ನಾಲ್ಕು ದಿನ ಮನೆ ಬಿಟ್ಟು ಹೋದರೆ, ವಾಪಸ್ ಬರುವಾಗ ಅದು ಇಂದಿರಾ ಕ್ಯಾಂಟೀನ್ ಆಗಿರಬಹುದು, ಹುಷಾರು!

ನಮ್ಮ ಮುಖ್ಯಮಂತ್ರಿಗಳಿಗೆ ಇತಿಹಾಸ ಪ್ರಜ್ಞೆ ಇರುವುದು ಬಿಡಿ, ಇತಿಹಾಸ ಪ್ರಜ್ಞೆ ಎಂಬ ಒಂದು ಸಂಗತಿ ಇದೆ ಎಂಬುದಾದರೂ ಗೊತ್ತಿದೆಯೆ ಎಂದು ನಾವು ಕೇಳಬೇಕಾಗಿದೆ. ಯಾಕೆಂದರೆ ಇವರ – ಕೇವಲ ಇವರೊಬ್ಬರ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್‍ಗಾಗಿ ಬೆಂಗಳೂರಲ್ಲಿರುವ ಬಯಲು, ಆಟದ ಮೈದಾನ, ಉದ್ಯಾನ, ದೇವಸ್ಥಾನಗಳು, ಹಿಂದೂ ಶ್ರದ್ಧಾಕೇಂದ್ರಗಳು, ಶತಮಾನದಷ್ಟು ಹಳೆಯ ಕಟ್ಟಡಗಳು, ಹೂ ಬಿಡುವ ಮರಗಳು, ಮಾರುಕಟ್ಟೆಗಳು, ಸ್ಮಶಾನಗಳು – ಹೀಗೆ ಎಲ್ಲವೂ ಎಂದರೆ ಎಲ್ಲವೂ ಬಲಿಯಾಗುತ್ತಿವೆ. ಮಲ್ಲೇಶ್ವರದ 18ನೇ ಕ್ರಾಸ್‍ನಲ್ಲಿ ಸರಕಾರಕ್ಕೆ ಇಂದಿರಾ ಕ್ಯಾಂಟೀನ್ ಮಾಡುವುದಕ್ಕೆ ಜಾಗ ಸಿಗಲಿಲ್ಲವಂತೆ; ಸರಿ, ಯುವಕರು ಆಟವಾಡುವ ಬಯಲನ್ನೇ ನುಂಗಿಬಿಟ್ಟರು! ಹೊಯ್ಸಳ ನಗರದಲ್ಲಿ ಕೂಡ ಇವರಿಗೆ ಕ್ಯಾಂಟೀನ್ ಹಾಕಲು ಸ್ಥಳದ ಕೊರತೆಯಾಯಿತಂತೆ; ಶತಮಾನದಷ್ಟು ಹಳೆಯದಾದ ಮತ್ತು ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸೇರಿದ್ದ ಒಂದು ಹಳೆಯ ವಾಸ್ತುವನ್ನೇ ಬುಲ್ಡೋಜರ್ ತಂದು ಒಡೆಸಿ ನೆಲಸಮ ಮಾಡಿ ಅದರ ಸಮಾಧಿಯ ಮೇಲೆ ಕ್ಯಾಂಟೀನ್ ಕಟ್ಟಲು ಹೊರಟಿದ್ದಾರೆ! ಇದಿನ್ನೂ ಪ್ರಾರಂಭ ಮಾತ್ರ. ಆಗಸ್ಟ್ 15ರ ಒಳಗೆ ಕನಿಷ್ಠ 125 ಕ್ಯಾಂಟೀನ್‍ಗಳನ್ನು ಕಟ್ಟಿಮುಗಿಸಲೇಬೇಕು ಎಂದು ಪಣ ತೊಟ್ಟಿರುವ ಇವರಿಗೆ ಇನ್ನೂ ಏನೇನು ಸಂಗತಿಗಳು ಕಂಡಾವೋ, ಯಾವುದನ್ನೆಲ್ಲ ಇವರು ನೆಲಸಮ ಮಾಡಿ ತಮ್ಮ ವಿಜಯಪತಾಕೆ ಹಾರಿಸಿಯಾರೋ ಯಾರಿಗೂ ಗೊತ್ತಿಲ್ಲ! ಅಂದ ಹಾಗೆ, ನಾಲ್ಕೈದು ದಿನ ಮನೆ ಬಿಡಬೇಕಾದ ಕಾರ್ಯವಿದ್ದರೆ ಹುಶಾರಾಗಿರಿ! ನೀವು ಪ್ರವಾಸ ಮುಗಿಸಿ ವಾಪಸ್ ಬೆಂಗಳೂರಿಗೆ ಬರುವ ಹೊತ್ತಿಗೆ ನಿಮ್ಮ ಮನೆಯ ಜಾಗದಲ್ಲೂ ಮನೆ ಕಾಣೆಯಾಗಿ ಒಂದು ಹೊಸ ಇಂದಿರಾ ಕ್ಯಾಂಟೀನ್ ತಲೆಯೆತ್ತಿರಬಹುದು!

