ಬ್ರಾಹ್ಮಣರನ್ನು ನೀಚರಂತೆ ತೋರಿಸುವ ಕಾರ್ಯಕ್ರಮವನ್ನು ಚಪ್ಪರಿಸಿ ಎಂಜಾಯ್ ಮಾಡೋ ನೀವು ಹೊಟ್ಟೆಗೇನು ತಿಂತೀರಿ ಅನ್ನೋ ಡೌಟಿದೆ ನಮಗೆ!

ಡ್ರಾಮಾ ಜ್ಯೂನಿಯರ್ಸ್. ಝೀಟಿವಿ ಕನ್ನಡ ಟಿವಿವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಆಗಸ್ಟ್ 6ನೇ ತಾರೀಖು ಬಿತ್ತರವಾದ ಸಂಚಿಕೆಯಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ಒಂದು ತುಣುಕು ಇತ್ತು ಎಂದು ಜಾಲತಾಣದಲ್ಲಿ ನೋಡಿದೆ. ಹಾಗೆಯೇ ಕೆಲವು ಸ್ನೇಹಿತರು ಹಂಚಿಕೊಂಡ ಆ ತುಣುಕಿನ ವಿಡಿಯೋ ಕೂಡ ನೋಡಿದೆ. ಬ್ರಾಹ್ಮಣರನ್ನು ಅವಹೇಳನ ಮಾಡಲಾಯ್ತು ಅನ್ನೋದಕ್ಕಿಂತ ಹೆಚ್ಚಾಗಿ ಆ ಸ್ಕಿಟ್ ಅನ್ನು ನೋಡುವಾಗ ನನಗೆ ಅನ್ನಿಸಿದ್ದು ನಮ್ಮ ಹಾಸ್ಯಪ್ರವೃತ್ತಿ ಎಷ್ಟು ಕೆಳಮಟ್ಟಕ್ಕೆ ಇಳಿದಿದೆಯಲ್ಲ ಮತ್ತು ಅದನ್ನು ಪ್ರಜ್ಞಾವಂತರು, ಚಿಂತಕರು, ಸಾಕ್ಷಿಪ್ರಜ್ಞೆಗಳು ಎಂದೆಲ್ಲ ಹೊಗಳಿಸಿಕೊಂಡ ಟಿ.ಎನ್. ಸೀತಾರಾಮ್ ಮತ್ತು ಲಕ್ಷ್ಮೀ ತರದವರು ನಕ್ಕೂ ನಕ್ಕೂ ಎಂಜಾಯ್ ಮಾಡುತ್ತಿದ್ದಾರಲ್ಲ; ಇವರ ತಲೇಲಿ ಮಿದುಳಿದೆಯೋ ಇಲ್ಲಾ “ಬೇರೇನಾದರೂ” ತುಂಬಿದೆಯೋ ಎಂದು!

ಸಂಶಯವೇ ಬೇಡ, ನಮ್ಮ ಹಾಸ್ಯಪ್ರಜ್ಞೆ ಇತ್ತೀಚೆಗೆ ರಸಾತಳ ಕಂಡಿದೆ. ಡಬ್ಬಲ್ ಮೀನಿಂಗ್ ಇದ್ದರೆ ಮಾತ್ರ ಅದು ಹಾಸ್ಯ, ಕೆಟ್ಟಾಕೊಳಕು ಭಾಷೆಯಲ್ಲಿ ಒಂದಷ್ಟು ಒದರಾಡಿದರೆ ಮಾತ್ರ ಜೋಕು ಎಂಬ ಮಟ್ಟಕ್ಕೆ ನಾವು ಬಂದಿದ್ದೇವೆ. ಹಾಸ್ಯ ಎಂದರೆ ಯಾರನ್ನಾದರೂ ಚುಚ್ಚಬೇಕು, ಅಪಹಾಸ್ಯ ಮಾಡಬೇಕು, ಒಂದಷ್ಟು ಸೊಂಟದ ಕೆಳಗಿನ ಭಾಷೆಯಲ್ಲಿ ಬಯ್ದಾಡಬೇಕು, ಹಾಗೇನೇ ಅಸಹ್ಯ-ಅಶ್ಲೀಲ ಆಂಗಿಕಾಭಿನಯ ತೋರಿಸಬೇಕು, ಆಗ ಜನ ನಗುತ್ತಾರೆ ಎಂದು ಕ್ರಿಯೇಟಿವ್ ರೈಟರ್ಸ್ ತಿಳಿದುಕೊಂಡಿದ್ದಾರೆ. ಯು.ಆರ್. ಅನಂತಮೂರ್ತಿ, ಬಹುಶಃ ಟಿ.ಎನ್. ಸೀತಾರಾಮ್ ಅವರು ಕೂಡ ಗೌರವಿಸುವ ವ್ಯಕ್ತಿಯಾದ್ದರಿಂದ, ಹೇಳಿದ್ದ ಮಾತೊಂದನ್ನು ಇಲ್ಲಿ ನೆನೆಯುತ್ತೇನೆ. ಅನಂತಮೂರ್ತಿಯವರು ಒಮ್ಮೆ ಹೇಳಿದ್ದರು – ಭಾಷೆ ಎಂಬುದು ಬಟ್ಟೆ ಇದ್ದಂತೆ. ಅದನ್ನು ಮಾನ ಮುಚ್ಚುವುದಕ್ಕೂ ಬಳಸಬಹುದು, ಮಾನ ಕಳೆದುಕೊಳ್ಳುವುದಕ್ಕೂ ಬಳಸಬಹುದು. ಕಾಮದಂಥ ವಿಚಾರವನ್ನು ಹೇಳಬೇಕಾದಾಗ ಅತ್ಯಂತ ಸಂಯಮದಿಂದ ಭಾಷೆಯನ್ನು ಬಳಸಬೇಕು. ಒಮ್ಮೆ ನಿಯಂತ್ರಣ ಹರಿದು ಭಾಷೆ ಮುಂದೋಡತೊಡಗಿದರೆ ಅದರ ಮೊದಲ ಅಪಾಯವನ್ನು ಎದುರಿಸುವವನು ಲೇಖಕನೇ. ಯಾಕೆ ಗೊತ್ತೆ? ಕಾಮ – ಅರ್ಥಾತ್ ಸೆಕ್ಸ್ ಬಗ್ಗೆ ಬರೀತೀರಿ ಅಂದುಕೊಳ್ಳಿ. ಏನು ಅಂತ ಬರೀತೀರಿ? ಓದುಗನಿಗೆ ತಿಳಿವಳಿಕೆ ಕೊಡುವ ಬದಲು ರೋಚಕತೆ, ಉದ್ರೇಕಗಳನ್ನಷ್ಟೇ ಕೊಡುವುದು ತನ್ನ ಗುರಿ ಅಂದುಕೊಂಡ ಲೇಖಕ ಸೆಕ್ಸ್‍ನ ತುತ್ತತುದಿಯ ಅನುಭವವನ್ನು ಕೂಡ ಬರಹದಲ್ಲಿ ಹೇಳುತ್ತಾ ಹೋಗುತ್ತಾನೆ. ಆದರೆ ಅಲ್ಲಿಂದ ಮುಂದಕ್ಕೆ ಏನು? ತೀರಾ ಸ್ಲ್ಯಾಂಗ್ ಆಗಿ ಹೇಳಬೇಕೆಂದರೆ ಲೇಖಕ ಅಕ್ಷರಸ್ಖಲನ ಮಾಡಿಕೊಂಡ ಅನ್ನೋಣ. ಆದರೆ ಅಲ್ಲಿಂದ ಆಚೆಗೆ ಏನು? ಲೇಖಕ ಮುಗಿದುಹೋಗುತ್ತಾನೆ. ಆದರೆ ಓದುಗ ಅದರಾಚೆಗೂ ಉಳಿದುಕೊಳ್ಳುತ್ತಾನೆ. ಅಂಥ ಓದುಗನಿಗೆ ಹೊಸದೇನನ್ನೂ ಕೊಡಲಾಗದ ಸ್ಥಿತಿಯಲ್ಲಿರುವ ಲೇಖಕ ಬದುಕಿದ್ದೂ ಸತ್ತಂತೆ. ಅನಂತಮೂರ್ತಿಯವರು ಈ ಮಾತುಗಳನ್ನು ಹೇಳುತ್ತಿದ್ದದ್ದು ಲೇಖಕನಿಗೆ ಸಂಯಮ ಎಷ್ಟು ಮುಖ್ಯ ಎಂದು ಹೇಳುವ ಸಂದರ್ಭದಲ್ಲಿ. ಅಂಥ ಎಚ್ಚರ, ಪ್ರಜ್ಞೆ ಇವೆಲ್ಲ ಇರಬೇಕು ಎಂಬುದನ್ನು ತಿಳಿದಿದ್ದ ಅನಂತಮೂರ್ತಿಗಳೇ ದಿವ್ಯ, ಭವ ಮುಂತಾದ ಕೃತಿಗಳಲ್ಲಿ ಸಂಯಮದ ಕೋಡಿ ಹರಿದು ಅತ್ತಿತ್ತ ಹರಿದಾಡಿದ್ದೂ ಉಂಟು. ಅದೇನೇ ಇರಲಿ, ಆದರೆ ಅವರ ಆ ಎಚ್ಚರಿಕೆಯ ಮಾತುಗಳನ್ನು ಹಾಸ್ಯಕ್ಕೆ ಆರೋಪಿಸಿಕೊಂಡಾಗ ನನಗೆ ನಿಜಕ್ಕೂ ಆತಂಕ, ಭ್ರಮನಿರಸನ, ನಿರಾಸೆ ಕವಿಯುತ್ತದೆ. ಶುದ್ಧ, ತೆಳುವಾದ, ಕಲ್ಚರ್ಡ್ ಆಗಿದ್ದ ಹಾಸ್ಯ ಇಂದು ಎಲ್ಲಿಗೆ ಬಂದು ನಿಂತಿದೆ ಎಂದು ನೆನೆದರೆ ನಿಜಕ್ಕೂ ದುಃಖವಾಗುತ್ತದೆ. ಬೇಕಾದರೆ ಓದುಗರೇ ಒಂದು ಪ್ರಯೋಗ ಮಾಡಿ ನೋಡಬಹುದು. ಕಾಮಿಡಿಗೆಂದೇ ಮೀಸಲಾಗಿರುವ ಉದಯ ಕಾಮಿಡಿ ಅಥವಾ ಬೇರಾವುದಾದರೂ ಚಾನೆಲ್ ಹಾಕಿ, ಒಂದು ಗಂಟೆ – ಕೇವಲ ಒಂದು ಗಂಟೆ ವೀಕ್ಷಿಸಿ. ಅದರಲ್ಲಿ ಎಷ್ಟು ಜೋಕುಗಳು ಹಿಂದೆ ಕೇಳಿದ್ದು ಇದ್ದವು, ಎಷ್ಟು ನಿಜಕ್ಕೂ ನಿಮ್ಮನ್ನು ನಗಿಸಿದವು, ಎಷ್ಟು ಕಾಮಿಡಿಯನ್ನು ಕುಟುಂಬದ ಎಲ್ಲ ಸದಸ್ಯರ ಜೊತೆ ಕೂತು ನೋಡಬಹುದು, ಎಷ್ಟು ಜೋಕು ನಿಜಕ್ಕೂ ಹೊಸದಾಗಿದ್ದವು ಎಂಬುದನ್ನೆಲ್ಲ ಲೆಕ್ಕಹಾಕಿ. ಜೊತೆಗೆ, ಅವುಗಳಲ್ಲಿ ಎಷ್ಟು ಜೋಕನ್ನು ನೀವು ಒಂದು ವಾರದ ನಂತರವೂ ನೆನಪಿಟ್ಟುಕೊಳ್ಳಬಲ್ಲಿರಿ ಎಂಬುದನ್ನೂ ಯೋಚಿಸಿ. ಅವೆಲ್ಲಾ ಕೂಡು-ಕಳೆ ಮಾಡಿ ಉಳಿಯುವ ಹಾಸ್ಯ ಮಾತ್ರ ಶುದ್ಧ ಹಾಸ್ಯ. ಅಂಥಾದ್ದು ಎಷ್ಟು?

