಂತ ಕೇಳಿದ್ದಾರಲ್ಲ; ಏನೇನಾಗ್ತಿದೆ ಅಂತ ಅವರಿಗೆ ಕಾಣುವಂತೆ, ಮನವರಿಕೆಯಾಗುವಂತೆ ಒಂದಷ್ಟು ಕೆಲಸ ಮಾಡಿತೋರಿಸಿ.

Comments

comments