ಇಂದಿರಾ ಕ್ಯಾಂಟೀನ್! ಹೆಸರೇ ವಿಚಿತ್ರ! ಗಾಂಧಿ ಕುಟುಂಬವನ್ನು ಮೆಚ್ಚಿಸುವುದಲ್ಲದೆ ಈ ಹೆಸರಿಗೆ ಬೇರಾವ ಸಾರ್ಥಕತೆಯೂ ಇಲ್ಲ. ಅಚ್ಚಕನ್ನಡದಲ್ಲಿ ಕಿತ್ತೂರು ಚೆನ್ನಮ್ಮ ಊಟದ ಮನೆ ಅಂತಲೋ ಕೇಂಪೇಗೌಡ ಉಪಾಹಾರಗೃಹ ಅಂತಲೋ ಇಡಬಹುದಾಗಿತ್ತು. ಕರ್ನಾಟಕದಲ್ಲಿ ಘನತೆವೆತ್ತ ವ್ಯಕ್ತಿತ್ವಗಳಿಗೇನು ಬರವೇ? ಕರ್ನಾಟಕ ರಾಜ್ಯ, ಅನ್ನಬ್ರಹ್ಮ ಉಡುಪಿ ಶ್ರೀಕೃಷ್ಣನ ನೆಲೆವೀಡು. ಈ ಕರುನಾಡು, ಹೊರನಾಡು ಅನ್ನಪೂರ್ಣೆಯ ಸಾನ್ನಿಧ್ಯವಿರುವ ಭೂಮಿ. ಈ ನೆಲ, ಧರ್ಮಸ್ಥಳ ಮಂಜುನಾಥನ ನೆಲೆಯಿರುವ ಪವಿತ್ರಸ್ಥಳ. ಈ ದೇವರುಗಳ ಹೆಸರಲ್ಲಿ ಅನ್ನದಾನದ ಕೆಲಸವನ್ನು ಸರಕಾರ ಮಾಡಬಹುದಾಗಿತ್ತು. ಆದರೆ ದೇವರು, ದೈವ ಎಂದರೆ ಮಾರುದೂರ ಹಾರುವ ಪ್ರಸಕ್ತ ನಾಸ್ತಿಕ ಸರಕಾರದಿಂದ ಅವನ್ನೆಲ್ಲ ನಿರೀಕ್ಷಿಸಬಹುದೆ? ಅವರಿಗೆ ದೇವಸ್ಥಾನಗಳ ಹುಂಡಿಯಲ್ಲಿ ಬಂದುಬೀಳುವ ಕೋಟಿ ಕೋಟಿ ರುಪಾಯಿ ದುಡ್ಡು ಬೇಕಾಗಿದೆಯೇ ವಿನಾ ಆ ದೇವರುಗಳ ಹೆಸರುಗಳನ್ನು ಒಳ್ಳೆಯ ಕಾರ್ಯಗಳಿಗೆ ನಾಮಕರಣ ಮಾಡಲು ಮನಸ್ಸಾದರೂ ಎಲ್ಲಿಂದ ಬರಬೇಕು! ಬಿಡಿ, ಅನ್ನದಾಸೋಹ, ಜ್ಞಾನದಾಸೋಹ ಮಾಡುತ್ತಿರುವ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮಿಗಳ ಹೆಸರನ್ನಾದರೂ ಈ ಕ್ಯಾಂಟೀನುಗಳಿಗೆ ಇಡಬಹುದಿತ್ತಲ್ಲ? ಬೇಡ, ಬಸವಣ್ಣನ ಹೆಸರಾದರೂ? ಮನಸ್ಸಿದ್ದರೆ ಸಿಗಬಹುದಾಗಿದ್ದ ನೂರಾರು ಹೆಸರುಗಳನ್ನೆಲ್ಲ ಕೈ ಚೆಲ್ಲಿ ಈ ಸರಕಾರ ಆ ಅನ್ನವಿಕ್ರಯದ ಮನೆಗಳಿಗೆ ಇಂದಿರಾ ಎಂಬ ಎಮರ್ಜೆನ್ಸಿಯ ನಾಯಕಿಯ ಹೆಸರನ್ನಿಡಲು ಹೊರಟಿದೆ, ಆ ಮೂಲಕ ಹಿಂದೀ ನಾಯಕಿಯನ್ನೂ ಇಂಗ್ಲೀಷ್ ಹೆಸರನ್ನೂ ಕನ್ನಡಿಗರ ಮೇಲೆ ಹೇರಲು ಹೊರಟಿದೆ ಎಂದರೆ ಕಾಂಗ್ರೆಸ್‍ನ ಬೌದ್ಧಿಕ ದಿವಾಳಿತನ ಎಂಥಾದ್ದು ಅಂದಾಜಿಸಬಹುದು!

ಈ ಕ್ಯಾಂಟೀನ್‍ಗಳಲ್ಲಿ ಕಡಿಮೆ ದರಕ್ಕೆ ಊಟ-ತಿಂಡಿ ಕೊಡಲಾಗುವುದು ಎಂದು ಸಿದ್ದರಾಮಯ್ಯನವರು 2017-18ರ ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದರು. ಅದಕ್ಕಾಗಿ ನೂರು ಕೋಟಿ ರುಪಾಯಿಗಳ ಇಡುಗಂಟನ್ನೂ ಎತ್ತಿಟ್ಟರು. ಬೆಂಗಳೂರಿನ ಒಟ್ಟು 198 ವಾರ್ಡ್‍ಗಳಲ್ಲಿ ಕ್ಯಾಂಟೀನ್ ತೆರೆಯಬೇಕು ಎಂಬುದು ಸರಕಾರದ ಇಂಗಿತ. ಘೋಷಣೆ ಏನೋ ಆಯಿತು; ಆದರೆ ಅಷ್ಟು ಬೇಗ ಕ್ಯಾಂಟೀನ್‍ಗಳು ಸಿದ್ಧವಾದಾವೇ? 2018ರ ಆರಂಭದಲ್ಲೇ ಚುನಾವಣೆ ನಡೆಯಲಿರುವುದರಿಂದ, ಅದಕ್ಕಿಂತ ಕನಿಷ್ಠ ಮೂರ್ನಾಲ್ಕು ತಿಂಗಳು ಮುಂಚಿತವಾಗಿಯಾದರೂ ಈ ಕ್ಯಾಂಟೀನ್‍ಗಳನ್ನು ತೆರೆಯಬೇಕು; ಚುನಾವಣೆಗೆ ಇವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ. ಕ್ಯಾಂಟೀನ್‍ಗಾಗಿ ಜಾಗ ಗುರುತಿಸುವುದು, ನೂರೆಂಟು ಇಲಾಖೆಗಳ ಅನುಮತಿ ಪತ್ರ ಸಂಪಾದಿಸುವುದು, ಪಾಯ ಹಾಕುವುದು, ಗೋಡೆ ಎಬ್ಬಿಸುವುದು, ಮಾಡು ಹೊದೆಸುವುದು ಎನ್ನುತ್ತ ಕೂತರೆ ಯೋಜಿತ ಕ್ಯಾಂಟೀನ್ ಕಟ್ಟಡಗಳ ಕಾಮಗಾರಿ ಪೂರ್ತಿಗೊಳಿಸಲು ಒಂದು ವರ್ಷಕ್ಕೂ ಮೇಲ್ಪಟ್ಟು ಸಮಯ ಬೇಕಾದೀತು ಎಂಬುದನ್ನು ಅರಿತ ಮುಖ್ಯಮಂತ್ರಿಗಳು ಏಕಾಏಕಿ ಈ ಕಾಮಗಾರಿಯನ್ನು ಕೆಇಎಫ್ ಇನ್‍ಫ್ರಾ ಎಂಬ ತಮಿಳುನಾಡಿನ ಒಂದು ಕಟ್ಟಡನಿರ್ಮಾಣ ಸಂಸ್ಥೆಗೆ ವಹಿಸಿಬಿಟ್ಟರು. ಆ ಸಂಸ್ಥೆ ಗೋಡೆ, ಕಿಟಕಿ ಇತ್ಯಾದಿಗಳನ್ನೆಲ್ಲ ತನ್ನ ಫ್ಯಾಕ್ಟರಿಯಲ್ಲೇ ನಿರ್ಮಿಸಿ ಅವುಗಳನ್ನು ನಿರ್ದಿಷ್ಟ ಸ್ಥಳಕ್ಕೆ ಹೊತ್ತುತಂದು ನಿಲ್ಲಿಸಿ ಕಟ್ಟಡದ ಕೆಲಸವನ್ನು ಪೂರ್ತಿಗೊಳಿಸುತ್ತದೆ. ಅಂದರೆ ಕಟ್ಟಡದ ಗೋಡೆ, ಮಾಡು, ನೆಲ, ಕಿಟಕಿ ಎಲ್ಲವೂ ತಮಿಳುನಾಡಿನಲ್ಲೇ ನಿರ್ಮಾಣವಾಗಿ ಟ್ರಕ್ಕುಗಳಲ್ಲಿ ಬೆಂಗಳೂರಿಗೆ ಬಂದು ನಿಗದಿಪಡಿಸಿದ ಸ್ಥಳದಲ್ಲಿ ಅಸೆಂಬಲ್ ಆಗಿ ಕ್ಯಾಂಟೀನ್ ಆಗಿ ಜನ್ಮತಳೆಯುತ್ತವೆ. ಹೀಗೆ ಮಾಡಿದರೆ ಬೆಂಗಳೂರಲ್ಲಿ ಮೊದಲ ಹಂತದಲ್ಲಿ 125 ಕ್ಯಾಂಟೀನ್‍ಗಳನ್ನು ಆಗಸ್ಟ್ 15ರ ಹೊತ್ತಿಗೆ ಕಟ್ಟಿ ಮುಗಿಸಬಹುದು ಎಂಬ ಲೆಕ್ಕಾಚಾರದಲ್ಲಿ ಸರಕಾರೀ ಅಧಿಕಾರಿಗಳಿದ್ದಾರೆ. ಮಿಕ್ಕ 73 ಕ್ಯಾಂಟೀನ್‍ಗಳನ್ನು ಅಕ್ಟೋಬರ್‍ನಲ್ಲಿ ಗಾಂಧೀ ಜಯಂತಿಯ ಹೊತ್ತಿಗೆ ತಯಾರು ಮಾಡುವ ಗುರಿ ಇದೆಯಂತೆ.

ಇಲ್ಲಿ ಕೆಲವೊಂದು ಕಹಿ ಪ್ರಶ್ನೆಗಳನ್ನು ನಾವು ಸರಕಾರದಲ್ಲಿ ಕೇಳಲೇಬೇಕಾಗುತ್ತದೆ. ಮೊದಲನೆಯದಾಗಿ, ಈ ಕ್ಯಾಂಟೀನ್‍ಗಳ ನಿರ್ಮಾಣಕ್ಕಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆಯೇ? ಬಿಬಿಎಂಪಿಯಲ್ಲಿ ಕಾರ್ಪೊರೇಟರ್ ಆಗಿದ್ದ ಎನ್.ಆರ್. ರಮೇಶ್ ಹೇಳುವ ಪ್ರಕಾರ, ಈ ವಿಷಯದಲ್ಲಿ ಟೆಂಡರ್ ಅನ್ನೇ ಕರೆಯಲಾಗಿಲ್ಲ! ಬರೋಬ್ಬರು ನೂರು ಕೋಟಿ ರುಪಾಯಿಗಳ ಪ್ರಾಜೆಕ್ಟ್ ಅನ್ನು ಸರಕಾರ ಯಾವ ಪಕ್ಷದವರನ್ನೂ ಕೇಳದೆ, ಯಾವ ನಿರ್ಮಾಣಸಂಸ್ಥೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತಮಿಳುನಾಡಿನ ಸಂಸ್ಥೆಗೆ ಧಾರೆಯೆರೆದಿದೆ. ಎಲ್ಲಾ ಸಾಂಪ್ರದಾಯಿಕ ಟೆಂಡರ್ ಪ್ರಕ್ರಿಯೆಗಳನ್ನೂ ಗಾಳಿಗೆ ತೂರಿ ಏಕಾಏಕಿ ಒಂದು ಸಂಸ್ಥೆಗೆ ಸಿದ್ದರಾಮಯ್ಯನವರು ನೂರು ಕೋಟಿ ರುಪಾಯಿಯ ಪ್ರಾಜೆಕ್ಟ್ ಅನ್ನು ಎತ್ತಿಕೊಡಲು ಕಾರಣ ಏನು? ತನ್ನ ಆಡಳಿತಾವಧಿಯಲ್ಲಿ ಯಾವ ದೇಶಕ್ಕೂ ಪ್ರವಾಸ ಕೈಗೊಳ್ಳದ ಸಿದ್ದರಾಮಯ್ಯ ಕೆಲವೇ ತಿಂಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ದುಬೈ ನಗರಕ್ಕೆ ಹೋಗಿಬಂದದ್ದು ನಿಮಗೆ ನೆನಪಿರಬಹುದು. ಕೆಇಎಫ್ ಇನ್‍ಫ್ರಾ ಸಂಸ್ಥೆಯನ್ನು ನಡೆಸುತ್ತಿರುವ ಫೈಜಲ್ ಕೊಟ್ಟಿಕೊಳ್ಳನ್ ದುಬೈಯಲ್ಲಿ ನೆಲೆಸಿರುವ ಉದ್ಯಮಿ. ಮುಖ್ಯಮಂತ್ರಿಗಳು ದುಬೈಗೆ ಹೋಗಿಬಂದ ಕೆಲವೇ ದಿನಗಳಲ್ಲಿ ಕೆಇಎಫ್ ಸಂಸ್ಥೆಯೊಂದಿಗೆ ಸರಕಾರದ ಒಪ್ಪಂದ ಅಂತಿಮಗೊಂಡಿದೆ. ಬಿಂದುಗಳನ್ನು ಸೇರಿಸಿ ಚಿತ್ರ ಸಂಪೂರ್ಣಗೊಳಿಸುವ ಕೆಲಸವನ್ನು ನಾನು ಓದುಗರಿಗೇ ಬಿಡುತ್ತೇನೆ!

ಈಗ ಇಂದಿರಾ ಕ್ಯಾಂಟೀನ್ ಕಟ್ಟಲು ಬಳಸುತ್ತಿರುವ ತಂತ್ರಜ್ಞಾನದ ಹೆಸರು ಪ್ರಿಕಾಸ್ಟ್ ಎಂದು. ಅಂದರೆ ಕ್ಯಾಂಟೀನ್‍ನ ವಿವಿಧ ಭಾಗಗಳನ್ನು ಮೊದಲೇ ಕಾರ್ಖಾನೆಯಲ್ಲಿ ನಿರ್ಮಿಸಿ, ಬೆಂಗಳೂರಿಗೆ ತಂದು ಅವನ್ನೆಲ್ಲ ಜೋಡಿಸಿ ಕಟ್ಟಡ ಎಬ್ಬಿಸುವ ತಂತ್ರಜ್ಞಾನ ಇದು. ಬೆಂಗಳೂರಲ್ಲಿ ಈ ತಂತ್ರಜ್ಞಾನ ಬಳಸಿ ಕಟ್ಟಡ ನಿರ್ಮಿಸಿಕೊಡುವ ಹಲವು ಸಂಸ್ಥೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಹಾಗಿರುವಾಗ ಸರಕಾರ, ಕರ್ನಾಟಕಕ್ಕಿಂತ ಹೊರಗಿರುವ ಮತ್ತು ಪ್ರಿಕಾಸ್ಟ್ ತಂತ್ರಜ್ಞಾನದ ವಿಷಯದಲ್ಲಿ ಕೇವಲ 3 ವರ್ಷದ ಅನುಭವ ಇರುವ ಸಂಸ್ಥೆಗೆ ಸರಕಾರ ಹೇಗೆ ಯೋಜನೆಯನ್ನು ಒಪ್ಪಿಸಿಬಿಟ್ಟಿತು? ಈ ಸಂಸ್ಥೆಯ ಕಾರ್ಖಾನೆ ಇರುವುದು ತಮಿಳುನಾಡಿನ ಕೃಷ್ಣಗಿರಿಯಲ್ಲಿ. ಎಲ್ಲ ನಿರ್ಮಾಣ ಕೆಲಸಗಳೂ ನಡೆಯುವುದು ಅಲ್ಲಿಯೇ. ಇನ್ನು ಬಿಡಿಭಾಗಗಳನ್ನು ತಂದು ಜೋಡಿಸುವ ಕೆಲಸಕ್ಕೂ ಕೂಡ ಅವರು ತಮಿಳುನಾಡಿನ ತಮ್ಮ ಉದ್ಯೋಗಿಗಳನ್ನೇ ಕರೆತರುತ್ತಾರೆಯೇ ಹೊರತು ಇಲ್ಲಿನ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವುದಿಲ್ಲ. ಅಂದರೆ ಇಲ್ಲಿ, ಇಂದಿರಾ ಕ್ಯಾಂಟೀನ್‍ನಿಂದಾಗಿ ರಾಜ್ಯದ ಜನರಿಗೆ ಉದ್ಯೋಗ ಸಿಕ್ಕಿತೇ? ರಾಜ್ಯದ ತಲಾದಾಯ ಹೆಚ್ಚಾಯಿತೇ? ಎಂದರೆ “ಇಲ್ಲ” ಎಂಬುದೇ ಉತ್ತರ. ಮೆಟ್ರೋ ರೈಲಿನಲ್ಲಿ ಹಿಂದಿ ಸಾಲು ಕಾಣಿಸಿಕೊಂಡಾಗ ಮೈಯಲ್ಲಿ ಭೂತಸಂಚಾರವಾದಂತೆ ಕುಣಿದಾಡಿದ ಕೆಲ ಮಂದಿ ಇಂದಿರಾ ಕ್ಯಾಂಟೀನ್‍ನ ವಿಷಯದಲ್ಲಿ ಕರ್ನಾಟಕದ ಜನರಿಗೆ ಒಂದೇ ಒಂದು ಉದ್ಯೋಗ ಹುಟ್ಟದ ಬಗ್ಗೆ ಚಕಾರ ಎತ್ತದೆ ಮುಗುಮ್ಮಾಗಿ ಕುಳಿತಿದ್ದಾರೆ ತಮ್ಮ ಬಿಲಗಳಲ್ಲಿ!

ಮತ್ತೊಂದು ಪ್ರಶ್ನೆ: ಕೆಇಎಫ್ ಇನ್‍ಫ್ರಾ ಸಂಸ್ಥೆ ಅಡುಗೆಮನೆ ಮತ್ತು ಕ್ಯಾಂಟೀನ್‍ಗಳನ್ನು ಕ್ರಮವಾಗಿ 39 ಮತ್ತು 28 ಲಕ್ಷ ರುಪಾಯಿಗಳಲ್ಲಿ ತಯಾರಿಸಿಕೊಡುತ್ತೇನೆ ಎಂದು ಹೇಳಿದೆ. ನೆನಪಿಡಿ – ಇದು ಕಟ್ಟಡದ ನಿರ್ಮಾಣ ವೆಚ್ಚ ಮಾತ್ರ. ಇದರಲ್ಲಿ ಆ ಜಾಗದ ದರ ಸೇರಿಲ್ಲ. ಸರಕಾರದ್ದೇ ಭೂಮಿಯಾದ್ದರಿಂದ ನಿರ್ಮಾಣಸಂಸ್ಥೆಯು ಕಟ್ಟಡವನ್ನು ಎತ್ತಿನಿಲ್ಲಿಸಲು ತಗುಲುವ ಖರ್ಚಿನ ಬಗ್ಗೆ ಮಾತ್ರ ಯೋಚಿಸಿದರಾಯಿತು. ಪ್ರತಿ ಕ್ಯಾಂಟೀನ್‍ನ ಪಾಯದ ಅಳತೆ 900 ಚದರಡಿ. ಅಷ್ಟು ವಿಸ್ತಾರದಲ್ಲಿ ಕಟ್ಟಡವನ್ನು ಸಾಂಪ್ರದಾಯಿಕ ವಿಧಾನದಿಂದ ಕಟ್ಟುವುದಾದರೆ ತಗುಲುವ ಖರ್ಚು ಅಬ್ಬಬ್ಬಾ ಎಂದರೆ 10 ಲಕ್ಷ ರುಪಾಯಿ. 198 ವಾರ್ಡ್‍ಗಳಲ್ಲಿ ನಿರ್ಮಾಣಗೊಳ್ಳಲಿರುವ ಕ್ಯಾಂಟೀನ್‍ಗಳಲ್ಲಿ ಅಡುಗೆಮನೆಗಳಿಲ್ಲ, ಕೇವಲ ಆಹಾರ ವಿತರಿಸುವ ವ್ಯವಸ್ಥೆ ಮಾತ್ರ ಇರುತ್ತದೆ. ಇಂಥ ಕಟ್ಟಡ ಕಟ್ಟಲು ರಾಜ್ಯದ ಎಲ್ಲೇ ಹೋದರೂ ಚದರಡಿಗೆ ಹೆಚ್ಚೆಂದರೆ 1200 ರುಪಾಯಿ ಖರ್ಚಾಗುತ್ತದೆ. ಆದರೆ ಕೆಇಎಫ್ ಅದಕ್ಕೆ 300% ಹೆಚ್ಚಿನ ದರವನ್ನು ನಿಗದಿಮಾಡಿರುವುದು ಯಾಕೆ? ಅದನ್ನು ಸರಕಾರವೂ ಒಪ್ಪಿರುವುದು ಯಾಕೆ? ಇದರಲ್ಲಿ ಜನಸಾಮಾನ್ಯರಿಗೆ ಭ್ರಷ್ಟಾಚಾರದ ವಾಸನೆ ಬರುತ್ತಿದೆಯಲ್ಲ?

ಲೆಕ್ಕ ಹಾಕಿದರೆ ಈ ಕ್ಯಾಂಟೀನ್ ಯೋಜನೆಯಲ್ಲಿ ಸರಕಾರದ ಕೈಜಾರಿ ಹೋಗುತ್ತಿರುವ ಹೆಚ್ಚುವರಿ ಹಣ ಬರೋಬ್ಬರಿ 65 ಕೋಟಿ ರುಪಾಯಿ. ಯಾವುದೇ ಸರಕಾರವಾದರೂ, ಅದೂ ದುರ್ಭಿಕ್ಷದ ಸಮಯದಲ್ಲಿ ಹೀಗೆ ಕೋಟಿಗಟ್ಟಲೆ ದುಡ್ಡನ್ನು, ಸ್ವಂತಲಾಭವಿಲ್ಲದೆ ಕೈಜಾರಿಹೋಗಲು ಬಿಡುತ್ತದೆಯೇ ಎಂಬುದು ಪ್ರಶ್ನೆ. ಬಿಜೆಪಿಯ ಒಬ್ಬರು ನಾಯಕರು, ಈ ಇಡೀ ಪ್ರಕರಣದಲ್ಲಿ 25 ಕೋಟಿ ಕಿಕ್‍ಬ್ಯಾಕ್ ಪಡೆಯಲಾಗಿದೆ. ಅಂದರೆ, ಕೆಇಎಫ್ ಸಂಸ್ಥೆಗೆ ಯೋಜನೆ ಸಲ್ಲುವಂತೆ ನೋಡಿಕೊಂಡದ್ದಕ್ಕಾಗಿ ಆ ಸಂಸ್ಥೆಯಿಂದ ಒಂದು ನಿರ್ದಿಷ್ಟ ಪಕ್ಷದ ಜೋಳಿಗೆಗೆ 25 ಕೋಟಿ ರುಪಾಯಿಗಳು ಮರಳಿ ಬೀಳುವಂತೆ ನೋಡಿಕೊಳ್ಳಲಾಗಿದೆ – ಎಂದು ನೇರ ಆರೋಪ ಮಾಡಿದ್ದಾರೆ. ಅದೂ ಅಲ್ಲದೆ, ಈ ಕಿಕ್‍ಬ್ಯಾಕ್‍ನ ನೇರ ಫಲಾನುಭವಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಎಂದು ಕೂಡ ಹೇಳಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಭ್ರಷ್ಟಾಚಾರದ ಆರೋಪ ಬಂದರೂ ಸಿದ್ದರಾಮಯ್ಯನವರು ಅದರ ಕುರಿತು ಕ್ಯಾರೇ ಎನ್ನದೆ ತನ್ನಪಾಡಿಗೆ ಕ್ಯಾಂಟೀನ್ ಕೆಲಸವನ್ನು ಮುಂದುವರಿಸುತ್ತಲೇ ಇದ್ದಾರೆ. ಭ್ರಷ್ಟಾಚಾರದ ಕಳಂಕವನ್ನು ತೊಡೆದುಕೊಳ್ಳಲು, ಮೊದಲು ಕಾಮಗಾರಿಯನ್ನು ನಿಲ್ಲಿಸಿ, ತನಿಖೆ ನಡೆಸುವ ಹೊಣೆಗಾರಿಕೆ ಮುಖ್ಯಮಂತ್ರಿಗಳಿಗೆ ಇಲ್ಲವೇ?

ಇವೆಲ್ಲ ಸಾಕಾಗದು ಎನ್ನುವಂತೆ, ಇಂದಿರಾ ಕ್ಯಾಂಟೀನ್‍ಗಳನ್ನು ಕಟ್ಟಲು ಕೆಇಎಫ್ ಸಂಸ್ಥೆಗೆ 4ಜಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಕೂಡ ಸರಕಾರ ಕಲ್ಪಿಸಿಕೊಟ್ಟಿದೆ. ಇದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ ಮತ್ತು ಕಾನೂನಾತ್ಮಕವೂ ಅಲ್ಲ. ಹೀಗೆ ಅನಗತ್ಯ ತೆರಿಗೆ ವಿನಾಯಿತಿ ಕೊಟ್ಟದ್ದರಿಂದ ನಿರ್ಮಾಣ ಸಂಸ್ಥೆಗೆ ಉಳಿತಾಯವಾಗಿರುವ (ಮತ್ತು ಸರಕಾರದ ಬೊಕ್ಕಸಕ್ಕೆ ಕತ್ತರಿಬಿದ್ದಿರುವ) ಪ್ರಮಾಣ ಎಷ್ಟು ಗೊತ್ತೆ? ಬರೋಬ್ಬರಿ 12 ಕೋಟಿ ರುಪಾಯಿ! ಈ ಸರಕಾರದ ಆಟಾಟೋಪಗಳನ್ನು ಪ್ರಶ್ನಿಸೋರು ಯಾರೂ ಇಲ್ವೇ?