ಇತ್ತೀಚೆಗೆ ಕಾಮಿಡಿ ಸೆಲ್ಲೇಬಲ್ ಪ್ರಾಡಕ್ಟ್ – ಅಂದರೆ ಮಾರಾಟವಾಗಬಲ್ಲ ಸರಕು ಎಂಬುದು ಕೆಲವರಿಗೆ ಗೊತ್ತಾಗಿದೆ. ಅಥವಾ ಹಾಗೆಂದು ನಂಬಿದ್ದಾರೆ. ಹಿಂದಿಯಲ್ಲಿ ಪ್ರಸಾರವಾಗುವ ಕೆಲವು ಕಾಮಿಡಿ ಶೋಗಳನ್ನು ನೋಡಿದರೆ ವಾಕರಿಕೆ ಬರುತ್ತದೆ. ಗಂಡಸರು ಹೆಂಗಸರಂತಾಡುವುದು, ಹೆಂಗಸರ ಬಟ್ಟೆಬರೆ ಹಾಕುವುದು, ಹೆಂಗಸರಂತೆ ಅಥವಾ ಸ್ವಲ್ಪ ಹೆಚ್ಚೇ ವಯ್ಯಾರ ಮಾಡುವುದು ಅಲ್ಲಿ ಕಾಮಿಡಿ ಅನ್ನಿಸಿಕೊಳ್ಳುತ್ತಿದೆ. ಕೆಲವು ಕಲಾವಿದರಂತೂ ಶಾಶ್ವತವಾಗಿ ಲಿಂಗಬದಲಾವಣೆಯ ಆಪರೇಶನ್ ಮಾಡಿಸಿಕೊಳ್ಳುವುದು ಒಳ್ಳೆಯದೇನೋ ಎಂಬಷ್ಟರ ಮಟ್ಟಿಗೆ ಅನ್ಯಲಿಂಗದ ಅಸಹಜ ಭಾವಭಂಗಿಗಳನ್ನು ಹಾಸ್ಯದ ಹೆಸರಲ್ಲಿ ವೀಕ್ಷಕರಿಗೆ ಉಣಬಡಿಸುತ್ತಿದ್ದಾರೆ. ಇಂಥ ಶೋಗಳಲ್ಲಿ ಪ್ರತಿ ನಿಮಿಷಕ್ಕೆ ಇಷ್ಟು ಬಾರಿ ನಗಬೇಕು ಎಂದು ಮೊದಲೇ ಸೂಚಿಸಿರುತ್ತಾರೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮದಲ್ಲಿ ಭಾಗಿಯಾದವರೆಲ್ಲರೂ ನಗುತ್ತಾರೆ. ಬಿದ್ದೂ ಬಿದ್ದು ನಗುತ್ತಾರೆ. ಉರುಳಾಡಿಕೊಂಡು ನಗುತ್ತಾರೆ. ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಕೆಲವು ಶೋಗಳಲ್ಲಿ ನವಜೋತ್ ಸಿಂಗ್ ಸಿದ್ದು ಥರದ ಉತ್ಸವಮೂರ್ತಿಗಳನ್ನು ತಂದು ಕೂರಿಸಲಾಗುತ್ತದೆ. ಅವರ ಉದ್ಯೋಗವೇನಿದ್ದರೂ ಅಲ್ಲಿರುವಷ್ಟು ಕಾಲ ಹತ್ತು ಸೆಕೆಂಡಿಗೊಮ್ಮೆ ಉರುಳುರುಳಿ ನಗುವುದು. ಅವರು ನಕ್ಕಾಗ ಮಿಕ್ಕವರೂ ನಗುತ್ತಾರೆ; ಹಾಗೆ ನಗುವ ಸಂದರ್ಭದಲ್ಲೆಲ್ಲ ಒಂದೊಂದು ಜೋಕು ಸಿಡಿದಿದೆ ಎಂದು ಪ್ರೇಕ್ಷಕರು ಭಾವಿಸಿಕೊಳ್ಳಬೇಕು. ಹಾಸ್ಯ ಎಂಬುದು ಊಟಕ್ಕೆ ಇಕ್ಕಿದ ಮೇಲೋಗರದಂತೆ, ಬಾಳೆ ಎಲೆಯ ಮೂಲೆಯಲ್ಲಿ ಹಾಕಿದ ಕೋಸಂಬ್ರಿಯಂತೆ ತಕ್ಕಷ್ಟೇ ಪ್ರಮಾಣದಲ್ಲಿದ್ದರೆ ಅದಕ್ಕೂ ಒಂದು ಮರ್ಯಾದೆ, ಘನತೆ. ಆದರೆ ಇತ್ತೀಚೆಗೆ ಹಾಸ್ಯವೇ ಊಟದ ಪ್ರಧಾನ ಭಾಗವಾಗಿಬಿಟ್ಟಿದೆ. ವಾರವಾರವೂ ಹೊಸ ಹೊಸ ಜೋಕುಗಳನ್ನು ಹೊಸೆಯಲೇಬೇಕಾದ ಅನಿವಾರ್ಯತೆಗೆ ಸ್ಕ್ರಿಪ್ಟ್ ರೈಟರುಗಳು ಬಿದ್ದಿದ್ದಾರೆ. ಬರೆದೂ ಬರೆದು ಒರೆದೂ ಒರೆದು ತಲೆ ಖಾಲಿಯಾಗಿರುವ ಈ ಮಂದಿ ಹಾಸ್ಯಕ್ಕಾಗಿ ನೂರೆಂಟು ಮೂಲಗಳನ್ನು ತಡಕಾಡುವಂತಾಗಿದೆ. ವಾಟ್ಸಾಪ್ ಗ್ರೂಪ್‍ಗಳಲ್ಲಿ ಈಗಾಗಲೇ ಸಾವಿರಗಟ್ಟಲೆ ಜನರಿಗೆ ಫಾರ್ವರ್ಡ್ ಆಗಿ ಹಳಸಲಾದ ಸರಕನ್ನೇ ಮತ್ತೆ ಬಿಸಿ ಮಾಡಿ ಹಾಸ್ಯದ ಹೆಸರಲ್ಲಿ ಬಡಿಸುವ ಕರ್ಮ ಇವರಿಗೆ ಬಂದಿದೆ. ನಿರಂತರವಾಗಿ ಹಾಸ್ಯವನ್ನು ಉತ್ಪತ್ತಿಸುತ್ತಲೇ ಇರಬೇಕಾದ್ದರಿಂದ ಕಾಂಜಿಪೀಂಜಿ ಜೋಕುಗಳೆಲ್ಲ ಮುಖ್ಯ ವೇದಿಕೆಗೆ ಬರುತ್ತಿವೆ. ಪೋಲಿ ಹುಡುಗರ ತಂಡದಲ್ಲಷ್ಟೇ ಹುಟ್ಟಿ ಸಾಯಬೇಕಿದ್ದ ತಗಡು ಜೋಕುಗಳೂ ಇದೀಗ ಟಿವಿಗಳ ಜಗಮಗ ಬೆಳಕಿನ ವೇದಿಕೆಗಳಲ್ಲಿ ಅಭಿನಯಿಸಲ್ಪಡುತ್ತಿವೆ. ಅದನ್ನು ಸೀತಾರಾಂ, ಲಕ್ಷ್ಮೀ ತರದ ಜಡ್ಜುಗಳು ನೋಡಿ ಹಾಹಾ ನಕ್ಕು ಹೂಹೂ ನಕ್ಕು ಸಂಭಾವನೆ ಎಣಿಸುತ್ತಿದ್ದಾರೆ. ದುರಂತವಲ್ಲದೆ ಇದು ಮತ್ತೇನು?

ಕನ್ನಡವನ್ನೂ ಸೇರಿದಂತೆ ಹಲವು ಭಾಷೆಗಳಲ್ಲಿ ಈಗ ಸ್ಟ್ಯಾಂಡ್ ಅಪ್ ಕಾಮಿಡಿಯನ್ನುಗಳ ಜಮಾನ. ಮೊದಮೊದಲು ಇವರು ಇಷ್ಟವಾಗುತ್ತಿದ್ದರು. ಜನರೂ ಮನಸ್ಸುಬಿಚ್ಚಿ ನಗುತ್ತಿದ್ದರು. ಆದರೆ ಎಂದು ಈ ಕಾಮಿಡಿಯನ್ನುಗಳ ಪ್ರದರ್ಶನಗಳು ಟಿವಿಯಲ್ಲಿ ಪ್ರಸಾರವಾಗಲು ಪ್ರಾರಂಭವಾಯಿತೋ ಅಂದೇ ಅವರ ಬಂಡವಾಳ ಜನರಿಗೆ ತಿಳಿದುಹೋಯಿತು! ಹೇಳಿದ್ದೇ ಹೇಳುವ ಟಿವಿ ನ್ಯೂಸ್ ರಿಪೋರ್ಟರುಗಳಂತೆ ಈ ಕಾಮಿಡಿಯನ್ನರು ಇರುವ ಒಂದು ಕ್ಯಾಸೆಟ್ಟನ್ನೇ ರಾಜ್ಯಾದ್ಯಂತ ಪ್ಲೇ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿಹೋಯಿತು! ಜನರಿಗೆ ತಮ್ಮ ಬಂಡವಾಳ ಗೊತ್ತಾಯಿತು ಎಂಬುದು ಗೊತ್ತಾದ ಮೇಲೆ ಕಾಮಿಡಿಯನ್ನರು ಅನಿವಾರ್ಯವಾಗಿ ತಮ್ಮ ಅಡುಗೆಯಲ್ಲೂ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಒದಗಿತು. ಹೋದಲ್ಲೆಲ್ಲ ಹೊಸ ಜೋಕು ಹೇಳಲು ಜೋಕು ಎಂಬುದೇನು ಕೋಳಿಯ ತತ್ತಿಯೇ ಅನಾಯಾಸವಾಗಿ ದಿನವೂ ಹುಟ್ಟಲು? ಹೀಗಾಗಿ ಸ್ಟ್ಯಾಂಡ್ ಅಪ್ ಹಾಸ್ಯಗಾರರು ಕೂಡ ವಾಟ್ಸಾಪ್, ಜಾಲತಾಣ, ಅನ್ಯಭಾಷೆಗಳ ಕಾಮಿಡಿ ಕಾರ್ಯಕ್ರಮಗಳ ಮೊರೆಹೋದರು. ಸಾರ್ವಜನಿಕರು ಅದಾಗಲೇ ಓದಿ ಕೇಳಿ ನೋಡಿ ಬಿಟ್ಟ ಜೋಕುಗಳನ್ನು ಹೊಸದೋ ಎಂಬಂತೆ ಹೊಸೆದರು. ಕೆಲವರು ಅದರಲ್ಲಿ ಯಶಸ್ವಿಯಾದರೆ ಇನ್ನುಳಿದವರು ಪ್ರೇಕ್ಷಕರ ಕಣ್ಣಲ್ಲಿ ಜೋಕರ್‍ಗಳೇ ಆಗಿಹೋದರು. ಜನರನ್ನು ನಗಿಸಲೇಬೇಕೆಂಬ ಹಠಕ್ಕೆ ಬಿದ್ದವರು ಉತ್ತರಕರ್ನಾಟಕದಲ್ಲಿ ಕರಾವಳಿಗರ ಕನ್ನಡವನ್ನು ಆಡಿಕೊಂಡು ನಕ್ಕರು; ಕರಾವಳಿಯಲ್ಲಿ ಬಯಲುಸೀಮೆಯವರ ಭಾಷೆಯನ್ನು ಆಡಿಕೊಂಡು ನಕ್ಕರು. ಇಂಗ್ಲೀಷಿನಲ್ಲಿ ಇದು ಇನ್ನೂ ಮುಂದಕ್ಕೆ ಹೋಗಿ ಒಂದೊಂದು ಸಮುದಾಯಗಳನ್ನೇ ಟಾರ್ಗೆಟ್ ಮಾಡಿ ನಗುವಮಟ್ಟಕ್ಕೆ ಹೋಗಿದೆ. ಪಂಜಾಬಿ, ಬಂಗಾಳಿ, ಕೈರಳಿ, ಬಿಹಾರಿ, ಗುಜರಾತಿ, ತಮಿಳು ಇತ್ಯಾದಿ ಭಾಷಿಕರ ಮೇಲೆ ವೇದಿಕೆಗಳಲ್ಲಿ ಕೆಟ್ಟ, ಅಭಿರುಚಿರಹಿತ ಜೋಕುಗಳನ್ನು ಮಾಡಲಾಗುತ್ತದೆ ಮತ್ತು ಅದನ್ನು ಹಾಸ್ಯ ಎಂದಷ್ಟೇ ನೋಡಬೇಕು ಎಂದು ಪ್ರೇಕ್ಷಕರನ್ನು ಒತ್ತಾಯಿಸಲಾಗುತ್ತದೆ. ಅಂದರೆ, ತಮಿಳರ ಬಗ್ಗೆ ಉತ್ತರ ಭಾರತದ ಕಾಮಿಡಿಯನ್ ಒಬ್ಬ ಜೋಕ್ ಮಾಡಿದರೆ ಅದನ್ನು ತಮಿಳರು ಪ್ರತಿಭಟಿಸಬಾರದು; ಅದರಲ್ಲಿರುವ ಹಾಸ್ಯವನ್ನಷ್ಟೇ ಗ್ರಹಿಸಿ, ಸಾಧ್ಯವಾದರೆ ತಾವೂ ನಕ್ಕು ಸುಮ್ಮನಾಗಬೇಕು ಎಂದು ಅಪೇಕ್ಷಿಸಲಾಗುತ್ತದೆ. ತನ್ನ ಸಮುದಾಯದ ಬಗ್ಗೆ ಅಥವಾ ಭಾಷೆಯ ಬಗ್ಗೆ ವೇದಿಕೆಯಲ್ಲಿರುವ ವ್ಯಕ್ತಿ ಅಪಹಾಸ್ಯ ಮಾಡಿದ ಎಂದು ಪ್ರೇಕ್ಷಕಾಂಗಣದಲ್ಲಿ ಕೂತವನೊಬ್ಬ ಎದ್ದುನಿಂತು ಪ್ರತಿಭಟಿಸಿದರೆ ಜನ ಅವನನ್ನೇ ಅನಾಗರಿಕ ಎಂಬಂತೆ ನೋಡುತ್ತಾರೆ. “ನೋಡ್ರೀ, ಹಿ ಕ್ಯಾನಾಟ್ ಟೇಕ್ ಇಟ್ ಆಸ್ ಎ ಜೋಕ್. ವಾಟ್ ಎ ಶಾರ್ಟ್ ಟೆಂಪರ್ಡ್ ಫೆಲೋ” ಎಂದು ಅವನ ವ್ಯಕ್ತಿತ್ವವನ್ನೇ ವಿಮರ್ಶಿಸಲು ಕೂತುಬಿಡುತ್ತಾರೆ ಜನ. ಅಂದರೆ ಜೋಕ್ ಹೆಸರಲ್ಲಿ ನಾವು ಹೇಳುವುದೆಲ್ಲವನ್ನೂ ನೀವು ಅವಡುಗಚ್ಚಿ ಸ್ವೀಕರಿಸಬೇಕು; ಯಾಕೆಂದರೆ ಬೈ ಆಂಡ್ ಲಾರ್ಜ್, ಅದನ್ನು ಜೋಕ್ ಎಂದೇ ಎಲ್ಲರೂ ಸ್ವೀಕರಿಸುತ್ತಾರೆ; ನೀವು ಸ್ವೀಕರಿಸಿಲ್ಲವೆಂದರೆ ನಿಮ್ಮಲ್ಲೇ ಏನೋ ದೋಷ ಇರಬೇಕು ಎಂದು ಹೇಳುತ್ತದೆ ಸಮಾಜ. ಕನ್ನಡದಲ್ಲಿ ಒಬ್ಬರು ವೆಂಕಟೇಶ್ವರ ಸುಪ್ರಭಾತವನ್ನು ಅಪಭ್ರಂಶ ಮಾಡಿ ಕುಡುಕರ ಸುಪ್ರಭಾತವಾಗಿ ಹಾಡುತ್ತಾರೆ. ಇನ್ನೊಬ್ಬರು ಪುರಂದರದಾಸರ ಭಾಗ್ಯದ ಲಕ್ಷ್ಮೀ ಬಾರಮ್ಮಾ ಹಾಡನ್ನು ಮುಸ್ಲಿಮರು ಹಾಡಿದರೆ ಹೇಗಿರುತ್ತದೆ ಎಂದು ಹಾಡಿತೋರಿಸಿ ಲಕ್ಷ್ಮಿಯ ಕೈಕಾಲು ಮುರಿದು ತೋರಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸುತ್ತಾರೆ. ಇವರೆಲ್ಲ ಅವಹೇಳನ ಮಾಡುವುದು ಹಿಂದೂ ದೇವತೆಗಳನ್ನು ಮಾತ್ರ ಆದ್ದರಿಂದ ಅದನ್ನು ಜೋಕ್ ಎಂದಷ್ಟೇ ಪರಿಗಣಿಸಿ ಪ್ರೇಕ್ಷಕರು ಸುಮ್ಮನಿರಬೇಕು. ಲಕ್ಷ್ಮಿಯ ಬದಲು ಜುಬೇದಾಳನ್ನೂ ಮೇರಿಯನ್ನೂ ಆಡಿಕೊಂಡಿದ್ದರೆ ಹಾಡಿದವನ ಹಡ್ಡಿಗಳನ್ನು ಕಿತ್ತು ಕೈಯಲ್ಲಿ ಕೊಡುತ್ತಿದ್ದರು ಆಯಾ ಸಮುದಾಯದ ಜನ.

ಈ ಕಾಮಿಡಿ ಶೋಗಳ ಮುಂದುವರೆದ ಭಾಗವಾಗಿ ಈಗ ನಮ್ಮ ಮುಂದಿರುವುದು ಮಕ್ಕಳ ಹಾಸ್ಯ ಕಾರ್ಯಕ್ರಮಗಳು. ದೊಡ್ಡವರು ಆಡಬಹುದಾದ ಪ್ರಹಸನಗಳನ್ನು ಮಕ್ಕಳ ಕೈಯಲ್ಲಿ ಆಡಿಸಿದರೆ, ಮಕ್ಕಳನ್ನೇ ದೊಡ್ಡವರ ರೀತಿಯಲ್ಲಿ ಸಂಭಾಷಿಸಲು, ಅಭಿನಯಿಸಲು ತಯಾರು ಮಾಡಿ ವೇದಿಕೆಗೆ ತಳ್ಳಿದರೆ ಟಿಆರ್‍ಪಿ ಎಂಬುದು ಕಂಕುಳಿಗಿಟ್ಟ ಥರ್ಮಾಮೀಟರಿನ ಪಾದರಸದಂತೆ ಏರುತ್ತದೆ ಎಂದು ಟಿವಿವಾಹಿನಿಗಳ ಕಾರ್ಯಕ್ರಮ ಮುಖ್ಯಸ್ಥರು ಭಾವಿಸಿದ್ದಾರೆ. ಒಳ್ಳೆಯ ಹಾಸ್ಯದಂತೆ ಪ್ರಾರಂಭವಾಗಿದ್ದ ಈ ಟ್ರೆಂಡ್ ಇದೀಗ ಮಕ್ಕಳ ಬಾಯಲ್ಲಿ ಹೇಳಿಸಬಹುದಾಗಿದ್ದ ಹಾಸ್ಯದ ಸರಕೆಲ್ಲ ಮುಗಿದು ಅಪಹಾಸ್ಯದ ಬುಟ್ಟಿಗೆ ಕೈ ಹಾಕಿದೆ. ಅಂದರೆ, ದೊಡ್ಡವರ ಬಾಯಲ್ಲಿ ಬರಬಹುದಾಗಿದ್ದ ಕೆಟ್ಟ ಜೋಕು, ಡಬ್ಬಲ್ ಮೀನಿಂಗ್ ಕಾಮಿಡಿಯನ್ನು ಮಕ್ಕಳ ಬಾಯಲ್ಲಿ ಹೇಳಿಸಲು ಪ್ರಾರಂಭಿಸಿದ್ದಾರೆ. ಈ ಮೂಲಕ ನಾವು ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದೇವೆ ಎಂಬುದನ್ನು ಇವರು ಯೋಚಿಸಿದ್ದಾರೆಯೇ? ವೇದಿಕೆಯ ಮೇಲೆ ಕೊಳಕು ಹಾಸ್ಯ ಮಾಡುವ ಹುಡುಗ, ತನ್ನ ಆ ಜೋಕಿಗೆ ದೊಡ್ಡವರೆನಿಸಿಕೊಂಡವರೂ ಬಿದ್ದು ಬಿದ್ದು ನಕ್ಕು ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುತ್ತಿದ್ದಾರೆ ಎಂಬುದನ್ನು ನೋಡಿದಾಗ ಪಡೆಯುವ ಸಂದೇಶ ಏನು? ತನ್ನ ಜೋಕು ಈ ಸಮಾಜದಲ್ಲಿ ಸ್ವೀಕೃತ ಎಂದೇ ತಾನೇ? ಆ ಕಾರ್ಯಕ್ರಮ ವೀಕ್ಷಿಸುವ ಅದೇ ವಯಸ್ಸಿನ ಹುಡುಗರು ಪಡೆವ ಸಂದೇಶವೂ ಅದೇ ತಾನೇ? ಡಬ್ಬಲ್ ಮೀನಿಂಗ್‍ನಲ್ಲಿ ಮಾತಾಡುವುದು ತೀರ ಸಹಜ ಎಂದೇ ಆ ಹುಡುಗರು ಭಾವಿಸಿದರೆ? ಅಸಭ್ಯ ಆಂಗಿಕಾಭಿನಯ ಕೂಡ ಸ್ವೀಕಾರಾರ್ಹ ಎಂದು ಅವರು ತಿಳಿದರೆ? ಇಂಥ ಕಾರ್ಯಕ್ರಮಗಳಲ್ಲಿ ಟಿ.ಎನ್. ಸೀತಾರಾಂ, ಲಕ್ಷ್ಮಿ, ವಿಜಯ ರಾಘವೇಂದ್ರ ಮುಂತಾದ ವ್ಯಕ್ತಿಗಳು ಚರಿಗೆ ಭರ್ತಿಗಷ್ಟೇ ಬಂದು ಕೂರುತ್ತಾರೆಯೇ? ಅಥವಾ ಹಾಗೆ ಒಂದೆರಡು ತಾಸು ಕೂತು ಹಾಹಾ ಹೀಹೀ ನಕ್ಕು ಹೋಗುವುದಕ್ಕೆ ಚಾನೆಲ್ಲಿನವರು ಸಂಭಾವನೆಯ ಭಿಕ್ಷೆ ಕೊಡುವುದರಿಂದ ಅವರ ಎಲ್ಲ ಡ್ರಾಮಗಳನ್ನು ಸಹಿಸಿಕೊಳ್ಳಬೇಕೆಂದು ಈ ತೀರ್ಪುಗಾರರು ಭಾವಿಸಿದ್ದಾರೆಯೇ?