ಇವೆಲ್ಲಕ್ಕಿಂತ ಮುಖ್ಯವಾಗಿ ಈ ಯೋಜನೆಗೆ ಜಾಗವನ್ನು ಹೇಗೆ ಪಡೆಯಲಾಗುತ್ತಿದೆ ಎಂಬುದು ಬಹಳ ಕುತೂಹಲಕರ ವಿಷಯ. ಆಗಸ್ಟ್ 15ಕ್ಕೆ ಕ್ಯಾಂಟೀನ್‍ಗಳು ಕಾರ್ಯಾರಂಭ ಮಾಡಬೇಕಂತೆ. ಆದರೆ, ಜುಲೈ 15 ದಾಟಿದರೂ 140ಕ್ಕೂ ಹೆಚ್ಚು ಕ್ಯಾಂಟೀನ್‍ಗಳನ್ನು ಎಲ್ಲಿ ತೆರೆಯುವುದೆಂದೇ ಇನ್ನೂ ಜಾಗನಿಷ್ಕರ್ಷೆಯಾಗಿರಲಿಲ್ಲ! ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಪಾಂಡವರು ದುರ್ಯೋದನನನ್ನು ಕೆರೆಕೋಡಿ ಕೋಟೆಕೊತ್ತಲಗಳಲ್ಲಿ ಹುಡುಕಾಡಿದಂತೆ ಬಿಬಿಎಂಪಿಯವರು ಕ್ಯಾಂಟೀನ್ ಉದ್ಘಾಟನಾ ದಿನ ಘೋಷಣೆಯಾದ ಮೇಲೆ ಈಗ ಅವನ್ನು ಎಲ್ಲಿ ತೆರೆಯಬಹುದು ಎಂದು ಜಾಗ ಹುಡುಕಲು ಪ್ರಾರಂಭಿಸಿದ್ದಾರೆ. ಕೂಸು ಹುಟ್ಟುವ ಮುಂಚೆ ಕುಲಾವಿ ಎಂಬುದು ಕೇವಲ ಗಾದೆ ಮಾತ್ರವಲ್ಲ, ಈ ರಾಜ್ಯದಲ್ಲಿ ಪ್ರತ್ಯಕ್ಷಸತ್ಯವಾಗಿ ಗೋಚರಿಸುತ್ತಿದೆ! ಜಾಗಕ್ಕಾಗಿ ಬಿಬಿಎಂಪಿ ಕಣ್ಣಿಗೆ ಬಿದ್ದಿರುವುದು ಆಟದ ಮೈದಾನಗಳು, ದೇವಸ್ಥಾನಗಳು, ಮಾತ್ರವಲ್ಲ, ಸ್ಮಶಾನಗಳು! ಮರ್ಫಿ ಟೌನ್ (ಈಗಿನ ಹೊಯ್ಸಳ ನಗರ) ಪರಿಸರದಲ್ಲಿ 104 ವರ್ಷ ವಯಸ್ಸಾದ ಒಂದು ಲೈಬ್ರರಿ ಇತ್ತು. ಇದನ್ನು ಹಿಂದಿನ ಸರಕಾರಗಳು ಪಾರಂಪರಿಕ ಕಟ್ಟಡ ಎಂದೂ ಗುರುತಿಸಿದ್ದವು. ಆದರೆ ಸಿದ್ದರಾಮಯ್ಯನವರ ಒಂದೇ ಒಂದು ಆದೇಶಕ್ಕೆ ತಲೆಬಾಗಿ ಈ ಕಟ್ಟಡ ಕೇವಲ ಅರ್ಧದಿನದ ಅವಧಿಯಲ್ಲಿ ಬುಲ್ಡೋಜರ್‍ಗಳಿಗೆ ತಲೆಕೊಟ್ಟು ಅಂಗಾತ ಮಲಗಿದೆ! ಈ ಪರಿಸರದಲ್ಲಿ ಹತ್ತಾರು ವರ್ಷಗಳಿಂದ ವಾಸ ಮಾಡುತ್ತಿದ್ದ, ವ್ಯಾಪಾರ ನಡೆಸುತ್ತಿದ್ದ ಮಂದಿ ಮೊನ್ನೆ ಸೋಮವಾರ (24 ಜುಲೈ) ಬೆಳಬೆಳಗ್ಗೆ ಎರಡೇ ಗಂಟೆಯಲ್ಲಿ ನಡೆದುಹೋದ ಈ ದುರಂತವನ್ನು ಕಂಡು ಮೂಕರಾಗಿದ್ದಾರೆ. ಬ್ರಿಟಿಷ್ ಅಧಿಕಾರಿ ಡಬ್ಲ್ಯು.ಎಚ್. ಮರ್ಫಿ ಎಂಬಾತ ಕಟ್ಟಿಸಿದ್ದ (ಶಿವಾಜಿನಗರದ ರಸೆಲ್ ಮಾರ್ಕೆಟ್ ಕಟ್ಟಿಸಿದಾತನೂ ಈತನೇ) ಪಾರಂಪರಿಕ ಗ್ರಂಥಾಲಯ ಕಟ್ಟಡ, ಅತ್ಯಂತ ವಿಶಿಷ್ಟ ಕಲ್ಲಿನ ರಚನೆಯಾಗಿತ್ತು. ಮರ್ಫಿ ಟೌನ್‍ನ ಅಸ್ಮಿತೆಯ ಗುರುತೂ ಆಗಿತ್ತು. ಆದರೆ ಸಿದ್ದರಾಮಯ್ಯನವರ ಇಂದಿರಾ ಕ್ಯಾಂಟೀನ್, ಈ ಪಾರಂಪರಿಕ ಕಟ್ಟಡವನ್ನು ಕೆಲವೇ ಗಂಟೆಗಳಲ್ಲಿ ಆಪೋಶನ ತೆಗೆದುಕೊಂಡಿದೆ. ಬಹುಶಃ ಮುಂದೆ ಕೆಲವು ವಾರ್ಡ್‍ಗಳಲ್ಲಿ ಕ್ಯಾಂಟೀನ್ ತೆರೆಯಲು ಜಾಗವಿಲ್ಲದೇ ಹೋದರೆ ಬಿಬಿಎಂಪಿ ಪಾರಂಪರಿಕ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಹೊಡೆದುರುಳಿಸಲು ತಯಾರಾಗಿದೆ ಎಂಬ ಸ್ಪಷ್ಟ ಸಂದೇಶವನ್ನೂ ಈ ಮೂಲಕ ಕೊಡಲಾಗಿದೆಯೋ ಏನೋ! “ಪಾರಂಪರಿಕ ಕಟ್ಟಡ ಎಂದು ಸರಕಾರದಿಂದಲೇ ಗುರುತಿಸಲ್ಪಟ್ಟ ಕಟ್ಟಡವನ್ನು ಯಾವ ಪೂರ್ವಸೂಚನೆಯೂ ಇಲ್ಲದೆ, ಮುಖ್ಯಮಂತ್ರಿಗಳ ಆದೇಶ ಇದೆ ಎಂಬ ಒಂದೇ ಕಾರಣವನ್ನು ಮುಂದಿಟ್ಟುಕೊಂಡು ಕೆಡಹಲು ಬಿಬಿಎಂಪಿಗೆ ಅಧಿಕಾರವಿದೆಯೇ?” ಎಂಬ ಪ್ರಶ್ನೆಯನ್ನು ನಾವು ನ್ಯಾಯಾಲಯದಲ್ಲಿ ಎತ್ತಬೇಕಾಗಿದೆ.

ಕೆಲವೇ ದಿನಗಳ ಹಿಂದೆ ಟಾಟಾ ನಗರದಲ್ಲಿ ಒಂದು ಉದ್ಯಾನವನದಲ್ಲಿ ಇಂದಿರಾ ಕ್ಯಾಂಟೀನ್ ಹಾಕಲು ಪಾಯ ತೆಗೆಯಲಾಗುತ್ತಿತ್ತು. ಅಲ್ಲಿದ್ದ ಅನೇಕ ಲೇಔಟ್ ನಿವಾಸಿಗಳು ಅದನ್ನು ಪ್ರತಿಭಟಿಸಿದರು. ಕ್ಯಾಂಟೀನ್ ಮಾಡುವ ಕೆಲಸದಲ್ಲಿ ಅಲ್ಲಿದ್ದ ಕಾಂಟ್ರಾಕ್ಟರ್ ಅನ್ನು ಮಾತಾಡಿಸಿದಾಗ, ಆತನಿಗೆ ಅದು ಇಂದಿರಾ ಕ್ಯಾಂಟೀನ್‍ಗಾಗಿ ಮಾಡುತ್ತಿರುವ ಕೆಲಸ ಎಂಬುದು ಗೊತ್ತಿತ್ತೇ ಹೊರತು ಅದಕ್ಕೆ ಅನುಮತಿ ತೆಗೆದುಕೊಳ್ಳಲಾಗಿದೆಯೇ ಇಲ್ಲವೇ ಎಂಬುದು ತಿಳಿದಿರಲಿಲ್ಲ. ಅನುಮತಿ ಪಡೆದ ಯಾವ ಕಾಗದ ಪತ್ರವೂ ಇರಲಿಲ್ಲ. “ಇದ್ನೆಲ್ಲ ನಮ್ ಮೇಡಮ್ಮೋರಿಗೆ ಹೇಳಿದೇವೆ ಸಾ.. ಅವ್ರು ಮಾಡಿ ಅಂದಿದ್ದಕ್ಕೇ ಇಲ್ಲಿ ಕೆಲಸ ನಡೀತಿರೋದು ಸಾ..” ಎಂದ ಕಾಂಟ್ರಾಕ್ಟರ್. ಹಾಗಾದ್ರೆ ನಿಮ್ಮ ಮೇಡಮ್ಮೋರಿಗೆ ಫೋನ್ ಹಚ್ಚಿ ಎಂದು ಅಲ್ಲೇ ಆಕೆಯ (ಆಕೆ ಯಾರೋ ದೇವರಿಗೇ ಗೊತ್ತು!) ಬಳಿ ಮಾತಾಡಿದರೆ, ಇದೆಲ್ಲ ಗೌರ್ಮೆಂಟ್ ಕಡೆಯಿಂದ ನಡೀತಿರೋದು. ಇದಕ್ಕೆ ಬೇಕಾದ ಕಾಗದ ಪತ್ರ ಎಲ್ಲ ಅವರೇ ಮಾಡ್ತಾರೆ. ನಮ್ಮ ಹತ್ರ ಕೇಳ್ಬೇಡಿ ಎಂಬ ಉತ್ತರ ಕೊಟ್ಟರಾಕೆ! ಅಂದರೆ ಕಾಮಗಾರಿ ಮೇಲ್ವಿಚಾರಕನಿಂದ ಹಿಡಿದು ಬಿಬಿಎಂಪಿ ಆಯುಕ್ತರವರೆಗೆ ಯಾರ ಬಳಿಯೂ ಇಂದಿರಾ ಕ್ಯಾಂಟೀನ್ ಬ್ರಾಂಚ್‍ಗಳಿಗೆ ಸಂಬಂಧಿಸಿದಂತೆ ಇನ್ನೂ ಸಂಪೂರ್ಣ ಕಾಗದ ಪತ್ರಗಳು ತಯಾರಾಗಿಲ್ಲ. ಕೆಲವು ಕಡೆಯಲ್ಲಿ ಕೆಲಸ ಶುರು ಮಾಡಿ ನಾಲ್ಕು ದಿನಗಳಾದ ಮೇಲೆ ತರಾತುರಿಯಲ್ಲಿ ಕಾಗದ ಪತ್ರ ತಯಾರಿಸಿ ಕೊಡಲಾಗುತ್ತಿದೆ. ಒಟ್ಟಾರೆ ಹೇಳುವುದಾದರೆ ಇಲ್ಲಿ ನೆಲದ ಕಾನೂನು, ಸಂವಿಧಾನ, ಶಿಷ್ಟಾಚಾರ, ಸರಕಾರೀ ನಿಯಮಾವಳಿಗಳು ಎಲ್ಲವನ್ನೂ ಗಾಳಿಗೆ ತೂರಲಾಗಿದೆ!