ಹೇಗೆ ಸಿನೆಮಾ, ನಾಟಕ, ಸ್ಟ್ಯಾಂಡ್ ಅಪ್ ಕಾಮಿಡಿ ಮುಂತಾದ ಕಡೆಗಳಲ್ಲಿ ಇನ್ನಷ್ಟು ಮತ್ತಷ್ಟು ಹಾಸ್ಯ ಸೃಷ್ಟಿಸುವ ಅನಿವಾರ್ಯತೆ ಹಾಸ್ಯದ ಗುಣಮಟ್ಟವನ್ನು ಇಳಿಸಿತೋ ಹಾಗೆಯೇ ಮಕ್ಕಳ ಕಾರ್ಯಕ್ರಮದಲ್ಲೂ ಪರಿಶುದ್ಧ ಹಾಸ್ಯದ ಕೊರತೆಯಾದಾಗ ಗುಣಮಟ್ಟ ಇಳಿಯುವುದು ತೀರ ನಿರೀಕ್ಷಿತ. ಹಾಗೆ ಗುಣಮಟ್ಟ ಇಳಿದಾಗ ಟಿಆರ್‍ಪಿ ಇಳಿಯದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಕಾರ್ಯಕ್ರಮ ಮುಖ್ಯಸ್ಥನಿಗಿರುತ್ತದೆ. ಆಗ ಆತ ಹೇಗಾದರೂ ಮಾಡಿ ಕಾರ್ಯಕ್ರಮದ ವೀಕ್ಷಕವರ್ಗವನ್ನು ಹಿಡಿದಿಡುವ ಪ್ರಯತ್ನಕ್ಕೆ ಇಳಿಯುತ್ತಾನೆ. ಮಕ್ಕಳ ಕೈಯಲ್ಲಿ ಅಸ್ವೀಕಾರಾರ್ಹ ಅಭಿನಯ ಮಾಡಿಸುವುದು, ಅಪ್ರಾಸಂಗಿಕ ಮಾತುಗಳನ್ನು ಆಡಿಸುವುದು ಅನೈತಿಕ ಎಂದು ಅನ್ನಿಸದ ಹಂತಕ್ಕೆ ಹೋಗುತ್ತಾನೆ. ಸಮುದಾಯ, ಜಾತಿ, ಧರ್ಮ, ಆಚರಣೆ, ಸಂಪ್ರದಾಯ ಮುಂತಾದವನ್ನು ಹೀಗಳೆಯುವ, ಪರಿಹಾಸ್ಯ ಮಾಡುವ ಅನಿವಾರ್ಯತೆ ಅವರಿಗೆ ಬರುತ್ತದೆ. ಆ ಪ್ರಯತ್ನದಲ್ಲಿ ತೀರ ಮೊದಲಿಗೆ ಕೈಗೆ ಸಿಗುವವರು ಬ್ರಾಹ್ಮಣರು.

ಇಂಥ ಕಾರ್ಯಕ್ರಮದಲ್ಲಿ ತೀರ್ಪುಗಾರರನ್ನು ಕೂರಿಸುವುದು ದಸರಾ ಬೊಂಬೆಗಳ ಕೊರತೆಯಾಗಿದೆ ಎಂದಲ್ಲ. ಕಾರ್ಯಕ್ರಮದ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ನೋಡುವ ಜವಾಬ್ದಾರಿಯೂ ತೀರ್ಪುಗಾರರ ಮೇಲಿರುತ್ತದೆ. ಪ್ರಹಸನಗಳನ್ನು ಆಡಿಸಿದಾಗ ಅವು ನಿಜವಾಗಿಯೂ ಕಾಮಿಡಿಯೇ, ಮಕ್ಕಳು ಆಡುವಂಥವೇ, ಅವರ ಬಾಯಿಯಿಂದ ಬಂದ ಮಾತುಗಳಲ್ಲಿ ಸಹಜತೆ ಇತ್ತೇ, ಅಭಿನಯ ಉಚಿತವಾಗಿತ್ತೆ ಇವೆಲ್ಲವನ್ನೂ ವಸ್ತುನಿಷ್ಠವಾಗಿ ವಿಮರ್ಶಿಸುವ ಕೆಲಸ ತೀರ್ಪುಗಾರರಿಂದ ಆಗಬೇಕು. ಹಾಡುವ ಕಾರ್ಯಕ್ರಮಗಳಲ್ಲಿ ಹಿಂದೆ ಜಯಂತ ಕಾಯ್ಕಿಣಿ ತೀರ್ಪುಗಾರರಾಗಿ ಕೂರುತ್ತಿದ್ದಾಗ “ನಿನ್ನ ವಯಸ್ಸಿಗೆ ಮೀರಿದ ಹಾಡು ಇದು” ಎಂದೋ “ಭಾವನೆಗಳನ್ನು ನಿನ್ನವಾಗಿಸಿ ಹಾಡುವುದಕ್ಕೆ ನಿನಗ್ಯಾವುದೋ ಅಡ್ಡಿಯಾಗಿರಬೇಕು” ಎಂದೋ ಹೇಳಬೇಕಾದ್ದನ್ನು ಸೂಕ್ಷ್ಮವಾಗಿ ದಾಟಿಸುತ್ತಿದ್ದರು. ಅಂಥ ಸೂಕ್ಷ್ಮತೆ ತೀರ್ಪುಗಾರರಿಗೆ ಇರಬೇಕು. ಬ್ರಾಹ್ಮಣರನ್ನು ಹೀನಾಯವಾಗಿ ತೋರಿಸುವ, ವೇದಿಕೆಯಲ್ಲೇ ಕಾಮಭಂಗಿಗಳನ್ನು ಪ್ರದರ್ಶಿಸುವ ಪ್ರಹಸನಗಳು ನಡೆವಾಗ ಈ ತೀರ್ಪುಗಾರರಿಗೆ ಸ್ವಯ ಇರಲಿಲ್ಲವೆ? ಇವರೇನು ಕಳ್ಳೇಕಾಯಿ ತಿನ್ನುತ್ತ ಸರ್ಕಸ್ ನೋಡುವುದಕ್ಕೆ ಅಲ್ಲಿ ಬಂದಿದ್ದರೇ? ಒಂದು ಸಮುದಾಯ – ಅದ್ಯಾವುದೇ ಆಗಿರಲಿ, ಅದರ ಅಪಹಾಸ್ಯ ಮಾಡಿ ಕಾಮಿಡಿ ಎಂಬ ಹೆಸರಲ್ಲಿ ಮಾರುವುದು ತೀರ ನೀಚತನದ ಕೆಲಸ; ಒಂದರ್ಥದಲ್ಲಿ ವ್ಯಭಿಚಾರಕ್ಕೆ ಸಮ ಎಂದು ಹೇಳಲು ತೀರ್ಪುಗಾರರಿಗೆ ನಾಲಗೆ ಏಳಲಿಲ್ಲವೇ? ಅಥವಾ ಬ್ರಾಹ್ಮಣ ಸಮುದಾಯವನ್ನು ಹೀಯಾಳಿಸುವುದನ್ನು ಅವರು ಕೂಡ ಎಂಜಾಯ್ ಮಾಡುತ್ತಿದ್ದರೆ? ಯಾವುದೇ ವ್ಯಕ್ತಿನಿಂದನೆ, ಜಾತಿನಿಂದನೆ ಇಲ್ಲದೆ ಹಾಸ್ಯ ಮಾಡಬಹುದು ಎಂದು ಟಿ.ಪಿ. ಕೈಲಾಸಂ ದಶಕಗಳ ಹಿಂದೆಯೇ ಕನ್ನಡಿಗರಿಗೆ ಹೇಳಿಕೊಟ್ಟಿದ್ದರಲ್ಲ; ಅಂಥವರ ಕೆಲಸಗಳನ್ನಾದರೂ ವೇದಿಕೆಗೆ ತರುವ ಪ್ರಯತ್ನವನ್ನು ತೀರ್ಪುಗಾರರು ಎನ್ನಿಸಿಕೊಂಡ ಘನಚಿಂತಕರು ಮಾಡಬಹುದಿತ್ತಲ್ಲ?

ಬ್ರಾಹ್ಮಣರ ಬದಲು ಲಿಂಗಾಯತರನ್ನೋ ಒಕ್ಕಲಿಗರನ್ನೋ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರನ್ನೋ ಆಡಿಕೊಂಡು ನಕ್ಕಿದ್ದರೆ ಇಪ್ಪತ್ತನಾಲ್ಕು ತಾಸುಗಳ ಒಳಗಾಗಿ ಚಾನೆಲಿಗೆ ಬೀಗ ಬೀಳುತ್ತಿತ್ತು; ಇಲ್ಲವೇ ಬೆಂಕಿಯೇ ಬೀಳುತ್ತಿತ್ತು. ಅವ್ಯಾವ ತೊಂದರೆಗಳಿಗೆ ಸಿಕ್ಕಿಕೊಳ್ಳದೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಚಾನೆಲಿನವರಿಗೆ ಸಿಗುವ ನಿಶ್ಪಾಪಿಗಳೆಂದರೆ ಬ್ರಾಹ್ಮಣರು ಮಾತ್ರ. ಇಂಥ ಅವಮಾನಗಳನ್ನು ಇನ್ನೆಷ್ಟು ವರ್ಷ ಬ್ರಾಹ್ಮಣರು ಸಹಿಸಬೇಕೋ ನಾ ಕಾಣೆ. ಬ್ರಾಹ್ಮಣರ ಮೇಲಿನ ಇಂಥ ಅನ್ಯಾಯಗಳನ್ನು ಇನ್ನಾದರೂ ಕೊನೆಗಾಣಿಸಲು ಮತ್ತು ನಮ್ಮ ಒಟ್ಟಾರೆ ಹಾಸ್ಯಪ್ರದರ್ಶನಗಳ ಮೌಲ್ಯ ಎತ್ತರಿಸಲು ಈಗಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಬ್ರಾಹ್ಮಣ ಸಮುದಾಯದ ಮೇಲೆ ಆದ ಅವಮಾನವನ್ನು ಗಂಭೀರವಾಗಿ ಪರಿಗಣಿಸಿ ಟಿವಿ ಚಾನೆಲ್ ಮತ್ತು ತೀರ್ಪುಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇದು ಸಕಾಲ. ಸಮಾಜದ ಒಟ್ಟೂ ಆರೋಗ್ಯದ ದೃಷ್ಟಿಯಿಂದ ಇದು ಅತ್ಯಂತ ತುರ್ತಾಗಿ ಆಗಬೇಕಿರುವ ಕೆಲಸ. ಇಲ್ಲವಾದರೆ ನಮ್ಮ ಜನಕ್ಕೆ ಜೋಕ್ ಯಾವುದು, ಕಾಮಿಡಿ ಯಾವುದು, ಹ್ಯೂಮರ್ ಯಾವುದು, ಗೇಲಿ-ಹಾಸ್ಯಗಳ ನಡುವಿನ ವ್ಯತ್ಯಾಸ ಏನು ಇವೆಲ್ಲ ಅಷ್ಟು ಸುಲಭವಾಗಿ ಅರ್ಥವಾಗುವ ಸಂಗತಿಗಳಾಗಿ ಕಾಣಿಸುತ್ತಿಲ್ಲ.

Comments

comments