ಸಿದ್ದರಾಮಯ್ಯನವರೇ, ನೀವು ಈ ಇಂದಿರಾ ಕ್ಯಾಂಟೀನ್‍ಗಳನ್ನು ಯಾವ ಕಾರಣಕ್ಕಾಗಿ ಇಷ್ಟೊಂದು ತರಾತುರಿಯಿಂದ ಕಟ್ಟುತ್ತಿದ್ದೀರಿ ಎಂಬುದು ರಾಜ್ಯದ ಜನತೆಗೇ ಗೊತ್ತು. ನಿಮ್ಮ ರಾಜಕೀಯ ಹಿತಾಸಕ್ತಿಗಳು ಇಲ್ಲಿ ಇವೆ ಎಂದೇ ಒಪ್ಪಿಕೊಳ್ಳೋಣ. ಆದರೆ ಈ ಯೋಜನೆಯನ್ನಾದರೂ ಭ್ರಷ್ಟಾಚಾರದ ಸೋಂಕಿಲ್ಲದೆ ಮಾಡಿಮುಗಿಸಬಹುದಿತ್ತಲ್ಲ? ಕ್ಯಾಂಟೀನಿಗೆ ನಮ್ಮದೇ ನಾಡಿನ ಮಣ್ಣಿನ ಸೊಗಡಿನ ಹೆಸರು ಇಡಬಹುದಿತ್ತಲ್ಲ? ಹೊರರಾಜ್ಯದ ಸಂಸ್ಥೆಗೆ 12 ಕೋಟಿ ತೆರಿಗೆ ವಿನಾಯಿತಿ ಕೊಡುವ ದರ್ದು ಏನಿತ್ತು? ಕೇವಲ 35 ಕೋಟಿಗಳಲ್ಲಿ ಮುಗಿದುಹೋಗಬಹುದಾಗಿದ್ದ ಯೋಜನೆಗೆ 100 ಕೋಟಿ ವಿನಿಯೋಗಿಸುತ್ತಿದ್ದೀರಲ್ಲ, ಯಾವ ನ್ಯಾಯ ಇದು? “ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಅನ್ನೋರ ಮನೆ ಹಾಳಾಗ” ಎಂದು ಪ್ರೆಸ್‍ಮೀಟ್‍ನಲ್ಲಿ ಅಬ್ಬರಿಸಿ ಬೊಬ್ಬಿರಿದ್ದೀರಿ; ಮುಖ್ಯಮಂತ್ರಿಯೊಬ್ಬರ ಬಾಯಿಯಿಂದ ಹೊರಬೀಳಬೇಕಾದ ಮಾತುಗಳೇ ಅವು? ನಿಮಗೇನೋ ಸಂಸ್ಕೃತಿ, ನಯವಿನಯ ಅಷ್ಟಕ್ಕಷ್ಟೇ ಎನ್ನೋಣ, ಆದರೆ ಮುಖ್ಯಮಂತ್ರಿ ಎಂಬ ಹುದ್ದೆಗಾದರೂ ಒಂದು ಘನತೆಯಿದೆಯಲ್ಲ ಸ್ವಾಮಿ? ಜುಲೈ 22ರ ವರದಿ ತೆಗೆದುಕೊಂಡು ನೋಡಿದರೆ, ಬಿಬಿಎಂಪಿ ಹೇಳುತ್ತಿದೆ: ನಾವು ಸರಕಾರೀ ಸಂಸ್ಥೆಗಳ ಅಧೀನದಲ್ಲಿರುವ ಜಾಗವನ್ನೂ ಆಕ್ರಮಿಸಿಕೊಳ್ಳುತ್ತಿದ್ದೇವೆ. ಒಟ್ಟು 87 ಸೈಟುಗಳು ನಮಗೆ ಹಾಗೆ ಸಿಗಬೇಕಾದ್ದಿದೆ. ಆದರೆ, ಅವುಗಳ ಪೈಕಿ 36 ಮಾತ್ರ ನಮ್ಮ ಕೈಗೆ ಬಂದಿದೆ. ಉಳಿದ 51 ಸೈಟುಗಳನ್ನು ಇನ್ನೂ ನಾವು ಪಡೆಯಲಾಗಿಲ್ಲ – ಅಂತ. ಸ್ವಾತಂತ್ರ್ಯ ದಿನಕ್ಕೆ ಇನ್ನಿರುವುದು 20 ದಿನಗಳು. ಅಷ್ಟರೊಳಗೆ ಆ ಜಾಗಗಳನ್ನು ವಶಕ್ಕೆ ಪಡೆದು ಅಲ್ಲಿ ಕ್ಯಾಂಟೀನ್ ಎಬ್ಬಿಸುವ ಧಾವಂತ ಯಾಕೆ? ಅರೆಬರೆ ಕಟ್ಟಿನಿಲ್ಲಿಸಿದ ಈ ಕ್ಯಾಂಟೀನ್ ಎಂಬ ರಚನೆಗಳು ನಿರ್ಮಾಣಗೊಂಡು ವಾರದೊಳಗೆ ಕುಸಿದುಬಿದ್ದರೆ ಅದಕ್ಕೆ ಹೊಣೆಗಾರರು ಯಾರು? ನಿಮಗೆ ರಾಜಕೀಯ ಮೈಲೇಜ್ ಗಿಟ್ಟಿಸಿಕೊಡಲಿರುವ ಕ್ಯಾಂಟೀನ್ ನಿರ್ಮಾಣಕ್ಕೆ ಇನ್ನೂ ಎಷ್ಟು ಪಾರಂಪರಿಕ ಸ್ಮಾರಕಗಳನ್ನು ಬಲಿಕೊಡಲಿದ್ದೀರಿ? ಎಲ್ಲಕ್ಕಿಂತ ದೊಡ್ಡ ಪ್ರಶ್ನೆ – ಭ್ರಷ್ಟಾಚಾರದ ವಾಸನೆಯಿಲ್ಲದ ಒಂದಾದರೂ ಕೆಲಸವನ್ನು ನಿಮ್ಮ ಸರಕಾರ ಮಾಡಿತೋರಿಸುವುದು ಯಾವಾಗ? ಯಾವಾಗ?

Comments

comments